ಶನಿವಾರ, ಜುಲೈ 24, 2021
23 °C

ಟಿ.ವಿಯಲ್ಲಿ ಮಾಲ್ಗುಡಿಯ ಮ್ಯಾನ್‌ ಈಟರ್‌ನ ಕಥೆ?

ವಿಜಯ್ ಜೋಷಿ Updated:

ಅಕ್ಷರ ಗಾತ್ರ : | |

prajavani

ಹಿಂದೆ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಿ ಜನಮೆಚ್ಚುಗೆ ಗಳಿಸಿದ್ದ ‘ಮಾಲ್ಗುಡಿ ಡೇಸ್‌’ ಈಗ ಕನ್ನಡಕ್ಕೆ ಡಬ್ ಆಗಿ ಅಮೇಜಾನ್‌ ಪ್ರೈಮ್‌ನಲ್ಲಿ ಲಭ್ಯವಿದೆ. ಹಾಗೆಯೇ, ಜೀ ಕನ್ನಡ ವಾಹಿನಿಯಲ್ಲಿ ಕೂಡ ಇದು ಪ್ರಸಾರ ಆಗುತ್ತಿದೆ.

ಮಾಲ್ಗುಡಿಯನ್ನು ಇಷ್ಟಪಡುವವರಿಗೆ ಈ ಸಂದರ್ಭದಲ್ಲಿ ಖುಷಿಯ ಸುದ್ದಿಯೊಂದನ್ನು ನೀಡಿದ್ದಾರೆ ನಿರ್ದೇಶಕಿ ಕವಿತಾ ಲಂಕೇಶ್. ‘ಆರ್.ಕೆ. ನಾರಾಯಣ್ ಬರೆದ ‘ದಿ ಮ್ಯಾನ್ ಈಟರ್‌ ಆಫ್‌ ಮಾಲ್ಗುಡಿ’ ಕಾದಂಬರಿಯನ್ನು ಟಿ.ವಿ. ಪರದೆಯ ಮೇಲೆ ತರುವ ಆಲೋಚನೆ ಇನ್ನೂ ಜೀವಂತವಾಗಿ ಇದೆ. ಅದಕ್ಕೆ ಹಣ ಹೂಡಿಕೆ ಮಾಡಲು ಸಿದ್ಧವಿರುವವರನ್ನು ಹುಡುಕುವ ಕೆಲಸ ನಡೆದಿದೆ’ ಎಂದು ಅವರು ಹೇಳಿದ್ದಾರೆ.

ನಾರಾಯಣ್ ಅವರು ಸೃಷ್ಟಿಸಿದ ಮಾಲ್ಗುಡಿಯ ಪ್ರಿಂಟಿಂಗ್‌ ಪ್ರೆಸ್‌ನ ಮಾಲೀಕ ನಟರಾಜ್‌. ಈತ ಮಾಲ್ಗುಡಿಯಲ್ಲಿ ವಿಶಾಲವಾದ ಒಂದು ಬಂಗಲೆಯಲ್ಲಿ ವಾಸಿಸುತ್ತಿರುತ್ತಾನೆ. ಈತನ ಸುತ್ತ ಸುತ್ತುವ ಕಥೆ ‘ದಿ ಮ್ಯಾನ್‌ ಈಟರ್ ಆಫ್ ಮಾಲ್ಗುಡಿ’.

‘ಈ ಕಥೆಯನ್ನು ಈಗ ವೆಬ್ ಸರಣಿಯ ಮಾದರಿಯಲ್ಲಿ ಕೂಡ ವೀಕ್ಷಕರ ಮುಂದೆ ಇರಿಸಬಹುದು. ಅದರ ಸ್ಕ್ರಿಪ್ಟ್‌ ಸಿದ್ಧವಿದೆ. ಇದೇ ಕಥೆಯನ್ನು ಸಿನಿಮಾ ರೂಪದಲ್ಲಿ ವೀಕ್ಷಕರ ಮುಂದೆ ಇರಿಸಲು ಬೇಕಿರುವ ಸ್ಕ್ರಿಪ್ಟ್‌ ಕೂಡ ಸಿದ್ಧವಿದೆ. ಆದರೆ ನಿರ್ಮಾಪಕರು ಸಿಗಬೇಕಷ್ಟೇ’ ಎನ್ನುತ್ತಾರೆ ಕವಿತಾ.

‘ಸಂಭಾಷಣೆ ಸೇರಿದಂತೆ ಚಿತ್ರೀಕರಣ ಆರಂಭಿಸಲು ಅಗತ್ಯವಿರುವ ಇನ್ನೆಲ್ಲವೂ ಸಿದ್ಧವಿದೆ. ಇದಕ್ಕೆ ನಿರ್ಮಾಪಕರು ಸಿಕ್ಕೇ ಸಿಗುತ್ತಾರೆ ಎಂಬ ಭರವಸೆ ಇದೆ. ಈಗ ಒಟಿಟಿ ವೇದಿಕೆಗಳು ಪ್ರವರ್ಧಮಾನಕ್ಕೆ ಬಂದಿರುವ ಕಾರಣ, ಅವುಗಳಿಗೆ ಕಾರ್ಯಕ್ರಮ ನಿರ್ಮಾಣ ಮಾಡಲು ಸಿದ್ಧವಿರುವ ನಿರ್ಮಾಪಕರನ್ನು ಹುಡುಕಬೇಕು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸುಮಾರು ಹದಿನೈದು ವರ್ಷಗಳ ಹಿಂದೆಯೂ ಕವಿತಾ ಅವರು ಈ ಕಾದಂಬರಿಯನ್ನು ತೆರೆಯ ಮೇಲೆ ತರಲು ನಿರ್ಮಾಪಕರನ್ನು ಹುಡುಕಿದ್ದರು. ಆದರೆ, ಆಗ ಇದಕ್ಕೆ ಹಣ ಹೂಡಲು ಯಾರೂ ಮುಂದೆ ಬಂದಿರಲಿಲ್ಲ. ‘ನಾರಾಯಣ್ ಅವರ ಬರಹಗಳ ಬಗ್ಗೆ, ಅವರು ಸೃಷ್ಟಿಸಿದ ಕ್ಲಾಸಿಕ್ಸ್‌ಗಳ ಮೌಲ್ಯದ ಬಗ್ಗೆ ಅರಿವಿರುವ ನಿರ್ಮಾಪಕರು ಬೇಕು’ ಎನ್ನುವುದು ಕವಿತಾ ಅವರ ನಿಲುವು.

ಕವಿತಾ ಅವರು ಈ ಕಾದಂಬರಿಯನ್ನು 18 ಕಂತುಗಳಲ್ಲಿ ಧಾರಾವಾಹಿ ರೂಪದಲ್ಲಿ ತೆರೆಯ ಮೇಲೆ ತರಬಹುದು ಎಂದು ದಶಕದ ಹಿಂದೆಯೇ ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದರು. ಇದಕ್ಕೆ ಪ್ರತಿ ಕಂತಿಗೆ ₹ 5.5 ಲಕ್ಷ ವೆಚ್ಚವಾಗಬಹುದು ಎಂದು ಅಂದಾಜಿಸಿದ್ದರು ಕೂಡ. ಈಗ ಈ ಕಾದಂಬರಿಯನ್ನು ಒಟಿಟಿ ವೇದಿಕೆಗಳಿಗೆ ಹೇಳಿ ಮಾಡಿಸಿದ ರೂಪದಲ್ಲಿ ಸಿದ್ಧಪಡಿಸಬಹುದು ಎಂದು ಅವರು ಹೇಳುತ್ತಾರೆ.

ಹಿಂದೆ, ಇದನ್ನು ಆಗುಂಬೆಯಲ್ಲೇ ಚಿತ್ರೀಕರಿಸಬೇಕು ಎಂದೂ ತೀರ್ಮಾನಿಸಲಾಗಿತ್ತು. ಆದರೆ, ಈಗ ಇದನ್ನು ಚಿತ್ರೀಕರಿಸುವುದಿದ್ದರೆ ಅಲ್ಲಿ ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದರು.

ಶಂಕರ್‌ ನಾಗ್ ಅವರು ನಿರ್ದೇಶಿಸಿದ್ದ ‘ಮಾಲ್ಗುಡಿ ಡೇಸ್‌’ನ ಕಂತುಗಳು ದೂರದರ್ಶನ ವಾಹಿನಿಯಲ್ಲಿ ಪ್ರಸಾರ ಆಗಿದ್ದವು. ನಂತರ, ಕವಿತಾ ಲಂಕೇಶ್ ಅವರು 18 ಹೊಸ ಕಂತುಗಳನ್ನು ನಿರ್ದೇಶಿಸಿದರು. ಶಂಕರ್ ನಾಗ್‌ ನಿರ್ದೇಶನದ ಬಹುತೇಕ ಕಂತುಗಳ ಚಿತ್ರೀಕರಣವು ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ನಡೆದಿತ್ತು. ಅಂತೆಯೇ, ಕವಿತಾ ಅವರೂ ತಾವು
ನಿರ್ದೇಶಿಸಿದ ಬಹುತೇಕ ಕಂತುಗಳನ್ನು ಆಗುಂಬೆಯಲ್ಲೇ ಚಿತ್ರೀಕರಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು