ಸೋಮವಾರ, ಡಿಸೆಂಬರ್ 16, 2019
18 °C

ಎಮ್ಮೆಯನ್ನು ಹೋಲುವ ಅನೊವಾ

ಪ್ರಾಣಿ ಪ್ರಪಂಚ Updated:

ಅಕ್ಷರ ಗಾತ್ರ : | |

Prajavani

ಸಾವಿರಾರು ವರ್ಷಗಳಿಂದ ಮಾನವನೊಂದಿಗೆ ನಿಕಟ ಸಂಪರ್ಕದಲ್ಲಿರುವ ಸಾಕು ಪ್ರಾಣಿಗಳು ಕೆಲವು ಮಾತ್ರ. ಮಾನವನ ಆರ್ಥಿಕಾಭಿವೃದ್ಧಿಗೂ ನೆರವಾಗುತ್ತಿರುವ ಇಂತಹ ಪ್ರಾಣಿಗಳಲ್ಲಿ ಎಮ್ಮೆ ಕೂಡ ಒಂದು. ಎಮ್ಮೆಯ ದೇಹರಚನೆಯನ್ನೇ ಹೋಲುವಂತಹ ಅನೊವಾ (Anoa) ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಬುಬಲಸ್‌ ಡೆಪ್ರೆಸಿಕಾರ್ನಿಸ್‌ (Bubalus depressicornis). ಎಮ್ಮೆ, ಹಸುಗಳಂತೆ ಇದು ಕೂಡ ಸಸ್ಯಾಹಾರಿ ಪ್ರಾಣಿಗಳ ಬೊವಿಡೇ (Bovidae) ಕುಟುಂಬ ಮತ್ತು ಬೊವಿನೇ (Bovinae) ಉಪಕುಟುಂಬಕ್ಕೆ ಸೇರಿದ್ದು, ಅರ್ಟಿಯೊಡ್ಯಾಕ್ಟಿಲಾ (Artiodactyla) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ಸಾಕು ಎಮ್ಮೆಯ ಬಹುತೇಕ ಲಕ್ಷಣಗಳು ಅನೊವಾದಲ್ಲೂ ಕಾಣಬಹುದು. ಆದರೆ ಗಾತ್ರದಲ್ಲಿ ಅದಕ್ಕಿಂತ ತುಸು ಚಿಕ್ಕದು. ಕಪ್ಪು ಬಣ್ಣದ ನಯವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಕಾಲುಗಳು ಚಿಕ್ಕದಾಗಿದ್ದರೂ ದೃಢವಾಗಿರುತ್ತವೆ. ಅಗಲವಾದ ಎರಡು ಗೊರಸುಗಳಿರುತ್ತವೆ. ಉದರಭಾಗ ಮತ್ತು ಎದೆಭಾಗದಲ್ಲಿ ಕಂದು ಬಣ್ಣದ ತುಪ್ಪಳವಿರುತ್ತದೆ. ಬಾಲ ಪುಟ್ಟದಾಗಿರುತ್ತದೆ. ದೇಹವೆಲ್ಲಾ ಎಮ್ಮೆಗೆ ಹೋಲಿಕೆಯಾದರೂ ಕೋಡುಗಳು ಮಾತ್ರ ಹಸು, ಎತ್ತಿನ ಕೋಡುಗಳನ್ನು ಹೋಲುತ್ತವೆ. ಎಲೆಯಾಕಾರದ ಕಿವಿಗಳು ಚಿಕ್ಕದಾಗಿರುತ್ತವೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಮೂತಿ ನೀಳವಾಗಿದ್ದು, ಮೂಗು ಕಪ್ಪು ಬಣ್ಣದಲ್ಲಿರುತ್ತದೆ.

ಎಲ್ಲಿದೆ?

ಆಗ್ನೇಯ ಏಷ್ಯಾದ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಕಾಣಸಿಗುವ ಸಸ್ತನಿ ಇದು. ಇಂಡೊನೇಷ್ಯಾ ಮತ್ತು ಸುಲವೆಸಿ ದ್ವೀಪಗಳಲ್ಲಿ ಇದರ ಸಂತತಿ ಹೆಚ್ಚಾಗಿದೆ. ದಟ್ಟವಾಗಿ ಮರಗಳು ಬೆಳೆದಿರುವ ಕಾಡುಗಳು, ತೇವಾಂಶ ಹೆಚ್ಚಾಗಿರುವ ಪ್ರದೇಶಗಳಿಗೆ ಇದು ಹೆಚ್ಚು ಹೊಂದಿಕೊಳ್ಳುತ್ತದೆ. ಸಾಧ್ಯವಾದಷ್ಟು ಜನವಸತಿ ಪ್ರದೇಶಗಳಿಂದ ದೂರವಿರಲುಪ್ರಯತ್ನಿಸುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಒಂಟಿಯಾಗಿರಲು ಇಷ್ಟಪಡುವ ಪ್ರಾಣಿ. ಮುಂಜಾನೆ ಮತ್ತು ಸಂಜೆ ಮಾತ್ರ ಹೆಚ್ಚು ಚುರುಕಾಗಿರುತ್ತದೆ. ಆಹಾರ ಅರಸುವುದು ಕೂಡ ಈ ಅವಧಿಯಲ್ಲೇ. ಉಷ್ಣಾಂಶ ಹೆಚ್ಚಾಗಿರುವ ಅವಧಿಯಲ್ಲಿ ನೆರಳಿರುವಂತಹ ಸುರಕ್ಷಿತ ಪ್ರದೇಶಗಳಲ್ಲಿ ವಿರಮಿಸುತ್ತದೆ. ಬಹುತೇಕ ಎಮ್ಮೆಗಳಂತೆ ಇದು ಕೂಡ ಕೆಸರಿನಿಂದ ಕೂಡಿದ ನೀರಿನಲ್ಲಿ ಹೊರಳಾಡುವುದಕ್ಕೆ ಇಷ್ಟಪಡುತ್ತದೆ.

ಸಾಮಾನ್ಯವಾಗಿ ಸದಾ ನಿಧಾನವಾಗಿಯೇ ನಡೆಯುತ್ತಾ ಕಾಡು ಸುತ್ತುತ್ತದೆ. ಅಪಾಯ ಎದುರಾದಾಗ ಮಾತ್ರ ಹಾರುತ್ತಾ ವೇಗವಾಗಿ ಓಡಲು ಪ್ರಯತ್ನಿಸುತ್ತದೆ.  ಪರಭಕ್ಷಕ ಪ್ರಾಣಿಗಳು ದಾಳಿ ಮಾಡಲು ಬಂದರೆ ಜೀವ ರಕ್ಷಣೆಗಾಗಿ ಇದು ಕೂಡ ಹಿಂಸಾತ್ಮಕವಾಗಿ ಪ್ರತಿ ದಾಳಿ ಮಾಡುತ್ತದೆ. ಈ ಎಮ್ಮೆ ಪರಭಕ್ಷಕ ಪ್ರಾಣಿಗಳು ಮತ್ತು ಮಾನವರು ಎದುರಾದಾಗ ಸದಾ ಅಪಾಯಕಾರಿಯೇ ವರ್ತಿಸುತ್ತದೆ. ಮರಿಗಳೊಂದಿಗಿರುವ ತಾಯಿ ಎಮ್ಮೆ ಇನ್ನೂ ಅಪಾಯಕಾರಿ. ಶಬ್ದಗಳಿಗಿಂತ ಹೆಚ್ಚಾಗಿ ದೇಹದ ಭಂಗಿಗಳ ಮೂಲಕವೇ ಸಂವಹನ ನಡೆಸುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ಹುಲ್ಲು ಇದರ ಪ್ರಮುಖ ಆಹಾರ. ನೀರಿನಲ್ಲಿ ಬೆಳೆಯುವ ಜಲಸಸ್ಯಗಳು, ಬಳ್ಳಿಗಳ ಎಲೆಗಳು, ಉದುರಿದ ಹಣ್ಣುಗಳು, ತಾಳೆ ಗಿಡದ ಎಲೆಗಳು ಮತ್ತು ಶುಂಠಿಯನ್ನು ಇಷ್ಟಪಡುತ್ತದೆ. ದೇಹಕ್ಕೆ ಬೇಕಾಗುವ ಖನಿಜಾಂಶಗಳಿಗಾಗಿ ಆಗಾಗ್ಗೆ ಸಮುದ್ರದ ನೀರನ್ನೂ ಸೇವಿಸುತ್ತದೆ.

ಸಂತಾನೋತ್ಪತ್ತಿ

ಇದರ ಸಂತಾನೋತ್ಪತ್ತಿ ಯಾವುದೇ ನಿರ್ದಿಷ್ಟ ಅವಧಿ ಇಲ್ಲ. ಹೆಣ್ಣು ಅನೊವಾ ಸುಮಾರು 10 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾಫ್ (Calf) ಎನ್ನುತ್ತಾರೆ. 6ರಿಂದ 9 ತಿಂಗಳ ವರೆಗೆ ಮರಿ ತಾಯಿ ಆರೈಕೆಯಲ್ಲೇ ಬೆಳೆಯುತ್ತದೆ. ನಂತರ ಘನ ಆಹಾರ ಸೇವಿಸಲು ಆರಂಭಿಸುತ್ತದೆ. 2ರಿಂದ 3 ವರ್ಷಗಳ ನಂತರ ವಯಸ್ಕ ಹಂತ ತಲುಪುತ್ತದೆ. ವಾಸಸ್ಥಾನಗಳ ನಾಶ, ಅತಿಯಾದ ಬೇಟೆಯಿಂದ ಪ್ರಸ್ತುತ ಇದು ಅಳವಿನಂಚಿನಲ್ಲಿದೆ.

ಸ್ವಾರಸ್ಯರಕ ಸಂಗತಿಗಳು

* ದೊಡ್ಡ ದೇಹವಿದ್ದರೂ ನೀರಿನಲ್ಲಿ ಸರಾಗವಾಗಿ ಈಜುವ ಕಲೆಯೂ ಇದಕ್ಕೆ ಗೊತ್ತಿದೆ.

* ಸುಲವೆಸಿಯಲ್ಲಿ ಅನೊವಾ ಎಂದರೆ ಎಮ್ಮೆ ಎಂದು ಅರ್ಥ.

* ಇದರಲ್ಲಿ ಮೂರು ತಳಿಗಳನ್ನು ಗುರುತಿಸಲಾಗಿದೆ.

* ಪ್ರಸ್ತುತ 2,500 ಅನೊವಾಗಳು ಮಾತ್ರ ಉಳಿದಿವೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ-150–300 ಕೆ.ಜಿ., ದೇಹದ ಎತ್ತರ-90 ಸೆಂ.ಮೀ,  ದೇಹದ ಉದ್ದ-180 ಸೆಂ.ಮೀ

ಜೀವಿತಾವಧಿ- 20–30 ವರ್ಷ.

ಪ್ರತಿಕ್ರಿಯಿಸಿ (+)