ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಮತ್ತೆ ಮಾಯಾಮೃಗ’ದಲ್ಲಿ ಸವಾಲುಗಳೇನು? ಹೊಸ ಕಥೆ ಹೇಳ್ತಾರಾ ಸೀತಾರಾಮ್‌?

Last Updated 11 ಸೆಪ್ಟೆಂಬರ್ 2022, 11:01 IST
ಅಕ್ಷರ ಗಾತ್ರ

ಟಿ.ಎನ್.ಸೀತಾರಾಮ್ ನಿರ್ದೇಶನದ ‘ಮಾಯಾಮೃಗ’ ಧಾರಾವಾಹಿಯ ಮುಂದುವರಿದ ಭಾಗ ‘ಮತ್ತೆ ಮಾಯಾಮೃಗ’ ಹೆಸರಿನೊಂದಿಗೆ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇಪ್ಪತ್ತೈದು ವರ್ಷಗಳ ಹಿಂದೆ ದೂರದರ್ಶನ ವಾಹಿನಿಯಲ್ಲಿ ಅಪಾರ ಜನಪ್ರಿಯತೆ ಪಡೆದ ಧಾರಾವಾಹಿ ‘ಮಾಯಾಮೃಗ’. ಧಾರಾವಾಹಿಯ ಸೀಕ್ವೆಲ್‌ ಈಗ ಸಿರಿ ಕನ್ನಡದಲ್ಲಿ ಪ್ರಸಾರವಾಗಲಿದೆ.

ಕಥೆ ಕಟ್ಟಲು ಹೊಸ ಸವಾಲು

‘ಆಗಲೂ, ಈಗಲೂ ಧಾರಾವಾಹಿ ನೋಡುವವರ ಮನಸ್ಥಿತಿ ಬದಲಾಗಿದೆ. ಸಿರಿಕನ್ನಡ ವಾಹಿನಿಯ ಸಂಸ್ಥಾಪಕ ಸಂಜಯ್ ಶಿಂಧೆ ಅವರು ಈ ಪ್ರಸ್ತಾವ ತಂದಾಗ ನನಗೆ ಭಯ ಆಯಿತು. ‘ಮಾಯಾಮೃಗ’ಕ್ಕೆ ಸೀಕ್ವೆಲ್ ಹೇಗೆ ಎಂಬ ಚಿಂತೆ ಕಾಡಿತು. ನಮ್ಮ ಧಾರಾವಾಹಿಯಲ್ಲಿ ನಟಿಸಿದ್ದ ಅನೇಕರು ಈಗ ಬೇರೆ ಬೇರೆ ಕಡೆ ಇದ್ದಾರೆ. ಕೆಲವರು ಈ ಜಗತ್ತಿನಲ್ಲೇ ಇಲ್ಲ’ ಎಂದು ‘ಮಾಯಾಮೃಗ’ದ ಮುಂದಿನ ಭಾಗಕ್ಕಿರುವ ಸವಾಲುಗಳನ್ನು ಸೀತಾರಾಮ್‌ ತೆರೆದಿಟ್ಟರು.

‘ಆ ಕಾಲದಲ್ಲೇ ಆಗಿದ್ದರೆ ಅವರದ್ದೇ ಎರಡನೇ ಕಥೆ ಮಾಡಬಹುದಿತ್ತು. ಈಗ ಅವರ ಮುಂದಿನ ತಲೆಮಾರಿಗೆ ಕಥೆ ಹೇಳಬೇಕು. ಈಗ ಅತೀ ವೇಗದಲ್ಲಿ ಜಗತ್ತು ಸಾಗುತ್ತಿದೆ. ಸಂಬಂಧಗಳ ಮೌಲ್ಯ ಕಡಿಮೆ ಆಗಿದೆ. ಮೊಬೈಲ್‌ನಲ್ಲೇ ಬಹುತೇಕ ಕೆಲಸಗಳು ಆಗಿಬಿಡುತ್ತದೆ’ ಹೀಗೆ ಸಾಕಷ್ಟು ಬದಲಾಗಿದೆ ಎಂದು ಹೇಳುವ ಮೂಲಕ ಸೀತಾರಾಮ್ ಅವರು ‘ಮತ್ತೆ ಮಾಯಾಮೃಗ’ದ ಕಥೆ ಹೊಸ ಜಗತ್ತಿಗೆ ತಕ್ಕ ಹಾಗೆ ಇರುತ್ತದೆ ಎಂಬುದನ್ನು ತಿಳಿಸಿದರು.

ಹಿಂದಿನ ಬಾರಿ ಶಾಸ್ತ್ರಿಗಳ ಕಥೆ ಹೇಳಿದ್ದೆವು. ಈಗ ನಾವು ಹಳೆಯ ತಂಡವನ್ನೇ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶಾಸ್ತ್ರಿಗಳು ಇವತ್ತಿನ ವೇಗದ ಜಗತ್ತಿಗೆ ಹೇಗೆ ಹೊಂದಿಕೊಂಡಿದ್ದಾರೆ, ಅವರ ಮಕ್ಕಳು ಏನು ಮಾಡುತ್ತಿದ್ದಾರೆ ಎಂಬುದರ ಮೇಲೆ ಕಥೆ ಸಾಗಲಿದೆ. ‘ಮಾಯಾಮೃಗ’ ಧಾರಾವಾಹಿಯಲ್ಲಿ ಅವಿನಾಶ್, ಮಾಳವಿಕಾ, ರಾಜೇಶ್ ನಟರಂಗ, ವೀಣಾ ಸುಂದರ್ ಮೊದಲಾದವರು ನಟಿಸಿದ್ದರು. ಅವರು ಈ ಧಾರಾವಾಹಿಯಲ್ಲೂ ಅಭಿನಯಿಸಲಿದ್ದಾರೆ. ಇದರ ಜತೆಗೆ ಯುವಪೀಳಿಗೆಗೆ ಕಥೆ ಹೇಳಲು ಸಾಕಷ್ಟು ಹೊಸ ಪಾತ್ರಗಳು ಸೇರ್ಪಡೆ ಆಗಿದೆ. ‘ಮತ್ತೆ ಮಾಯಾಮೃಗ’ ಧಾರಾವಾಹಿಯ ಚಿತ್ರೀಕರಣ ಆರಂಭವಾಗಿದೆ. ‘ಸಿರಿ ಕನ್ನಡ’ ವಾಹಿನಿಯಲ್ಲಿ ಅಕ್ಟೋಬರ್ ಮೂರನೇ ವಾರದಿಂದ ಪ್ರಸಾರವಾಗಲಿದೆ ಎಂದರು ಟಿ.ಎನ್.ಸೀತಾರಾಮ್.

ಮೊದಲು ಮನೆಗೆ ಒಂದು ಟಿವಿ ಇರುತ್ತಿತ್ತು. ಈಗ ರೂಮಿಗೊಂದು ಟಿವಿ ಇರುತ್ತದೆ. ಅಜ್ಜ- ಅಜ್ಜಿ, ಅಪ್ಪ-ಅಮ್ಮ ಹಾಗೂ ಮಕ್ಕಳು ಬೇರೆಬೇರೆ ಕಾರ್ಯಕ್ರಮ ನೋಡುತ್ತಿರುತ್ತಾರೆ. ಅವರನೆಲ್ಲಾ ನಮ್ಮ ಧಾರಾವಾಹಿ ನೋಡುವ ಹಾಗೆ ಮಾಡುವ ಸವಾಲು ನಮಗಿದೆ ಎಂದರು ಪಿ.ಶೇಷಾದ್ರಿ.

ಲಕ್ಷ್ಮೀ ಚಂದ್ರಶೇಖರ್, ಶಶಿಕುಮಾರ್, ವಿಕ್ರಮ್ ಸೂರಿ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT