ಶನಿವಾರ, ಸೆಪ್ಟೆಂಬರ್ 25, 2021
22 °C

ಬದುಕಿನ ಪಯಣ ಮುಗಿಸಿದ ಕೊಡಗಿನ ಪ್ರತಿಭೆ ಮೆಬಿನಾ ಮೈಕಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮಾಡೆಲಿಂಗ್‌, ರಿಯಾಲಿಟಿ ಷೋ, ಸಿನಿಮಾ ಕ್ಷೇತ್ರದಲ್ಲಿ ಒಂದೊಂದೇ ಪುಟ್ಟಪುಟ್ಟ ಹಜ್ಜೆ ಇಡುತ್ತಾ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದ ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು’ ರಿಯಾಲಿಟಿ ಷೋ ವಿಜೇತೆ, ಮಾಡೆಲ್‌ ಮೆಬಿನಾ ಮೈಕಲ್‌ (23) ಅವರು ಬೆಳ್ಳೂರು ಕ್ರಾಸ್‌ನಲ್ಲಿ ಮಂಗಳವಾರ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಮೆಬಿನಾ ಅವರು ಕೊಡಗು ಜಿಲ್ಲೆಯ ಐಗೂರು ಗ್ರಾಮದ ದಿವಂಗತ ಮೈಕಲ್ ಅವರ ಪುತ್ರಿ.

ಮೈಕಲ್‌ ಅವರಿಗೆ ದೊಡ್ಡಬಳ್ಳಾಪುರದಲ್ಲಿ ಉದ್ಯೋಗ ದೊರಕಿದ ಕಾರಣಕ್ಕೆ ಬಹಳ ಹಿಂದೆಯೇ ಕುಟುಂಬಸ್ಥರೂ ಅಲ್ಲಿಯೇ ನೆಲೆಸಿದ್ದರು. ಅವರ ತಂದೆಯು ಅಕಾಲಿಕವಾಗಿ ನಿಧನರಾದ ಮೇಲೆ ಸಹೋದರನಿಗೆ ಆ ಕೆಲಸ (ಚಾಲಕ) ದೊರಕಿತ್ತು. ತಾಯಿ ಬೆನ್ಸಿ ಅವರೊಂದಿಗೆ ದೊಡ್ಡಬಳ್ಳಾಪುರದಲ್ಲಿ ನೆಲೆಸಿದ್ದ ಮೆಬಿನಾ, ‘ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು’ ರಿಯಾಲಿಟಿ ಷೋದ 4ನೇ ಆವೃತ್ತಿಯಲ್ಲಿ ಪಾಲ್ಗೊಂಡು ವಿಜೇತರಾಗಿದ್ದರು.

ಸೋಮವಾರಪೇಟೆಯ ಅಜ್ಜನ ಮನೆಗೆ ಸ್ನೇಹಿತನೊಂದಿಗೆ ಕಾರಿನಲ್ಲಿ ಬರುವಾಗ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು, ಸಿನಿಮಾ ಕ್ಷೇತ್ರದಲ್ಲೂ ಅರಳುವ ಮುನ್ನವೇ ಮೆಬಿನಾ ಬದುಕಿಗೆ ವಿದಾಯ ಹೇಳಿದರು ಎಂದು ಸುಂಟಿಕೊಪ್ಪದ ಅವರ ಆತ್ಮೀಯರಾದ ವಿನ್ಸೆಂಟ್‌ ಕಣ್ಣೀರು ಹಾಕಿದರು. 

‘ಮೆಬಿನಾ ತಾಯಿ ಬೆನ್ಸಿ ಅವರ ಊರು ಸುಂಟಿಕೊಪ್ಪ. ಅಲ್ಲಿಗೂ ಮೆಬಿನಾ ಆಗಾಗ್ಗೆ ಭೇಟಿ ನೀಡುತ್ತಿದ್ದರು. ಮಾಡೆಲಿಂಗ್‌ ಕ್ಷೇತ್ರದಲ್ಲಿ ಮಿಂಚುತ್ತಿದ್ದರು. ರಿಯಾಲಿಟಿ ಷೋ ಜಯಗಳಿಸಿದ್ದು ಆಕೆಯ ಬದುಕಿಗೆ ತಿರುವು ನೀಡಿದ್ದು ವಿಶೇಷ. ಕಳೆದ ವರ್ಷ ಸುಂಟಿಕೊಪ್ಪದಲ್ಲಿ ನಡೆದ ಮಕ್ಕಳ ದಿನಾಚರಣೆಗೆ ಅತಿಥಿಯಾಗಿ ಪಾಲ್ಗೊಂಡಿದ್ದರು. ಮೆಬಿನಾ ಅವರನ್ನು ಸನ್ಮಾನಿಸಲಾಗಿತ್ತು’ ಎಂದು ವಿನ್ಸೆಂಟ್‌ ಸ್ಮರಿಸಿದರು. 


ಕೊಡಗಿನ ಸುಂಟಿಕೊಪ್ಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿದ ಕ್ಷಣ

‘ತಮಿಳು ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುವ ಅವಕಾಶ ಮೆಬಿನಾಗೆ ಸಿಕ್ಕಿತ್ತು. ಲಾಕ್‌ಡೌನ್‌ಗೂ ಮೊದಲು 15 ದಿನಗಳ ಕಾಲ ಚಿತ್ರೀಕರಣದಲ್ಲಿ ಪಾಲ್ಗೊಂಡು ದೊಡ್ಡಬಳ್ಳಾಪುರಕ್ಕೆ ವಾಪಾಸ್ಸಾಗಿದ್ದರು. ಕನ್ನಡದಲ್ಲೂ ಎರಡು ಸಿನಿಮಾಕ್ಕೂ ಅವಕಾಶಗಳು ಬಂದಿದ್ದವು. ಮೆಬಿನಾ ಗ್ರಾಮೀಣ ಪ್ರತಿಭೆ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಭವಿಷ್ಯವಿತ್ತು. ಆದರೆ, ಸಾಧನೆಗೂ ಮೊದಲೇ ಇಹಲೋಕ ತ್ಯಜಿಸಿಬಿಟ್ಟಳು’ ಎಂದು ಕುಶಾಲನಗರದ ಕಿರುಚಿತ್ರದ ನಿರ್ದೇಶಕ ಪ್ರಭುದೇವ್‌ ಹೇಳಿದರು. 

ಸುಂಟಿಕೊಪ್ಪ ಹಾಗೂ ಐಗೂರು ಕುಟುಂಬಸ್ಥರು ಮೃತದೇಹ ತರಲು ಬೆಂಗಳೂರಿಗೆ ತೆರಳಿದ್ದಾರೆ. ಐಗೂರು ಗ್ರಾಮದಲ್ಲಿ ಬುಧವಾರ ಸಂಜೆಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಮೆಬಿನಾ ಮೈಕಲ್

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು