ಮನೆಯೊಳಗೆ ‘ರಾಣಿ’ ಬರುತ್ತಿದ್ದಾಳೆ. ಏಪ್ರಿಲ್ 3ರಿಂದ ಸೋಮವಾರದಿಂದ ಶನಿವಾರದವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ‘ರಾಣಿ’ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ರಾಮ್‌ಜೀ ಅವರು ಈ ಧಾರಾವಾಹಿಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ.
‘ರಾಣಿ’ ಹೇಗಿದ್ದಾಳೆ?
‘ಒಂದಿಷ್ಟು ಸಿನಿಮಾಗಳ ಪ್ರೇರಣೆಯಿಂದ ಈ ಕಥೆಗೆ ಪಾತ್ರಗಳನ್ನು ತೆಗೆದುಕೊಳ್ಳಲಾಗಿದೆ. ಈ ಕಥೆಯಲ್ಲಿ ನಾಯಕಿಗೆ ಕಿವಿ ಕೇಳುವುದಿಲ್ಲ. ಹಾಗಾಗಿ ನಾವು ತೆರೆ ಮೇಲೆ ಶ್ರವಣ ದೋಷ ಉಳ್ಳವರಿಗೂ ಅರ್ಥವಾಗುವಂತೆ ಹಾವ–ಭಾವದ ಮೂಲಕ ತಿಳಿಸುವ ಪ್ರಯತ್ನ ಮಾಡಿದ್ದೇವೆ. ‘ರಾಣಿ’ಯಲ್ಲಿ ಚೆರ್ರಿ ಪಾತ್ರ ವಿಶೇಷವಾಗಿ ಬರಲಿದೆ’ ಎಂದರು ರಾಮ್‌ಜಿ.
ಚಂದನಾ ಎಂ. ರಾವ್ ಈ ಧಾರಾವಾಹಿಯಲ್ಲಿ ರಾಣಿಯ ಪಾತ್ರ ನಿರ್ವಹಿಸಿದ್ದಾರೆ. ಈ ಪಾತ್ರ ಸವಾಲಿನದ್ದಾಗಿತ್ತಂತೆ. ಅವರಿಗೆ ಕುರಿಯ ಜೊತೆ ನಟಿಸಬೇಕು ಎಂದಾಗ ಭಯವೂ ಆಗಿತ್ತಂತೆ. ಆದರೆ, ತಂಡ ಬೆಂಬಲವಾಗಿ ನಿಂತಿತು ಎಂದು ಹೇಳಿದರು ಅವರು. ಪ್ರವೀಣ್ ಅಥರ್ವ ಈ ಧಾರಾವಾಹಿಯಲ್ಲಿ ‘ಅರ್ಜುನ’ ಹೆಸರಿನ ನಾಯಕ ಪಾತ್ರದಲ್ಲಿದ್ದಾರೆ. ಸ್ವಾತಿ ನಾಯಕನ ತಾಯಿ ಪಾತ್ರದಲ್ಲಿದ್ದಾರೆ. ಮಾನಸಾ ಕೂಡಾ ಮುಖ್ಯಪಾತ್ರವೊಂದರಲ್ಲಿದ್ದಾರೆ.
ಬಾನಿಜಿ ಏಷಿಯಾ ಸಂಸ್ಥೆ ನಿರ್ಮಿಸುತ್ತಿರುವ ‘ರಾಣಿ’ ಧಾರಾವಾಹಿ ಹಳ್ಳಿಯಲ್ಲಿ ಬೆಳೆದ ಹುಡುಗಿಯ ಕಥೆ ಒಳಗೊಂಡಿದೆ. ತನ್ನೊಂದಿಗಿರುವ ಕುರಿ ಮರಿ ಚೆರ್ರಿ ಅಂದ್ರೆ ರಾಣಿಗೆ ಪಂಚಪ್ರಾಣ. ತಂದೆಯ ಪೋಷಣೆಯಲ್ಲಿ ಬೆಳೆದಿರುವ ಈಕೆ ಚಿಕ್ಕಂದಿನಲ್ಲಿ ಆಕಸ್ಮಿಕವಾಗಿ ನಡೆದ ಘಟನೆಯಿಂದಾಗಿ ತನ್ನ ತಾಯಿ ಹಾಗೂ ಅಣ್ಣನನ್ನು ಕಳೆದುಕೊಂಡಿರುತ್ತಾಳೆ. ಈಕೆಯ ಮಾತು ಸಿಡಿಲಿನಂತೆ. ಮನಸು ಮಾತ್ರ ತಾಯಿಯ ಮಡಿಲಿನಂತೆ. ಇಂತಹ ಮುದ್ದು ಹುಡುಗಿಗೆ ಶ್ರವಣ ದೋಷವಿದೆ. ಈ ನಡುವೆ ಒಂದಿಷ್ಟು ಸೇಡು, ದ್ವೇಷ ಕಾರುವಿಕೆ ಎಲ್ಲವೂ ಇದೆ. ಅಂತೂ ಕುತೂಹಲ ಹಿಡಿದಿಟ್ಟಿದೆ ‘ರಾಣಿ’.
v
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.