ಶನಿವಾರ, ಫೆಬ್ರವರಿ 27, 2021
30 °C
ಅಮೆಜಾನ್‌ ಪ್ರೈಮ್‌ ವಿಡಿಯೊ

'ತಾಂಡವ್‌'ನಲ್ಲಿ ಹಿಂದೂ ದೇವರು, ದೇವತೆಗಳ ಲೇವಡಿ; ವಿವರಣೆ ಕೇಳಿದ ಕೇಂದ್ರ ಸರ್ಕಾರ

ಪಿಟಿಐ Updated:

ಅಕ್ಷರ ಗಾತ್ರ : | |

'ತಾಂಡವ್' (Tandav) ವೆಬ್‌ ಸರಣಿ

ನವದೆಹಲಿ: ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ 'ತಾಂಡವ್' (Tandav) ವೆಬ್‌ ಸರಣಿಯಲ್ಲಿ ಹಿಂದೂ ದೇವರು ಮತ್ತು ದೇವತೆಗಳನ್ನು ಲೇವಡಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿದ್ದು, ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಮೆಜಾನ್ ಪ್ರೈಮ್‌ ವಿಡಿಯೊದಿಂದ ವಿವರಣೆ ಕೇಳಿರುವುದಾಗಿ ವರದಿಯಾಗಿದೆ.

ಹಿಂದೂಗಳ ಭಾವನೆಗಳಿಗೆ ಧಕ್ಕೆಯುಂಟಾಗುವಂತೆ ತಾಂಡವ್‌ ವೆಬ್‌ ಸರಣಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಸಂಸದ ಮನೋಜ್‌ ಕೊಟಕ್‌ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಭಾನುವಾರ ಪತ್ರ ಬರೆದಿದ್ದರು. ಈ ದೂರಿನ ಬೆನ್ನಲ್ಲೇ ಸಚಿವಾಲಯವು ತಾಂಡವ್‌ಗೆ ಸಂಬಂಧಿಸಿದಂತೆ ಅಮೆಜಾನ್‌ ಪ್ರೈಮ್‌ನಿಂದ ವಿವರಣೆ ಕೇಳಿದೆ.

ಸೈಫ್‌ ಅಲಿ ಖಾನ್‌, ಡಿಂಪಲ್‌ ಕಪಾಡಿಯಾ, ಸುನಿಲ್ ಗ್ರೋವರ್‌, ತಿಗ್ಮಾಂಶು ದೂಲಿಯಾ, ಡಿನೊ ಮೋರಿಯಾ ಸೇರಿದಂತೆ ಹಲವು ಕಲಾವಿದರು ತಾಂಡವ್ ವೆಬ್‌ ಸರಣಿಯಲ್ಲಿ ಅಭಿನಯಿಸಿದ್ದಾರೆ. ಕಳೆದ ಶುಕ್ರವಾರದಿಂದ ಈ ವೆಬ್‌ ಸರಣಿ ಪ್ರಸಾರವಾಗುತ್ತಿದೆ.

ರಾಜಕೀಯ ಕಥಾಹಿನ್ನೆಲೆ ಇರುವ ಈ ಸರಣಿಯನ್ನು ಅಲಿ ಅಬ್ಬಾಸ್‌ ಜಾಫರ್‌ ಮತ್ತು ಹಿಮಾಂಶು ಕಿಶನ್ ಮೆಹ್ರಾ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. 'ಆರ್ಟಿಕಲ್‌ 15' ಖ್ಯಾತಿಯ ಗೌರವ್ ಸೋಲಂಕಿ ಈ ಚಿತ್ರದ ಕಥೆ ಒದಗಿಸಿದ್ದಾರೆ.

'ಹಿಂದೂ ದೇವರುಗಳ ಬಗ್ಗೆ ಅಪಹಾಸ್ಯ ಮಾಡಿರುವ ಬಗ್ಗೆ ಹಲವು ಸಂಘಟನೆಗಳು ಹಾಗೂ ವ್ಯಕ್ತಿಗಳು ದೂರು ನೀಡಿದ್ದಾರೆ. ಹಾಗಾಗಿ, ನಾವು ಜಾವಡೇಕರ್‌ ಅವರಿಗೆ ಪತ್ರ ಬರೆದು ವೆಬ್‌ ಸರಣಿಯನ್ನು ಕೂಡಲೇ ನಿಷೇಧಿಸುವಂತೆ ಕೋರಿದ್ದೇವೆ. ನಟರು, ನಿರ್ಮಾಪಕ ಹಾಗೂ ನಿರ್ದೇಶಕರು ಕ್ಷಮೆಯಾಚಿಸಬೇಕು' ಎಂದು ಮುಂಬೈ ಈಶಾನ್ಯ ವಲಯದ ಸಂಸದ ಕೊಟಕ್‌ ಹೇಳಿದ್ದಾರೆ.

ಬಿಜೆಪಿಯ ಮತ್ತೊಬ್ಬ ಮುಖಂಡ ರಾಮ್‌ ಕದಮ್‌, ಈ ವೆಬ್‌ ಸರಣಿಯಲ್ಲಿ ಭಗವಂತ ಶಿವನ ಕುರಿತು ಲೇವಡಿ ಮಾಡಿರುವ ಭಾಗವನ್ನು ತೆಗೆದು ಹಾಕುವಂತೆ ನಿರ್ದೇಶಕರಿಗೆ ಒತ್ತಾಯಿಸಿದ್ದಾರೆ. ಇದೇ ಸಂಬಂಧ ಘಾಟ್‌ಕೋಪರ್‌ ಉಪನಗರ ಪೊಲೀಸ್‌ ಠಾಣೆಯಲ್ಲಿ ಶಾಸಕ ರಾಮ್‌ ಕದಮ್‌ ದೂರು ದಾಖಲಿಸಿದ್ದಾರೆ.

ಅಮೆಜಾನ್‌ ಪ್ರೈಮ್‌ ವಿಡಿಯೊ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು