ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ವೀಕೆಂಡ್ ವಿಥ್ ರಮೇಶ್–5' ಚಿತ್ರೀಕರಣ ಪ್ರಾರಂಭ: ಮಾ.25ರಂದು ಮೊದಲ ಸಂಚಿಕೆ?

Last Updated 9 ಮಾರ್ಚ್ 2023, 10:42 IST
ಅಕ್ಷರ ಗಾತ್ರ

ಕನ್ನಡದ ಕಿರುತೆರೆ ಜಗತ್ತಿನಲ್ಲೊಂದು ವಿಶೇಷ ಕಾರ್ಯಕ್ರಮ ‘ವೀಕೆಂಡ್‌ ವಿಥ್‌ ರಮೇಶ್‌’. ನಟ, ನಿರ್ದೇಶಕ ರಮೇಶ್‌ ಅರವಿಂದ್‌ ‘ಜೀ ಕನ್ನಡ’ ವಾಹಿನಿಗಾಗಿ ಈ ರಿಯಾಲಿಟಿ ಶೋ ನಡೆಸಿಕೊಡುತ್ತಿರುವುದು ಗೊತ್ತಿರುವ ವಿಷಯ. ನಮ್ಮ ನಾಡಿನ ಗಣ್ಯರನ್ನು ಸಾಧಕರ ಕುರ್ಚಿಯಲ್ಲಿ ಕೂರಿಸಿ, ಅವರ ಬದುಕು–ಸಾಧನೆ ಜರ್ನಿಯನ್ನು ಮೆಲುಕು ಹಾಕುವ ಈ ಶೋನ 5ನೇ ಆವೃತ್ತಿ ಮಾರ್ಚ್‌ 25ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಯಿಂದ ಪ್ರಸಾರವಾಗುವ ಸಾಧ್ಯತೆ ದಟ್ಟವಾಗಿದೆ.

ಕಾರ್ಯಕ್ರಮದ ಮೊದಲ ಎಪಿಸೋಡ್‌ನ ಚಿತ್ರೀಕರಣ ಮಾ.8ರಂದು ಬೆಂಗಳೂರಿನ ಅಬ್ಬಯನಾಯ್ಡು ಸ್ಟುಡಿಯೊದಲ್ಲಿ ಪೂರ್ಣಗೊಂಡಿದೆ. ಮೈಸೂರು ಮೂಲದ ನಟ, ನೃತ್ಯ ನಿರ್ದೇಶಕ ಪ್ರಭುದೇವ್‌ ಅವರು ಚಿತ್ರೀಕರಣದಲ್ಲಿ ಭಾಗಿಯಾದರು. ಆದರೆ ಮೊದಲ ಸಂಚಿಕೆಯಲ್ಲಿ ಇವರ ಕಾರ್ಯಕ್ರಮ ಪ್ರಸಾರವಾಗುತ್ತಿಲ್ಲ ಎಂದು ವಾಹಿನಿಯ ಮೂಲಗಳು ಹೇಳಿವೆ.

‘ಬುಧವಾರ ಪ್ರಭುದೇವ್‌ ಅವರ ಸಂಚಿಕೆ ಚಿತ್ರೀಕರಣಗೊಂಡಿದೆ. ಸೆಟ್‌ನಲ್ಲಿ ತುಂಬ ಪಾಸಿಟೀವ್‌ ಎನರ್ಜಿ ಇತ್ತು. ಮತ್ತೆ ಕಾರ್ಯಕ್ರಮ ಆರಂಭವಾಗುತ್ತಿರುವುದು ಖುಷಿಯ ವಿಷಯ. ಪ್ರಸಾರದ ದಿನಾಂಕವನ್ನು ವಾಹಿನಿ ಅಧಿಕೃತವಾಗಿ ಘೋಷಿಸಲು ನಾನು ಕೂಡ ಕಾಯುತ್ತಿರುವೆ. ಈ ಸಲದ ಸೆಟ್‌ ಹಿಂದಿನ ಸಲಕ್ಕಿಂತ ಅದ್ದೂರಿಯಾಗಿದೆ. ಸ್ವರೂಪ ಕೂಡ ದೊಡ್ಡದಾಗಿದೆ. ಮಾ.20–21ರಂದು ಮುಂದಿನ ಸಂಚಿಕೆ ಚಿತ್ರೀಕರಣವಾಗಬಹುದು’ ಎಂದು ಕಾರ್ಯಕ್ರಮದ ನಿರೂಪಕ, ನಟ ರಮೇಶ್‌ ಅರವಿಂದ್‌ ಪ್ರಜಾವಾಣಿಗೆ ತಿಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಜೀ ಕನ್ನಡ ವಾಹಿನಿ ‘ವೀಕೆಂಡ್‌ ವಿಥ್‌ ರಮೇಶ್‌’ಮತ್ತೆ ಬರುತ್ತಿರುವ ಪ್ರೋಮೋ ಪ್ರಸಾರ ಮಾಡಿತ್ತು. ಅದಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ನಟ ರಮೇಶ್‌ ಅರವಿಂದ್‌ ಕೂಡ ಈ ಪ್ರೋಮೋ ಹಂಚಿಕೊಂಡಿದ್ದು, ಈ ಸಲದ ಸಂಚಿಕೆಗೆ ಕರೆಸಬೇಕಾದ ಸಾಧಕರ ಪಟ್ಟಿಯನ್ನೇ ಅಭಿಮಾನಿಗಳು ಅವರ ಮುಂದಿಟ್ಟಿದ್ದರು.

ರಿಷಬ್‌ ಶೆಟ್ಟಿ ಅಥವಾ ರಮ್ಯಾ?
2014ರಲ್ಲಿ ಈ ಶೋನ ಮೊದಲ ಸೀಸನ್‌ ಪ್ರಸಾರ ಆಗಿತ್ತು. ಟಿಆರ್‌ಪಿ ಜೊತೆಗೆ ವಾಹಿನಿಗೆ ಅತ್ಯುತ್ತಮ ಬ್ರ್ಯಾಂಡ್‌ ಮೌಲ್ಯವನ್ನು ಈ ಕಾರ್ಯಕ್ರಮ ಒದಗಿಸಿತ್ತು. ಹೀಗಾಗಿ ವಾಹಿನಿ ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿತ್ತು. ಸಿನಿಮಾ, ರಾಜಕೀಯದ ಗಣ್ಯರನ್ನು ಬಿಟ್ಟು ಉಳಿದ ಸಾಧಕರ ಸಂಚಿಕೆಗಳು ಟಿಆರ್‌ಪಿಯಲ್ಲಿ ತುಸು ಹಿನ್ನಡೆ ಕಂಡಿದ್ದು ಸುಳ್ಳಲ್ಲ. ಟಿಆರ್‌ಪಿ ತಂದುಕೊಡಬಲ್ಲ ಸಾಧಕರ ಹುಡುಕಾಟದಲ್ಲಿದ್ದ ವಾಹಿನಿ 2019ರಲ್ಲಿ 4ನೇ ಸೀಸನ್ ಬಿತ್ತರಿಸಿ ಸುಮ್ಮನಾಗಿತ್ತು. ಇದೀಗ 'ಕಾಮಿಡಿ ಕಿಲಾಡಿಗಳು ಸೀಸನ್ 4' ಅಂತ್ಯವಾಗಿದೆ. ಹೀಗಾಗಿ ಈ ತಿಂಗಳ ಅಂತ್ಯಕ್ಕೆ ಆ ಜಾಗದಲ್ಲಿ ‘ವೀಕೆಂಡ್‌ ವಿಥ್‌’ ಬಿತ್ತರಿಸಲು ವಾಹಿನಿ ಸಕಲ ಸಿದ್ಧತೆ ನಡೆಸಿದೆ.

ಕಳೆದ ವರ್ಷ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ದ ಸಿನಿಮಾ ‘ಕಾಂತಾರ’. ಸುಮಾರು ₹400 ಕೋಟಿ ಗಳಿಸಿ ಪ್ರೇಕ್ಷಕರ ಮನಗೆದ್ದ ಈ ಸಿನಿಮಾದ ನಾಯಕ ಹಾಗೂ ನಿರ್ದೇಶಕ ರಿಷಬ್‌ ಶೆಟ್ಟಿ ಅವರನ್ನು ಮೊದಲ ಸಂಚಿಕೆಗೆ ಕರೆತರಲು ವಾಹಿನಿ ಕಸರತ್ತು ನಡೆಸುತ್ತಿದೆ. ಕಾರ್ಯಕ್ರಮದ ಪ್ರಸಾರದ ತರಾತುರಿಯಲ್ಲಿರುವ ವಾಹಿನಿಗೆ ರಿಷಬ್‌ ಶೆಟ್ಟಿ ಅವರ ಚಿತ್ರೀಕರಣದ ದಿನಾಂಕ ಸಮಸ್ಯೆಯಾಗುತ್ತಿದೆ ಎಂದು ವಾಹಿನಿ ಮೂಲಗಳು ಹೇಳಿವೆ.

ರಿಷಬ್‌ ಶೆಟ್ಟಿ ಅಲ್ಲದಿದ್ದರೆ ಮೊದಲ ಸಂಚಿಕೆಯಲ್ಲಿ ನಟಿ ರಮ್ಯಾ ಅವರನ್ನು ಕರೆತರಲು ವಾಹಿನಿ ಯೋಚಿಸಿದೆ. ಚಿತ್ರರಂಗದಲ್ಲಿ ಎರಡು ದಶಕ ಪೂರೈಸಿರುವ ನಟಿ ರಮ್ಯಾ ಒಂದು ವಿರಾಮದ ಬಳಿಕ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಚಿತ್ರ ನಿರ್ಮಾಣಕ್ಕೂ ಕೈ ಹಾಕಿರುವ ನಟಿ, ಡಾಲಿ ಧನಂಜಯ್‌ ಜೊತೆ ಉತ್ತರಕಾಂಡದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಒಂದೊಮ್ಮೆ ರಿಷಬ್‌ ಶೆಟ್ಟಿ ಮೊದಲ ಸಂಚಿಕೆಗೆ ಸಿಗದಿದ್ದರೆ ರಮ್ಯಾ ಅವರ ಸಂಚಿಕೆ ಮೊದಲು ಪ್ರಸಾರವಾಗುವ ಸಾಧ್ಯತೆ ಹೆಚ್ಚಿದೆ. ರಮ್ಯಾ ಸಂಚಿಕೆ ಕೂಡ ಈವರೆಗೆ ಚಿತ್ರೀಕರಣಗೊಂಡಿಲ್ಲ.

ಯಾರೆಲ್ಲ ಇರುತ್ತಾರೆ?
ನಾಡಿನ ಬಹುತೇಕ ಗಣ್ಯರು ಈಗಾಗಲೇ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಚಿತ್ರರಂಗದ ಶಿವಣ್ಣ, ರವಿಚಂದ್ರನ್‌, ಸುದೀಪ್, ದರ್ಶನ್‌, ಉಪೇಂದ್ರರಿಂದ ಹಿಡಿದು ಹಂಸಲೇಖ, ವಿಜಯ್‌ ಪ್ರಕಾಶ್‌ವರೆಗೆ ಮೊದಲ ಸಾಲಿನಲ್ಲಿ ನಿಲ್ಲುವ ಬಹುತೇಕ ಸಾಧಕರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್‌.ಡಿ.ದೇವೆಗೌಡ, ಸಿದ್ದರಾಮಯ್ಯರಂತಹ ಜನಪ್ರಿಯ ರಾಜಕಾರಣಿಗಳು ಬಂದುಹೋಗಿದ್ದಾರೆ. ವೀರೇಂದ್ರ ಹೆಗ್ಗಡೆ, ಸುಧಾಮೂರ್ತಿಯವರಂತಹ ಸಾಧಕರ ಕಂತುಗಳು ಮುಗಿದಿವೆ.

ಆದಾಗ್ಯೂ ಒಂದಷ್ಟು ಗಣ್ಯರ ಹೆಸರು ಓಡಾಡುತ್ತಿದೆ. ಚಿತ್ರರಂಗದಲ್ಲಿ 10 ವರ್ಷ ಪೂರೈಸಿರುವ ಡಾಲಿ ಧನಂಜಯ್‌, ರಚಿತಾ ರಾಮ್‌ ಈ ಸಲದ ವೀಕೆಂಡ್‌ ಕಾರ್ಯಕ್ರಮದಲ್ಲಿ ಬಹುತೇಕ ಖಚಿತ. ಅಶ್ವಿನಿ ಪುನಿತ್‌ ರಾಜ್‌ಕುಮಾರ್‌ ಅವರನ್ನು ಕರೆತರಲು ವಾಹಿನಿ ಯತ್ನ ನಡೆಸಿದೆ. ಅನುಶ್ರೀ ಹೆಸರು ಕೇಳಿಬಂದಿದೆ.

ಬಿ.ಎಸ್.ಯಡಿಯೂರಪ್ಪ ಭಾಗಿಯಾಗಿಲ್ಲ. ಆದರೆ ಈ ಸಲ ಚುನಾವಣೆ ಇರುವುದರಿಂದ ತಕ್ಷಣಕ್ಕೆ ರಾಜಕೀಯ ನಾಯಕರು ಕಾರ್ಯಕ್ರಮಕ್ಕೆ ಲಭ್ಯವಾಗುವುದು ಕಷ್ಟ. ಬಿಗ್‌ಬಾಸ್‌ ಸ್ಪರ್ಧಿ ಮತ್ತು ರೇಸರ್‌ ಕೆಪಿ ಅರವಿಂದ್, ಯೂಟ್ಯೂಬರ್‌ ಡಾಕ್ಟರ್ ಬ್ರೋ, ನಟ ಧ್ರುವ ಸರ್ಜಾ, ಕ್ರಿಕೆಟಿಗ ಕೆ.ಎಲ್ ರಾಹುಲ್ ಕರೆತರಲು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಎಸ್.ಮಹೇಂದರ್, ಅನುಷ್ಕಾ ಶೆಟ್ಟಿ ಹೆಸರುಗಳು ಕೇಳಿ ಬಂದಿವೆ. ಚಿತ್ರರಂಗದ ಹೊರತಾದ ಸಾಧಕರು ಹೆಚ್ಚಾಗಲಿ ಎಂಬ ಕೂಗು ಕೇಳಿ ಬಂದಿದೆ. ಆದರೆ ಒಂದು ಹಂತದ ಟಿಆರ್‌ಪಿಯೂ ಕಾರ್ಯಕ್ರಮದ ಉಳಿವಿಗೆ ಅಗತ್ಯವಾಗಿರುವುದರಿಂದ ವಾಹಿನಿ ಈಗ ಮಾಡಿಕೊಂಡಿರುವ ಪಟ್ಟಿಯಲ್ಲಿ ಚಿತ್ರರಂಗದ ಸಾಧಕರ ಹೆಸರೇ ಹೆಚ್ಚಾಗಿದೆ ಎಂಬ ಮಾಹಿತಿ ಲಭಿಸಿದೆ.


‘ಪ್ರತಿ ಸಲ ಪಟ್ಟಿಯಲ್ಲಿ ಹಲವು ಸಾಧಕರ ಹೆಸರು ಇರುತ್ತದೆ. ಬರಿ ಸಾಧಕರು ಮಾತ್ರವಲ್ಲ. ಅವರ ಕುಟುಂಬ, ಸ್ನೇಹಿತರು ಎಲ್ಲರೂ ಚಿತ್ರೀಕರಣದಲ್ಲಿ ಭಾಗವಹಿಸಬೇಕು. ಹೀಗಾಗಿ ಎಲ್ಲರ ಡೇಟ್‌ ಹೊಂದಿಕೆಯಾಗುವುದು ಮುಖ್ಯ. ‌ಕೆಲವೊಮ್ಮೆ ಇವರೆಲ್ಲ ಲಭ್ಯವಿರುವ ದಿನ ನನಗೆ ಬೇರೆ ಚಿತ್ರದ ಚಿತ್ರೀಕರಣವಿರುತ್ತದೆ. ಸಾಧಕರ ಆಯ್ಕೆ ವಿಷಯದಲ್ಲಿ ಭಾಗಿಯಾಗುವುದಿಲ್ಲ. ವಾಹಿನಿಯೇ ತೀರ್ಮಾನ ಮಾಡುತ್ತದೆ. ಹಿಂದಿನ ಆವೃತ್ತಿಗಳಂತೆ ಈಸಲವೂ 24 ಸಂಚಿಕೆಗಳು ಇರಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ ಈ ತಿಂಗಳ ಅಂತ್ಯದಲ್ಲಿ ಕಾರ್ಯಕ್ರಮ ಪ್ರಸಾರ ಪ್ರಾರಂಭವಾಗಬಹುದು’
-ರಮೇಶ್‌ ಅರವಿಂದ್‌, ನಿರೂಪಕ, ನಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT