ಶುಕ್ರವಾರ, ಅಕ್ಟೋಬರ್ 23, 2020
28 °C

ನಟ ನಾಗಾರ್ಜುನ ‘ಬಿಗ್‌ಬಾಸ್’ ನಿರೂಪಣೆಯಿಂದ ಹೊರಗುಳಿಯುತ್ತಾರೆಯೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಿಗ್‌ಬಾಸ್‌’ ನಿರೂಪಣೆ ಮೂಲಕ ನಟ ನಾಗಾರ್ಜುನ ಅಕ್ಕಿನೇನಿ ಕಿರುತೆರೆಯ ಪ್ರೇಕ್ಷಕರಿಗೂ ಚಿರಪರಿಚಿತ. ವಿಭಿನ್ನ ನಿರೂಪಣೆಯಿಂದಾಗಿ ಅವರು ಮನೆ ಮಾತಾಗಿದ್ದಾರೆ. ಪ್ರಸ್ತುತ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಸೀಸನ್ 4ರ ನಿರೂಪಣೆಯ ಜವಾಬ್ದಾರಿ ಹೊತ್ತಿರುವುದೂ ಅವರೇ. ವಾರಾಂತ್ಯದಲ್ಲಿ ಸ್ಪರ್ಧಿಗಳ ಎದುರು ಮುಖಾಮುಖಿಯಾಗಿ ಪ್ರೇಕ್ಷಕರಿಗೆ ರಂಜನೆ ಉಣಬಡಿಸುತ್ತಿದ್ದಾರೆ.

ನಾಗಾರ್ಜುನ ಬಿಗ್‌ಬಾಸ್‌ನಲ್ಲಿ ಚೆನ್ನಾಗಿಯೇ ನಿರೂಪಣೆ ಮಾಡುತ್ತಿದ್ದಾರೆ. ಕಿರುತೆರೆಯ ಈ ಜವಾಬ್ದಾರಿ ಜೊತೆಗೆ ಹಿರಿತೆರೆಯಲ್ಲಿಯೂ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ‘ವೈಲ್ಡ್ ‌ಡಾಗ್’ ಸಿನಿಮಾದಲ್ಲಿ ಅವರು ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಅಂದಹಾಗೆ ಈ ಚಿತ್ರದ ಶೂಟಿಂಗ್‌ಗಾಗಿ ಅವರು ಬಿಗ್‌ಬಾಸ್‌ನಿಂದ ಹೊರಗುಳಿಯಲಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ಅಂಗಳದಿಂದ ಹೊರಬಿದ್ದಿದೆ.

ಅರಣ್ಯ ಪ್ರದೇಶದಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಭಾರತದ ಕಾಡಿನಲ್ಲಿ ಇದರ ಚಿತ್ರೀಕರಣ ನಡೆಯುತ್ತಿಲ್ಲವಂತೆ. ಥಾಯ್ಲೆಂಡ್‌ ಕಾಡಿನಲ್ಲಿ ಶೂಟಿಂಗ್‌ಗೆ ನಿರ್ಧರಿಸಲಾಗಿದೆ. ಚಿತ್ರೀಕರಣಕ್ಕಾಗಿ ವಿಶೇಷ ವಿಮಾನದಲ್ಲಿ ಅಲ್ಲಿಗೆ ಹೊರಡಲು ಚಿತ್ರತಂಡ ನಿರ್ಧರಿಸಿದೆ. ಒಟ್ಟು 20 ದಿನಗಳ ಕಾಲ ಶೂಟಿಂಗ್‌ ನಡೆಸುವುದು ಚಿತ್ರತಂಡದ ಇರಾದೆ. ಹಾಗಾಗಿ, ಬಿಗ್‌ಬಾಸ್‌ನ 6 ಎಪಿಸೋಡ್‌ಗಳಲ್ಲಿ ನಾಗಾರ್ಜುನ್‌ ಕಾಣಿಸಿಕೊಳ್ಳುವುದಿಲ್ಲ ಎಂಬ ಸುದ್ದಿಯಿದೆ. ಮೂರು ವಾರಗಳ ಕಾಲ ಅವರ ಅನುಪಸ್ಥಿತಿ ಬಿಗ್‌ಬಾಸ್‌ಗೆ ಕಾಡಲಿದೆಯಂತೆ.

ಕಳೆದ ವರ್ಷವೂ ತಮ್ಮ ಜನ್ಮದಿನದ ಆಚರಣೆ ಅಂಗವಾಗಿ ಕುಟುಂಬದ ಸದಸ್ಯರ ಜೊತೆಗೆ ಅವರು ವಿದೇಶಕ್ಕೆ ತೆರಳಿದ್ದು ಉಂಟು. ಹಾಗಾಗಿ, ಕೆಲವು ಎಪಿಸೋಡ್‌ಗಳಲ್ಲಿ ಅವರು ನಿರೂಪಣೆ ಮಾಡಿರಲಿಲ್ಲ.

ಈಗ ನಾಗಾರ್ಜುನ‌ ಶೂಟಿಂಗ್‌ಗೆ ತೆರಳಿದರೆ ಅವರ ಸ್ಥಾನ ತಂಬುವುದು ಯಾರೆಂಬುದು ಕಿರುತೆರೆ ವೀಕ್ಷಕರ ಪ್ರಶ್ನೆ. ಕಳೆದ ವರ್ಷ ಅವರು ಗೈರುಹಾಜರಾದಾಗ ನಟಿ ರಮ್ಯಾ ಕೃಷ್ಣ ನಿರೂಪಣೆಯ ಹೊಣೆ ಹೊತ್ತಿದ್ದರು. ಈ ಬಾರಿಯೂ ಅವರನ್ನು ಕರೆತರಲು ಬಿಗ್‌ಬಾಸ್‌ ತಂಡ ನಿರ್ಧರಿಸಿದೆಯಂತೆ. ಮತ್ತೊಂದೆಡೆ ಹೊಸಬರಿಗೆ ನಿರೂಪಣೆಯ ಜವಾಬ್ದಾರಿ ನೀಡಿದರೂ ಅಚ್ಚರಿಪಡಬೇಕಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು