ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಹಮತ್‌ ತರೀಕೆರೆ ಬರಹ: ಅರೆರೆ ಅರಾವಳಿ

Last Updated 29 ಜನವರಿ 2022, 19:30 IST
ಅಕ್ಷರ ಗಾತ್ರ

ಈ ಅರಾವಳಿಯ ಮುಂದೆ ಹಿಮಾಲಯವೂ ಒಂದು ಕೂಸಂತೆ. ಕಲ್ಬಂಡೆಗಳಿಂದ ಕೂಡಿದ ಬೆಟ್ಟಗಳು, ಮಳೆಗಾಲದಲ್ಲಷ್ಟೇ ಹರಿಯುವ ಹಳ್ಳಗಳು, ಘರ್ಜಿಸುವ ಹುಲಿಗಳು, ವಿಶಿಷ್ಟ ಬುಡಕಟ್ಟುಗಳು, ಬಾಯಲ್ಲಿ ನೀರೂರಿಸುವ ಸೀತಾಫಲ ಸೇರಿದಂತೆ ಬಗೆಬಗೆಯ ಹಣ್ಣುಗಳು... ಅರಾವಳಿ ಹೊಕ್ಕರೆ ಅದೆಂತಹ ಜೀವವೈವಿಧ್ಯ!

***

ಹಿಮಾಲಯ, ಬಯಲುಸೀಮೆ ಹಾಗೂ ಪಶ್ಚಿಮಘಟ್ಟಗಳ ಕಾಡುಬೆಟ್ಟಗಳಲ್ಲಿ ಅಲೆದಾಡಿರುವ ನಾನು, ಅರಾವಳಿ ಕಾಡುಗಳನ್ನು ನೋಡಿರಲಿಲ್ಲ. 650 ಕಿ.ಮೀ.ನಷ್ಟು ನಿಡಿದಾದ ಈ ಕಾಡುಗಳು, ಗುಜರಾತಿನಿಂದ ಮೊದಲುಗೊಂಡು ರಾಜಸ್ಥಾನ, ಹರಿಯಾಣಗಳನ್ನು ಹಾದು ದೆಹಲಿಯ ಅಂಚಿನಲ್ಲಿ ಕೊನೆಗೊಳ್ಳುತ್ತವೆ. ಸಬರಮತಿ ಮೊದಲಾದ ಹೊಳೆಗಳಿಗೆ ಜನ್ಮನೀಡುವ ಅರಾವಳಿ, ಜಗತ್ತಿನ ಪ್ರಾಚೀನ ಗಿರಿಶ್ರೇಣಿಗಳಲ್ಲಿ ಒಂದು. ವಯಸ್ಸಿನಲ್ಲಿ ಇದರ ಮುಂದೆ ಹಿಮಾಲಯವೊಂದು ಕೂಸಂತೆ. ಅಬೂ ಪರ್ವತದಲ್ಲಿ ಮತ್ತು ದೆಹಲಿಯಲ್ಲಿ ಅರಾವಳಿಯ ಕಿಂಚಿತ್ ದರ್ಶನವಾಗಿತ್ತಾದರೂ ಅದರೊಳಗೆ ಹೊಕ್ಕಿರಲಿಲ್ಲ. ಈಚೆಗೆ ಉದಯಪುರ-ಜೋಧಪುರಗಳ ನಡುವಿನ ರಣಕಪುರ- ಕುಂಭಳಗಡ ಅಭಯಾರಣ್ಯದಲ್ಲಿ ಅಲೆದಾಟ ಸಾಧ್ಯವಾಯಿತು.

ಅರಾವಳಿಯ ಮುಖ್ಯ ಲಕ್ಷಣವೆಂದರೆ, ಕಲ್ಬಂಡೆಗಳಿಂದ ಕೂಡಿದ ಬೆಟ್ಟಗಳು, ನೆತ್ತಿಯಲ್ಲಿ ವಿರಳವೂ ಕಣಿವೆಯಲ್ಲಿ ದಟ್ಟವೂ ಆಗುವ ಕಾನನ, ಮಳೆಗಾಲದಲ್ಲಷ್ಟೇ ಹರಿವ ಹಳ್ಳಗಳು, ಬಿಸಿಲನ್ನು ತಡೆದು ಅಲ್ಪಮಳೆಯಲ್ಲೂ ಬದುಕಬಲ್ಲ ಸಸ್ಯಾವಳಿ. ನಾವು ಹೋದಾಗ ಚಳಿಗಾಲ ಕಾಲಿಟ್ಟಿತ್ತು. ಕೆಲವು ಮರಗಳು ಎಲೆಹಣ್ಣಾಗಿ ಅರಿಶಿಣ ಮಿಂದ ಮದುಮಕ್ಕಳಂತಾಗಿದ್ದರೆ, ಮತ್ತೆ ಕೆಲವು ಎಲೆಯುದುರಿಸಿ ನೀಲಾಕಾಶದಡಿ ಬತ್ತಲೆನಿಂತ ಆದಿವಾಸಿ ಮಕ್ಕಳಂತಿದ್ದವು. ಕವಳೆ, ನೆಲ್ಲಿ, ಬಾರೆ, ಬಿದಿರು, ಈಚಲು, ಬೇವು, ಅತ್ತಿ, ದಿಂಡುಗ, ಹಾಲೆ, ಮುತ್ತುಗ ಮೊದಲಾದ ಮರಗಿಡಗಳು, ನಮ್ಮ ಬಯಲುಸೀಮೆಯ ಜೋಗಿಮಟ್ಟಿ, ಸಂಡೂರು, ದರೋಜಿ, ಜರಿಮಲೆ ಕಾಡುಗಳನ್ನೇ ನೆನಪಿಸಿದವು.

ಅರಾವಳಿಯ ಕಾಡುಗಳು ಹಿಂದೊಮ್ಮೆ ಹುಲಿಗಳಿಗೆ ಖ್ಯಾತವಾಗಿದ್ದವು. ರಾಜಸ್ಥಾನದ ಅರಮನೆಗಳಲ್ಲಿ ರಾಜರು ಮತ್ತು ಬ್ರಿಟಿಷರು ಅಟ್ಟಣಿಗೆ ಕಟ್ಟಿಕೊಂಡು ಹುಲಿ ಬೇಟೆಯಾಡುತ್ತಿರುವ ವರ್ಣಚಿತ್ರಗಳಿವೆ. ಗುಡಿಗಳಲ್ಲೂ ಬೇಟೆಶಿಲ್ಪಗಳಿವೆ. ಈಗ ಅರಾವಳಿ ಕಾಡಿನ ರಣಥಂಬೂರ್‌ನಲ್ಲಿ ಮಾತ್ರ ಹುಲಿಗಳಿವೆ. ಉಳಿದಂತೆ ನಮ್ಮ ಚಾರಣಪಥದಲ್ಲಿ ಕರಡಿ, ಚಿರತೆ, ಸಾರಂಗ, ಹಂದಿ, ಮುಸಿಯ, ನೀಲಗಾಯಿ, ತೋಳ, ನವಿಲುಗಳಿದ್ದವು. ಅರಣ್ಯದಲ್ಲಿ ಎದ್ದು ಕಂಡಿದ್ದು ಕಾಡಿನಲ್ಲಿ ಬಿಳಿಯ ಕರವಸ್ತ್ರಗಳನ್ನು ಒಣಹಾಕಿದಂತೆ ಸೂರ್ಯರಶ್ಮಿಗೆ ಹೊಳೆಯುತ್ತಿದ್ದ ಸಹಸ್ರಾರು ಜೇಡರ ಬಲೆಗಳು. ಮಂಜಿನ ಗುಹೆಯೊಳಗೆ ತಪಕ್ಕೆ ಕೂತಂತಿರುವ ಜೇಡಗಳು, ಬಾಗಿ ನೋಡಹೋದರೆ ಪುಳಕ್ಕನೆ ಬಿಲದೊಳಗೆ ಅಡಗುತ್ತಿದ್ದವು. ಕಾಡೆಂದರೆ ಹುಲಿಸಿಂಹಗಳಿಂದ ಮಾತ್ರವಲ್ಲ, ನಮ್ಮಂತಹ ಕೀಟಗಳಿಂದಲೂ ರೂಪುಗೊಂಡಿದೆ ಎಂಬ ದಿಟವನ್ನು ಕಾಣಿಸಿದವು.

ನಮ್ಮ ಮಾರ್ಗದರ್ಶಿ ದಾವುರಾಂ, ಥೇಟು ‘ಕರ್ವಾಲೊ’ ಕಾದಂಬರಿಯ ಮಂದಣ್ಣ. ಭಿಲ್ ಸಮುದಾಯಕ್ಕೆ ಸೇರಿದವನು. ತೆಳ್ಳಗೆ, ಕುಳ್ಳಗೆ, ಕಪ್ಪಗಿದ್ದ ಈತ, ನೀರೊಳಗಿನ ಮೀನಂತೆ ಅಡವಿಯೊಳಗೆ ಸಂಚರಿಸಬಲ್ಲವನು. ಏಕಕಾಲದಲ್ಲಿ ಕಿವಿ, ಕಣ್ಣು, ನೆಲ, ಮುಗಿಲುಗಳನ್ನು ಚುರುಕಾಗಿ ನಿಟ್ಟಿಸುತ್ತಿದ್ದವನು. ಈತ ನಮಗೆ ಮಣ್ಣಹಾದಿಯಲ್ಲಿ ಹಾದುಹೋಗಿದ್ದ ಹಾವಿನ ಪಟ್ಟೆ ತೋರಿಸಿದ. ಮರದ ಬುಡದಲ್ಲಿ ಮಣ್ಣುಕೆದರಿ ಉಂಟಾದ ತಗ್ಗನ್ನು ನೀಲಗಾಯಿಯ ಮಲಗುದಾಣವೆಂದ; ಮರದ ತೊಗಟೆ ಕೆಂಪಾದೆಡೆಯನ್ನು ಬಾರಾಸಿಂಗ ಜಿಂಕೆಗಳು ಕೋಡು ತುರಿಸುತ್ತ ಗೈದ ಗಾಯವೆಂದು ಉಸುರಿದ; ಮುದಿಮರದ ಪೊಟರೆಯಲಿ ಧ್ಯಾನಸ್ಥ ಗೂಬೆಗಳ ದರ್ಶನ ಮಾಡಿಸಿದ; ಮುಸಿಯಗಳ ಚೀತ್ಕಾರ ಕೇಳಿ ಹತ್ತಿರದಲ್ಲೇ ಚಿರತೆಯಿದೆ ಎಂದು ಪಿಸುಗುಟ್ಟಿದ. ಕರಡಿಗಳ ಕೂಗನ್ನು ಕೇಳಿಸಿ, ಅವು ಕಾದಾಟಕ್ಕೆ ಇಲ್ಲವೇ ಬೇಟಕ್ಕೆ ಹಾಕುತ್ತಿರುವ ಪೀಠಿಕೆಯೆಂದು ವಿಶ್ಲೇಷಿಸಿದ; ತಾಯ್ಗರಡಿಯೊಂದು ಒಬ್ಬನ ಕಣ್ಣುಕಿತ್ತು, ಅವನ ಹೆಂಡತಿ ಜೀವಮಾನವಿಡೀ ಅವನನ್ನು ಸಾಕಬೇಕಾದ ಕತೆ ಹೇಳಿದ. ‘ಯಾವ ಪ್ರಾಣಿಯೂ ತಾನಾಗಿ ಮೇಲೆಬೀಳದು. ನಾವು ಬಂಡಿಯಲ್ಲಿದ್ದರೂ ಸುಮ್ಮನಿರುತ್ತವೆ. ನಾವು ನೆಲದಲ್ಲಿದ್ದರೆ ಮಾತ್ರ ನಿಲ್ಲುವುದಿಲ್ಲ. ಶಬ್ದಮಾಡದೆ ಬಂದಿರಾದರೆ, ಕೆಲವಾದರೂ ಪ್ರಾಣಿಗಳು ಕಂಡಾವು’ ಎಂದ. ಆದರೆ ಊರಸುದ್ದಿಯನ್ನು ಕಾಡಿಗೂ ತಂದು ಗಳಹುವ ಚಾರಣಿಗರ ವಟವಟದಿಂದ –ಒಂದು ಹಂದಿ ತನ್ನ ಮರಿಗಳ ಜತೆ ಪರಾರಿಯಾಗಿದ್ದು ಬಿಟ್ಟರೆ- ಹೆಚ್ಚಿನ ಪ್ರಾಣಿಗಳ ಮುಖಾಬಿಲೆ ಆಗಲಿಲ್ಲ.

ಅರಾವಳಿಯಲ್ಲಿ ರಾಜಸ್ಥಾನದ ಕಾಡು ಇಲಾಖೆಯು ಕಟ್ಟಿಸಿರುವ ಮಳೆನೀರು ಇಂಗಿಸುವ ಕಟ್ಟೆಗಳು ಯಥೇಚ್ಛವಾಗಿದ್ದವು. ಅವುಗಳನ್ನು ಕಾಣುತ್ತ, ನನಗೆ ಈ ಸೀಮೆಯ ಪಾರಂಪರಿಕ ಜಲಕೊಯಿಲಿನ ಪ್ರಯೋಗಗಳನ್ನು ಲೋಕಕ್ಕೆ ತಿಳಿಸಿದ, ಕಾಡಂಚಿನ ಜನರಿಗೆ ಇದರ ಮಹತ್ವವನ್ನೂ ಮನಗಾಣಿಸಿದ ರಾಜೇಂದ್ರಸಿಂಗರ ನೆನಪಾಯಿತು. ಅವರೊಮ್ಮೆ ಹಂಪಿಗೆ ಬಂದು ಉಪನ್ಯಾಸವನ್ನೂ ಕೊಟ್ಟಿದ್ದರು. ಸಿಂಧ್-ರಾಜಸ್ಥಾನಗಳೆಂದರೆ ಕುಡಿನೀರಿಗಾಗಿ ಪರದಾಡುವ ಮಹಿಳೆಯರೇ ನೆನಪಾಗುತ್ತಾರೆ. ಜಲದ ಅರಕೆಯೂ ಅದರೊಟ್ಟಿಗೆ ಮಹಿಳೆಯರಿಗಿರುವ ದೈನಿಕ ಸಂಬಂಧವೂ ಇಲ್ಲಿನ ಕಲೆಗಳಲ್ಲಿ ಸೈತ ಪ್ರತಿಬಿಂಬಿತವಾಗಿದೆ. ಉದಯಪುರದಲ್ಲಿ ನಾವು ವೀಕ್ಷಿಸಿದ ನೀರಬಿಂದಿಗೆ ಹೊತ್ತು ಮಾಡುವ ಒಂದು ಕುಣಿತಕ್ಕೆ ಹಿನ್ನೆಲೆಯಾಗಿ ಹಾಡಿದ ಹಾಡಿನಲ್ಲಿ, ಯಾರು ಹೆಚ್ಚು ಬಿಂದಿಗೆ ಹೊರುತ್ತಾರೆ ಎಂದು ಮಹಿಳೆಯರು ಮಾತಾಡಿಕೊಳ್ಳುವುದೇ ವಸ್ತುವಾಗಿತ್ತು. ಒಂದು ಪ್ರದೇಶದಲ್ಲಿರುವ ಕಡಲು, ಮರುಭೂಮಿ, ಬೆಟ್ಟ, ಬಯಲು, ಧಗೆ, ತಣ್ಪು ಮಳೆ-ಬಿಸಿಲುಗಳಿಗೂ, ಅಲ್ಲಿನ ಜನಜೀವನದ ಭಾಗವಾಗಿರುವ ಭಾಷೆ, ಸಾಹಿತ್ಯ, ಧರ್ಮ, ವಾಸ್ತುಶಿಲ್ಪ, ಶಿಲ್ಪ, ಚಿತ್ರಕಲೆ, ಹಾಡು-ಕುಣಿತ, ಅಡುಗೆ-ತೊಡುಗೆಗಳಿಗೂ ಗಾಢವಾದ ಒಳನಂಟಿರುತ್ತದೆ. ಪಶ್ಚಿಮ ಘಟ್ಟದಲ್ಲಿರುವ ಅರಮನೆ-ಬಸದಿ-ಗುಡಿಗಳ ಇಳಿಜಾರು ಚಾವಣಿಗೂ ಅಲ್ಲಿನ ಮಳೆಗೂ; ಹಿಮಾಲಯದ ಮನೆಗಳ ಚಪ್ಪಡಿಯ ಚಾವಣಿ, ಕಟ್ಟಿಗೆ ಗೋಡೆಗಳಿಗೂ ಅಲ್ಲಿನ ಹಿಮಪಾತ ಮತ್ತು ಥಂಡಿಗಳಿಗೂ ಹೀಗೇ ನಂಟಿದೆಯಷ್ಟೆ. ಅರಾವಳಿಯ ಚಾರಣವು ರಾಜಸ್ಥಾನದ ನಿಸರ್ಗ ಪರಿಸರದ ಜತೆಗೇ ಅಲ್ಲಿನ ಸಾಂಸ್ಕೃತಿಕ ಲೋಕದ ಮುಖಗಳನ್ನೂ ಕಾಣಿಸಿತು.

ವರ್ಷವಿಡೀ ಹರಿವ ಹೊಳೆಗಳ ನಾಡಿಂದ ಹೋದವರಿಗೆ, ಅರಾವಳಿಯ ಒಣಹಳ್ಳಗಳನ್ನು ನೋಡುತ್ತಿದ್ದರೆ –ನಾವು ಹೋದಾಗಲೂ ಮಳೆ ಕಮ್ಮಿ ಬಿದ್ದಿತ್ತು– ಮನ ಖಿನ್ನವಾಗುತ್ತದೆ. ನಮ್ಮ ಹೊಳೆಹಳ್ಳಗಳ ಮಹತ್ವವೂ ಮನವರಿಕೆಯಾಗುತ್ತದೆ. ಪಡುವಣ ಘಟ್ಟದ ಶೋಲಾ ಮತ್ತು ಹಿಮಾಲಯಗಳಿಗೆ ಇರುವಂತೆ, ಅರಾವಳಿ ಬೆಟ್ಟಗಳಿಗೆ ಜಲಸಂಚಯದ ಗುಣ ಕಡಿಮೆ. ನಾವೊಂದೆಡೆ ಒಣನದಿಯ ಪಾತ್ರದೊಳಗೆ ನಡೆಯಬೇಕಾಯಿತು. ಅಲ್ಲಲ್ಲಿ ಜಿನುಗುಧಾರೆಗಳಿಂದ ಮಡುಗಟ್ಟಿದ ಕೆಲವು ದೊಣೆಗಳನ್ನು ಬಿಟ್ಟರೆ, ಉರುಟು ಬಂಡೆಗಳಿಂದ ಕೂಡಿದ ಮಹಾ ಇಳಿಜಾರಿನ ಆ ನದಿಪಾತ್ರವು, ರುದ್ರರಮಣೀಯವೂ ಅಪಾಯಕರವೂ ಆಗಿತ್ತು. ದಾವುರಾಮನ ಪ್ರಕಾರ, ಅತ್ತೆಯೊಬ್ಬಳು ಸೊಸೆಯನ್ನು ಬೈಯುತ್ತ ಧುಮುಗುಡುತ್ತ ನಡೆದಳಂತೆ. ಅದುವೇ ಸದರಿ ಒಣಗಿದ ಹೊಳೆಯಾಯಿತಂತೆ (ಸಿನಿಮಾಗಳಿಂದ ಹಿಡಿದು ಜನಪದ ಕತೆಗಳತನಕ ಪಾಪದ ಅತ್ತೆಯೇ ವಿಲನ್!). ಅತ್ತೆಕಾಟ ತಡೆಯಲಾರದೆ ಮನೆಬಿಟ್ಟು ಅಳುತ್ತ ಹೋದ ಸೊಸೆಯ ಕಣ್ಣೀರು ಹರಿದು ಸದಾ ಜಲವಿರುವ ಬನಾಸ್ ಹೊಳೆಯಾಯಿತಂತೆ. ನಿಸರ್ಗದ ವಿದ್ಯಮಾನಗಳನ್ನು ಕೌಟುಂಬಿಕ ಸಂಬಂಧಗಳಿಗೆ ಸಮೀಕರಿಸುವುದು ಬುಡಕಟ್ಟು ಸಂಸ್ಕೃತಿಯ ಜಾಯಮಾನವಿರಬೇಕು.

ವಿಶೇಷವೆಂದರೆ, ನಮ್ಮ ಅರಣ್ಯ ಪ್ರವೇಶ ಮತ್ತು ನಿರ್ಗಮನದ ತಾಣಗಳಾದ ರಣಕಪುರ ಮತ್ತು ಘಾಣೇರಾವಗಳು ಪ್ರಾಚೀನವಾದ ಬಸದಿಗಳಿಗೂ ಖ್ಯಾತವಾಗಿದ್ದವು. ಅಮೃತಶಿಲೆಯಿಂದ ಗೇಯಲ್ಪಟ್ಟ ಇವು ಹಚ್ಚಗಿನ ವನಭಿತ್ತಿಯಲ್ಲಿ ಗಡ್ಡೆಹಾಕಿಟ್ಟ ಹಿಮರಾಶಿಯಂತೆ, ಹಸಿರುಗಡಲಲ್ಲಿ ತೇಲುವ ಬಿಳಿಯ ಹಡಗುಗಳಂತೆ ಥಟ್ಟನೆ ಪ್ರತ್ಯಕ್ಷವಾದವು. ಇವು ಅರಾವಳಿಯನ್ನು ಭೇದಿಸಿಕೊಂಡು ಹೋಗುವ ವಣಿಕ ಪಥದಲ್ಲಿ ಚಲಿಸುತ್ತಿದ್ದ ವಣಿಕರಿಗೂ ಜೈನಮುನಿಗಳಿಗೂ ಆಶ್ರಯದಾಣಗಳಾಗಿ ಕೆಲಸ ಮಾಡಿರಬೇಕು. ಇವನ್ನು ಕಟ್ಟಿಸಿದವರೂ ವಣಿಕರೇ. ಇದೇ ಸೀಮೆಯ ಊರುಗಳ ಭೂಮಿಕೆಯಲ್ಲಿ ನಡೆಯುವ ನಮ್ಮ `ವಡ್ಡಾರಾಧನೆ’ಯ ಕಥೆಗಳಲ್ಲಿ, ವಣಿಕರ ಕಾರವಾನಿನ ಜತೆ ಯಾತ್ರಿಕರು ಹೋಗುವ, ದರೋಡೆಕೋರರಿಗೆ ಬಲಿಯಾಗುವ ಸನ್ನಿವೇಶಗಳು ನನಗೆ ನೆನಪಾದವು. ಸೇನೆಯೂ ಸನ್ಯಾಸಿಗಳೂ ವಣಿಕರ ಕಾರವಾನುಗಳೂ ಸಂಚರಿಸುತ್ತಿದ್ದ ಅರಾವಳಿಯ ಕಲ್ಲುಹಾಸಿನ ಪ್ರಾಚೀನ ಪಥವು ನಮಗೆ ಅಲ್ಲಲ್ಲಿ ಎದುರುಗೊಳ್ಳುತ್ತಿತ್ತು. ಅದನ್ನೀಗ ಜೀಪ್ ಸಫಾರಿಗಾಗಿ ಮರಾಮತ್ತು ಮಾಡಲಾಗಿದೆ. ಮೇವಾಡದ ದೊರೆಗಳ ಮೃಗಯಾವಿನೋದಕ್ಕೆ ಕಟ್ಟಲಾದ ಅಟ್ಟಣಿಗೆ ಮತ್ತು ಭವನಗಳು, ಪ್ರಾಣಿಗಣತಿ ಮಾಡುವ ಪರಿಸರ ವಿಜ್ಞಾನಿಗಳ ಡೇರೆಗಳಾಗಿ ಬಳಕೆಯಾಗುತ್ತಿವೆ.

ಚಾರಣದುದ್ದಕ್ಕೂ ನೂರಾರು ಹಕ್ಕಿಗಳ ಕಲರವ ಆಲಿಸಿದೆವು. ಅವಕ್ಕೆ ಬೇಕಾದ ಬಾರೆ, ಅತ್ತಿ, ಸೀತಾಫಲ, ಆಲ, ಬಸಿರಿ, ನೆಲ್ಲಿಯ ಮರಗಳೂ ಅಲ್ಲಿದ್ದವು. ದಾವುರಾಂ ಹಾದಿಯುದ್ದಕ್ಕೂ ಸೀತಾಫಲಗಳನ್ನು ಕಿತ್ತುಕೊಟ್ಟು ನಮ್ಮ ಜೋಳಿಗೆಗಳನ್ನು ತುಂಬಿಸಿದನು. ಕಾಡಂಚಿನ ಊರುಗಳಲ್ಲೂ ಸೀತಾಫಲ ಮಾರುವ ಬುಡಕಟ್ಟು ಜನ ಸಾಲುಗಟ್ಟಿ ಕೂತಿದ್ದರು. ದೊಡ್ಡಬುಟ್ಟಿಗೆ ಐವತ್ತು ರೂಪಾಯಿ. ಸರ್ಕಾರ ಕಾಡುತ್ಪತ್ತಿಯ ಸಂಗ್ರಹವನ್ನು ನಿಷೇಧಿಸಿದೆ. ಆದರೂ ಜೇನಿಗಾಗಿ ಕಡಿದುರುಳಿಸಿದ ಮರಗಳು ಕಂಡವು. ತಿನ್ನುವ ಅಂಟಿಗಾಗಿ ಕಚ್ಚಹಾಕಿಸಿಕೊಂಡ ದಿಂಡುಗದ ಮರಗಳು ಗಾಯಾಳುಗಳಾಗಿದ್ದವು. ಇದೆಲ್ಲ ಅರಾವಳಿಯ ಜತೆ ಶತಮಾನಗಳಿಂದ ಬದುಕುತ್ತ ಬಂದವರು ಮಾಡುವ ಸಹಜಬಾಳ್ವೆಯ ಭಾಗವಾಗಿದ್ದವು.

ಅರಾವಳಿಯ ಮೇಲೆ ನಿಜವಾದ ಯುದ್ಧಸಾರಿದ ಸಂಗತಿಗಳು ಬೇರೆಯೇ ಇದ್ದವು. ಮರುಭೂಮಿಗೆ ಹಸಿರತೇಪೆ ಹಾಕಿದಂತಿರುವ ಅರಾವಳಿ ಕಾಡುಗಳು, ಶ್ವಾಸಕೋಶಗಳೆಂದೇ ಸರ್ಕಾರ ಅವನ್ನು ಕಾಪಿಟ್ಟಿದೆ. ಆದರದು ವನ್ಯಜೀವಿಗಳ ಏಕಾಂತವನ್ನು ಕಸಿವ ಸಫಾರಿಯನ್ನೂ ನಡೆಸುತ್ತಿದೆ (ತೆರೆದ ಜೀಪುಗಳಲ್ಲಿ ಸಫಾರಿಗರು ಕೇಕೆ ಹಾಕಿಕೊಂಡು ಎದುರಾಗುತ್ತಿದ್ದರು). ಕಾಡಂಚಿನಲ್ಲಿ ರೆಸಾರ್ಟುಗಳಿಗೂ ಅಮೃತಶಿಲೆಯ ಕ್ವಾರಿಗಳಿಗೂ ಅನುಮತಿ ನೀಡಿದೆ. ಗಣಿಗಾರಿಕೆಯಿಂದ ಸಂಡೂರಿನ ಬೆಟ್ಟಗಳು ರಕ್ತಸಿಕ್ತವಾಗಿ ಕಾಣುವಂತೆ, ಅರಾವಳಿಯ ಬೆಟ್ಟಗಳು ಕಲ್ಲಗೆತದಿಂದ ಕೀವುಸೋರುವ ದೇಹದಂತೆ ಬಿಳಿಚಿಕೊಂಡಿದ್ದವು. ಜೋಧಪುರ-ಉದಯಪುರ ರಸ್ತೆಯ ಎರಡೂ ಬದಿ, ಅಮೃತಶಿಲೆಯ ನೂರಾರು ಉದ್ಯಮಗಳಿಂದ ಬಿಳೀದೂಳಿನ ಹೊಗೆ ಆಗಸಕ್ಕಡರಿತ್ತು.

ಅರಾವಳಿಯಲ್ಲಿ ಬುಡಕಟ್ಟು ಜನರ ಕೃಷಿ ಹಿಡುವಳಿಗಳೂ ಇವೆ. ಹಾದಿಯಲ್ಲಿ ಸಿಕ್ಕ ತನ್ನ ಮನೆಗೆ ದಾವುರಾಂ ಕರೆದೊಯ್ದು ಚಹ ಕುಡಿಸಿದನು. ದೊಡ್ಡಬೆಟ್ಟದಿಂದ ನೀರು ಜಿನುಗುವ ಕಣಿವೆಯಲ್ಲಿ ಅವನ ಜಮೀನಿತ್ತು. ಅದರೊಳಗೆ ವಯಸ್ಸಿನಿಂದ ಹಣ್ಣಾದ ಅವನಪ್ಪನಿದ್ದನು. ಸಾಸಿವೆಪೈರು ಗೇಣುದ್ದವಿತ್ತು. ದಾವುರಾಂ `ಮೆಕ್ಕೆಜೋಳ ಹಾಕಿದರೆ ಹಂದಿಗಳು ಸತ್ಯಾನಾಸ್ ಮಾಡುತ್ತವೆ’ ಎಂದು ಶಪಿಸಿದನು. ಅರಣ್ಯ ಇಲಾಖೆಯಲ್ಲಿರುವ ಆತನ ವನ್ಯಮೃಗ ಸಂರಕ್ಷಕ ಕರ್ತವ್ಯಪ್ರಜ್ಞೆಗೂ ಬೆಳೆರಕ್ಷಿಸುವ ರೈತಾಪಿಪ್ರಜ್ಞೆಗೂ ಸಂಘರ್ಷ ನಡೆಯುತ್ತಿತ್ತು. ಸಫಾರಿಗೊ ಚಾರಣಕ್ಕೊ ಬರುವ ನಗರವಾಸಿಗಳಿಗೆ ಹಾದಿತೋರಲು, ಅವರ ಫೋಟೊಗ್ರಫಿಗೆ ವಸ್ತುವಾಗಲು, ಅವರನ್ನು ಖುಶಿಪಡಿಸಲು ತಾಲೀಮು ಪಡೆದಿರುವ ಆತ, ಬೇಸಾಯಕ್ಕಿಂತ ಹೆಚ್ಚು ರಖಮು ತರುವ ನಾಗರಿಕ ಸಮಾಜದ ಸಹವಾಸಕ್ಕೆ ಹಾತೊರೆಯುತ್ತಿದ್ದನು. ನಾವು, ನಗರ ಬದುಕಿನ ಏತಕಾನತೆಯಿಂದ ಬೇಸತ್ತು, ಮೈಮನಗಳಿಗೆ ಮೆತ್ತಿಕೊಂಡಿರುವ ಮಂಕನ್ನು ಕಳೆದುಕೊಂಡು ಚೈತನ್ಯ ಪಡೆಯಲು ಕಾಡನ್ನು ಹೊಕ್ಕವರು. ನಮಗೆ ಬಿಡುಗಡೆಯಂತೆ ಕಾಣುವ ಕಾಡುಬೆಟ್ಟಗಳು, ಅದರೊಳಗೇ ಇರುವವರಿಗೆ ಬಂಧನವಾಗಿವೆಯೇ? ಇದೊಂದು ವೈರುಧ್ಯಕರ ಸೆಳೆತಗಳ ಮುಖಾಮುಖಿ. ಅರಾವಳಿಯ ಕಾಡುಬೆಟ್ಟ ಖಗಮೃಗಳಿಗೆ ಬಾಯಿದ್ದಿದ್ದರೆ ಏನನ್ನುತ್ತಿದ್ದವೊ? ನಿಮ್ಮ ಸಫಾರಿ ಕ್ವಾರಿ ಚಾರಣ ಹೊಲಗದ್ದೆ ರೆಸಾರ್ಟು ಎಲ್ಲವೂ ನಮ್ಮ ಪಾಲಿನ ಪೀಡೆಗಳೆಂದೇ? ಹೊಸ ಅನುಭವವನ್ನೂ ಇನ್ನಿಲ್ಲದ ಆನಂದವನ್ನೂ ಕೊಟ್ಟ ಅರಾವಳಿ, ಕಳವಳದ ಪ್ರಶ್ನಾವಳಿಯನ್ನೂ ಹುಟ್ಟಿಸಿ ಕಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT