ಬುಧವಾರ, ಸೆಪ್ಟೆಂಬರ್ 22, 2021
29 °C

ನಾಡಿನ ನಾಯಿಗಳೇ ಕಾಡಿನಿಂದ ತೊಲಗಿ!

ನರೇಂದ್ರ ಪಾಟೀಲ, ಮೇಘನಾ ಉನಿಯಾಲ್‌ Updated:

ಅಕ್ಷರ ಗಾತ್ರ : | |

Prajavani

ಕಾಡಿನಲ್ಲಿ ನಾಡಿನ ಬೀದಿನಾಯಿಗಳ ಹಾವಳಿ ಮಿತಿಮೀರಿದ್ದು, ಹಲವು ಪ್ರಭೇದಗಳ ವನ್ಯಸಂಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ. ಕಾಡಿನ ಕೆಲ ಪ್ರಭೇದ ಪ್ರಾಣಿಗಳ ಜತೆ ತಳಿ ಬೆರಕೆ ಆಗುತ್ತಿದ್ದು, ವೈರಸ್‌ ಹರಡುವಿಕೆಗೂ ಕಾರಣವಾಗಿದೆ. ಆದರೆ, ಏನು ಮಾಡುವುದು, ಕಾಡಿನ ಜೀವಿಗಳ ರಕ್ಷಣೆಗೆ ಅಸ್ತ್ರವಾಗಬೇಕಿದ್ದ ಪ್ರಾಣಿ ಸಂರಕ್ಷಣಾ ಕಾಯ್ದೆಗಳು ಪರಸ್ಪರ ಸಂಘರ್ಷಕ್ಕೆ ಬಿದ್ದಿವೆಯಲ್ಲ?

ವನ್ಯಜೀವಿ ತಾಣಗಳಲ್ಲಿ ನಾಯಿಗಳನ್ನು ಕಂಡಾಗಲೆಲ್ಲ ಅವುಗಳು ಮಾಡುವ ಅನಾಹುತವನ್ನು ನೆನೆದು ತುಂಬಾ ನೋವಾಗುತ್ತದೆ. ಜಿಂಕೆಗಳನ್ನು ಅಟ್ಟಾಡಿಸಿಕೊಂಡು ಬೇಟೆಯಾಡುವ, ನೆಲದ ಮೇಲೆ ಮೊಟ್ಟೆಯಿಟ್ಟು ಮರಿ ಮಾಡುವಂತಹ ಪಕ್ಷಿಗಳ ಕತ್ತು ಹಿಸುಕುವ ಅವುಗಳ ಕ್ರೌರ್ಯ ಕಂಡು ಕರುಳು ಚುರ‍್ರ್‌ ಎನ್ನುತ್ತದೆ. ಕಾಡಿನ ಹೊರಗೆ ತಮ್ಮ ಆವಾಸಸ್ಥಾನ ಹೊಂದಿರುವ ನಾಯಿಗಳು, ವನ್ಯಜೀವಿ ತಾಣಗಳೊಳಗೆ ನುಸುಳಿ ಅಲ್ಲಿನ ಜೀವಸಂಕುಲಕ್ಕೆ ಕಂಟಕವಾಗಿ ಪರಿಣಮಿಸುತ್ತಿರುವುದು ದೊಡ್ಡ ತಲೆನೋವಾಗಿದೆ.

ವನ್ಯಜೀವಿ ಸಂರಕ್ಷಣೆಗೆ ಕಠಿಣ ಕಾನೂನುಗಳಿದ್ದರೂ ಅವುಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕೆಲವು ಪ್ರಾಣಿ ದಯಾ ಸಂಘಗಳು ಅಡ್ಡಗಾಲು ಹಾಕುತ್ತಿವೆ. ಬೀದಿ ನಾಯಿಗಳ ಮುಕ್ತ ವಿಹಾರವಷ್ಟೇ ಅಂತಹ ಸಂಘಟನೆಗಳಿಗೆ ಮುಖ್ಯವಾಗಿದೆಯೇ ಹೊರತು ವನ್ಯಜೀವಿ ಸಂಕುಲಕ್ಕೆ ಆಗುತ್ತಿರುವ ಹಾನಿಯನ್ನು ಅವುಗಳು ಪರಿಗಣಿಸುತ್ತಿಲ್ಲ.

ಭಾರತದಲ್ಲಿ ಆರು ಕೋಟಿ ನಾಯಿಗಳಿವೆ ಎಂಬ ಅಂದಾಜಿದೆ. ಇವುಗಳಲ್ಲಿ ಸುಮಾರು ಮೂರೂವರೆ ಕೋಟಿಯಷ್ಟು ಬೀದಿನಾಯಿಗಳಿವೆ. ಅವುಗಳ ಗುಂಪುಗಳೇ ವನ್ಯಜೀವಿಗಳಿಗೆ ಅಪಾಯ ತಂದೊಡ್ಡಿರುವುದು. ನಿಜ ಹೇಳಬೇಕೆಂದರೆ ಇದೊಂದು ಮಾನವನಿರ್ಮಿತ ದುರಂತ. ದೇಶದಾದ್ಯಂತ ವಿವಿಧ ಅರಣ್ಯ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಕೆಟ್ಟ ಪರಿಣಾಮಗಳು ಎದ್ದು ಕಾಣುತ್ತಿದ್ದರೂ ಜನಸಮುದಾಯ ಮತ್ತು ಆಡಳಿತದ ಎಲ್ಲ ಸ್ತರಗಳು ಈ ವಿಷಯವಾಗಿ ಅಸಡ್ಡೆ ತೋರುತ್ತಿವೆ; ಮಾತ್ರವಲ್ಲ, ಸಂವೇದನಾರಹಿತವಾಗಿ ವರ್ತಿಸುತ್ತಿವೆ.

ಕಾಡಿನ ಮಾರ್ಜಾಲ ಕುಟುಂಬದ ಪ್ರಾಣಿಗಳಿಗೆ ಬೀದಿನಾಯಿಗಳಿಂದ ಕೆನೈನ್ ಡಿಸ್ಟೆಂಪರ್ ಮತ್ತು ರೇಬಿಸ್‌ನಂತಹ ವೈರಸ್‌ಗಳು ಹರಡುವ ಸಾಧ್ಯತೆಯನ್ನೂ ತಜ್ಞರು ಗುರುತಿಸಿದ್ದಾರೆ. ಪ್ರಮುಖ ‘ಬೇಟೆ ಪ್ರಾಣಿ’ಗಳ ಮೇಲೆ ನಾಯಿಗಳು ಆಕ್ರಮಣ ನಡೆಸುವುದರಿಂದ ಅಂತಹ ಪ್ರಾಣಿಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಹುಲಿ, ಸಿಂಹ, ಚಿರತೆಯಂತಹ ಪ್ರಾಣಿಗಳಿಗೆ ಇದರಿಂದ ಆಹಾರದ ಕೊರತೆ ಎದುರಾಗುವ ಸಾಧ್ಯತೆಯೂ ಇದೆ. ಕಾಡಿನ ಇತರ ಶ್ವಾನ ಕುಟುಂಬದ ಪ್ರಾಣಿಗಳೊಂದಿಗೆ ನಾಡಿನ ಈ ಬೀದಿನಾಯಿಗಳ ತಳಿ ಬೆರಕೆಯಾಗುತ್ತಿರುವುದು ಕೂಡ ಕಳವಳ ಮೂಡಿಸಿದೆ. ನೆಲದ ಮೇಲೆ ಮೊಟ್ಟೆಯಿಟ್ಟು ಮರಿ ಮಾಡುವ ಪಕ್ಷಿಗಳನ್ನೂ ಅವುಗಳು ಬೇಟೆ ಆಡುವುದರಿಂದ ಪಕ್ಷಿಸಂಕುಲಕ್ಕೆ ಅಪಾಯ ಎದುರಾಗಿದೆ.

ವಿಶೇಷವಾಗಿ ಹೆಬ್ಬಕ ಮತ್ತು ಕಪ್ಪುಕತ್ತಿನ ಬಾಕದಂತಹ ಪಕ್ಷಿಗಳು ಸಂತಾನೋತ್ಪತ್ತಿ ನಡೆಸಲು ಬಳಸುತ್ತಿದ್ದ ತಮ್ಮ ಸಾಂಪ್ರದಾಯಿಕ ಆವಾಸ ಸ್ಥಾನಗಳನ್ನು ತೊರೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅವುಗಳ ಸಂತತಿಯೇ ಅಳಿದು ಹೋಗುವ ಅಪಾಯವಿದ್ದು, ಇದಕ್ಕೆ ಬೀದಿನಾಯಿಗಳು ಮುಖ್ಯ ಕಾರಣವಾಗಬಹುದು ಎಂದೂ ಅಧ್ಯಯನ ವರದಿಗಳು ಹೇಳಿವೆ.

ಉದಾಹರಣೆಗೆ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರದ ಪಕ್ಷಿಯಾದ ಕಪ್ಪುಕತ್ತಿನ ಬಾಕಗಳ ಸಂತಾನೋತ್ಪತ್ತಿಯ ಯಶಸ್ಸಿನ ಪ್ರಮಾಣ 1995ರಲ್ಲಿ ಶೇಕಡ 60ರಷ್ಟಿದ್ದರೆ, 2016ರಲ್ಲಿ ಅದರ ಪ್ರಮಾಣ ಅರ್ಧಕ್ಕೆ, ಅಂದರೆ ಶೇಕಡ 29ಕ್ಕೆ ಇಳಿದಿತ್ತು. ‘ಕಪ್ಪುಕತ್ತಿನ ಬಾಕ ಮತ್ತು ಪಟ್ಟೆ ತಲೆ ಹೆಬ್ಬಾತು ಪಕ್ಷಿಗಳ ಸಂತಾನೋತ್ಪತ್ತಿ ಕಾಲದಲ್ಲಿ ಅವುಗಳ ಮೊಟ್ಟೆ ಮತ್ತು ಮರಿಗಳನ್ನು ನಾಯಿಗಳು ತಿನ್ನುವುದನ್ನು ನಾನು ನೋಡಿದ್ದೇನೆ’ ಎಂದು ವನ್ಯಜೀವಿ ತಜ್ಞ ನೀರಜ್ ಮಹಾರ್‌ ಹೇಳಿರುವುದು ‘ಡೌನ್‌ ಟು ಅರ್ಥ್‌’ನಲ್ಲಿ ವರದಿಯಾಗಿದೆ.

ಲಡಾಖ್‌ ಪ್ರದೇಶದ ಚಂಗ್‌ಥಂಗ್‌ ವನ್ಯಜೀವಿ ಧಾಮದಲ್ಲಿ ಪಕ್ಷಿಗಳ ಕುರಿತು ಮಹಾರ್‌ ವಿಶೇಷವಾಗಿ ಅಧ್ಯಯನ ಮಾಡಿದವರು. ಚಂಗ್‌ಥಂಗ್‌ ಶೀತ ಮರುಭೂಮಿ ವನ್ಯಜೀವಿಧಾಮವು ಹಿಮಚಿರತೆ, ಶಾಪೊ (ಕಾಶ್ಮೀರ–ಟಿಬೆಟ್‌ ಭಾಗದ ಕಾಡು ಕುರಿ), ಕಿಯಾಂಗ್ (ಕಾಡುಕತ್ತೆ), ಹಿಮಾಲಯನ್ ಮಾರ್ಮೊಟ್‌ (ದಂಶಕ) ತರಹದ ಅಪರೂಪದ ಪ್ರಾಣಿಗಳ ನೆಲೆ. ಪ್ರತಿಯೊಂದು ಪ್ರಭೇದದ ಜೀವಿಗೂ ಇಲ್ಲಿರುವ ಸುಮಾರು ಮೂರೂವರೆ ಸಾವಿರ ಬೀಡಾಡಿ ನಾಯಿಗಳು ಅಪಾಯಕಾರಿಯಾಗಿವೆ ಎಂದು ಹಲವು ವನ್ಯಜೀವಿ ತಜ್ಞರು ಎಚ್ಚರಿಕೆ ನೀಡಿದ್ದಾರೆ.

‘ರಾಜಸ್ಥಾನದ ರಾಜ್ಯ ಪ್ರಾಣಿಯಾದ ಚಿಂಕಾರಗಳು ಬೀದಿನಾಯಿಗಳ ಕಾರಣದಿಂದಲೇ ಹೆಚ್ಚಾಗಿ ಸಾವನ್ನಪ್ಪುತ್ತಿವೆ’ ಎನ್ನುತ್ತಾರೆ ಥಾರ್ ಮರುಭೂಮಿಯ ಜೀವವೈವಿಧ್ಯ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ವನ್ಯಜೀವಿ ತಜ್ಞರಾದ ಸುಮಿತ್ ಡೂಕಿಯಾ. ಬೀದಿನಾಯಿಗಳಿಂದ ಆಗುತ್ತಿರುವ ತೊಂದರೆಗಳಿಗೆ ಕರ್ನಾಟಕದ ವನ್ಯಜೀವಿಗಳೂ ಹೊರತಾಗಿಲ್ಲ. ರಾಜ್ಯದ ಬಹುತೇಕ ಅರಣ್ಯ ಪ್ರದೇಶಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಾಗಿದೆ.

ವನ್ಯಜೀವಿಗಳಿಗೆ ಮಾರಕವಾಗಿರುವ ಬೀದಿನಾಯಿಗಳ ಸಂಖ್ಯೆ ಮತ್ತು ಅವುಗಳು ನೆಲೆಸುವ ಪ್ರದೇಶಗಳ ನಡುವೆ ಇರುವ ಸಂಬಂಧವನ್ನು ನಾವು ‘ಮೂಲ-ಗಮ್ಯ’ ಚೌಕಟ್ಟಿನಲ್ಲಿ ನೋಡಬೇಕಿದೆ. ಜನವಸತಿಗಳ ನಡುವೆ ಕಂಡುಬರುವ ನಾಯಿಗಳ ‘ಮೂಲ’ದ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಾ ಹೋದಂತೆ ವನ್ಯಜೀವಿ ಸಂರಕ್ಷಿತ ಪ್ರದೇಶಗಳಿರುವ ‘ಗಮ್ಯ’ದ ಕಡೆಗೆ ಅವು ಚದುರಿ ಹೋಗುತ್ತವೆ. ಹೀಗಾಗಿ ಮೂಲದಲ್ಲಿ ನಾಯಿಗಳ ಸಂಖ್ಯೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಅತ್ಯಗತ್ಯವಾಗಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ– 1972ರ ಪ್ರಕಾರ ಅನುಸೂಚಿತ ಜೀವಿಸಂಕುಲವೊಂದು ಸಂರಕ್ಷಿತ ಪ್ರದೇಶದ ಒಳಗಷ್ಟೇ ಅಲ್ಲದೆ ಹೊರಗೂ ರಕ್ಷಣೆಗೆ ಒಳಪಡುತ್ತದೆ. ಹೀಗಿದ್ದಲ್ಲಿ ವನ್ಯಜೀವಿ ಸಂರಕ್ಷಕರು ಈ ಕಾನೂನುಗಳನ್ನು ಜಾರಿಗೊಳಿಸಿ ವನ್ಯಜೀವಿಗಳಿಗೆ ಮಾರಕವಾಗುತ್ತಿರುವ ಬೀದಿನಾಯಿಗಳನ್ನು ಅಲ್ಲಿಂದ ಹೊರಹಾಕುವುದಕ್ಕೆ ಯಾವ ಕಾರಣ ತಡೆಯಾಗುತ್ತಿದೆ?

ಪ್ರಾಣಿ ಕಲ್ಯಾಣ ಮಂಡಳಿಯ ಜನನ ನಿಯಂತ್ರಣ ನಿಯಮ ವನ್ಯಜೀವಿಗಳ ಪಾಲಿಗೆ ವಿನಾಶಕಾರಿ ಎನಿಸಿದೆ. ಅದರಲ್ಲೂ ಕೆಲವು ‘ಪ್ರಾಣಿದಯಾ ಸಂಘ’ಗಳು ಸಮಸ್ಯೆಯನ್ನು ಬಿಗಡಾಯಿಸುವಂತೆ ಮಾಡಿವೆ. ಈ ಸಂಘಟನೆಗಳ ಅವೈಜ್ಞಾನಿಕ, ಅತಾರ್ಕಿಕ ನಿಲುವುಗಳು ಸಾಕುನಾಯಿಗಳನ್ನು ಬೀದಿಪಾಲು ಮಾಡುವುದಲ್ಲದೆ, ಬೀದಿನಾಯಿಗಳ‌ ರಕ್ಷಣೆಯನ್ನು ಕಾಡಿನಲ್ಲೂ ಮಾಡುವಂತೆ ಪ್ರೋತ್ಸಾಹಿಸುತ್ತಿರುವುದು ದುರಂತ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯ ವ್ಯಾಪ್ತಿಗೆ ಒಳಪಡುವ ವನ್ಯಜೀವಿ ಸಂರಕ್ಷಿತ ಪ್ರದೇಶದ ಒಳಗಿನ ನಾಯಿಗಳನ್ನು ಸ್ಥಳಾಂತರಿಸಲು ಯಾವುದೇ ಕಾನೂನಿನ ಅಡ್ಡಿ ಇಲ್ಲ. ವನ್ಯಜೀವಿ ಪಾಲಕರು ತಮ್ಮ ಕರ್ತವ್ಯ ನಿರ್ವಹಿಸಲು ಬದ್ಧರಾಗಿದ್ದಾರೇನೋ ನಿಜ. ಆದರೆ,  ಪ್ರಾಣಿ ಜನನ ನಿಯಂತ್ರಣ ನಿಯಮಗಳು ವಿರೋಧಾಭಾಸದಿಂದ ಕೂಡಿದ್ದು, ವನ್ಯಜೀವಿ ಸಂರಕ್ಷಣಾ ಕಾನೂನುಗಳನ್ನು ದುರ್ಬಲಗೊಳಿಸುತ್ತಿವೆ.

ಒಂದೆಡೆ ನಾಯಿಗಳನ್ನು ವನ್ಯಜೀವಿ ಸಂರಕ್ಷಿತ ಪ್ರದೇಶಗಳಿಂದ ಪೂರ್ಣವಾಗಿ ತೆರವುಗೊಳಿಸಬೇಕಿದೆ. ಮತ್ತೊಂದೆಡೆ ಪ್ರಾಣಿ ಜನನ ನಿಯಂತ್ರಣ ಕಾನೂನಿನನ್ವಯ ಕಡ್ಡಾಯವಾಗಿ ಅವುಗಳನ್ನು ಹಿಡಿದು ತಂದ ಮೂಲ ಜಾಗಕ್ಕೆ ಮರಳಿ ಬಿಡಬೇಕಿದೆ. ಇಂತಹ ವಿರೋಧಾಭಾಸದ ಕಾರಣದಿಂದಾಗಿ ಕ್ಷೇತ್ರಾಧಿಕಾರಿಗಳು ಹಲವು ನಿರ್ಬಂಧಗಳನ್ನು ಎದುರಿಸುತ್ತಿದ್ದಾರೆ.


ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜಯಮಂಗಲಿ ಕೃಷ್ಣಮೃಗ ರಕ್ಷಿತಾರಣ್ಯದಲ್ಲಿ ಕೃಷ್ಣಮೃಗವನ್ನು ಬೇಟೆಯಾಡಿದ ಬೀದಿನಾಯಿಗಳು ಚಿತ್ರ: ಸಂದೀಪ್‌ ದಾಸ್‌

ಮನುಷ್ಯರು ಹಾಗೂ ವನ್ಯಜೀವಿಗಳ ಮೇಲೆ ಬೀದಿನಾಯಿಗಳಿಂದ ಆಗುತ್ತಿರುವ ಪರಿಣಾಮದ ಕುರಿತು ಅಧ್ಯಯನ ಮಾಡಿರುವ ಬೆಂಗಳೂರಿನ ಎಟ್ರೀ ಸಂಸ್ಥೆಯ ಸಂರಕ್ಷಣಾ ವಿಜ್ಞಾನಿ ಅಬಿ ಟಿ. ವನಕ್ ಹೀಗೆ ಹೇಳುತ್ತಾರೆ: ‘ಬೀದಿನಾಯಿಗಳು ಗುಂಪು ಕಟ್ಟಿಕೊಂಡು  ಇತರ ಕಾಡು ಪ್ರಾಣಿಗಳನ್ನು ಆಹಾರಕ್ಕಾಗಿ ಇಲ್ಲವೇ ಮೋಜಿಗಾಗಿ ಅಟ್ಟಿಸಿಕೊಂಡು ಹೋಗುತ್ತವೆ. ಇಂತಹ ಆಕ್ರಮಣಕಾರಿ ವರ್ತನೆಯಿಂದ ವನ್ಯಜೀವಿಗಳು ಒಂದೋ ಸಾವಿಗೀಡಾಗುತ್ತವೆ, ಇಲ್ಲವೇ ಸತತ ಮಾನಸಿಕ ಒತ್ತಡ ಮತ್ತು ಕಿರುಕಳಕ್ಕೆ ಒಳಗಾಗುತ್ತವೆ.’

ವನ್ಯಜೀವಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆಯನ್ನು ಬಲಪಡಿಸುವ ಉದ್ದೇಶದಿಂದ ಹಾಗೂ ಅದಕ್ಕೆ ಪೂರಕವಾಗಿ ಪ್ರಾಣಿ ಜನನ ನಿಯಂತ್ರಣ ನಿಯಮಗಳನ್ನು ರೂಪಿಸಲಾಗಿದೆ ಎಂಬುದನ್ನು ಗಮನಿಸಬೇಕು.

ಹಾಗಾಗಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕಾಯ್ದೆಯ ವ್ಯಾಖ್ಯಾನದಲಿಲ್ಲದ ‘ಬೀದಿ ನಾಯಿ’ಗಳಿಗೆ ಅರಣ್ಯದಲ್ಲಿ ಜೀವಿಸುವ ಅವಕಾಶ ನೀಡಲು ಸಾಧ್ಯವಿಲ್ಲ. ಹಾಗೆಯೇ ಕೇಂದ್ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಇತರ ಯಾವ ನಿಯಮಗಳ ಬಲದಿಂದ ತಳ್ಳಿಹಾಕುವಂತೆಯೂ ಇಲ್ಲ.

ಭಾರತದ ಪ್ರಮುಖ ವನ್ಯಜೀವಿ ಸಂರಕ್ಷಣಾವಾದಿ ಎಂ.ಕೆ. ರಂಜಿತ್‌ ಸಿನ್ಹಾ, ‘ದೇಶದಾದ್ಯಂತ ಬೀದಿನಾಯಿಗಳಿಂದ ವನ್ಯಜೀವಿಗಳ ರಕ್ಷಣೆಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು. ವನ್ಯಜೀವಿ ಸಂರಕ್ಷಿತ ಪ್ರದೇಶಗಳಿಂದ ನಾಯಿಗಳನ್ನು ಸ್ಥಳಾಂತರಿಸಬೇಕು’ ಎಂದು ಆಗ್ರಹಿಸುತ್ತಾರೆ. ವನ್ಯಜೀವಿ ಸಂರಕ್ಷಣೆ ಕಾಯ್ದೆ–1972 ಅನ್ನು ಸಿದ್ಧಪಡಿಸಿದ್ದ ತಜ್ಞರು ಅವರಾಗಿದ್ದಾರೆ.

ಭಾರತದ ಅಧಿಕಾರಶಾಹಿಗೆ ಅವೈಜ್ಞಾನಿಕ ಮತ್ತು ಅಸಾಂವಿಧಾನಿಕ ಪ್ರಾಣಿಗಳ ಜನನ ನಿಯಂತ್ರಣ ನೀತಿಯಿಂದಾಗಿ ತನ್ನ ಸಾಂವಿಧಾನಿಕ ಕರ್ತವ್ಯಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನಾವು ಈ ವಿಷಯವನ್ನು ಸುಪ್ರೀಂ ಕೋರ್ಟ್‌ಗೆ ತೆಗೆದುಕೊಂಡು ಹೋಗಿದ್ದೇವೆ. ಕಾಯ್ದೆಗಳ ದಾರಿ ತಪ್ಪಿಸುವ ಅರ್ಥೈಸುವಿಕೆಯ ಮೂಲಕ ಬಲಹೀನರಾಗಿರುವ ವನ್ಯಜೀವಿ ಮತ್ತು ವನ್ಯಜೀವಿ ಸಂರಕ್ಷಕರ ಪರವಾಗಿ, ಪ್ರಾಣಿ ಜನನ ನಿಯಂತ್ರಣ ನಿಯಮಗಳ ಸಂಕೋಲೆಯಿಂದ ವನ್ಯಜೀವಿ ತಾಣಗಳನ್ನು ಮುಕ್ತಗೊಳಿಸಲು ಈ ಹೋರಾಟ. ದೇಶದ ಎಲ್ಲ ವನ್ಯಜೀವಿ ಸಂರಕ್ಷಣಾ ಪ್ರದೇಶಗಳು ಮತ್ತು ಎಲ್ಲ ವನ್ಯಜೀವಿಗಳಿರುವ ಪ್ರದೇಶದಿಂದ ಬೀದಿನಾಯಿಗಳನ್ನು ನಿರ್ದಿಷ್ಟ ಸಮಯಾವಧಿಯಲ್ಲಿ ಸ್ಥಳಾಂತರಿಸಬೇಕೆಂದು ಸರ್ಕಾರಗಳಿಗೆ ನಿರ್ದೇಶಿಸಲೂ ಕೋರಲಾಗಿದೆ.

ವನ್ಯಜೀವಿ ಸಂರಕ್ಷಣಾ ಸಂಸ್ಥೆಗಳು, ಸಂರಕ್ಷಣಾ ವಿಜ್ಞಾನಿಗಳು ಈ ಅವಕಾಶವನ್ನು ಉಪಯೋಗಿಸಿಕೊಂಡು, ಬೀದಿನಾಯಿಗಳಿಂದ ವನ್ಯಜೀವಿಗಳು ಎದುರಿಸುತ್ತಿರುವ ಸಮಸ್ಯೆಯ ಬಗೆಗಿನ ತಮ್ಮ ಕಾಳಜಿಯನ್ನು ಕೋರ್ಟ್‌ ಮುಂದೆ ವ್ಯಕ್ತಪಡಿಸಬೇಕು.

ಹೌದು, ದೇಶದ ವನ್ಯಜೀವಿಗಳ ಸಂರಕ್ಷಣೆಯ ಬಗ್ಗೆ ಕಾಳಜಿಯಿರುವ ಎಲ್ಲರೂ ದನಿಯೆತ್ತುವ ಸಮಯ ಇದಾಗಿದೆ.

ವನ್ಯಜೀವಿಗಳ ಬೇಟೆಯನ್ನು ತಪ್ಪಿಸೀತೇ ಈ ಕಾಯ್ದೆ?
ಪ್ರಾಣಿಗಳ ಮೇಲೆ ಆಗುವ ಕ್ರೌರ್ಯ ತಡೆಗಟ್ಟುವ ಕಾಯ್ದೆ-1960ರ ಅಡಿಯಲ್ಲಿ ಸಲಹಾ ಮಂಡಳಿ ಸ್ವರೂಪದಲ್ಲಿ ಕಾರ್ಯನಿರ್ವಹಿಸಲು ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆಗೊಂಡಿದೆ. ಅದು, ಎಲ್ಲ ಸಮಸ್ಯೆಗಳಿಗೆ ದಿವ್ಯ ಔಷಧಿ ಎಂಬಂತೆ ಪ್ರಾಣಿಗಳ ನಿಯಂತ್ರಣದ ನಿಯಮವನ್ನು ಸಂತಾನಶಕ್ತಿಹರಣ ಚಿಕಿತ್ಸೆಗಷ್ಟೇ ಸೀಮಿತಗೊಳಿಸಿದೆ.

ಮಂಡಳಿಯ ನಿಯಮದಂತೆ ‘ಸಂತಾನಶಕ್ತಿಹರಣಕ್ಕೆ ಯಾವ ಜಾಗದಿಂದ ನಾಯಿಗಳನ್ನು  ಹಿಡಿಯಲಾಗಿರುತ್ತದೆಯೋ ಕಡ್ಡಾಯವಾಗಿ ಅದೇ ಜಾಗಕ್ಕೆ ಅವುಗಳನ್ನು ಮರಳಿ ಬಿಡಬೇಕು’. ಏಕೆಂದರೆ ‘ಸಂತಾನಶಕ್ತಿಹರಣಕ್ಕೊಳಗಾದ ನಾಯಿಗಳು ಅವುಗಳ ಮೂಲ ಜಾಗದಲ್ಲೇ ಇರಬೇಕು’. ಮುಂದುವರೆದು ಈ ನಿಯಮ ‘...ಈ ಕ್ರಮಗಳಿಂದಾಗಿ ನಾಯಿಗಳು ಅಪಾಯದ ಅಂಚಿನಲ್ಲಿರುವ ವನ್ಯಜೀವಿಗಳನ್ನು ಬೇಟೆಯಾಡುವುದು ಕಡಿಮೆ ಆಗುತ್ತದೆ ಮತ್ತು ವನ್ಯಜೀವಿ ಸಂರಕ್ಷಣೆಯನ್ನು ಉತ್ತೇಜಿಸುತ್ತದೆ’ ಎಂದೂ ಹೇಳುತ್ತದೆ. ಆದರೆ, ಮಂಡಳಿಯು ವನ್ಯಜೀವಿ ಸಂರಕ್ಷಿತ ಪ್ರದೇಶಗಳು ಯಾವ ರೀತಿ ಬೀದಿನಾಯಿಗಳ ವಾಸಸ್ಥಾನಗಳಾಗಿವೆ ಎನ್ನುವುದನ್ನು ಮತ್ತು ಈ ಸಂತಾನಶಕ್ತಿಹರಣ ಪ್ರಕ್ರಿಯೆಯು ನಾಯಿಗಳಿಗೆ ಹಸಿವಾಗದಂತೆ ಮತ್ತು ಅವುಗಳು ವನ್ಯಜೀವಿಗಳನ್ನು ಬೇಟೆಯಾಡದಂತೆ ಹೇಗೆ ತಡೆಗಟ್ಟುತ್ತದೆ ಎಂಬುದನ್ನೆಲ್ಲ ವಿವರಿಸುವ ತೊಂದರೆ ತೆಗೆದುಕೊಳ್ಳುವುದಿಲ್ಲ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು