ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಯ ಟಿವಿಯಲ್ಲಿ ಮನಮೆಚ್ಚುವ ‘ಮನಸಾರೆ’

Last Updated 20 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ದಿನದಿಂದ ದಿನಕ್ಕೆ ಹೊಸ ಕಥೆಗಳ ಪ್ರಯೋಗದ ಜತೆಗೆ ಪ್ರೇಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿರುವ ಉದಯ ಟಿ.ವಿ, ಎರಡೂವರೆ ದಶಕಗಳಿಂದ ಪ್ರೇಕ್ಷಕರಿಗೆವೈವಿಧ್ಯಮಯ ಧಾರಾವಾಹಿಗಳ ಮೂಲಕ ಮನರಂಜನೆಯ ರಸದೌತಣ ನೀಡುತ್ತಿದೆ. ಈಗ ಮತ್ತೊಂದು ವಿಭಿನ್ನ ಕಥೆಯ ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ಅರ್ಪಿಸುತ್ತಿದೆ.

ಮಗಳನ್ನು ದ್ವೇಷಿಸೋ ಅಪ್ಪ, ಅವನ ಪ್ರೀತಿಗೆ ಮನಸಾರೆ ಕಾಯುತ್ತಿರುವ ಮಗಳ ಕಥೆಯ ‘ಮನಸಾರೆ’ ಧಾರಾವಾಹಿ ಉದಯ ವಾಹಿನಿಯಲ್ಲಿ ಫೆ.24ರಿಂದ ಆರಂಭವಾಗಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ರಾತ್ರಿ 9ಕ್ಕೆ ಇದು ಪ್ರಸಾರವಾಗಲಿದೆ. ಸಂಬಂಧಗಳ ಸುಂದರ ಕಥೆಯನ್ನು ಹೇಳಲಿರುವ ಈ ಧಾರಾವಾಹಿಯಲ್ಲಿ ಅಪ್ಪನ ಪ್ರೀತಿಗೆ ಹವಣಿಸುವ ಹಿರಿಮಗಳು, ಪ್ರೀತಿಯ ಕಣಜ ಹೊತ್ತು ನಿಂತಿರೋ ಕಿರಿಮಗಳು, ಒಂಭತ್ತು ತಿಂಗಳು ಹೊತ್ತು ಹೆರದಿದ್ದರೂ ಕರುಳಬಳ್ಳಿಯಂತೆ ಕಾಪಾಡೋ ಮಲತಾಯಿ, ಅಕ್ಕ-ತಂಗಿಯರ ಒಡನಾಟ ಪ್ರಮುಖ ಹೂರಣವಾಗಿದೆ.

ವರ್ಷಗಳಿಂದ ತನ್ನ ಕನಸುಗಳ ಕೋಟೆಗೆ ಬಣ್ಣ ತುಂಬಿ ಅಪ್ಪನ ಪ್ರೀತಿಗೆ ಕಾಯ್ತಿರೋ ಹೂಮನಸ್ಸಿನ ಹುಡುಗಿ ಈ ಕಥೆಯ ನಾಯಕಿ. ಎಲ್ಲಾ ಧಾರಾವಾಹಿಗಳಂತೆ ಈ ಮನೆಯಲ್ಲಿ ಯಾವುದೇ ಖಳನಾಯಕಿಯರಿಲ್ಲ. ಯಾವುದೇ ಕಷ್ಟ - ಸವಾಲೆದುರಾದರೂ ಒಟ್ಟಾಗಿ ನಿಂತು ಎದುರಿಸುವ ಮಾದರಿ ಮಹಿಳಾಮಣಿಯರ ಘಟಕ ಈ ಧಾರಾವಾಹಿಯ ಜೀವಾಳ.

ಈಗಾಗಲೇ ಉದಯ ಟಿವಿಯಲ್ಲಿ ‘ಅವಳು' ಧಾರಾವಾಹಿಯನ್ನು ಜನರಿಗೆ ಅರ್ಪಿಸಿ, ಮನರಂಜನೆಯ ರಸದೌತಣ ಉಣಬಡಿಸಿರುವ ಧ್ರುವ್ ಮೀಡಿಯಾ ಕ್ರಾಫ್ಟ್ ಸಂಸ್ಥೆಯ ನಿರ್ಮಾಪಕರಾದ ಗುರುರಾಜ್ ಕುಲಕರ್ಣಿ ಮತ್ತೊಮ್ಮೆ ಹೊಸ ಬಗೆಯ ಕಥೆಯ ಪ್ರಯೋಗಕ್ಕೆ ಮುಂದಾಗಿದ್ದಾರೆ.ಕ್ಯಾಮೆರಾ ಕೈ ಚಳಕದಲ್ಲಿ ಗೆದ್ದಿರುವ ರವಿಕಿಶೋರ್ ನಿರ್ದೇಶನ ಮಾಡುತ್ತಿದ್ದು, ಗಿರಿಧರ್ ದಿವಾನ್ ಶೀರ್ಷಿಕೆ ಗೀತೆಯ ಸಂಯೋಜನೆ ಮಾಡಿದ್ದಾರೆ.

ಧಾರಾವಾಹಿಯಲ್ಲಿ ತಾರೆಯರ ಸಮಾಗಮವೇ ಇದೆ. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ, ನಟ, ನಿರ್ದೇಶಕ, ನಿರ್ಮಾಪಕ ಸುನೀಲ್ ಪುರಾಣಿಕ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಂಗಭೂಮಿ ಹಿರಿಯ ಕಲಾವಿದೆ ಜಯಲಕ್ಷ್ಮಿ, ನಟಿ ಯಮುನಾ ಶ್ರೀನಿಧಿ, ಸ್ವಾತಿ ಈ ಧಾರಾವಾಹಿಗಾಗಿ ಬಣ್ಣ ಹಚ್ಚಿದ್ದಾರೆ.

ಜೈ ಹನುಮಾನ್ ಧಾರಾವಾಹಿಯಲ್ಲಿ ಮಿಂಚಿದ್ದ ಚೆಲುವೆ ಪ್ರಿಯಾಂಕ ಚಿಂಚೋಳಿ ಕಥೆಯ ನಾಯಕಿಯಾಗಿದ್ದಾರೆ. ತುಂಟ ಹುಡುಗಿಯಾಗಿ ಪ್ರಕೃತಿ ಮತ್ತು ನಾಯಕನಾಗಿ ಸಾಗರ್ ಕಾಣಿಸಿಕೊಳ್ಳಲಿದ್ದಾರೆ. ಖಳನಾಯಕನಾಗಿ ಗುರುತಿಸಿಕೊಂಡಿರುವ ವಿಜಯ್ ಕೌಂಡಿಣ್ಯ ಹಾಗೂ ಕಿರುತೆರೆಯ ರಿಯಲ್ ಜೋಡಿಗಳಲ್ಲಿ ಒಂದಾದ ಸುನೇತ್ರಾ ಪಂಡಿತ್ ಮತ್ತು ರಮೇಶ್ ಪಂಡಿತ್ ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT