ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷದ ಇಂದಿರಾಳ ಮನದ ಮಾತು

Last Updated 24 ಸೆಪ್ಟೆಂಬರ್ 2020, 16:30 IST
ಅಕ್ಷರ ಗಾತ್ರ

ಸಿಎ ಮುಗಿಸಿ ಚಾರ್ಟರ್ಡ್‌‌ ಅಕೌಂಟೆಂಟ್ ಆಗಬೇಕು ಎಂಬ ಕನಸು ಕಂಡಿದ್ದ ಇವರ ಜೀವನಕ್ಕೆ ಫೇಸ್‌ಬುಕ್ ಹೊಸ ತಿರುವು ನೀಡಿತ್ತು. ಫೇಸ್‌ಬುಕ್‌ನಲ್ಲಿ ಇವರ ಫೋಟೊಗಳನ್ನು ನೋಡಿದ ಧಾರಾವಾಹಿ ನಿರ್ದೇಶಕರೊಬ್ಬರು ‘ನಟನೆಯಲ್ಲಿ ಆಸಕ್ತಿ ಇದ್ದರೆ ಆಡಿಷನ್‌ಗೆ ಬನ್ನಿ’ ಎಂದು ಕರೆದಿದ್ದರು. ಆಡಿಷನ್‌ನಲ್ಲಿ ಇವರು ಧಾರಾವಾಹಿಗೆ ಆಯ್ಕೆಯಾಗಿದ್ದರು. ತಮ್ಮ ಕನಸಿನ ದಾರಿ ಬಿಟ್ಟು ನಟನೆಯ ಹಾದಿ ಹಿಡಿದವರು ತೇಜಸ್ವಿನಿ ಶೇಖರ್‌, ಸ್ಟಾರ್ ಸುವರ್ಣ ವಾಹಿನಿಯ ‘ಸಂಘರ್ಷ’ ಧಾರಾವಾಹಿಯ ಇಂದಿರಾ ಪಾತ್ರಧಾರಿ.

ಮೈಸೂರಿನ ತೇಜಸ್ವಿನಿ ಮೊದಲು ನಟಿಸಿದ್ದು ‘ಮಧುಬಾಲಾ’ ಧಾರಾವಾಹಿಯಲ್ಲಿ. ನಂತರ ‘ಸೌಭಾಗ್ಯವತಿ’ ಧಾರಾವಾಹಿಗೂ ಬಣ್ಣ ಹಚ್ಚಿದರು. ತಮಿಳು ಕಿರುತೆರೆಯಿಂದಲೂ ಅವಕಾಶ ಹುಡುಕಿ ಬಂದಿತ್ತು.ನಂತರ ತೆಲುಗು ಧಾರಾವಾಹಿಯೊಂದರಲ್ಲೂ ನಟಿಸಿದರು. ಮತ್ತೆ ಕನ್ನಡಕ್ಕೆ ಮರಳಿ ‘ಮಹಾನದಿ’, ‘ನೀಲಿ’ ಹೀಗೆ ಇಲ್ಲಿಯವರೆಗೆ ಕನ್ನಡ, ತಮಿಳು, ತೆಲುಗು ಸೇರಿ ಒಂಬತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಸಿನಿಮಾದಲ್ಲೂ ನಟನೆ

ಕಿರುತೆರೆಯಲ್ಲಿ ಭಿನ್ನ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ ಖ್ಯಾತಿ ಪಡೆದ ತೇಜಸ್ವಿನಿ ಸದ್ಯ ಬೆಳ್ಳಿತೆರೆಗೂ ಕಾಲಿರಿಸಲಿ
ದ್ದಾರೆ. ಇವರ ನಟನೆಯ ಇನ್ನೂ ಹೆಸರಿಡದ ಸಿನಿಮಾದ ಮುಹೂರ್ತ ಇತ್ತೀಚೆಗಷ್ಟೇ ನಡೆದಿತ್ತು.

‘ನನಗೆ ಮೊದಲಿನಿಂದಲೂ ಸಿನಿಮಾದಿಂದ ಅವಕಾಶಗಳು ಬರುತ್ತಿದ್ದವು. ಒಳ್ಳೆಯ ಕತೆಗಾಗಿ ಕಾಯುತ್ತಿದ್ದೆ. ಈಗ ಅದು ನೆರವೇರುತ್ತಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಹಾಗೂ ಧಾರಾವಾಹಿ ಎರಡೂ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ’ ಎಂದು ತೇಜಸ್ವಿನಿ ‘ಪ್ರಜಾಪ್ಲಸ್‌’ಗೆ ತಿಳಿಸಿದರು.

‘ಸಂಘರ್ಷ ಧಾರಾವಾಹಿಯಲ್ಲಿ ನನ್ನದು ಇಂದಿರಾ ಎಂಬ ಐಎಎಸ್ ಅಧಿಕಾರಿಯ ಪಾತ್ರ. ಇಂದಿರಾ ಗಟ್ಟಿಗಿತ್ತಿ. ಮನೆಯವರ ಸಹಕಾರದೊಂದಿಗೆ ಉನ್ನತ ಸ್ಥಾನಕ್ಕೇರುವ ಅವಳು ಜನರಿಗೆ ಸಹಾಯ ಮಾಡಬೇಕು ಎಂದು ಹೋರಾಟ ನಡೆಸುವವಳು. ಈ ಪಾತ್ರದಲ್ಲಿ ನನ್ನನ್ನು ನೋಡಿದ ಅನೇಕರು ‘ಮೇಡಂ, ನನಗೂ ನಿಮ್ಮಂತಹ ಅಧಿಕಾರಿಯಾಗುವಾಸೆ’ ಎಂದು ಮೆಸೇಜ್‌ ಕಳುಹಿಸುತ್ತಾರೆ. ಆಗೆಲ್ಲಾ ಖುಷಿಯಾಗುತ್ತದೆ’ ಎನ್ನುತ್ತಾರೆ ತೇಜಸ್ವಿನಿ.

ಪಾಸಿಟಿವ್‌, ನೆಗೆಟಿವ್ ಎಲ್ಲಾ ರೀತಿಯ ಪಾತ್ರಗಳಲ್ಲೂ ಕಾಣಿಸಿಕೊಂಡಿರುವ ತೇಜಸ್ವಿನಿ ‘ನಾನು ಮಾಡಿರುವ ಎಲ್ಲಾ‍ಪಾತ್ರಗಳೂ ನನಗಿಷ್ಟ. ಇಂತಹದ್ದೇ ಪಾತ್ರ ಮಾಡಬೇಕು ಎಂಬ ಆಸೆಗಿಂತ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿ ಜನಕ್ಕೆ ಇಷ್ಟವಾಗುವುದು ಮುಖ್ಯ’ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

‘ನಟನೆ ಎಂದರೆ ಒಂದು ಪಾತ್ರವನ್ನು ಅನುಭವಿಸಿ ಅದಕ್ಕೆ ಜೀವ ತುಂಬುವುದು. ನಟನಾದವನು ಉತ್ತಮ ವಿಶ್ಲೇಷಕ ಕೂಡ ಆಗಿರಬೇಕು. ಪಾತ್ರವನ್ನು ವಿಶ್ಲೇಷಿಸಿ, ಅನುಭವಿಸಿ ನಟಿಸಿದಾಗ ಮಾತ್ರ ಪಾತ್ರಕ್ಕೆ ಜೀವ ಬರಲು ಸಾಧ್ಯ’ ಎನ್ನುವುದು ತೇಜಸ್ವಿನಿ ಮಾತು.

‘ಕನ್ನಡ ಹಾಗೂ ಪರಭಾಷೆಯ ಕಿರುತೆರೆಯಲ್ಲಿ ಎಲ್ಲವೂ ಒಂದೇ ತರಹ ಇರುತ್ತದೆ. ಇಲ್ಲಿಯಷ್ಟೇ ಅಭಿಮಾನಿಗಳು ಅಲ್ಲೂ ಇದ್ದಾರೆ ಎಂಬುದು ಸಂತಸದ ವಿಷಯ’ ಎಂದು ಮಾತು ಮುಗಿಸಿದರು ತೇಜಸ್ವಿನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT