ಹೊನ್ನಾವರದಲ್ಲಿ ಅದೆಷ್ಟು ಹೊನ್ನಿತ್ತೊ ಗೊತ್ತಿಲ್ಲ. ಆದರೆ ಅಲ್ಲೇ ಸಮೀಪದ ಅಪ್ಸರಕೊಂಡದ ಪಕ್ಕದ ಸಮುದ್ರದಲ್ಲಿ ಅಸಂಖ್ಯ ಅಪ್ಸರೆಯರನ್ನು ಈಗಲೂ ನೋಡಬಹುದು. ಉಬ್ಬರವಿಲ್ಲದಾಗ ಅಲ್ಲಿನ ಬಂಡೆಗಳ ನಡುವಣ ಮೊಣಕಾಲು ಆಳದ ನೀರಿನಲ್ಲಿ ಹವಳದ ಗುಪ್ಪೆಗಳ ಸುತ್ತ ಬಣ್ಣಬಣ್ಣದ ಮೀನುಗಳು, ಅಕ್ಟೊಪಸ್, ಸಮುದ್ರ ಸೌತೆ, ಸೀ ಎನಿಮೋನ್ಗಳನ್ನು ಕಾಣಬಹುದು. ಕತ್ತೆತ್ತಿದರೆ ನೆತ್ತಿಯ ಮೇಲೆ ನಾನಾ ಬಗೆಯ ಪಕ್ಷಿಗಳ ಕಲರವ. ಕಾಲಬಳಿ ಮುತ್ತಿಕ್ಕಿ ಧಾವಿಸುವ ಬ್ಲೂ ಡ್ಯಾಮ್ಸೆಲ್ ಮೀನು. ಬಂಡೆಗಳಿಗೆ ಅರಳು ಎರಚಿದಂತೆ ಬಗೆಬಗೆಯ ಬಿಳಿಬಿಳಿ ಶಂಖಚಿಪ್ಪುಗಳು. ಬಂಡೆಗಳ ನಡುವಣ ಕೊರಕಲುಗಳಲ್ಲಿ ಸಂಚಯವಾಗುವ ಉಪ್ಪನ್ನು ನೆಕ್ಕಲು ದಡದಂಚಿನ ಕಾಡಿನಿಂದ ಆಗೀಗ ಉಡ, ಮುಳ್ಳುಹಂದಿ, ಮೊಲ, ಕಬ್ಬೆಕ್ಕುಗಳ ಮೆರವಣಿಗೆ.

ನಟ ಪುನೀತ್ ರಾಜ್ಕುಮಾರ್ ತಮ್ಮ ಕೊನೆಯ ಚಿತ್ರ ‘ಗಂಧದ ಗುಡಿ’ಯಲ್ಲಿ ಸಮುದ್ರಕ್ಕೆ ಡೈವ್ ಹೊಡೆದು ಮನಮೋಹಕ ಮತ್ಸ್ಯಲೋಕವನ್ನು ನೋಡುವ ದೃಶ್ಯ ಇದೆಯಲ್ಲ? ಅದನ್ನೂ ಅಪ್ಸರಕೊಂಡದ ಸಮೀಪದ ನೇತ್ರಾಣಿ ದ್ವೀಪದ ಬಳಿ ಚಿತ್ರೀಕರಿಸಲಾಗಿತ್ತು. ಇನ್ನೂ ತುಸು ಆಳಕ್ಕಿಳಿದರೆ ಅಲ್ಲಿ ನಾಲ್ಕು ಬಗೆಯ ಶಾರ್ಕ್ಗಳಿವೆ, ತಿಮಿಂಗಿಲಗಳಿವೆ.

ಅಪ್ಸರಕೊಂಡ-ಕಾಸರಕೋಡ್ನ ಎರಡು ಕಿಲೊಮೀಟರ್ ಉದ್ದದ ಕಡಲಪಟ್ಟಿಗೆ ಅಂತರರಾಷ್ಟ್ರೀಯ ಮಾನದಂಡದ ಪ್ರಕಾರ ‘ಬ್ಲೂ ಫ್ಲಾಗ್ ಬೀಚ್’ ಮಾನ್ಯತೆ ಸಿಕ್ಕಿದೆ. ನಮ್ಮ ದೇಶದ ಸುಂದರ, ಸುರಕ್ಷಿತ, ಸಂರಕ್ಷಿತ ಹಾಗೂ ಸುಸ್ಥಿರ ಪರಿಸರವುಳ್ಳ 12 ಬೀಚ್ಗಳಲ್ಲಿ ಇದೂ ಒಂದು. ಇಲ್ಲೇ ಆಲಿವ್ ರಿಡ್ಲೆ ಆಮೆಗಳು ಬಂದು ಮೊಟ್ಟೆ ಇಟ್ಟು ಹೋಗುತ್ತವೆ. ಇಲ್ಲೇ ಅರಣ್ಯ ಇಲಾಖೆಯ ಇಕೋ ಪಾರ್ಕ್ ಇದೆ; ಅಪರೂಪದ ಕಾಂಡ್ಲಕಾಡು ಇದೆ. ಅದರಂಚಿನ ಶರಾವತಿ ಅಳಿವೆಯಲ್ಲಿ ನಿಮಗೆ ಅದೃಷ್ಟವಿದ್ದರೆ ಡಾಲ್ಫಿನ್ಗಳು ನೀರಿನಿಂದ ಮೇಲೆದ್ದು ನರ್ತಿಸಿ ಮುಳುಗುವುದನ್ನೂ ನೋಡಬಹುದು. ಈಗ ದೊಡ್ಡ ಖಾಸಗಿ ಬಂದರು ಕಟ್ಟಲು ನಿಗದಿತವಾದ ‘ಟೊಂಕ’ ಎಂಬ ಮೀನುಗಾರರ ಹಳ್ಳಿಯ ಸುತ್ತ ಎರಡು ಕಿಲೊಮೀಟರ್ ವೃತ್ತವನ್ನು ಗುರುತಿಸಿದರೆ ‘ಅದರೊಳಕ್ಕೆ ಬರುವ ಜೀವಿವೈವಿಧ್ಯ ದೇಶದ ಬೇರೆಲ್ಲೂ ಕಾಣುವುದು ವಿರಳ’ ಎನ್ನುತ್ತಾರೆ, ಬಂದರುಕಟ್ಟೆ ಬೇಡವೆಂದು ಒತ್ತಾಯಿಸುತ್ತಿರುವ ಜೀವವಿಜ್ಞಾನಿ ಪ್ರಕಾಶ್ ಮೇಸ್ತ.

ಜೀವಿವೈವಿಧ್ಯ ಎಂದರೆ ಇದು. ಕರ್ನಾಟಕದಲ್ಲಿ ಹಿಮಪಾತವಿಲ್ಲ ಎಂಬುದನ್ನು ಬಿಟ್ಟರೆ ಮಳೆಕಾಡು, ಮರುಭೂಮಿ, ಹುಲ್ಲುಗಾವಲು, ಶೃಂಗಭೂಮಿ, ಶೋಲಾ ಕಾಡು, ಅಳಿವೆ, ಸಮುದ್ರ ಎಲ್ಲವೂ ಇವೆ. ಅವಕ್ಕೆ ಹೊಂದಿಕೊಂಡ ಅಸಂಖ್ಯ ಜೀವಿಗಳು ಇಲ್ಲಿ ವಿಕಾಸವಾಗಿವೆ. ಸುಲಭಕ್ಕೆ ಎದ್ದು ಕಾಣುವ ಅಪರೂಪದ ಜೀವಿ ಸಮೂಹಕ್ಕೆ ನಾವು ಆಶ್ರಯಧಾಮಗಳನ್ನೂ ನಿರ್ಮಿಸಿದ್ದೇವೆ. ಹುಲಿ, ಆನೆಗಳನ್ನು ಬಿಡಿ, ದೇಶದಲ್ಲೇ ಮೊದಲನೆಯದೆನ್ನಿಸುವ ಕರಡಿಧಾಮ, ಮಂಗಟ್ಟೆವನ, ನೀರುನಾಯಿ ಕಟ್ಟೆ, ಸಿಂಗಳೀಕಗಳ ರಕ್ಷಾಕಾಡು ನಮ್ಮಲ್ಲಿವೆ. ರಂಗನತಿಟ್ಟು, ಅಘನಾಶಿನಿ ಅಳಿವೆ, ಅಂಕಸಮುದ್ರ ಮತ್ತು ಗದಗ ಜಿಲ್ಲೆಯ ಮಾಗಡಿ ಕೆರೆ ಹೀಗೆ ಅಂತರರಾಷ್ಟ್ರೀಯ ಮಾನ್ಯತೆ ಪಡೆದ ‘ರಾಮ್ಸಾರ್’ ತಾಣಗಳೂ ನಮ್ಮಲ್ಲಿವೆ.

ನಾವು ಹೆಮ್ಮೆಯಿಂದ ಬೆರಳೆತ್ತಿ ತೋರಿಸಬೇಕಾದ ರಕ್ಷಾಧಾಮಗಳು ಇವು. ಹಾಗೇ, ಯಾರ ರಕ್ಷಣೆಯನ್ನೂ ಬೇಡದ ನೀಲಕುರಿಂಜಿ ಬೇಣಬೆಟ್ಟಗಳಿವೆ. ಮಳೆಗಾಲದಲ್ಲಿ ಪಶ್ಚಿಮಘಟ್ಟಗಳಲ್ಲಿ ಸಿಡಿಲು- ಗುಡುಗಿಗೆ ಅರಳುವ ಅಪರೂಪದ ಅಣಬೆಗಳಿವೆ. ಅಲ್ಲಿ ಈ ದಿನಗಳಲ್ಲಿ ಸೃಷ್ಟಿಯಾಗುವ ಜಲಪಾತಗಳ ಸಿಂಚನದಲ್ಲಿ ವಿಶಿಷ್ಟ ಕೀಟಭಕ್ಷಕ ಸಸ್ಯಗಳು ಮೈದಳೆಯುತ್ತವೆ. ಇವಿಷ್ಟೇ ಅಲ್ಲ, ರಕ್ಷಣೆಗಾಗಿ ಕಾದಿರುವ, ಮೌನವಾಗಿ ಕಣ್ಮರೆಯಾಗುತ್ತಿರುವ ಅಪರೂಪದ ಜೀವನಿಧಿಗಳು ಇನ್ನೂ ತುಂಬಾ ಇವೆ. ಅವು ನಮ್ಮ ನೆಲದಿಂದ ನಾಪತ್ತೆಯಾದರೆ ಜಗತ್ತಿನ ಬೇರೆಲ್ಲೂ ಸಿಗಲಾರವು.

ಅಂಥವುಗಳ ರಕ್ಷಣೆಗೆಂದೇ ನಮ್ಮ ದೇಶದಲ್ಲಿ ‘ಜೀವಿವೈವಿಧ್ಯ ಕಾನೂನು’ 2002ರಲ್ಲಿ ಜಾರಿಗೆ ಬಂದಿದೆ. ಪ್ರತಿ ರಾಜ್ಯದಲ್ಲೂ ‘ಜೀವಿವೈವಿಧ್ಯ ಮಂಡಳಿ’ ಅಸ್ತಿತ್ವಕ್ಕೆ ಬಂದಿದೆ. ಪ್ರತಿ ಜಿಲ್ಲೆ, ಪ್ರತಿ ತಾಲ್ಲೂಕು, ಪ್ರತಿ ಪಂಚಾಯಿತಿಯಲ್ಲೂ ಜೀವನಿಧಿಯ ರಕ್ಷಣಾ ಸಮಿತಿಗಳು ಇರಬೇಕೆಂದು ಕಾನೂನಿನಲ್ಲಿ ಹೇಳಲಾಗಿದೆ. ಅದರ ಮಹತ್ವವನ್ನು ಸಾರಲೆಂದು ಪ್ರೊ. ಮಾಧವ ಗಾಡ್ಗೀಳರು ಟೊಂಕಕಟ್ಟಿ ಕರ್ನಾಟಕದಲ್ಲಿ ಊರೂರು ತಿರುಗಿದರು. ಯುವಜನರನ್ನು ಪ್ರೇರೇಪಿಸಿ ಪಂಚಾಯಿತಿ ಮಟ್ಟದಲ್ಲಿ ಜೀವಿವೈವಿಧ್ಯ ಸಮೀಕ್ಷೆ ಮತ್ತು ದಾಖಲಾತಿಯ ವಿಧಿವಿಧಾನಗಳನ್ನು ಕಲಿಸಿದರು. ಸಮೀಕ್ಷೆಗೆ ಹೋದವರು ‘ನಮ್ಮೂರಲ್ಲಿ ಇವೆಲ್ಲ ಇವೆಯಾ!’ ಎಂದು ಅಚ್ಚರಿಪಡುತ್ತ ದಾಖಲಾತಿ ನಡೆಸಿದರು.

ಅಂಥ ‘ಜೀವಿವೈವಿಧ್ಯ ದಾಖಲಾತಿ’ಯ ಮಹತ್ವ ಹೀಗಿದೆ. ಉದಾಹರಣೆಗೆ ಉಂಚಳ್ಳಿಯ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ಯಾವುದೇ ಸಸ್ಯ, ಕೀಟ ಅಥವಾ ಜಲಜೀವಿಯನ್ನು ಯಾವುದೇ ಔಷಧ ಕಂಪನಿ ತನ್ನ ಲಾಭಕ್ಕಾಗಿ ಕದ್ದು ಬಳಸುವಂತಿಲ್ಲ. ಏಕೆಂದರೆ ಅದು ತನ್ನ ಆಸ್ತಿಯೆಂದು ಆ ಪಂಚಾಯಿತಿ ದಾಖಲಿಸಿ ಇಟ್ಟಿದೆ. ಖಟ್ಲೆ ಹಾಕಿದರೆ ಗೆಲುವು ಪಂಚಾಯಿತಿಯದೇ ಗ್ಯಾರಂಟಿ. ನಮ್ಮ ಜೀವಿವೈವಿಧ್ಯ ಕಾನೂನು ಅಷ್ಟು ಸಶಕ್ತವಾಗಿದೆ.

ಇದಕ್ಕೊಂದು ಪ್ರಖ್ಯಾತ ನಿದರ್ಶನ ಇದೆ: ಉಡುಪಿಯ ಮಟ್ಟುಗುಳ್ಳದ ಅಂಶವನ್ನು ಎತ್ತಿಕೊಂಡು ಮಾನ್ಸಾಂಟೊ ಕಂಪನಿ ಬಿಟಿ ಬದನೆಯನ್ನು ರೂಪಿಸಲು ಹೊರಟಿತು. ಜನಾಕ್ರೋಶ ಎಷ್ಟೇ ಇದ್ದರೂ ಏನೂ ಮಾಡಲು ಸಾಧ್ಯವಿರಲಿಲ್ಲ.

ಆಗ ಇದೇ ಜೀವವೈವಿಧ್ಯ ಮಂಡಳಿಯ ಕಾರ್ಯದರ್ಶಿಯಾಗಿದ್ದ ಕೆ.ಎಸ್. ಸುಗಾರ ದಾವೆ ಹೂಡಿದರು. ಮಂಡಳಿಯ ಅನುಮತಿ ಇಲ್ಲದೆ ಬದನೆಯನ್ನು ಪ್ರಯೋಗಕ್ಕೆ ಬಳಸಿದ ಮಾನ್ಸಾಂಟೊ ಮತ್ತು ಅದಕ್ಕೆ ನೆರವಾದ ವಿಜ್ಞಾನಿಗಳ ವಿರುದ್ಧ ಹೂಡಿದ ಆ ದಾವೆಯಿಂದಾಗಿಯೇ ವಿದೇಶೀ ಕಂಪನಿಗೆ ಪರಭಾರೆ ಆಗುವುದು ತಪ್ಪಿತು. ಜೈವಿಕ ಸಂಪತ್ತನ್ನು ಕದ್ದ ಆರೋಪಿಗಳಿಗೆ ‘ಬೇಲ್ ಕೂಡ ಸಿಗುವುದಿಲ್ಲ’ ಎನ್ನುತ್ತಾರೆ, ನಿವೃತ್ತ ಅರಣ್ಯಾಧಿಕಾರಿ ಸುಗಾರ.

ಇನ್ನೊಂದು ಉದಾಹರಣೆಯನ್ನು ನೋಡಿ: ದಾವಣಗೆರೆ ಬಳಿಯ ದೊಡ್ಡವಾಡ ಕೆರೆಯ ಹೂಳೆತ್ತಲು ಆದೇಶ ಬಂತು. ಸರಿ, ಅವಸರದಲ್ಲಿ ಇದ್ದಬದ್ದ ನೀರನ್ನು ಖಾಲಿ ಮಾಡಲೆಂದು ಕಟ್ಟೆಯನ್ನೇ ಒಡೆಯುವ ಕೆಲಸ ಆರಂಭವಾಯಿತು (ಅಂಥ ಅರೆಬರೆ ಕೆಲಸದ ಉದಾಹರಣೆಗಳು ಬೇಕಷ್ಟಿವೆ). ‘ಹಾಗೆ ಮಾಡಬೇಡಿ, ತಳದ ವೈವಿಧ್ಯಮಯ ಜಲಜೀವಿಗಳು ನಾಶವಾಗುತ್ತವೆ’ ಎಂದು ವನ್ಯಪ್ರೇಮಿಗಳು, ವಿಜ್ಞಾನಿಗಳು ದನಿಯೆತ್ತಿದರೂ ಪ್ರಯೋಜನವಾಗಲಿಲ್ಲ. ಆಗ ಮಧ್ಯಪ್ರವೇಶ ಮಾಡಿದ್ದು ಇದೇ ಜೀವಿವೈವಿಧ್ಯ ಕಾನೂನು. ಅಂತೂ ಕೆರೆ ಖಾಲಿ ಯೋಜನೆಗೆ ತಡೆಯಾಜ್ಞೆ ಬಂತು.

ನಮ್ಮ ಜೀವಸಂಪತ್ತಿನ ರಕ್ಷಣೆಗೆ ಅರಣ್ಯ ಕಾಯಿದೆ ಇದೆ; ಪರಿಸರ ರಕ್ಷಣಾ ಕಾಯಿದೆ ಇದೆ ನಿಜ. ಆದರೆ ಇವೆರಡಕ್ಕಿಂತ ‘ಜೀವಿವೈವಿಧ್ಯ ಕಾನೂನು’ ಭಿನ್ನವಾಗಿದೆ. ಶಿಂಷಾ ಬಳಿಯ ಕಾವೇರಿ ಮಡುವಿನಲ್ಲಿ ಪುಂಡರು ಡೈನಮೈಟ್ ಸ್ಫೋಟಿಸುತ್ತಾರೆ. ಸಾವಿರಾರು ಮೀನುಗಳು ಸತ್ತು ತೇಲುತ್ತವೆ. ತಮಗೆ ಬೇಕಿದ್ದುದನ್ನು ಮಾತ್ರ ಎತ್ತಿಕೊಂಡು ಉಳಿದ ಮೃತಜೀವಿಗಳನ್ನು ಹಾಗೇ ಬಿಟ್ಟು ಹೋಗುತ್ತಾರೆ. ನದಿಯ ಆ ಭಾಗವನ್ನು ‘ಸಂರಕ್ಷಿತ ಪ್ರದೇಶ’ವೆಂದು ಘೋಷಣೆ ಮಾಡುವ ಅಧಿಕಾರ ಈ ಮಂಡಳಿಗೆ ಮಾತ್ರ ಇದೆ. ದೊಡ್ಡವಾಡ ಕೆರೆಯನ್ನು ಗುತ್ತಿಗೆದಾರರು ಖಾಲಿ ಮಾಡದಂತೆ ತಡೆಯುವ ಅಧಿಕಾರ ಅರಣ್ಯ ಕಾಯಿದೆಗೂ ಇಲ್ಲ; ಪರಿಸರ ಕಾಯಿದೆಗೂ ಇಲ್ಲ. ಇದಕ್ಕಿತ್ತು.

ಜೀವವೈವಿಧ್ಯ ಮಂಡಳಿ ಅಂಥ ಅನೇಕ ಜೀವಧಾಮಗಳಿಗೆ ರಕ್ಷಣಾ ‘ಬೇಲಿ’ಯನ್ನು ಒದಗಿಸಿದೆ. ಬೆಂಗಳೂರಿನ ಸಮೀಪ 600 ವರ್ಷಗಳಷ್ಟು ಹಳೆಯದಾದ ನೆಲ್ಲೂರು ಹುಣಿಸೆ ತೋಪು (ಇದರ ಬೃಹತ್ ಚಿತ್ರವೊಂದು ಹೊಸ ವಿಮಾನ ನಿಲ್ದಾಣದಲ್ಲಿದೆ) ಈಗ ಸುರಕ್ಷಿತವಾಗಿದೆ. ಹಾಗೇ ಕೋಲಾರದ ಅಂತರಗಂಗೆ, ಕುಮಾರಧಾರಾದ ಉರುಂಬಿ ಮಡು, ನೆಲಮಂಗಲದ ಮಹಿಮಾರಂಗನ ಬೆಟ್ಟ, ಚಿಕ್ಕಮಗಳೂರಿನ ಹೊಗರೆಕಾನು, ಬೆಂಗಳೂರಿನ ಜಿಕೆವಿಕೆ, ಶಿವಮೊಗ್ಗದ ಅಂಬಾರಗುಡ್ಡಗಳೂ ಈ ಪಟ್ಟಿಯಲ್ಲಿವೆ. ‘ನಾವು ರಾಜ್ಯದ ಹನ್ನೊಂದು ನದಿಕೊಳ್ಳಗಳ ಭಾಗಗಳನ್ನು ಮತ್ತು ನಾಲ್ಕು ಜೀವಿವೈವಿಧ್ಯತಾಣಗಳನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಿದ್ದೇವೆ. ಇನ್ನೂ ಅಂಥ ಇಪ್ಪತ್ತೇಳು ಅಮೂಲ್ಯ ತಾಣಗಳನ್ನು ಗುರುತಿಸಿದ್ದೇವೆ. ಆದರೆ ಘೋಷಣೆ ಆಗಬೇಕಾಗಿದೆ’ ಎನ್ನುತ್ತಾರೆ, ಹಿಂದೆ ಈ ಮಂಡಳಿಯ ಅಧ್ಯಕ್ಷರಾಗಿದ್ದ ಅನಂತ ಅಶೀಸರ. ‘ಯಲ್ಲಾಪುರದ ಸಮೀಪದ ದೇಹಳ್ಳಿಯಲ್ಲಿ ಮರ-ಅರಿಸಿನದ ಒಂದು ಕಾಡೇ ಇದೆ ಗೊತ್ತೆ? ಬನವಾಸಿಯ ಬಳಿ ಒಂದೂವರೆ ಎಕರೆ ವಿಸ್ತಾರದ ಏಕೈಕ ಬಿಳಲಿ ಮರ ಇದೆ; ರಾಜ್ಯದ ಅತಿದೊಡ್ಡ ಬೀಟೆ ಮರ ಎಲ್ಲಿದೆ ಗೊತ್ತೆ?’ ಎಂದು ಅವರು ಕೇಳುತ್ತಾರೆ.

ಅವೆಲ್ಲ ಎಲ್ಲರಿಗೂ ಗೊತ್ತಿರದೇ ಇರುವುದೇ ಕ್ಷೇಮ ಅನ್ನಿ! ಗೊತ್ತಾದರೆ ಹೊರಟುಬಿಡುತ್ತಾರೆ, ಕ್ಯಾಮರಾ, ಬಾಟಲಿ, ಗುಟ್ಕಾ ಪ್ಯಾಕೆಟ್ ಹಿಡಿದು. ಅಂಥ ತಾಣಗಳಿಗೆ ಹೊಣೆಗೇಡಿ ಪ್ರವಾಸಿಗರಿಂದ ರಕ್ಷಣೆ ಬೇಕು. ಕಳ್ಳಕಾಕರಿಂದ, ಜೀವದ್ರವ್ಯಗಳ ದಲ್ಲಾಳಿಗಳಿಂದ ಅವುಗಳಿಗೆ ರಕ್ಷಣೆ ಬೇಕು. ಸದ್ದಿಲ್ಲದೆ ಆಕ್ರಮಿಸುವ ಲಂಟಾನಾ, ಯುಪಟೋರಿಯಂ ಮುಂತಾದ ದಾಳಿಕೋರ ಜೀವಿಗಳಿಂದ ರಕ್ಷಣೆ ಬೇಕು.

ಆದರೆ ಈಚೆಗೆ ಜೀವವೈವಿಧ್ಯ ಮಂಡಳಿಗೆ ನಾಯಕನೇ ಇಲ್ಲ. ರಾಜ್ಯದ ಎಲ್ಲ ಮಂಡಳಿ, ನಿಗಮಗಳಿಗೆ ನೇಮಕಾತಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ನೀಡಿಲ್ಲ. ಹಾಗಾಗಿ ಸದಾ ಚುರುಕಾಗಿ ಇರಬೇಕಿದ್ದ ಈ ಮಂಡಳಿಯ ಯುವ ವಿಜ್ಞಾನಿಗಳು ಕೈಕಟ್ಟಿ ಕೂತಿದ್ದಾರೆ. ಕಡತಗಳು ರೆಕ್ಕೆ ಮುದುರಿ ಕಪಾಟುಗಳಲ್ಲಿ ಕೂತಿವೆ. ಅರಣ್ಯ ಸಚಿವ ಈಶ್ವರ ಖಂಡ್ರೆಯವರೇ ತಾತ್ಕಾಲಿಕ ಅಧ್ಯಕ್ಷರಾಗಿದ್ದಾರೆ. ಅವರಿಗೆ ಬಿಡುವಿಲ್ಲ. ನಿಜಕ್ಕೂ ಅವರು ಆ ಕುರ್ಚಿಯಲ್ಲಿ ತುಸು ಹೊತ್ತು ಕೂತರೂ ಅದೆಂಥ ಮ್ಯಾಜಿಕ್ ಆಗಬಹುದು ಎನ್ನುವುದಕ್ಕೂ ಒಂದು ಉದಾಹರಣೆಯನ್ನು ಅನಂತ ಅಶೀಸರ ಕೊಡುತ್ತಾರೆ:
ವಿಜಯಪುರದಲ್ಲಿ ಸಂತ ಸಿದ್ದೇಶ್ವರ ಸ್ವಾಮೀಜಿ ಹೆಸರಿನಲ್ಲಿ ಒಂದು ಜೀವಧಾಮವನ್ನು ಸೃಷ್ಟಿಸಬೇಕೆಂಬ ಸಲಹೆ ಬಂತು. ಖಂಡ್ರೆಯವರು ಓಕೆ ಎಂದು ಗಟ್ಟಿಯಾಗಿ ನಿರ್ಧರಿಸಿದ್ದೇ ತಡ, ಸರ್ಕಾರದ ಕಾರ್ಯದರ್ಶಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಸರಸರ ಕಡತ ಓಡಿಸಿದರು. ಸಮೀಕ್ಷೆಗೆ ಸಿಬ್ಬಂದಿ ಧಾವಿಸಿದರು. ಅನಾಥವಾಗಿ ಬಿದ್ದಿದ್ದ 1400 ಎಕರೆ ಭಣಗುಡುವ ಭೂಮಿಗೆ ಒಂದೇ ತಿಂಗಳಲ್ಲಿ ರಕ್ಷಣಾ ಘೋಷಣೆ ಬಂತು. ಫಲಕ ಬಂತು. ಬೇಲಿ ಹಾಕಲು ಮಂಜೂರಾತಿ ಸಿಕ್ಕಿತು. ನಮ್ಮ ನೆಲದ ವಿಶೇಷ ಏನೆಂದರೆ ಎಲ್ಲೇ ರಕ್ಷಣಾಬೇಲಿ ಬಂದರೂ ಎಂಥ ಬರಭೂಮಿಯಲ್ಲೂ ಸಮೃದ್ಧ ವನ ತಂತಾನೇ ಸೃಷ್ಟಿ ಆಗಿಬಿಡುತ್ತದೆ. ಗಾಳಿ, ಮಳೆ, ಬಿಸಿಲು, ಇಬ್ಬನಿಗಳೇ ಬೀಜ ನೆಡುತ್ತವೆ, ಸಸ್ಯಪೋಷಣೆ ಮಾಡುತ್ತವೆ. ಇರುವೆ, ಜೇಡ, ಜೇನು, ಹಕ್ಕಿಪಕ್ಷಿ, ಉಡ, ಊಸರವಳ್ಳಿ, ಕಾಡಾಮೆಗಳೂ ನೆಲೆನಿಂತು ಕೈಕೈ ಜೋಡಿಸಿ ಅದನ್ನೊಂದು ಸ್ಮರಣವನ್ನಾಗಿ ಮಾಡಿಬಿಡುತ್ತವೆ.

ಖಂಡ್ರೆಯವರ ಬದಲು ಇನ್ಯಾರೋ ಈ ಮಂಡಳಿಯ ಅಧ್ಯಕ್ಷರಾಗಿದ್ದರೆ ಅವರೆಷ್ಟೇ ಕಟಿಪಿಟಿ ಇದ್ದರೂ ಕಡತಗಳ ಓಡಾಟಕ್ಕೇ ವರ್ಷಗಟ್ಟಲೆ ಬೇಕು. ವಿಧಾನಸೌಧದ ಸೆಕ್ರೆಟರಿಗಳ ಮರ್ಜಿ ಕಾಯಬೇಕು. ಅದಕ್ಷ ಅಧ್ಯಕ್ಷರಿದ್ದರಂತೂ ಕಡತಗಳು ಆಮೆಗಳಾಗುತ್ತವೆ. ಆದರೂ ಅಧ್ಯಕ್ಷರೊಬ್ಬರು ಬೇಕು. ಈ ಮಂಡಳಿಯ ಹಿಂದಿನ ಕೆಲವು ಅಧ್ಯಕ್ಷರ ಚುರುಕು ಕೆಲಸಗಳಿಂದಾಗಿ, ಸಚಿವರು ಮತ್ತು ಸದಸ್ಯ ಕಾರ್ಯದರ್ಶಿಯ ಉತ್ಸಾಹ ಆಸಕ್ತಿಯಿಂದಾಗಿ ಕರ್ನಾಟಕದ ಜೀವಿ ವೈವಿಧ್ಯದ ಚಿತ್ರಣ ದೇಶದಲ್ಲೇ ಮಾದರಿಯದೆನಿಸಿತ್ತು. ಆ ಖ್ಯಾತಿ ಮತ್ತೆ ಮರುಕಳಿಸಬೇಕು. ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪರಿಸರ ರಕ್ಷಣೆಗೆ, ಜೀವಧನದ ರಕ್ಷಣೆಗೆ ಉತ್ಸಾಹ ತುಂಬಬೇಕು. ಶಾಲೆ ಕಾಲೇಜುಗಳ ಜೀವವಿಜ್ಞಾನ ಬೋಧಕರನ್ನು ಚುರುಕುಗೊಳಿಸಬೇಕು. ಜೀವಖಜಾನೆಗೆ ಲಗ್ಗೆ ಇಡಲು ಸದಾ ಹವಣಿಸುವ ಉದ್ಯಮಿಗಳ ವಿರುದ್ಧ ಹೋರಾಡಲು ಕಾನೂನುತಜ್ಞರನ್ನು ರೂಪಿಸಬೇಕು. ಮಂಡಳಿಯ ಸಿಬ್ಬಂದಿಯನ್ನು ನಿದ್ದೆಯಿಂದ ಎಬ್ಬಿಸಬೇಕು. ಸದ್ಯಕ್ಕಂತೂ ಅಪ್ಸರಕೊಂಡವನ್ನು (ಅದು ಅಭಿವೃದ್ಧಿಯ ಮಹಾರಥಕ್ಕೆ ಬಲಿಯಾಗುವ ಮೊದಲೇ) ತುರ್ತಾಗಿ ‘ಪಾರಂಪರಿಕ ಜೀವಿವೈವಿಧ್ಯ ಸಾಗರ ಸಂಗ್ರಹಾಲಯ’ ಎಂದು ಘೋಷಿಸಬೇಕು.

ಸಚಿವ ಖಂಡ್ರೆಯವರಿಗೆ ಉತ್ಸಾಹವಿದೆ. ಆದರೆ ಅವರಿಗಿರುವುದೂ ದಿನಕ್ಕೆ 24 ತಾಸು ಅಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.