ಗುರುವಾರ , ಫೆಬ್ರವರಿ 20, 2020
31 °C

ಕಲರ್ಸ್‌ನಲ್ಲಿ ಶುರುವಾಗಲಿವೆ ಹೊಸ ಹೊಸ ಕಾರ್ಯಕ್ರಮಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹೊಸ ಹೊಸ ಧಾರಾವಾಹಿಗಳನ್ನು, ರಿಯಾಲಿಟಿ ಶೋಗಳನ್ನು ಟಿವಿ ಪರದೆಯ ಮೇಲೆ ನೋಡುವ ಮನಸ್ಸುಗಳಿಗೆ ಅದರ ಹಿಂದೆ ನಡೆಯುತ್ತಿರುವ ವಾಹಿನಿಗಳ ಲೆಕ್ಕಾಚಾರಗಳ ಬಗ್ಗೆ ತಿಳಿದಿರುವುದಿಲ್ಲ. ಕಥೆ, ನಟ, ನಟಿಯರು ಚೆನ್ನಾಗಿ ಅಭಿನಯಿಸಿದರೆ ಸಾಕು ಅದು ಸಾಕಷ್ಟು ಜನರ ನೆಚ್ಚಿನ ಧಾರಾವಾಹಿಯಾಗುತ್ತದೆ. ಹೀಗೆ ಬಹಳ ಜನ ಮೆಚ್ಚಿ ನೋಡುವ ಧಾರಾವಾಹಿ ಹೆಚ್ಚಿನ ಟಿಆರ್‌ಪಿ ಪಡೆಯುತ್ತದೆ. ಜನರ ಮನಸ್ಸನ್ನು ಗೆಲ್ಲಲು, ಟಿಆರ್‌ಪಿಯನ್ನು ಹೆಚ್ಚಿಸಿಕೊಳ್ಳಲು ವಾಹಿನಿಗಳು ಇನ್ನಿಲ್ಲದ ಸಾಹಸ ಮಾಡುತ್ತಿರುತ್ತವೆ. ಈ ನಿಟ್ಟಿನಲ್ಲಿ ಕಲರ್ಸ್‌ ಕನ್ನಡ ಸಹ ಸಾಲು ಸಾಲು ಹೊಸ ಕಾರ್ಯಕ್ರಮಗಳನ್ನು ತನ್ನ ಬತ್ತಳಿಕೆಯಿಂದ ಹೊರಬಿಡುತ್ತಿದೆ. 

ಸದ್ಯ ಟಿಆರ್‌ಪಿ ಲೆಕ್ಕಾಚಾರದಲ್ಲಿ ಮುನ್ನಲೆಯಲ್ಲಿರುವುದು ಕಲರ್ಸ್‌ ಕನ್ನಡ ಮತ್ತು ಜೀ ಕನ್ನಡ ವಾಹಿನಿಗಳು. ಈಟಿವಿ ಕನ್ನಡ ಹೆಸರಿನಲ್ಲಿ 2000ನೇ ವರ್ಷದಲ್ಲಿ ಶುರುವಾಗಿದ್ದ ಈ ವಾಹಿನಿ 2015ರಲ್ಲಿ ಕಲರ್ಸ್‌ ಕನ್ನಡ ಎಂದು ಮರುನಾಮಕರಣಗೊಂಡಿತು. ಇನ್ನೂ ಜೀ ಕನ್ನಡ ವಾಹಿನಿ 2006ರಲ್ಲಿ ಜನ್ಮತಳೆಯಿತು.

ಸದ್ಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಬ್ಯುಸಿನೆಸ್‌ ಹೆಡ್‌ ಆಗಿರುವ ಪರಮೇಶ್ವರ್‌ ಗುಂಡ್ಕಲ್‌ ಅವರು ಮೊದಲು ತಮ್ಮ ವಾಹಿನಿಯ ಪಯಣವನ್ನು ಶುರುಮಾಡಿದ್ದು ಜೀ ಕನ್ನಡದ ಮೂಲಕವೇ. ಅಲ್ಲಿ ಧಾರಾವಾಹಿ ವಿಭಾಗದಲ್ಲಿ ಕೆಲಸ ಆರಂಭಿಸಿದ ಅವರು ನಂತರ ಬ್ಯುಸಿನೆಸ್‌ ಹೆಡ್‌ ಆಗಿ ಬಡ್ತಿಪಡೆದರು. ಸುಮಾರು 7 ವರ್ಷಗಳ ಕಾಲ ಅವರು ಅಲ್ಲಿ ಕೆಲಸ ಮಾಡಿದ್ದಾರೆ. ನಂತರ 2012ರಲ್ಲಿ ಈಟಿವಿಯ ಬ್ಯುಸಿನೆಸ್‌ ಹೆಡ್‌ ಆಗಿ ನೇಮಕವಾದರು. ಇನ್ನು ಗುಂಡ್ಕಲ್‌ ಅವರ ಗರಡಿಯಲ್ಲಿಯೇ ಪಳಗಿದ್ದ ರಾಘವೇಂದ್ರ ಹುಣಸೂರು ಅವರು ಜೀ ಕನ್ನಡ ವಾಹಿನಿಯ ನೂತನ ಬ್ಯುಸಿನೆಸ್‌ ಹೆಡ್‌ ಆಗಿ ನೇಮಕವಾದರು.

ಕಲರ್ಸ್‌ನಲ್ಲಿ ಹೊಸ ಹೊಸ ಕಾರ್ಯಕ್ರಮ

ಕನ್ನಡ ಮನರಂಜನಾ ಚಾನಲ್‌ಗಳಲ್ಲಿ ನಂ. 1 ಸಿಂಹಾಸನದಲ್ಲಿ ‘ಜಿ ಕನ್ನಡ’ ಆಸೀನವಾಗಿ ವರ್ಷಗಳೇ ಕಳೆಯುತ್ತಾ ಬಂದಿದೆ, ಸತತ ಮೂರು ವರ್ಷಗಳ ಕಾಲ ನಂ. 1 ಆಗಿ ಮೆರೆದಿದ್ದ ಕಲರ್ಸ್‌ ಕನ್ನಡ ಈಗ ಎರಡನೇ ಸ್ಥಾನದಲ್ಲಿದೆ. 

ಡ್ರಾಮಾ ಜೂನಿಯರ್ಸ್‌, ಸರಿಗಮಪ, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌... ಹೀಗೆ ರಿಯಾಲಿಟಿ ಷೋಗಳಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿದ್ದ ‘ಜಿ ಕನ್ನಡ’ಕ್ಕೆ ಕಲರ್ಸ್‌ ಅನ್ನು ಫಿಕ್ಷನ್‌ ವಿಭಾಗದಲ್ಲಿ (ಧಾರಾವಾಹಿಗಳು) ಹಿಂದಿಕ್ಕುವುದು ಬಿಡಿಸಲಾಗದ ಗಣಿತವಾಗಿ ಕಾಡುತ್ತಿತ್ತು. ಈ ಗಣಿತ ಬಿಡಿಸುವ ಸುಲಭ ಸೂತ್ರವಾಗಿ ಸಿಕ್ಕಿದ್ದು ‘ಗಟ್ಟಿಮೇಳ’.

ಸೀರಿಯಲ್‌ಗಳಲ್ಲಿಯೂ ಕಲರ್ಸ್ ಕನ್ನಡವನ್ನು ಬೀಟ್ ಮಾಡಬೇಕು ಎಂಬ ಪ್ರಯತ್ನಕ್ಕೆ ಮೊದಲ ಗೆಲುವು ತಂದು ಕೊಟ್ಟಿದ್ದು ‘ಗಟ್ಟಿಮೇಳ’. ಅದುವರೆಗಿದ್ದ ಧಾರಾವಾಹಿಯ ಸಿದ್ಧಸೂತ್ರದ ಪ್ಯಾಟರ್ನ್‌ ಅನ್ನು ಬ್ರೇಕ್‌ ಮಾಡಲು ಯಶಸ್ವಿಯಾದ ‘ಗಟ್ಟಿಮೇಳ’ ಬಹುಬೇಗನೇ ವೀಕ್ಷಕರ ಗಮನ ಸೆಳೆಯಿತು.

ಈ ಧಾರಾವಾಹಿ ರೂಪಿಸಿದ ಭೂಮಿಕೆಯ ಮೇಲೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು ‘ಜೊತೆ ಜೊತೆಯಲಿ’ ಧಾರಾವಾಹಿ. ಅನಿರುದ್ಧ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿ ಎಬ್ಬಿಸಿದ ಕ್ರೇಜ್ ಹೇಗಿದೆ ಎಂದರೆ, ಇದನ್ನೊಂದು ಚಿಮ್ಮುಹಲಗೆಯಾಗಿಸಿಕೊಂಡು ‘ಜಿ ಕನ್ನಡ’ ವಾಹಿನಿ ಜಿಗಿದ ಎತ್ತರ ಸಾಮಾನ್ಯದ್ದಲ್ಲ. ಇಂದಿಗೂ ಅತೀ ಹೆಚ್ಚು ವೀಕ್ಷಕರನ್ನು ಹೊಂದಿರುವ ಕನ್ನಡ ಧಾರಾವಾಹಿ ‘ಜೊತೆ ಜೊತೆಯಲಿ’. 

ಜನರಿಗೆ ಹೆಚ್ಚು ಮನರಂಜನೆ ನೀಡಲು ಕಲರ್ಸ್‌ ಕನ್ನಡ ಸಾಕಷ್ಟು ಯೋಜನೆಗಳನ್ನು ಹಮ್ಮಿಕೊಂಡಿದೆ. ಧಾರಾವಾಹಿಗಳಲ್ಲಿ ಸದ್ಯ ಮುಗ್ಗರಿಸಿರುವ ಕಲರ್ಸ್‌ ಕನ್ನಡಕ್ಕೆ ‘ಬಿಗ್‌ ಬಾಸ್‌’ ರಿಯಾಲಿಟಿ ಷೋ ಬಲವಾದ ಅಸ್ತ್ರ. ಇನ್ನೇನು ‘ಬಿಗ್‌ ಬಾಸ್‌’ ಕೆಲವು ದಿನಗಳಲ್ಲಿ ಮುಗಿಯುತ್ತದೆ ಎನ್ನುವಾಗಲೇ ಅದನ್ನು ಫೆಬ್ರುವರಿಗೆವರೆಗೆ ಮುಂದೂಡಲಾಗಿದೆ. ಇದರ ಜೊತೆ ಜೊತೆಗೆ ಒಂದಿಷ್ಟು ಪವರ್‌ಫುಲ್‌ ಸೀರಿಯಲ್‌ಗಳೆನ್ನುವ ಬಾಣವನ್ನು ತನ್ನ ಬತ್ತಳಿಕೆಯಲ್ಲಿ ಕಲರ್ಸ್‌ ಇರಿಸಿಕೊಂಡಿದೆ. ಅದರಲ್ಲಿನ ಎರಡು ಬಾಣಗಳನ್ನು ಕಲರ್ಸ್‌ ತಂಡ ಈ ಹೊರತೆಗೆದಿದೆ. 

ಯಾವುದು ಹೊಸ ಧಾರಾವಾಹಿಗಳು?

ಜನವರಿ 6ರಿಂದ ಕಲರ್ಸ್‌ ವಾಹಿನಿ ‘ಗೀತಾ’ ಎಂಬ ಹೊಸ ಕಥೆಯನ್ನು ಜನರ ಮುಂದಿಟ್ಟಿದೆ. ರಾತ್ರಿ 8 ಗಂಟೆಯ ಫ್ರೈಮ್ ಟೈಮ್‌ನಲ್ಲಿ ಬರುವ ಈ ಧಾರಾವಾಹಿ ಬಹಳ ರಿಚ್‌ ಆಗಿಯೇ ತೆರೆಕಾಣುತ್ತಿದೆ. ಟ್ರೇಲರ್‌ ನೋಡಿಯೇ ಅನೇಕರು ಅದರಲ್ಲಿರುವ ಅದ್ಭುತ ಸೆಟ್‌ಗಳ ಬಗ್ಗೆ ಮಾತನಾಡಿದ್ದರು. ಎಂಟು ಗಂಟೆಯ ಸ್ಲಾಟ್‌ಅನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡು ನಂತರ ಇನ್ನಷ್ಟು ಪ್ರಯೋಗ ಮಾಡುವ ಯೋಜನೆಗೆ ಕಲರ್ಸ್‌ ಕನ್ನಡದ್ದಾಗಿ ಎನ್ನುತ್ತಾರೆ ಕಿರುತೆರೆ ವಿಶ್ಲೇಷಕರು.ಜನವರಿ 27ರಿಂದ ಕನ್ನಡತಿ ಎನ್ನುವ ವಿಭಿನ್ನ ಕಥೆಯ ಧಾರಾವಾಹಿಯೊಂದು ಶುರುವಾಗಲಿದೆ. ಪುಟ್ಟಗೌರಿ ಖ್ಯಾತಿಯ ರಂಜನಿ ಕನ್ನಡತಿಯಾಗಿ ಕಾಣಿಸಿಕೊಂಡಿದ್ದಾರೆ. ಲಕ್ಷ್ಮೀ ಬಾರಮ್ಮ ಮುಗಿಯುತ್ತಿದ್ದಂತೆ ಆ ಸಮಯದಲ್ಲಿ ಕನ್ನಡತಿಗೆ ಜಾಗ ಮಾಡಿಕೊಡಲಾಗಿದೆ. ‌

ಇದಲ್ಲದೆ, ಬಿಗ್‌ಬಾಸ್‌ ಮುಗಿಯುತ್ತಿದ್ದಂತೆ ‘ಹಾಡು ಕರ್ನಾಟಕ’ ಎಂದು ಹೊಸ ರಿಯಾಲಿಟಿ ಷೋ ಪ್ರಾರಂಭಿಸಲು ವಾಹಿನಿ ಸಿದ್ಧತೆ ನಡೆಸಿದೆ. ಸ್ಪರ್ಧಿಗಳ ಆಯ್ದೆಗಾಗಿ ಈಗಾಗಲೇ ಆಡಿಷನ್‌ಗಳು ನಡೆಯುತ್ತಿದೆ. ಇವಿಷ್ಟೇ ಅಲ್ಲದೆ ಇನ್ನು ಎರಡು ಮೂರು ಧಾರಾವಾಹಿಗಳ ತಯಾರಿಯೂ ಸದ್ದಿಲ್ಲದೆ ನಡೆಯುತ್ತಿವೆ ಎನ್ನುತ್ತವೆ ಮೂಲಗಳು.

ಪರಮೇಶ್ವರ ಗುಂಡ್ಕಲ್

ಉದಯ ವಾಹಿನಿಯನ್ನು ಹಿಂದಿಕ್ಕಿ ಕಲರ್ಸ್‌ ಕನ್ನಡವನ್ನು ನಂ.1 ಸ್ಥಾನಕ್ಕೆ ಕೊಂಡೊಯ್ದ ಹೆಗ್ಗಳಿಕೆ ಗುಂಡ್ಕಲ್ ಅವರಿಗೆ ಸೇರಿದ್ದು. ಕಲರ್ಸ್ ಕನ್ನಡದ ಜೊತೆಗೆ ಕಲರ್ಸ್‌ ಸೂಪರ್ ಮತ್ತು ಕಲರ್ಸ್ ಮೂವಿ ಚಾನಲ್‌ಗಳೂ ಇವರ ಪ್ರಯತ್ನದಿಂದಲೇ ಕವಲೊಡೆದವು. ಪ್ರೇಕ್ಷಕರ ನಾಡಿಮಿಡಿತವನ್ನು ಅರಿಯಲು ಇವರ ಅನುಭವವೇ ಮುಖ್ಯ ಬಂಡವಾಳ. 

’ಕಲರ್ಸ್‌ ಕನ್ನಡ ನಂ.1 ಇದ್ದಾಗಲೂ ನಾನು ಟಿಆರ್‌ಪಿ ಬಗ್ಗೆ ಮಾಡನಾಡಿಲ್ಲ. ಈಗಲೂ ಮಾತನಾಡುವುದಿಲ್ಲ’ ಎಂದು ಟಿಆರ್‌ಪಿ ವಾರ್‌ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸುತ್ತಾರೆ ಪರಮೇಶ್ವರ್ ಗುಂಡ್ಕಲ್.

ರಾಘವೇಂದ್ರ ಹುಣಸೂರು

‘ಸದ್ಯ ಎರಡು ಧಾರಾವಾಹಿ ಮತ್ತು ಒಂದು ರಿಯಾಲಿಟಿ ಷೋ ಹೊಸದಾಗಿ ಶುರುವಾಗುತ್ತಿದೆ. ಮತ್ತಷ್ಟು ಹೊಸ ಯೋಜನೆಗಳು ಇವೆ. ಜನರಿಗೆ ಮನರಂಜನೆ ನೀಡುವುದಕ್ಕೆ ಸದಾ ಪ್ರಯತ್ನಿಸುತ್ತಿರುತ್ತೇವೆ’ ಎನ್ನುವುದು ಗುಂಡ್ಕಲ್‌ ಅವರ ಆಶಯ.

ಜೀ ಕನ್ನಡ ವಾಹಿನಿ ಬ್ಯುಸಿನೆಸ್‌ ಹೆಡ್‌ ರಾಘವೇಂದ್ರ ಹುಣಸೂರು ಅವರ ಪ್ರತಿಕ್ರಿಯೆಗೆ ಪ್ರಯತ್ನಿಸಿದ್ದು, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ಟಿಆರ್‌ಪಿ ಅಂಕಿ ಸಂಖ್ಯೆ

ಜನವರಿ 4 ರಿಂದ 10ರವರೆಗೆ ನೀಡಿರುವ ಈ ವರ್ಷದ ಮೊದಲ ಟಿಆರ್‌ಪಿಯಲ್ಲಿ ಎಲ್ಲಾ ಪ್ರಕಾರದಲ್ಲಿ ಟಾಪ್‌ 10 ವಾಹಿನಿಗಳ ಪಟ್ಟಿಯಲ್ಲಿ ಜೀ ಕನ್ನಡ ತನ್ನ ಸ್ಥಾನವನ್ನು ಹಾಗೆಯೇ ಉಳಿಸಿಕೊಂಡಿದೆ. ಇನ್ನು ಕನ್ನಡದ ಟಾಪ್‌ 5 ವಾಹಿನಿಗಳಲ್ಲಿ ಜೀ ಕನ್ನಡ ಮೊದಲ ಸ್ಥಾನದಲ್ಲಿ ಮುಂದುವರಿದ್ದಿದ್ದು, ಕಲರ್ಸ್‌ ಕನ್ನಡ ಎರಡು, ಉದಯ ಟಿವಿ ಮೂರು, ಸುವರ್ಣ ವಾಹಿನಿ ನಾಲ್ಕು ಹಾಗೂ ಉದಯ ಮೂವೀಸ್‌ 5ನೇ ಸ್ಥಾನದಲ್ಲಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)