ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಂಗಿಯ ನೆಪದಲ್ಲಿ...

ಅಖಿಲೇಶ್‌ ಚಿಪ್ಲಿ
Published 24 ಮಾರ್ಚ್ 2024, 0:13 IST
Last Updated 24 ಮಾರ್ಚ್ 2024, 0:13 IST
ಅಕ್ಷರ ಗಾತ್ರ

ತಲೆ ಬಗ್ಗಿಸಿಕೊಂಡು ರೋಗಿಯ ಹೆಸರು ಬರೆದುಕೊಳ್ಳುತ್ತಿದ್ದ ಶುಶ್ರೂಕಿಗೆ ‘ಪಡೀಲ್’ ಎಂಬ ಶಬ್ಧ ಕೇಳಿಬಂತು. ವರ್ಣಮಯವಾದ ಹಕ್ಕಿಯೊಂದು ವೇಗವಾಗಿ ಬಂದು ಒಂದು ಇಂಚು ದಪ್ಪದ ಪಾರದರ್ಶಕ ಗಾಜಿಗೆ ಡಿಕ್ಕಿಯಾಗಿತ್ತು. ಅತಿವೇಗವಾಗಿ ಡಿಕ್ಕಿಯಾದ ಕಾರಣಕ್ಕೆ ಮೆದುಳಿನಲ್ಲಿ ರಕ್ತಸ್ರಾವವಾಗಿ ಒಂದು ನಿಮಿಷದಲ್ಲಿ ಸತ್ತೇ ಹೋಯಿತು. ಬಣ್ಣ ಬಣ್ಣದ ಹಕ್ಕಿಯೊಂದು ಗಾಜಿಗೆ ಬಡಿದು ಸತ್ತಿದ್ದು ಶುಶ್ರೂಕಿಯರಿಗೆ ಬೇಸರ ತರಿಸಿತು. ಸತ್ತು ಹೋದ ಹಕ್ಕಿಯು ಗುಬ್ಬಿಗಿಂತ ದೊಡ್ಡದಾದ ಮತ್ತು ಕಾಮನಬಿಲ್ಲಿಗಿಂತ ಹೆಚ್ಚಿನ ಬಣ್ಣವುಳ್ಳ ಹಕ್ಕಿಯಾಗಿತ್ತು. ‘ಇಂಡಿಯನ್ ಪಿಟ್ಟಾ’ ಹೆಸರಿನ ಈ ಪಕ್ಷಿಯನ್ನು ಕನ್ನಡದಲ್ಲಿ ‘ನವರಂಗಿ’ ಎಂದು ಕರೆಯುತ್ತಾರೆ. ಹಿಮಾಲಯ ತಪ್ಪಲಿನಲ್ಲಿ ವಾಸಿಸುವ ಹಕ್ಕಿಯಿದು. ಅಲ್ಲಿ ಚಳಿಗಾಲದಲ್ಲಿ ಹಿಮ ಬೀಳುತ್ತದೆ. ಹಾಗಾಗಿ ಸೂಕ್ತ ಪ್ರದೇಶವನ್ನರಸಿ ಪಶ್ಚಿಮಘಟ್ಟಕ್ಕೆ ವಲಸೆ ಬರುತ್ತವೆ. ಹೆಸರೇ ಹೇಳುವಂತೆ ಇದಕ್ಕೆ ಒಂಬತ್ತು ಬಣ್ಣ, ಹಾಗಾಗಿ ಇದು ನವರಂಗಿ! 

ಈಗೀಗಂತೂ ಐಷಾರಾಮಿಯಾಗಿ ಕಾಣಬೇಕೆಂದು ಕಟ್ಟಡಗಳಿಗೆ ದಪ್ಪ ದಪ್ಪ ಪಾರದರ್ಶಕ ಗಾಜುಗಳನ್ನು ಅಳವಡಿಸುತ್ತಾರೆ. ವೇಗವಾಗಿ ಹಾರುವ ಪಕ್ಷಿಗಳಿಗೆ ಪಾರದರ್ಶಕ ಗಾಜನ್ನು ಗುರುತಿಸಲು ಆಗುವುದಿಲ್ಲ. ಗಾಜಿಗೆ ತಲೆ ಬಡಿದು, ತೀವ್ರ ಆಂತರಿಕ ರಕ್ತಸ್ರಾವ ಆಗಿ ಪ್ರಾಣ ಬಿಡುತ್ತವೆ. ಹಿಮಾಲಯದಿಂದ ಮೂರು ಚಿಲ್ಲರೆ ಸಾವಿರ ಕಿಲೊಮೀಟರ್‌ ದೂರವನ್ನು ಯಾವುದೇ ಅಪಾಯವಿಲ್ಲದೇ ದಾಟಿ ಬಂದ ಪಕ್ಷಿ ಮನುಷ್ಯ ಆವಾಸಸ್ಥಾನಕ್ಕೆ ಬಂದು ಅಪಘಾತಕ್ಕೆ ಜೀವ ಕಳೆದುಕೊಂಡಿತು. ಗಾಜಿಗೊಂದು ಗಾಢ ಬಣ್ಣವಿದ್ದಿದ್ದರೆ ‘ನವರಂಗಿ’ ಬದುಕಿಕೊಳ್ಳುತ್ತಿತ್ತು. ಶುಶ್ರೂಕಿಯರು ವಿಷಯ ತಿಳಿಸುವ ಹೊತ್ತಿಗಾಗಲೇ ಇರುವೆ ಪಡೆಗಳು ಹಕ್ಕಿಯನ್ನು ವಿಘಟಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು.

ಪ್ರತಿ ವರ್ಷ ಅಮೆರಿಕದಲ್ಲಿ ಒಂದು ಕೋಟಿ ಪಕ್ಷಿಗಳು ಮನೆ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಅಳವಡಿಸಿದ ಗಾಜುಗಳಿಗೆ ಬಡಿದು ಸಾಯುತ್ತವೆ. ಕೆನಡಾದಲ್ಲಿ ಅರ್ಧಕೋಟಿ ಪಕ್ಷಿಗಳು ಹೀಗೆ ಸಾಯುತ್ತವೆ ಎಂದು ಅಧ್ಯಯನಗಳು ತಿಳಿಸುತ್ತವೆ. ಭಾರತದಲ್ಲಿ ಈ ತರಹದ ಅಪಾಯಗಳ ಕುರಿತಾಗಿ ಯಾರೂ ಗಂಭೀರವಾಗಿ ಚಿಂತಿಸುತ್ತಿಲ್ಲ.

ನಗರಗಳಲ್ಲಿ ಅಳಿದುಳಿದ ಹಸಿರು ಪ್ರದೇಶದಲ್ಲಿ ಬಹಳಷ್ಟು ಪಕ್ಷಿಗಳು ತಮ್ಮ ನೆಲೆಯನ್ನು ಕಂಡುಕೊಳ್ಳುತ್ತವೆ. ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಬದುಕಲು ಹರಸಾಹಸ ಪಡುತ್ತವೆ. ಸಾಮಾನ್ಯವಾಗಿ ನಗರಕ್ಕೆ ಹೋಲಿಸಿದರೆ, ಹಳ್ಳಿಗಳಲ್ಲಿ ನಿರ್ಮಿಸುವ ಆಧುನಿಕ ಕಟ್ಟಡಗಳ ಗಾಜುಗಳಿಗೆ ಪಕ್ಷಿಗಳು ಡಿಕ್ಕಿ ಹೊಡೆದು ಸಾಯುವುದು ಹೆಚ್ಚು. ಅಂದರೆ, ಪಕ್ಷಿಗಳ ಸಾಂದ್ರತೆ ಹೆಚ್ಚಿದ್ದಲ್ಲಿ, ಈ ತರಹದ ಅಪಘಾತಗಳು ಜಾಸ್ತಿಯಾಗಿರುತ್ತದೆ. ಪಾರದರ್ಶಕ ಗಾಜುಗಳನ್ನು ಪಕ್ಷಿಗಳು ಗುರುತಿಸಲು ಸಾಧ್ಯವಾಗದ ಕಾರಣಕ್ಕೆ ಈ ರೀತಿಯ ಅಪಘಾತ ಸಂಭವಿಸಿದರೆ, ತೀರಾ ಕನ್ನಡಿಯಂತೆ ಪ್ರತಿಫಲನ ನೀಡುವ ಗಾಜುಗಳಿಗೆ ಬಡಿದು ಸಾಯುವ ಪಕ್ಷಿಪ್ರಬೇಧಗಳು ಕಮ್ಮಿಯೇನಲ್ಲ. ಬೃಹತ್ ಗಾಜಿನಲ್ಲಿ ಎದುರುಭಾಗದಲ್ಲಿ ಇರುವ ಮರಗಳ ಪ್ರತಿಫಲನ ಕಾಣುತ್ತದೆ. ಪ್ರತಿಫಲನ ನೀಡುವ ಗಾಜುಗಳು ಮರಗಳೇ ಎಂದು ಭ್ರಮಿಸುವ ಪಕ್ಷಿಗಳೂ ಅಪಘಾತಕ್ಕೆ ಈಡಾಗುವುದನ್ನು ಪಕ್ಷಿತಜ್ಞರು ದಾಖಲಿಸಿದ್ದಾರೆ.
ರಾಜ್ಯದ ಪಶ್ಚಿಮಘಟ್ಟದ ಕಾಡಲ್ಲಿ ಕಂಡು ಬರುವ ಮತ್ತು ವೇಗವಾಗಿ ಹಾರುವ ಹರಳುಚೋರೆ ಹಕ್ಕಿ, ಜೌಗು ಪ್ರದೇಶದಲ್ಲಿ ಕಂಡು ಬರುವ ಮಿಂಚುಳ್ಳಿ, ರಾಮಗಿಳಿ, ಚಿಟ್ಟುಗಿಳಿ ಮುಂತಾದ ಪಕ್ಷಿಗಳು, ಹೂವಿನ ಮಕರಂದ ಕುಡಿಯಲು ಬರುವ ಹೂ ಹಕ್ಕಿಗಳು ಈ ತರಹದ ಅಪಘಾತಕ್ಕೆ ಸಾಮಾನ್ಯವಾಗಿ ಬಲಿಯಾಗುತ್ತವೆ. ವಿವಿಧ ಕಾರಣಕ್ಕೆ ಬೇರೆಡೆಯಿಂದ ವಲಸೆ ಬರುವ ಪಕ್ಷಿಗಳ ಪಥದಲ್ಲಿ ದಿಢೀರೆಂದು ಅಡ್ಡವಾಗುವ ಹೊಸ ಕಟ್ಟಡಗಳೂ ಹಕ್ಕಿಗಳ ಸಾವಿಗೆ ಕಾರಣವಾಗುತ್ತಿವೆ.

ಮನುಷ್ಯನ ಐಷಾರಾಮಿತನ, ನೋಡುವವರಿಗೆ ಮನೆ ಸುಂದರವಾಗಿ ಕಾಣಬೇಕು, ಗಾಳಿ–ಬೆಳಕು ಯಥೇಚ್ಛವಾಗಿ ಲಭಿಸಬೇಕು ಎಂಬ ಕಾರಣಕ್ಕೆ ಗಾಜಿನ ಕಿಟಕಿ, ಬಾಗಿಲುಗಳನ್ನು ಅಳವಡಿಸುವುದರಿಂದ ವೈವಿಧ್ಯಮಯ ಪಕ್ಷಿಗಳು ಬಲಿಯಾಗುತ್ತಿವೆ. ವರ್ಷಂಪ್ರತಿ ಹಲವು ಕೋಟಿ ಹಕ್ಕಿಗಳು ಸಾಯುತ್ತಿವೆ. ಇದಕ್ಕೆ ಪರಿಹಾರವೇನು?

ಪಾರದರ್ಶಕವಾದ ಗಾಜುಗಳ ಒಳಭಾಗದಲ್ಲಿ ಬಿಳಿಬಣ್ಣದ ಟೇಪುಗಳನ್ನು ಹಚ್ಚಬಹುದು ಅಥವಾ ಬಿಳಿಬಣ್ಣವನ್ನು ಬಳಿಯಬಹುದು. ಪರಿಸರ, ಪಕ್ಷಿಸ್ನೇಹಿ ಗಾಜುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಚಿಕ್ಕ ಚಿಕ್ಕ ಬಣ್ಣದ ವಿನ್ಯಾಸವಿರುವ ಗಾಜುಗಳನ್ನೇ ಅಳವಡಿಸುವಂತೆ ಮನೆ ಕಟ್ಟುವ ಗುತ್ತಿಗೆದಾರನಿಗೆ ಸೂಚಿಸಬೇಕು. 

ಅಮೆರಿಕ ಮತ್ತು ಕೆನಡಾಗಳಲ್ಲಿ ಅಪಾರ ಸಂಖ್ಯೆಯ ಪಕ್ಷಿಗಳು ಮನೆ ಮತ್ತು ವಾಣಿಜ್ಯ ಕಟ್ಟಡಗಳ ಗಾಜುಗಳಿಗೆ ಬಡಿದು ಸಾಯುವ ವಿದ್ಯಮಾನವನ್ನು ಗಂಭೀರವಾಗಿ ಪರಿಗಣಿಸಿ 2012ರಲ್ಲಿ ಪಕ್ಷಿಸ್ನೇಹಿ ಕಟ್ಟಡಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ನಿಯಮಗಳನ್ನು ಜಾರಿಗೆ ತಂದಿವೆ. ಹಳೆ ಕಟ್ಟಡಗಳ ವಿನ್ಯಾಸಗಳನ್ನು ಬದಲಿಸಿ, ಹೊಸ ಪಕ್ಷಿಸ್ನೇಹಿ ವಿನ್ಯಾಸ ರೂಪಿಸುವ ನಿಟ್ಟಿನಲ್ಲಿ ತಕ್ಕ ನಿಯಮಗಳನ್ನು ಜಾರಿ ಮಾಡಿವೆ.

ಭಾರತದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ (1972)ರ ಪರಿಚ್ಛೇದಡಿಯಲ್ಲಿ ಬರುವ ಪಕ್ಷಿಗಳನ್ನು ಸಾಯಿಸುವುದು, ಸಾಕುವುದು, ವ್ಯಾಪಾರ ಮಾಡುವುದು ಇತ್ಯಾದಿಗಳನ್ನು ಅಪರಾಧವೆಂದು ಪರಿಗಣಿಸಿಲಾಗುತ್ತದೆ. ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ಕಾನೂನು ಕ್ರಮವನ್ನು ಜರುಗಿಸಿದಲ್ಲಿ ಅಪರಾಧಿಗಳಿಗೆ ಶಿಕ್ಷೆಯೂ ಆಗಬಹುದು. ಆದರೆ, ಸಂರಕ್ಷಣಾ ಕಾನೂನಿನ ಪರಿಚ್ಛೇದ ಅಡಿಯಲ್ಲಿ ಬರುವ ಪಕ್ಷಿಗಳು ಗಾಜಿಗೆ ಬಡಿದು ಸತ್ತರೆ ಏನು ಕ್ರಮ ತೆಗೆದುಕೊಳ್ಳಬಹುದು ಎಂಬ ಕುರಿತು ಸ್ಪಷ್ಟತೆಯಿಲ್ಲ. ವಿದ್ಯುತ್ ತಂತಿ ಹರಿಸಿ, ಆನೆ, ಕಾಟಿಗಳನ್ನೇ ಕೊಂದು ಹಾಕುವ ಮತ್ತು ಕಾನೂನು ಕುಣಿಕೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುವ ದೇಶದಲ್ಲಿ ನಾವಿರುವಾಗ, ಪಕ್ಷಿಗಳ ಬಗ್ಗೆ ಅವುಗಳ ದುರಂತಗಳ ಕುರಿತು ಯೋಚಿಸುವ ಮನಃಸ್ಥಿತಿಯನ್ನು ಅಪೇಕ್ಷಿಸುವುದು ದುಬಾರಿ ಆದೀತು. ಸರ್ಕಾರಗಳೇ ಈ ನಿಟ್ಟಿನಲ್ಲಿ ನಿರ್ದಿಷ್ಟವಾದ ಬಿಗಿಯಾದ ಕಾನೂನು ರೂಪಿಸಿ ಜಾರಿಗೆ ತರುವುದೊಂದೇ ಪರಿಹಾರ.

ಹೀಗಿದ್ದಾಳೆ ನವರಂಗಿ!
ಬಲಿಷ್ಠವಾದ ಉದ್ದಕಾಲುಗಳು ಗಿಡ್ಡವಾದ ಬಾಲ ಗಟ್ಟಿಯಾದ ಕೊಕ್ಕು ಕೊಕ್ಕಿನ ಬುಡದಿಂದ ತಲೆಯ ಹಿಂಭಾಗದವರೆಗೆ ತಿಳಿಕಪ್ಪು ಪಟ್ಟಿ ಬಿಳಿಬಣ್ಣದ ಗಂಟಲು ಹಾಗೂ ಕತ್ತು ರೆಕ್ಕೆಯ ಮೇಲ್ಬಾಗದಲ್ಲಿ ಗಾಢ ಹಸುರು ಬಣ್ಣ ನೀಲಿ ಬಣ್ಣದ ಬಾಲ ಕೆಳಭಾಗವು ಕಂದು ಹಾಗೂ ಹೊಟ್ಟೆಯಿಂದ ಬಾಲದವರೆಗೆ ಕಡುಗೆಂಪು ಬಣ್ಣ. ಜೂನ್ ತಿಂಗಳಿಂದ ಆಗಸ್ಟ್‌ವರೆಗೆ ಅವು ಮೊಟ್ಟೆಯಿಟ್ಟು ಮರಿ ಮಾಡುವ ಕಾಲವಾಗಿದ್ದು ನೆಲದ ಮೇಲೆ ಅಥವಾ ಕೆಲವು ಬಾರಿ ನೆಲಮಟ್ಟದ ಗಿಡಗಳ ಮೇಲೆ ಒಣಗಿದ ಎಲೆ ಮತ್ತು ಹುಲ್ಲನ್ನು ಬಳಸಿಕೊಂಡು ಗೋಳಾಕಾರದ ಗೂಡನ್ನು ರಚಿಸುತ್ತದೆ. ನಾಲ್ಕರಿಂದ ಐದು ನೇರಳೆ ಚುಕ್ಕಿಯಿರುವ ಬಿಳಿಮೊಟ್ಟೆಗಳನ್ನು ಇಡುತ್ತದೆ. ದಟ್ಟಪೊದೆಗಳು ಎಲೆಯುದುರುವ ಕಾಡು ಹಾಗೂ ನಿತ್ಯಹರಿದ್ವರಣ ಕಾಡುಗಳಲ್ಲಿ ವಾಸಿಸುವ ‘ನವರಂಗಿ’ಗೆ ಉದುರಿದ ಎಲೆಗಳಡಿಯಲ್ಲಿ ಸಿಗುವ ಕೀಟಗಳೇ ಆಹಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT