ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ನಿಯಮಗಳ ಉಲ್ಲಂಘನೆ ಎಂದರೆ ಅವೈಜ್ಞಾನಿಕ ರಸ್ತೆ ಉಬ್ಬುಗಳ ನಿರ್ಮಾಣ

Last Updated 31 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ಅದು 2008ರ ಜೂನ್ ತಿಂಗಳಿನ ಒಂದು ದಿನ. ಗಂಡ, ಹೆಂಡತಿ ಹಾಗೂ ಅವರ ಮಗು ಬೈಕ್‍ನಲ್ಲಿ ಕಾಮಾಕ್ಷಿಪಾಳ್ಯದ ಒಂದು ರಸ್ತೆಯಲ್ಲಿ ಸಾಗುತ್ತಿದ್ದರು. ಸರಿಯಾಗಿ ಕಾಣಿಸದ ಒಂದು ಅವೈಜ್ಞಾನಿಕ ರಸ್ತೆ ಉಬ್ಬಿನ ಮೇಲೆ ಬೈಕ್ ಓಡಿದ್ದೇ ತಡ ಮೂವರೂ ಕೆಳಗೆ ಬಿದ್ದರು. ಹೆಂಡತಿ ಹಾಗೂ ಮಗು ಸ್ಥಳದಲ್ಲಿಯೇ ಅಸುನಿಗಿದರೆ, ಗಂಡ ಎರಡು ದಿನಗಳ ನಂತರ ಆಸ್ಪ್ರತ್ರೆಯಲ್ಲಿ ಕೊನೆಯುಸಿರೆಳೆದ.

2012ರ ನವೆಂಬರ್ ತಿಂಗಳಿನ ಒಂದು ದಿನ ಸುಹನ್ ಎಂಬ ಇಂಜನೀಯರಿಂಗ್ ವಿದ್ಯಾರ್ಥಿ ರಾಜರಾಜೇಶ್ವರಿ ನಗರದ ರಸ್ತೆಯೊಂದರಲ್ಲಿದ್ದ ಅಕ್ರಮ ಉಬ್ಬು ಕಾಣದೇ ತನ್ನ ಬೈಕ್‍ ಅನ್ನು ಅದರ ಮೇಲೆ ಓಡಿಸಿ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ. ರಸ್ತೆಯ ಒಂದು ಬದಿಗೆ ಆತ; 30 ಮೀಟರ್ ದೂರ ಇನ್ನೊಂದು ಬದಿಗೆ ಬೈಕ್. ಸುಹನ್ ಹಾಗೂ ಆತನ ಬೈಕ್ ಸಂಪೂರ್ಣ ನುಜ್ಜುಗುಜ್ಜು.

ಎರಡೂ ಅಪಘಾತಗಳಲ್ಲಿ ದುರಂತಕ್ಕಿಡಾದವರು ಅಮಾಯಕರು. ಯಾವುದೇ ನಿಯಮ ಉಲ್ಲಂಘಿಸಿದವ ರಲ್ಲ. ಆ ಎರಡೂ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ಉಬ್ಬು ರಸ್ತೆ ನಿರ್ಮಿಸಿದ್ದು ಮಾತ್ರ ನಿಜವಾದ ನಿಯಮಗಳ ಉಲ್ಲಂಘನೆ. ತನ್ನ ಮಾಲಿಕತ್ವದ ಆ ರಸ್ತೆಗಳಲ್ಲಿನ ಅಕ್ರಮ ಉಬ್ಬುಗಳನ್ನು ಸರಿಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ.

ಬೆಂಗಳೂರು ನಗರ ಸಂಚಾರಿ ಪೋಲಿಸರ ಪ್ರಕಾರ ಪ್ರತಿನಿತ್ಯ ಹಲವಾರು ಅಪಘಾತಗಳು ಅಂತಹ ರಸ್ತೆ ಉಬ್ಬುಗಳಿಂದ ನಗರದಾದ್ಯಂತ ಸಂಭವಿಸುತ್ತವೆ. ನಗರ ಯೋಜನಾ ತಜ್ಞರು ಅಕ್ರಮ ರಸ್ತೆ ಉಬ್ಬುಗಳನ್ನು ‘ನಾಗರಿಕ ಸಮಾಜದ ಬೇಜವಾಬ್ದಾರಿ ಲಕ್ಷಣ’ ಎಂದೇ ಗುರುತಿಸುತ್ತಾರೆ.

ಅಕ್ರಮ ಉಬ್ಬುಗಳಿಂದ ರಸ್ತೆ ಉಪಯೋಗಿಸುವ ವರಿಗೂ, ವಾಹನಗಳಿಗೂ ತೀವ್ರ ಹಾನಿಯುಂಟಾಗುತ್ತದೆ. ಪೋಲಿಸರು ಹೇಳುವಂತೆ ಇಂತಹ ಉಬ್ಬುಗಳು ಜನವಸತಿ ಬಡಾವಣೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ನಾಗರಿಕರು ಅಕ್ರಮವಾಗಿ ತಮ್ಮ ಮನೆಯ ಎದುರಿಗೋ ಅಥವಾ ಓಣಿಯಲ್ಲಿ ತಮ್ಮ ಅನೂಕೂಲಕ್ಕಾಗಿ ನಿರ್ಮಿಸಿಬಿಡುತ್ತಾರೆ. ಆ ನಡೆ ರಸ್ತೆಯನ್ನು ಬಳಸುವವರಿಗೆ ದುರಂತಕ್ಕೆ ನೀಡಿದ ಆಹ್ವಾನ ಎಂದಾಗಲೀ, ರಸ್ತೆ ಉಬ್ಬುಗಳನ್ನು ನಿರ್ಮಿಸಲು ಮಾನದಂಡಗಳಿವೆ ಎಂದಾಗಲೀ, ಅದು ಶಿಕ್ಷಾರ್ಹ ಅಪರಾಧ ಎಂದಾಗಲೀ ಅವರಿಗೆ ತಿಳಿದಿರುವುದೇ ಇಲ್ಲ.

ಇದಕ್ಕೆ ಪೂರಕವಾಗಿ ಇಂತಹ ಅಕ್ರಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪಾಲಿಕೆಯ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್‍ನ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿರುತ್ತಾರೆ. ಗಮನಕ್ಕೆ ಬಂದರೂ ಸಂಚಾರಿ ಪೋಲಿಸರು ಕ್ರಮಕ್ಕೆ ಮುಂದಾಗುವುದಿಲ್ಲ. ಅಂತಹ ಉಬ್ಬುಗಳಿಂದ ಅಪಘಾತಗಳು ಸಂಭವಿಸಿದಾಗಲೇ ಎಚ್ಚರಗೊಂಡು ಕ್ರಮಕ್ಕೆ ಮುಂದಾಗುತ್ತಾರೆ. ನಗರ ಯೋಜನಾ ತಜ್ಞರ ಪ್ರಕಾರ ಇಂತಹ ಮನಃಸ್ಥಿತಿ ‘ಅಧಿಕಾರಶಾಹಿಯ ಬೇಜವಾಬ್ದಾರಿತನ’.

ರಸ್ತೆ ಉಬ್ಬು ನಿರ್ಮಾಣದಲ್ಲಿ ಪ್ರಮುಖ ಪಾಲುದಾರ ರೆಂದರೆ ರಸ್ತೆ ನಿರ್ಮಿಸುವ ಗುತ್ತಿಗೆದಾರ, ಸಂಬಂಧಪಟ್ಟ ಇಲಾಖೆ (ನಗರಪಾಲಿಕೆ, ಲೋಕೋಪಯೋಗಿ, ಸ್ಥಳೀಯ ಸಂಸ್ಥೆಗಳು) ಹಾಗೂ ಸಂಚಾರಿ ಪೋಲಿಸ್.

ಹಾಗೆ ನೋಡಿದರೆ ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ನಿಗದಿಪಡಿಸಿದ ಮಾನದಂಡಗಳ ಪ್ರಕಾರವೇ ರಸ್ತೆ ಉಬ್ಬುಗಳನ್ನು ನಿರ್ಮಿಸಬೇಕು. ಉಬ್ಬುಗಳು 17 ಮೀಟರ್ ವ್ಯಾಸ, 3.7 ಮಿಟರ್ ಉದ್ದ, 0.10 ಮೀಟರ್ ಎತ್ತರ ಹಾಗೂ ವಾಹನಗಳ ಚಕ್ರಗಳ ಅಗಲಕ್ಕಿಂತ ಹೆಚ್ಚಿಗೆ ಇರಬೇಕು. ಈ ಉಬ್ಬುಗಳ ಮೇಲೆ ಕಪ್ಪು, ಬಿಳಿ ಹಾಗೂ ಕತ್ತಲಿನಲ್ಲಿ ಸ್ವಯಂ ಪ್ರತಿಫಲನಗೊಳ್ಳುವ ವರ್ಣ ಬಳಸಿ ಪಟ್ಟಿ ಬಳಿದಿರಬೇಕು. ರಾತ್ರಿಯಲ್ಲಿ ಸ್ಪಷ್ಟವಾಗಿ ಕಾಣಿಸುವ ಸಲುವಾಗಿ ಕ್ಯಾಟ್‍ ಐಗಳು ಇರಬೇಕು. 40 ಮೀಟರ್ ಮೊದಲೇ ಮುಂದೆ ರಸ್ತೆ ಉಬ್ಬು ಇದೆ ಎಂಬ ಎಚ್ಚರಿಕೆಯ ಫಲಕ ರಸ್ತೆ ಬದಿಯಲ್ಲಿ ಇರಬೇಕು.

1987ರ ಜೂನ್ 12ರಂದು ಐಆರ್‌ಸಿ ನಿಗದಿಪಡಿಸಿದ ಮಾನದಂಡದ ಪ್ರಕಾರ ಚಿಕ್ಕ ರಸ್ತೆಗಳಲ್ಲಿ, ಪರಸ್ಪರ ಛೇದಿಸುವ ಚಿಕ್ಕ ರಸ್ತೆಗಳಲ್ಲಿ, ವಿರಳ ಸಂಚಾರದ ರಸ್ತೆಗಳಲ್ಲಿ, ಪರಸ್ಪರ ಛೇದಿಸಿ ಮುಖ್ಯರಸ್ತೆಗೆ ವಿಲೀನವಾಗುವ ರಸ್ತೆಗಳಲ್ಲಿ, ಜನವಸತಿ, ಆಸ್ಪತ್ರೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಪ್ರದೇಶಗಳಲ್ಲಿ, ವೇಗದಿಂದ ಅಪಘಾತ ಸಂಭವಿಸಬಹುದಾದ ಪ್ರದೇಶಗಳಲ್ಲಿ, ಚಿಕ್ಕ ಹಾಗೂ ಹಳೆಯ ಸೇತುವೆಗೆ ಸಂಪರ್ಕ ಹೊಂದುವ ರಸ್ತೆಗಳಲ್ಲಿ, ರೈಲ್ವೆ ಲೆವಲ್ ಕ್ರಾಸಿಂಗ್ ಹತ್ತಿರ, ತೀವ್ರ ತಿರುವು ಇರುವ, ಮುಂದಿನ ರಸ್ತೆ ಸರಿಯಾಗಿ ಕಾಣಿಸದಿರುವ ರಸ್ತೆಗಳಲ್ಲಿ ಹಾಗೂ ಗಂಟೆಗೆ 25 ಕಿಮಿ ವೇಗವಾಗಿ ಚಲಿಸಬಹುದಾದ ರಸ್ತೆಗಳಲ್ಲಿ ಮಾತ್ರವೇ ಉಬ್ಬುಗಳನ್ನು ನಿರ್ಮಿಸಬಹುದು.

ಬೆಂಗಳೂರು ನಗರದ ಬಹುತೇಕ ರಸ್ತೆಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಮಾಲೀಕತ್ವಕ್ಕೆ ಒಳಪಡುತ್ತವೆ. ಅಕ್ರಮ ಉಬ್ಬುಗಳ ಗುರುತಿಸುವಿಕೆ ಹಾಗೂ ತೆರವುಗೊಳಿಸುವಿಕೆ ಪಾಲಿಕೆ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಟ್ರಾಫಿಕ್ ಎಂಜಿನಿಯರಿಂಗ್ ಸೆಲ್‍ನ ಜವಾಬ್ದಾರಿ.

ಅಕ್ರಮ ಉಬ್ಬುಗಳನ್ನು ತೆರವುಗೊಳಿಸಲು ನಾಗರಿಕರು ಈ ಸೆಲ್‍ ಅನ್ನು ಸಂಪರ್ಕಿಸಬಹುದು. ಇದಕ್ಕಾಗಿ ಸಂಚಾರಿ ಪೋಲಿಸರನ್ನು ಸಂಪರ್ಕಿಸಬಹುದು. ಮನವಿ ಸಲ್ಲಿಸಿದರೆ ಆ ಮನವಿಯನ್ನು ಸಂಬಂಧಪಟ್ಟ ಸಂಚಾರಿ ಪೋಲಿಸರು ಈ ಸೆಲ್‍ಗೆ ಕಳುಹಿಸುತ್ತಾರೆ.

ಒಂದು ವೇಳೆ ಉಬ್ಬುಗಳು ಅನಿವಾರ್ಯವೆಂದು ಕಂಡು ಬಂದರೆ ಈ ಸೆಲ್ ಸಂಬಂಧ ಪಟ್ಟ ಸಂಚಾರಿ ಪೋಲಿಸ್ ಘಟಕಕ್ಕೆ ಪತ್ರ ಬರೆಯಬೇಕು. ಪೋಲಿಸ್ ಘಟಕವು ನಿರಪೇಕ್ಷಣಾ ಪತ್ರ ರವಾನಿಸಿದ ನಂತರವಷ್ಟೇ ಉಬ್ಬುಗಳನ್ನು ಐಆರ್‌ಸಿ ಮಾನದಂಡದ ಪ್ರಕಾರ ನಿರ್ಮಿಸಬೇಕು.

ನಾಗರಿಕರ ಕೋರಿಕೆ ಅಥವಾ ಅಗತ್ಯದ ಮೇರೆಗೆ ಕೆಲವೊಮ್ಮೆ ಸಂಚಾರಿ ಪೋಲಿಸರು ಅಧಿಕಾರಿಗಳಿಗೆ ಉಬ್ಬು ನಿರ್ಮಿಸುವಂತೆ ಪತ್ರ ಬರೆಯಲೂಬಹುದು.

ಪಾಲಿಕೆ ಅಧಿಕಾರಿಗಳು ಹೇಳುವಂತೆ ಪಾಲಿಕೆಯ ಬಳಿ ನಗರದಲ್ಲಿರುವ ಅಕ್ರಮ ರಸ್ತೆ ಉಬ್ಬುಗಳ ಸಂಖ್ಯೆ ಲಭ್ಯವಿಲ್ಲ. ಪಾಲಿಕೆ ಅವೈಜ್ಞಾನಿಕ ರಸ್ತೆ ಉಬ್ಬುಗಳನ್ನು ನಿರ್ಮಿಸುವುದಿಲ್ಲ. ಜನರೇ ತಮಗೆ ಬೇಕಾದ ಕಡೆ ಅಕ್ರಮ ರಸ್ತೆ ಉಬ್ಬುಗಳನ್ನು ನಿರ್ಮಿಸಿಕೊಳ್ಳುವುದರಿಂದ ನಿಖರ ಸಂಖ್ಯೆ ಲಭ್ಯವಿಲ್ಲ.

ಪಾಲಿಕೆಯ ಪ್ರಕಾರ ಪ್ರಸ್ತುತ ಬೆಂಗಳೂರಿನಾದ್ಯಂತ 3500 ವೈಜ್ಞಾನಿಕ ರಸ್ತೆ ಉಬ್ಬುಗಳಿವೆ. ಅಕ್ರಮ ಉಬ್ಬುಗಳನ್ನು ತೆರವುಗೊಳಿಸುವ ಬೃಹತ್ ಕಾರ್ಯಾಚರಣೆಯನ್ನು ಶೀಘ್ರ ಕೈಗೆತ್ತಿಕೊಳ್ಳುವ ಆಲೋಚನೆ ಪಾಲಿಕೆಗೆ ಇದೆ ಎಂದು ಪಾಲಿಕೆ ಹಿರಿಯ ಅಧಿಕಾರಿಗಳು ಮೆಟ್ರೊಗೆ ತಿಳಿಸಿದರು.

ಪಶ್ಚಿಮ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ಅಕ್ರಮ ರಸ್ತೆ ಉಬ್ಬುಗಳಿವೆ. ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಹಾಗೂ ಮುನಿರೆಡ್ಡಿಪಾಳ್ಯಗಳಲ್ಲೂ ಇವೆ ಎನ್ನುತ್ತಾರೆ ಸಂಚಾರಿ ಪೋಲಿಸರು.

ವಾಹನಗಳಿಗೆ ತೀವ್ರ ಹಾನಿ
ಮಾಗಡಿ ರಸ್ತೆಯ ವೆಂಕಟೇಶ್ವರ ಮೋಟಾರ್ ಸರ್ವೀಸ್‌ ಸ್ಟೇಷನ್ ಮಾಲೀಕ ಗಣೇಶ್ ಆರ್ ಅವರ ಪ್ರಕಾರ ಇಂತಹ ಉಬ್ಬುಗಳಿಂದ ದ್ವಿಚಕ್ರ ವಾಹನಗಳ ಸಸ್ಪೆನ್ಷನ್‌ಗೆ ತೀವ್ರ ಹೊಡೆತ ಬೀಳುತ್ತದೆ. ಮೊಪೆಡ್‍ಗಳ ಛಾಸಿ ತುಂಡರಿಸುವ ಸಾಧ್ಯತೆಯಿರುತ್ತದೆ. ಹಿಂಬದಿ ಎಂಜಿನ್‌ ಇರುವ ಬೈಕ್‍ಗಳಿಗೆ ಹೆಚ್ಚಿನ ಹಾನಿಯಾಗಬಹುದು. ಕಾರುಗಳ ಬಾಟಮ್ ಛಾಸಿಗೆ ಹಾನಿಯಾಗಿ ಅದು ಬೆಂಡ್ ಆಗಬಹುದು.

ಕಾನೂನಿಲ್ಲಿ ಕ್ರಮಕ್ಕೆ ಅವಕಾಶ
ಅವ್ಯವಸ್ಥಿತ ಉಬ್ಬುಗಳಿಂದಾಗಿ ರಸ್ತೆ ಬಳಸುವವರಿಗಷ್ಟೆ ಅಲ್ಲದೆ ವಾಹನಗಳಿಗೂ ತೀವ್ರ ಸ್ವರೂಪದ ಸಮಸ್ಯೆಗಳುಂಟಾಗುತ್ತವೆ. ಅವ್ಯವಸ್ಥಿತ ರಸ್ತೆ ಉಬ್ಬಿನಿಂದಾಗಿ ಅಪಘಾತ ಉಂಟಾಗಿ ಭೀಕರ ಪರಿಣಾಮವಾದರೆ, ರಸ್ತೆ ನಿರ್ಮಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ, ಆ ಅಪಘಾತ ಅವ್ಯವಸ್ಥಿತ ರಸ್ತೆ ಉಬ್ಬಿನಿಂದಾಗಿ ಸಂಭವಿಸಿದೆ ಎಂದು ನ್ಯಾಯಾಲಯದಲ್ಲಿ ಸಾಬೀತಾಗಬೇಕು. ಬಹುತೇಕ ಸಂದರ್ಭಗಳಲ್ಲಿ ಸ್ಥಳೀಯರೇ ರಸ್ತೆಯ ಮೇಲೆ ಅಕ್ರಮವಾಗಿ ರಸ್ತೆ ಉಬ್ಬು ನಿರ್ಮಿಸುವುದರಿಂದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ.

***

1600ಕ್ಕೂ ಹೆಚ್ಚು ಅಕ್ರಮ ಉಬ್ಬುಗಳ ತೆರವು
‘2015–16ರಲ್ಲಿ ಬೆಂಗಳೂರು ನಗರ ಸಂಚಾರಿ ಪೋಲಿಸರು ಅಕ್ರಮ ರಸ್ತೆ ಉಬ್ಬುಗಳ ತೆರವಿಗೆ ಬೃಹತ್ ಆಂದೋಲನ ಹಮ್ಮಿಕೊಂಡಿದ್ದರು. ಸುಮಾರು 1600ಕ್ಕೂ ಹೆಚ್ಚು ಅಂತಹ ಉಬ್ಬುಗಳನ್ನು ತೆರವುಗೊಳಿಸಿದರು. ಕೆಲವನ್ನು ಐಆರ್‌ಸಿ ಮಾನದಂಡದ ಪ್ರಕಾರ ವೈಜ್ಞಾನಿಕ ಉಬ್ಬುಗಳನ್ನಾಗಿ ಪರಿವರ್ತಿಸಿದರು’ ಎಂದು ಅಂದಿನ ಬೆಂಗಳೂರು ನಗರ ಪೋಲಿಸ್ ಹೆಚ್ಚುವರಿ ಸಾರಿಗೆ ಆಯುಕ್ತ ಡಾ ಎಂ ಎ ಸಲೀಮ್ ನೆನಪಿಸಿಕೊಳ್ಳುತ್ತಾರೆ.

‘ನವದೆಹಲಿ ಹಾಗೂ ಮುಂಬೈ ಮಹಾನಗರಗಳಲ್ಲಿ ಅಕ್ರಮ ರಸ್ತೆ ಉಬ್ಬುಗಳ ಸಮಸ್ಯೆ ಇಲ್ಲ. ಆದರೆ ಚೆನ್ನೈ ಹಾಗೂ ಹೈದರಾಬಾದ್ ಮಹಾನಗರಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ’ ಎನ್ನುತ್ತಾರೆ ಸಲೀಮ್.

****

ತಿಂಗಳಿಗೆ 15–20 ಜನ ಆಸ್ಪತ್ರೆಗೆ
ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಹಾಸ್ಪಿಟಲ್‍ನ ಪ್ರೊಫೆಸರ್‌ ಹಾಗೂ ಹಿರಿಯ ಕನ್ಸಲ್ಟಂಟ್ ಡಾ. ರಾಜು ಕೆ ಪಿ ಹೇಳುವಂತೆ ಪ್ರತಿ ತಿಂಗಳು 15–20 ಜನ ಇಂತಹ ಉಬ್ಬುಗಳಿಂದ ಉಂಟಾಗುವ ಅಪಘಾತದ ಚಿಕಿತ್ಸೆಗಾಗಿ ಅಸ್ಪ್ರತ್ರೆಗೆ ಚಿಕಿತ್ಸೆಗಾಗಿ ಬರುತ್ತಾರೆ.

‘ಇಂತಹ ಉಬ್ಬುಗಳಿಂದ ಅಪಘಾತ ಉಂಟಾದಾಗ ಅದರ ಪರಿಣಾಮ ಪಾದದ ಕೀಲು, ಮಂಡಿ, ಅಸ್ತಿ ಬಂಧಕ (ಲಿಗಮೆಂಟ್)ಗಳ ಮೇಲಾಗುತ್ತದೆ. ಕೆಲವೊಮ್ಮೆ ಬೆನ್ನುಹುರಿ ಹಾಗೂ ಬೆನ್ನು ಮೂಳೆಗಳ ಜಜ್ಜುವಿಕೆ ಉಂಟಾಗುತ್ತದೆ. ಗಾಯ ಸಾಮಾನ್ಯ ಪ್ರಮಾಣದ್ದಾಗಿದ್ದರೆ ನಾಲ್ಕರಿಂದ ಆರು ವಾರಗಳ ಸಂಪೂರ್ಣ ವಿಶ್ರಾಂತಿಯ ಅಗತ್ಯವಿರುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ. ಐವತ್ತು ಸಾವಿರ ರೂಪಾಯಿಗಳಿಂದ ಒಂದೂವರೆ ಲಕ್ಷದಷ್ಟು ಹಣ ವ್ಯಯಿಸಬೇಕಾಗುತ್ತದೆ’ ಎಂದು ಹೇಳುತ್ತಾರೆ.

ಗರ್ಭಿಣಿ ಮಹಿಳೆಯರಾದರೆ ಗರ್ಭಪಾತವಾಗಲೂಬಹುದು. ವಯಸ್ಸಾದವರಲ್ಲಿ ಬೆನ್ನು ಹುರಿ ಹಾಗೂ ಮೂಳೆಗಳಿಗೆ ತೀವ್ರ ಹೊಡೆತ ಬೀಳಬಹುದು ಎಂದು ಎಚ್ಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT