ಬುಧವಾರ, ಆಗಸ್ಟ್ 17, 2022
25 °C

ಋತ್ವಿಕ್ ಕಂಡ ‘ಶಿವರಾಂ’ನ ಕನಸು

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ರಗಡ್‌ ನೋಟ, ಖಡಕ್‌ ಮಾತು, ಸದಾ ಜಗಳ, ಪ್ರೀತಿ ತೋರಿದವರಿಗೆ ಪ್ರೀತಿ ತೋರುತ್ತಾ, ತಂದೆ ಎದುರು ಪುಟ್ಟ ಮಗನಾಗಿ, ತಂಗಿಗೆ ವಾತ್ಸಲ್ಯ ತೋರುವ ಅಣ್ಣನಾಗಿ, ಆಯೀ ಸಾಹೇಬರಿಗೆ ಬಲಗೈ ಬಂಟನಾಗಿ ತೆರೆ ಮೇಲೆ ಕಾಣಿಸುವ ಶಿವರಾಂ ಎಂದರೆ ಇತ್ತೀಚೆಗೆ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಕೊಂಚ ಪ್ರೀತಿ ಜಾಸ್ತಿಯಾಗಿದೆ. ಉತ್ತರ ಕರ್ನಾಟಕ ಭಾಷೆಯ ಸೊಗಡನ್ನು ಸುಂದರವಾಗಿ, ತಪ್ಪಿಲ್ಲದೆ, ಸ್ಫುಟವಾಗಿ ಮಾತನಾಡುವ ಶಿವರಾಂ ಕಲರ್ಸ್ ಕನ್ನಡ ವಾಹಿನಿಯ ‘ಗಿಣಿರಾಮ’ ಧಾರಾವಾಹಿಯ ನಾಯಕ. ಇವರ ನಿಜನಾಮಧೇಯ ರಿತ್ವಿಕ್ ಮಠದ್‌. ದಾವಣಗೆರೆ ಮೂಲದವರಾದರೂ ಹುಟ್ಟಿ ಬೆಳೆದಿದ್ದೆಲ್ಲಾ ಬೆಳಗಾವಿಯಲ್ಲಿ.

6ನೇ ತರಗತಿಯಲ್ಲಿ ಓದುತ್ತಿದ್ದಾಗ ‘ನಿಸರ್ಗ ದೇವತೆ’ ಎಂಬ ನಾಟಕ ನೋಡಿದ್ದರು. ಆ ನಾಟಕ ನೋಡಿದ ಮೇಲೆ ಇವರಲ್ಲಿ ನಟನೆಯ ಕನಸು ಚಿಗುರೊಡೆಯಲು ಆರಂಭವಾಗಿತ್ತು. ಅಲ್ಲದೇ ಅಂದೇ ತಾನು ನಟನಾಗಬೇಕು ಎಂದು ದೃಢನಿಶ್ಚಯ ಮಾಡಿದ್ದರು. ನಾಚಿಕೆ ಸ್ವಭಾವದ ರಿತ್ವಿಕ್‌ಗೆ ಕ್ಯಾಮೆರಾ ಎದುರಿದ್ದಾಗ ನಟನೆ ಸಲೀಸಾಗಿ ಬರುತ್ತದಂತೆ. ‘ನಾಲ್ಕು ಜನರ ಮುಂದೆ ನಿಂತು ನೇರವಾಗಿ ಮಾತನಾಡಲು ಹಿಂಜರಿಯುವ ನಾನು ಕ್ಯಾಮೆರಾ ಮುಂದೆ ನಿಂತಾಗ ಕೋಟಿ ಜನ ಎದುರಿದ್ದರೂ ಹಿಂಜರಿಕೆ ಇಲ್ಲದೇ ನಟಿಸುತ್ತೇನೆ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ. ಇವರು ‘ಪ್ರಜಾಪ್ಲಸ್‌’ ಜೊತೆ ತಮ್ಮ ನಟನೆಯ ಹಾದಿ ಬಗ್ಗೆ  ಮಾತನಾಡಿದ್ದಾರೆ.

ರಂಗಭೂಮಿ ಹಿನ್ನೆಲೆ

ಬೆಂಗಳೂರಿಗೆ ಬಂದು ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡಿದ್ದ ಇವರು ನಂತರ ರಂಗಭೂಮಿಗೆ ಪ್ರವೇಶ ಪಡೆಯುತ್ತಾರೆ. ರಾಜ್‌ಗುರು ಹೊಸಕೋಟೆ ಅವರ ‘ರಂಗಪಯಣ’ ರಂಗತಂಡಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲಿ ಶಂಕರ್‌ನಾಗ್ ಅವರ ಸಿನಿಮಾ ‘ಒಂದಾನೊಂದು ಕಾಲದಲ್ಲಿ’ ಕಥೆಯನ್ನು ಯಥಾವತ್ ನಾಟಕ ಮಾಡಿದ್ದರು. ಅದರಲ್ಲಿ ಶಂಕರ್‌ನಾಗ್ ಮಾಡಿದ್ದ ಪಾತ್ರವನ್ನು ಮಾಡಿದ್ದರು ರಿತ್ವಿಕ್. ಈ ನಾಟಕ ಇಲ್ಲಿಯವರೆಗೆ 21 ಷೋಗಳನ್ನು ಕಂಡಿದೆ.

ಸಿನಿಮಾ ಕ್ಷೇತ್ರದತ್ತ ಪಯಣ

‘ನಾನು ಮೊದಲು ಸಿನಿಮಾಗಳಲ್ಲಿ ಚಿಕ್ಕ–ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದೆ. ಮೊದಲು ನಟಿಸಿದ್ದು ‘ಯುವಸಾಮ್ರಾಟ್‌’ ಎಂಬ ಚಿತ್ರದಲ್ಲಿ. ನಾಯಕನಾಗಿ ‘ಆ ಎರಡು ವರ್ಷಗಳು’ ಹಾಗೂ ‘ಕಿಕ್‌ ಬಾಕ್ಸ್’ ಸಿನಿಮಾಗಳಲ್ಲಿ ನಟಿಸಿದ್ದೇನೆ. ಸದ್ಯ ‘ಉತ್ಸವ’ ಸಿನಿಮಾದಲ್ಲಿ ನಟಿಸುತ್ತಿದ್ದೇನೆ, ಇದರ ಚಿತ್ರೀಕರಣ ಶೇ 90 ರಷ್ಟು ಮುಗಿದಿದೆ’ ಎನ್ನುತ್ತಾ ಸಿನಿಮಾ ಹಾದಿಯನ್ನು ವಿವರಿಸುತ್ತಾರೆ.

ರಗಡ್ ಪಾತ್ರದ ಕನಸು

‘ನನಗೆ ಗಿಣಿರಾಮ ಧಾರಾವಾಹಿಗೆ ಅವಕಾಶ ಬಂದಾಗ ನನ್ನನ್ನು ಮೊದಲು ಆಕರ್ಷಿಸಿದ್ದು ಗಿಣಿರಾಮದ ಶಿವರಾಂ ಪಾತ್ರ. ಅನ್ನಿಸಿದ್ದನ್ನು ಹೇಳುವ, ಅನ್ನಿಸಿದ್ದನ್ನು ಮಾಡುವ ರಗಡ್ ಹುಡುಗ ಅವನು. ನನಗೆ ಮೊದಲಿನಿಂದಲೂ ಮಾಸ್‌ ಪಾತ್ರದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ಆ ಕಾರಣಕ್ಕೆ ಧಾರಾವಾಹಿ ಒಪ್ಪಿಕೊಂಡೆ’ ಎಂದು ಧಾರಾವಾಹಿ ಕ್ಷೇತ್ರಕ್ಕೆ ಮರಳಿದ ಕಾರಣ ಹೇಳುತ್ತಾರೆ.

ಕಲ್ಲು ಹೃದಯದೊಳಗಿನ ಒಳ್ಳೆಯತನ

‘ಶಿವರಾಂ ಪಾತ್ರ ಇರುವುದೇ ರಗಡ್ ಆಗಿ. ಅವನು ಎಲ್ಲರಿಗೂ ಕಲ್ಲುಹೃದಯವನಾಗಿಯೇ ಕಾಣುತ್ತಾನೆ. ಆದರೆ ಅವನು ಒಳ್ಳೆಯ ಕೆಲಸಗಳನ್ನು ಮಾಡುತ್ತಿರುತ್ತಾನೆ. ಬೇರೆಯವರಿಗೆ ಸಹಾಯ ಮಾಡುವುದು, ಜೊತೆಗಿರುವವರನ್ನೆಲ್ಲಾ ಖುಷಿಯಾಗಿ ಇಟ್ಟುಕೊಳ್ಳಬೇಕು ಎಂದು ಯೋಚಿಸುವಂತಹ ಹುಡುಗ ಶಿವರಾಂ. ಹೊರನೋಟಕ್ಕೆ ಅವನು ಒರಟ. ಆದರೆ ಒಳ್ಳೆಯ ಮನಸ್ಸಿನ ಹುಡುಗ. ನನ್ನ ವೈಯಕ್ತಿಕ ಜೀವನಕ್ಕೂ ಶಿವರಾಂ ಪಾತ್ರಕ್ಕೂ ತುಂಬಾನೇ ವ್ಯತ್ಯಾಸ ಇದೆ. ಸಹಾಯ ಮಾಡುವ ಗುಣವೊಂದು ಬಿಟ್ಟು ಬೇರೆಲ್ಲೂ ಶಿವನಿಗೂ ನನಗೂ ಹೋಲಿಕೆ ಇಲ್ಲ’ ಎನ್ನುತ್ತಾರೆ ರಿತ್ವಿಕ್.

‘ನಾನು ನಟ ಆಗಿಲ್ಲ ಅಂದ್ರೆ ಇನ್ನೊಂದೇನೋ ಆಗ್ತೀನಿ ಅನ್ನೋ ಎರಡನೇ ಯೋಚನೆ ನನ್ನ ತಲೆಯಲ್ಲಿ ಇರಲಿಲ್ಲ. ನಟ ಆಗ್ತೀನಿ ಅನ್ನೋದು ಅಷ್ಟೇ ಇತ್ತು. ನನ್ನ ತಲೆಯಲ್ಲಿ ಬೇರೆ ಆಯ್ಕೆಗಳಿರಲಿಲ್ಲ. ಆಯ್ಕೆಗಳಿದ್ದರೆ ಬಹುಶಃ ನಾನು ನಟ ಆಗುತ್ತಿರಲಿಲ್ಲ ಅನ್ನಿಸುತ್ತದೆ’ ಎನ್ನುತ್ತಾ ಮಾತು ಮುಗಿಸುತ್ತಾರೆ.

ಉತ್ತರಕರ್ನಾಟಕ ಭಾಷೆಯ ಸೊಗಡು

ನಾನು ಬೆಳಗಾವಿಯಲ್ಲಿ ಬೆಳೆದಿದ್ದು ನನಗೆ ಪ್ಲಸ್ ಪಾಯಿಂಟ್. ಆ ಭಾಷೆ ನನ್ನ ಬಾಯಲ್ಲಿ ಇಷ್ಟು ಸಲೀಸಾಗಿ ಬರುತ್ತದೆ ಎಂಬುದಕ್ಕೆ ಅಲ್ಲಿ ಮಾಡಿದ ವಿದ್ಯಾಭ್ಯಾಸ ಹಾಗೂ ಸ್ನೇಹಿತರು ಕಾರಣ. ಧಾರಾವಾಹಿಯಲ್ಲಿ ನಾನು ಎಲ್ಲೂ ಡೈಲಾಗ್ ಹೇಳುತ್ತೇನೆ ಅನ್ನಿಸಿರಲಿಲ್ಲ. ಸಾಮಾನ್ಯವಾಗಿ ಮಾತನಾಡಿದಂತೆ ಡೈಲಾಗ್ ಹೇಳಿಕೊಂಡು ಹೋಗಿದ್ದೆ.

ಧಾರಾವಾಹಿ ತಂಡದ ಬಗ್ಗೆ

‘ನಮ್ಮ ತಂಡದ ಬಗ್ಗೆ ಒಂದು, ಎರಡು ಮಾತಿನಲ್ಲಿ ಹೇಳಿ ಮುಗಿಸಲು ಸಾಧ್ಯವಿಲ್ಲ. ಇಂತಹ ತಂಡ ಸಿಗಲು ನಾನು ಅದೃಷ್ಟ ಮಾಡಿದ್ದೆ. ಅಂದ್ರೆ ನಿರ್ಮಾಪಕ, ನಿರ್ದೇಶಕ, ಕ್ಯಾಮೆರಾಮನ್ ಅಲ್ಲಿಂದ ಆರಂಭವಾಗಿ ನಮ್ಮ ಲೈಟ್‌ಬಾಯ್‌, ಸೆಟ್‌ ಹುಡುಗ ಪ್ರತಿಯೊಬ್ಬರೂ ತುಂಬಾನೇ ಸಹಕಾರ ನೀಡುತ್ತಾರೆ. ಮೇಕಿಂಗ್‌ ಕೂಡ ತುಂಬಾ ಚೆನ್ನಾಗಿ ಮಾಡುತ್ತಿದ್ದಾರೆ. ನಿರ್ದೇಶಕರು ಹಾಗೂ ನಿರ್ಮಾಪಕರು ಯಾವ ವಿಷಯದಲ್ಲೂ ರಾಜಿ ಮಾಡಿಕೊಂಡಿಲ್ಲ. ಇನ್ನು ಸಹನಟರ ಬಗ್ಗೆ ಹೇಳುವುದಾದರೆ ಇಂದು ನನ್ನ ನಟನೆ ಚೆನ್ನಾಗಿದೆ ಎಂದು ನಾಲ್ಕು ಜನ ಹೊಗಳುತ್ತಾರೆ ಎಂದರೆ ಅದಕ್ಕೆ ಕಾರಣ ನನ್ನ ಸಹನಟರು. ಅವರು ನಾನು ಚೆನ್ನಾಗಿ ನಟಿಸಿದಾಗ ನನ್ನನ್ನು ಹೊಗಳುತ್ತಾರೆ. ಅದೊಂದು ನನ್ನ ಕುಟುಂಬ ಆಗಿದೆ. ‌ಪ್ರತಿಯೊಬ್ಬರ ಸಹಕಾರದಿಂದ ಶಿವರಾಂ ಪಾತ್ರ ಇಷ್ಟು ಚೆನ್ನಾಗಿ ಮೂಡಿ ಬಂದಿದೆ.

ಭವಿಷ್ಯದ ಯೋಜನೆಗಳು

‘ಸದ್ಯಕ್ಕೆ ಮೂರು ಸಿನಿಮಾಗಳಿಂದ ಅವಕಾಶ ಬಂದಿದೆ. ಆದರೆ ನನಗೆ ಸಮಯ ಸಾಲುತ್ತಿಲ್ಲ. ಮುಂದಿನ ದಿನಗಳಲ್ಲಿ ಸಿನಿಮಾ, ಧಾರಾವಾಹಿ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತೇನೆ’ ಎಂಬ ಆತ್ಮವಿಶ್ವಾಸದ ಮಾತು ಇವರದ್ದು.

ವಿಷಾದವಿಲ್ಲ

‘ಸಿನಿಮಾದಿಂದ ಧಾರಾವಾಹಿಗೆ ಬಂದೆ ಎಂಬ ವಿಷಾದ ನನ್ನನ್ನು ಎಲ್ಲೂ ಕಾಡಿಲ್ಲ. ಯಾಕೆಂದರೆ ಸಿನಿಮಾದಲ್ಲಿ ಮೂರ್ನಾಲ್ಕು ಸಿನಿಮಾದ ಹಿಟ್ ಆದರಷ್ಟೇ ಜನ ಗುರುತಿಸುತ್ತಾರೆ. ಧಾರಾವಾಹಿ ಹಾಗಲ್ಲ, ಪ್ರಸಾರವಾದ 15 ದಿನಕ್ಕೇ ಜನ ಗುರುತಿಸಲು ಆರಂಭಿಸುತ್ತಾರೆ. ಒಂದೂವರೆ ತಿಂಗಳಲ್ಲಿ ನೀವ್ಯಾರು ಎಂಬುದು ಇಡೀ ಕರ್ನಾಟಕ್ಕೆ ತಿಳಿಯುತ್ತದೆ. ಅದರಲ್ಲೂ ಸ್ವಲ್ಪ ಚೆನ್ನಾಗಿ ನಟಿಸಿದ್ರೆ ಜನ ಗುರುತಿಸಿ, ಆದರಿಸುತ್ತಾರೆ’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು