ಶನಿವಾರ, ಸೆಪ್ಟೆಂಬರ್ 18, 2021
30 °C

ಬಹುಮುಖಿ ನಂದಿನಿ

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

Prajavani

ಅಪ್ಪನ ಮಾರ್ಗದರ್ಶನ, ಅಮ್ಮನ ಸ್ಫೂರ್ತಿ, ಕುಟುಂಬದ ಬೆಂಬಲದೊಂದಿಗೆ ನಂದಿನಿ ವಿಠ್ಠಲ್‌ ಅವರ ತೆರೆಯ ಮೇಲಿನ ಪಯಣ ಆರಂಭವಾಯಿತು. ಕಿರುತೆರೆ, ಹಿರಿತೆರೆ, ಸಿನಿಕ್ಷೇತ್ರದ ಸಮೂಹದ ವೇದಿಕೆ ಸೇರಿ ಎಲ್ಲ ಕಡೆಗಳಲ್ಲೂ ತಮ್ಮದೇ ಛಾಪು ಮೂಡಿಸುತ್ತಾ ಮುನ್ನಡೆದಿದ್ದಾರೆ. ಅಪ್ಪ ವಿಠ್ಠಲ್‌ ಸಿ.ಎನ್‌. ಅವರನ್ನು ಗಾಢವಾಗಿ ನೆನಪಿಸಿಕೊಳ್ಳುತ್ತಲೇ ನಂದಿನಿ ಮಾತಿಗಿಳಿದರು.

‘ಮುಕ್ತ ಮುಕ್ತ’ ಧಾರಾವಾಹಿಯಲ್ಲಿ ‘ದೇವಯಾನಿ’ಯ ಪಾತ್ರ ಹಲವರಿಗೆ ನೆನಪಿರಬಹುದು. ಹೌದು ಆ ದೇವಯಾನಿಯೇ ನಂದಿನಿ ವಿಠ್ಠಲ್‌.

ಕಿರುತೆರೆಯಿಂದ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಬೆಳೆಯುತ್ತಾ ಬಂದ ನಂದಿನಿ ಅವರು ಇದೀಗ ಬಹುಮುಖಿಯಾಗಿ ತೆರೆದುಕೊಂಡಿದ್ದಾರೆ. ಸಿನಿಮಾ, ಗಾಯನ, ಕಂಠದಾನ, ಸೇರಿದಂತೆ ಚಿತ್ರರಂಗದ ಹಲವು ಆಯಾಮಗಳಲ್ಲಿ ತೊಡಗಿಕೊಂಡಿದ್ದಾರೆ.

ಪಿ. ಶೇಷಾದ್ರಿ ಅವರ ಗರಡಿಯಲ್ಲಿ ಪಳಗಿದವರು ಅವರು. ‘ಕಣ್ಣಾ ಮುಚ್ಚಾಲೆ’ (ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರ) ಧಾರಾವಾಹಿಯಲ್ಲಿ ತಂದೆ ವಿಠ್ಠಲ್‌ ಸಿ.ಎನ್‌., ತಾಯಿ ಇಂದ್ರಾಣಿ ಜತೆ ತಾವೂ ಬಣ್ಣ ಹಚ್ಚಿದರು. ಮಗಳ ಆಸಕ್ತಿಯನ್ನು ನೋಡಿ ತಂದೆ ತಾಯಿ ಇಬ್ಬರೂ ಪ್ರೋತ್ಸಾಹಿಸಿದರು. ‘ವಾಸ್ತವ್ಯ, ಮೌನರಾಗ (ಚಿಂಟು ಪಾತ್ರ) ಧಾರಾವಾಹಿಗಳು ಸಾಕಷ್ಟು ಹೆಸರು ತಂದುಕೊಟ್ಟವು’ ಎಂದು ನೆನಪಿಸಿಕೊಂಡರು ನಂದಿನಿ. 

‘ಅಮೃತವರ್ಷಿಣಿ’, ‘ಮುಂಬೆಳಕು’, ‘ಮುಂಜಾವು’ ಹೀಗೆ ಹಲವು ಧಾರಾವಾಹಿಗಳಲ್ಲಿ ಅವರದ್ದು ಪ್ರಧಾನ ಭೂಮಿಕೆಯೇ ಇದೆ.

ಅಂದಹಾಗೆ ನಂದಿನಿ ಅವರು ಚಿತ್ರಸಾಹಿತಿ ವಿಜಯ ನಾರಸಿಂಹ (ತಾಯಿ ಇಂದ್ರಾಣಿ ಅವರ ಚಿಕ್ಕಪ್ಪ) ಅವರ ಮೊಮ್ಮಗಳು.

ನಂದಿನಿ ಅವರ ಬಗ್ಗೆ ಮಾತನಾಡುವಾಗ ಅವರು ನೆನಪಿಸುವುದು ಇತ್ತೀಚೆಗೆ ನಿಧನರಾದ ತಮ್ಮ ತಂದೆ ವಿಠ್ಠಲ್‌ ಸಿ.ಎನ್‌. ಅವರನ್ನೇ.

‘ತಂದೆಯವರಲ್ಲಿ ಛಲ ಇತ್ತು. ಈ ಕ್ಷೇತ್ರದ ಅಸ್ಥಿರತೆಯ ಅರಿವೂ ಇತ್ತು. ಅವೆರಡನ್ನೂ ನಿಭಾಯಿಸಿಕೊಂಡು ಹೋಗುವುದನ್ನು ಕಲಿಸಿದರು. ಅವರು ಅರವಿಂದ್‌ ಮಿಲ್ಸ್‌ನಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಆಗಿದ್ದರು. ಜತೆಗೆ ಕಿರುತೆರೆ ಕಲಾವಿದ. ಕಣ್ಣಾ ಮುಚ್ಚಾಲೆ, ಯದ್ವಾ ತದ್ವಾ, ಸಿಲ್ಲಿ ಲಲ್ಲಿ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಜನ ನನ್ನಲ್ಲಿ ಅವರನ್ನು ಕಾಣುತ್ತಿದ್ದಾರೆ. ತಂದೆಯವರ ಮಾತೃಭಾಷೆ ತೆಲುಗು. ಆದರೆ, ಕನ್ನಡ ಭಾಷೆ, ಸಾಹಿತ್ಯದ ಮೇಲೆ ಅತೀವ ಪ್ರೀತಿ. ಹಾಗಾಗಿ ಅವರೂ ಕನ್ನಡದ ಕಿರುತೆರೆಯಲ್ಲಿ ಸಾಕಷ್ಟು ಗುರುತಿಸಿಕೊಂಡರು. ಅದು ನನ್ನ ಬದುಕಿಗೆ ಪ್ಲಸ್‌ ಆಗುತ್ತಲೇ ಹೋಯಿತು. ಆದರೆ, ಕೋವಿಡ್‌ ಪರಿಸ್ಥಿತಿ ನಮ್ಮ ಕುಟುಂಬದಲ್ಲಿ ದುಃಖದ ಕಥೆಯನ್ನೇ ಬರೆಯಿತು’ ಎಂದು ಭಾವುಕರಾದರು ಅವರು.

‘ತಾಯಿ ಕೂಡಾ ಸ್ಕ್ರಿಪ್ಟ್‌, ಕಥೆ ಬರೆಯುತ್ತಾರೆ. ಅವರೂ ಬೆಂಬಲ ಕೊಟ್ಟಿದ್ದಾರೆ. ಪತಿ ವಲ್ಲೀಶ್‌ ಹಾಗೂ ಕುಟುಂಬದವರು ನನ್ನ ಆಸಕ್ತಿಗೆ ಬೆಂಬಲವಾಗಿ ನಿಂತಿದ್ದಾರೆ’ ಎಂದು ಖುಷಿಯಿಂದ ನುಡಿದರು ನಂದಿನಿ.

ಟಿ.ಎಸ್‌.ನಾಗಾಭರಣ, ಟಿ.ಎನ್‌. ಸೀತಾರಾಂ, ಪಿ. ಶೇಷಾದ್ರಿ ಅವರ ಜತೆ ಕೆಲಸ ಮಾಡುವಾಗ ತುಂಬಾ ಕಲಿತಿದ್ದೇನೆ. ಇವರೆಲ್ಲಾ ಒಂದೊಂದು ಶಾಲೆಗಳಿದ್ದಂತೆ. ಮೂರೂ ವಿಭಿನ್ನ ಕೋರ್ಸ್‌ ಮಾಡಿದ ಅನುಭವ. ಉದಾಹರಣೆಗೆ ‘ಮೂಕಜ್ಜಿಯ ಕನಸುಗಳು’ ಇಂಥ ಸಾಕಷ್ಟು ಹೊಸ ಅನುಭವ ಕೊಟ್ಟ ಸಿನಿಮಾ ಎನ್ನುತ್ತಾರೆ ನಂದಿನಿ.

ಪಾತ್ರಗಳ ಆಯ್ಕೆಯಲ್ಲಿ ಚೂಸಿ...
‘ಹೌದು ನನಗೆ ನೆಗೆಟಿವ್‌ ಪಾತ್ರಗಳು ಬೇಡ. ಏಕೆಂದರೆ ಬಹುತೇಕ ಧಾರಾವಾಹಿಗಳಲ್ಲಿ ಹೆಣ್ಣು ಅಂದರೆ ಮನೆ ಒಡೆಯುವವರು, ಕೆಟ್ಟವರು ಎಂಬ ಭಾವ ಬರುವಂತಹ ಪಾತ್ರಗಳನ್ನೇ ನೋಡಬಹುದು. ಅಂಥ ಚಿತ್ರಣ ಏಕೆ ಬೇಕು ಹೇಳಿ? ವಾಸ್ತವವಾಗಿ ಮನೆಯನ್ನು ಒಂದಾಗಿಸುವವಳೂ ಹೆಣ್ಣೇ ಅಲ್ಲವೇ? ಹಾಗಾಗಿ ಅಂಥ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಪಾತ್ರಗಳ ಆಯ್ಕೆ ನನಗೆ ಖುಷಿ ಮತ್ತು ತೃಪ್ತಿ ತರಬೇಕು ಅಷ್ಟೆ. ಈ ವಿಷಯದಲ್ಲಿ ಯಾವ ಒತ್ತಡಕ್ಕೂ ಮಣಿಯುವುದಿಲ್ಲ’ ಎನ್ನುತ್ತಾರೆ. 

ಸದ್ಯ ಕೈಯಲ್ಲಿರುವ ಚಿತ್ರಗಳು
‘ಕೆಇಬಿ ಕೆಂಪಣ್ಣ’, ‘ಟೆಂಪರ್‌’, ‘ಲಾಸ್ಟ್‌ ಸೀನ್‌’... ಚಿತ್ರಗಳು ನಂದಿನಿ ಕೈಯಲ್ಲಿವೆ. ಜೊತೆಗೆ ಕೆಲವು ಆಡಿಯೊ ಬುಕ್‌ಗಳಿಗಾಗಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು ಸೇರಿದಂತೆ ಚಿತ್ರ ಕ್ಷೇತ್ರದ ಎಲ್ಲರನ್ನೂ ಸೇರಿಸುವ ವೇದಿಕೆ ‘ಸ್ಟೇಜ್‌ 18 – 18’ನಲ್ಲಿ ತೊಡಗಿಕೊಂಡು ಬ್ಯುಸಿ ಆಗಿದ್ದಾರೆ.

ಒಳ್ಳೆಯ ಚಿತ್ರಗಳನ್ನು ಕೊಡಬೇಕು. ಅತ್ಯುತ್ತಮ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬ ಕನಸಿನೊಂದಿಗೆ ಮುಂದುವರಿದಿದ್ದಾರೆ ನಂದಿನಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು