ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಇತಿಹಾಸ ಅಣಕಿಸುವುದು ಸುಲಭ; ಸೃಷ್ಟಿಸುವುದು ಕಷ್ಟ

‘ಮನು ಸ್ಮೃತಿ’ ವಿರೋಧಿಸುವುದೆಂದರೆ ಮನುಷ್ಯತ್ವದ ಪರ ನಿಂತಂತೆ
Last Updated 8 ನವೆಂಬರ್ 2020, 9:41 IST
ಅಕ್ಷರ ಗಾತ್ರ

‘ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿಸಲಾರರು’– ಸಂವಿಧಾನ ಶಿಲ್ಫಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜನಪ್ರಿಯ ಮಾತಿದು. ಇದೀಗ ಅವರೇ ಸೃಷ್ಟಿಸಿ ಹೋಗಿರುವ ಇತಿಹಾಸವನ್ನು ಅಣಕಿಸುವಂತಹ ಘಟನೆಯೊಂದು ದೇಶದಲ್ಲಿ ಇತ್ತೀಚೆಗೆ ನಡೆದಿದೆ.

ಜಾತಿ ವ್ಯವಸ್ಥೆ ವಿರುದ್ಧ ಅಂಬೇಡ್ಕರ್ ತಮ್ಮ ಬದುಕಿನುದ್ದಕ್ಕೂ ಸಮರ ಸಾರಿದ್ದರು. 1927 ಡಿಸೆಂಬರ್ 25ರಂದು ನಡೆದಿದ್ದ ಮಹಾಡ್ ಸತ್ಯಾಗ್ರಹದ ಸಂದರ್ಭದಲ್ಲಿ, ತಮ್ಮ ಅನುಯಾಯಿಗಳೊಂದಿಗೆ ವರ್ಣವ್ಯವಸ್ಥೆ ಕಾನೂನುಗಳನ್ನು ಒಳಗೊಂಡ ‘ಮನು ಸ್ಮೃತಿ’ ಗ್ರಂಥವನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು.

ಈ ಚಾರಿತ್ರಿಕ ಘಟನೆಗೆ ಸಂಬಂಧಿಸಿದಂತೆ, ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಸೋನಿ ಟಿ.ವಿ.ಯಲ್ಲಿ ನಡೆಸಿ ಕೊಡುವ ಜನಪ್ರಿಯ ‘ಕೌನ್ ಬನೇಗಾ ಕರೋಡ್‌ಪತಿ’ ಷೋನಲ್ಲಿ ಕೇಳಿದ ಪ್ರಶ್ನೆ, ‘ಹಿಂದೂಗಳ ಭಾವನೆಗೆ ಧಕ್ಕೆ ತಂದಿದೆಯಂತೆ. ಹಾಗಾಗಿ, ಬಚ್ಚನ್ ಮತ್ತು ಸೋನಿ ಟಿ.ವಿ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್ಐಆರ್ ದಾಖಲಾಗಿದೆ.

ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಹೋರಾಟಗಾರ ಬೆಜವಾಡ ವಿಲ್ಸನ್ ಮತ್ತು ನಟ, ನಿರೂಪಕ ಅನೂಪ್ ಸೋನಿ ಭಾಗವಹಿಸಿದ್ದ ಷೋನಲ್ಲಿ ಕೇಳಿದ ಪ್ರಶ್ನೆಹೀಗಿತ್ತು.

1927ರ ಡಿಸೆಂಬರ್ 25ರಂದು ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಅವರ ಅನುಯಾಯಿಗಳು ಯಾವ ಗ್ರಂಥವನ್ನು ಸುಟ್ಟು ಹಾಕಿದ್ದರು?

ಉತ್ತರದ ಆಯ್ಕೆಗಳು ಹೀಗಿದ್ದವು. ಎ). ವಿಷ್ಣು ಪುರಾಣ ಬಿ). ಭಗವದ್ಗೀತೆ ಸಿ). ಋಗ್ವೇದ ಡಿ). ಮನು ಸ್ಮೃತಿ

ಪ್ರಶ್ನೆಗೆ ಸ್ಪರ್ಧಿಗಳು ‘ಮನು ಸ್ಮೃತಿ’ ಎಂಬ ಸರಿ ಉತ್ತರ ನೀಡಿದ್ದರು. ಇದನ್ನು ಅನುಮೋದಿಸಿದ್ದ ಬಚ್ಚನ್, ‘ಪುರಾತನ ಹಿಂದೂ ಧರ್ಮಗ್ರಂಥ ಮನುಸ್ಮೃತಿಯಲ್ಲಿ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯನ್ನು ಸೈದ್ಧಾಂತಿಕವಾಗಿ ಸಮರ್ಥಿಸಲಾಗಿದೆ ಎಂದು ಖಂಡಿಸಿ, ಅಂಬೇಡ್ಕರ್ ಅದರ ಪ್ರತಿಗಳನ್ನು ಸುಟ್ಟು ಹಾಕಿದ್ದರು’ ಎಂದಿದ್ದರು.

ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗುವ ಯಾವ ಅಂಶಈ ಪ್ರಶ್ನೆಯಲ್ಲಿದೆಯೋ ಗೊತ್ತಿಲ್ಲ. ವಿಶೇಷವೆಂದರೆ, ಮಹಾರಾಷ್ಟ್ರದಲ್ಲಿ ದೂರು ಕೊಟ್ಟಿರುವುದು ಲಾತೂರ್ ಜಿಲ್ಲೆಯ ಔಸಾ ಕ್ಷೇತ್ರದ ಬಿಜೆಪಿ ಶಾಸಕ ಅಭಿಮನ್ಯು ಪವಾರ್.

‘ಷೋನಲ್ಲಿ ಬಚ್ಚನ್ ಅವರು ಕೇಳಿರುವ ಪ್ರಶ್ನೆ, ಹಿಂದೂ ಧರ್ಮಗ್ರಂಥಗಳು ಇರುವುದು ಸುಡಲಿಕ್ಕಾಗಿ ಎಂಬ ಸಂದೇಶವನ್ನು ಸಾರುತ್ತದೆ. ಇದರಿಂದ ಹಿಂದೂಗಳು ಮತ್ತು ಬೌದ್ಧರ ನಡುವೆ ದ್ವೇಷದ ಭಾವನೆ ಮೂಡಿಸುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೊಟ್ಟಿರುವ ದೂರಿನಲ್ಲಿ ಪವಾರ್ ಆರೋಪಿಸಿದ್ದಾರೆ.

ದೂರುದಾರರ ಆರೋಪವು ಕಾನೂನಿನ ವ್ಯಾಪ್ತಿಗೆ ಬರುತ್ತದೆಯೇ? ಪ್ರಕರಣ ದಾಖಲಿಸಿಕೊಳ್ಳಬಹುದಾದ ಅಂಶಗಳು ಇವೆಯೇ? ಎಂಬ ವಿವೇಚನೆಯನ್ನೂ ಬಳಸದಂತಹ ಸ್ಥಿತಿ ತಲುಪಿಸಿರುವ ಪೊಲೀಸರು, ದೂರು ಕೊಟ್ಟಿದ್ದು ಶಾಸಕ ಎಂಬ ಒಂದೇ ಕಾರಣಕ್ಕೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

ಚಾರಿತ್ರಿಕ ಘಟನೆಗಳ ಮಹತ್ವವನ್ನು ಅಣಕಿಸುವ ಪವಾರ್ ಅವರಂತವರ ನಡೆ, ಇಂದಿಗೂ ವರ್ಣವ್ಯವಸ್ಥೆಯನ್ನೇ ಮನದೊಳಗೆ ಬಯಸುವವರ ದ್ಯೋತಕ. 1956 ಜನವರಿ 26ರಂದು ದೇಶ ಸಂವಿಧಾನವನ್ನು ಅಂಗೀಕರಿಸಿದರೂ, ವರ್ಣವ್ಯವಸ್ಥೆಯ ಮೂಸೆಯಿಂದ ಹೊರ ಬಾರದವರ ಪಾಲಿನ ಸಂವಿಧಾನ ಇಂದಿಗೂ ‘ಮನು ಸ್ಮೃತಿ’ಯೇ ಆಗಿದೆ. ಅಂತಹವರ ಮನಸ್ಥಿತಿ ಆಗಾಗ ಈ ರೀತಿ ವ್ಯಕ್ತವಾಗುತ್ತಿರುತ್ತದೆ.

ಅಂದು ಅಂಬೇಡ್ಕರ್ ಮನು ಸ್ಮೃತಿ ಸುಡುವಾಗ, ಅವರ ಜತೆ ಕೇವಲ ಶೋಷಿತ ಸಮುದಾಯದವರಷ್ಟೇ ಇರಲಿಲ್ಲ. ಬ್ರಾಹ್ಮಣರಾದಿಯಾಗಿ ಮನುಷ್ಯತ್ವವನ್ನು ಬೆಂಬಲಿಸುವ ಮೇಲ್ವರ್ಗದವರೂ ಇದ್ದರು. ಈ ಘಟನೆಯನ್ನು ಪ್ರಸ್ತಾಪಿಸುವುದರಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗುವುದಾದರೆ, ಜಾತಿ ಕಾರಣಕ್ಕೆ ನಡೆಯುವ ದೌರ್ಜನ್ಯಗಳು ಹಿಂದೂಗಳ ಭಾವನೆಗೆ ತಾಕುವುದಿಲ್ಲ ಏಕೆ?

ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಜಾತಿಯ ಕಾರಣಕ್ಕಾಗಿಯೇ ಕೊಲೆ, ಅತ್ಯಾಚಾರ, ಹಲ್ಲೆ, ಮೈಲಿಗೆ ಕಾರಣಕ್ಕಾಗಿ ಅಸ್ಪೃಶ್ಯರು ಕುಳಿತ ಸ್ಥಳವನ್ನು ಸ್ವಚ್ಛಗೊಳಿಸುವ, ದೇವಸ್ಥಾನ ಪ್ರವೇಶಕ್ಕೆ ನಿರ್ಬಂಧ, ಪಂಕ್ತಿ ಭೇದ, ಅವಕಾಶಗಳನ್ನು ನಿರಾಕರಿಸುವಂತಹ ನೂರಾರು ಘಟನೆಗಳು ನಡೆಯುತ್ತಲೇ ಇವೆ.

‘ಹಿಂದೂ ನಾವೆಲ್ಲ ಒಂದು’ ಎಂದು ಹೇಳಿಕೊಳ್ಳುವ ಧರ್ಮದ ವಕ್ತಾರರ ಭಾವನೆಗಳಿಗೆ ಇಂತಹ ಘಟನೆಗಳು ಧಕ್ಕೆ ತರುವುದಿಲ್ಲ. ಹಾಗಾಗಿಯೇ, ಮನುಕುಲವೇ ತಲೆ ತಗ್ಗಿಸುವಂತಹ ಜಾತಿ ದೌರ್ಜನ್ಯಗಳು ಒಂದರ ಹಿಂದೊಂದು ನಡೆಯುತ್ತಿದ್ದರೂ, ಇವರು ತುಟಿ ಬಿಚ್ಚುವುದಿಲ್ಲ. ಬದಲಿಗೆ, ಧರ್ಮದ ಚೌಕಟ್ಟಿನಲ್ಲೇ ದೌರ್ಜನ್ಯವನ್ನು ಸಮರ್ಥಿಸುವ ಅಥವಾ ದೌರ್ಜನ್ಯಕ್ಕೊಳಗಾದವರ ಚಾರಿತ್ರ್ಯ ವಧೆಗೆ ಇಳಿಯುತ್ತಾರೆ.

ಕಡೆಪಕ್ಷ, ‘ಅವರೂ ನಮ್ಮಂತೆಯೇ ಮನುಷ್ಯರು‘ ಎಂಬ ಭಾವವೂ ಮನಸ್ಸಿನಲ್ಲಿ ಮೂಡುವುದಿಲ್ಲ. ಕೆಳ ವರ್ಗದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿದಾಗಲೂ ಧರ್ಮ ಮತ್ತು ಸಂಸ್ಕೃತಿ ರಕ್ಷಕರ ಮನಸ್ಸು ಯಾಕೆ ಕರಗುವುದಿಲ್ಲ? ಕಾರಣವಿಷ್ಟೆ, ಮನುಷ್ಯ ವಿರೋಧಿ ವರ್ಣ ಹಾಗೂ ಜಾತಿ ವ್ಯವಸ್ಥೆಯ ಜೀವಂತವೇ ಅವರ ಪಾಲಿನ ಆದರ್ಶ ಸಮಾಜ.

ಜಾತಿ ಆಧರಿತವಾಗಿಯೇ ಸಮಾಜ ಹಾಗೂ ಮಹಿಳೆಯನ್ನು ನಿಯಂತ್ರಿಸುವುದನ್ನು ಹೇಳುವ ‘ಮನು ಸ್ಮೃತಿ’ಯನ್ನು ವಿರೋಧಿಸುವುದೆಂದರೆ, ಮನುಷ್ಯತ್ವದ ಪರ ನಿಂತಂತೆ. ಈ ದೇಶದ ಸಂವಿಧಾನವನ್ನು ಗೌರವಿಸಿದಂತೆ. ಇದಕ್ಕೆ ವಿರುದ್ಧವಾದ ನಡೆ ಮನುಷ್ಯ ವಿರೋಧಿ. ನಾಗರಿಕ ಸಮಾಜ ಕೂಡ ದೊಡ್ಡ ಪ್ರತಿರೋಧ ತೋರಬೇಕು.

ಇತಿಹಾಸದ ಸತ್ಯಾಸತ್ಯತೆ ಹಾಗೂ ಮಹತ್ವವನ್ನು ಅರಿಯದೆ ಅಣಕಿಸುವುದು ಸುಲಭ. ಮುಂದಿನ ತಲೆಮಾರು ಸ್ಫೂರ್ತಿ ಪಡೆಯುವಂತಹ ಇತಿಹಾಸ ಸೃಷ್ಟಿಸುವುದು ಕಷ್ಟ. ಚರಿತ್ರೆ ಸೃಷ್ಟಿ ಸಾಧ್ಯವಾಗದಿದ್ದರೂ ಪರವಾಗಿಲ್ಲ. ಆದರೆ, ಚರಿತ್ರೆಯನ್ನು ಅವಮಾನಿಸುವ ಹಾಗೂ ಅಣಕಿಸುವಂತಹ ಕೃತ್ಯಗಳು ಸಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT