ಗುರುವಾರ , ಜೂನ್ 30, 2022
24 °C

ಎಲೆಲೆ ಕೊಂಬು ಕೊಕ್ಕಿನ ಹಕ್ಕಿ

ಗೋಪಾಲಕೃಷ್ಣ ಹೆಗಡೆ ಬಾರೆ Updated:

ಅಕ್ಷರ ಗಾತ್ರ : | |

Prajavani

ಕಾಡಿನಲ್ಲಿ ಕ್ಯಾಮೆರಾ ಹೊತ್ತು ತಿರುಗುವಾಗ ದೊಡ್ಡ ಮರಗಳಲ್ಲಿ ಪೊಟರೆ ಹುಡುಕುವುದು ನನ್ನ ಪಾಲಿಗೆ ತಪ್ಪದ ಕೆಲಸವಾಗಿತ್ತು. ಏಕೆಂದರೆ, ಗಾಳಿಯಲ್ಲಿ ತೇಲುವ ‘ರಾಜ–ರಾಣಿ’ಯರು ‘ಲ್ಯಾಂಡ್‌’ ಆಗುತ್ತಿದ್ದ ಜಾಗವೇ ಅದಾಗಿತ್ತು. ಆ ತೇಲುವ ‘ರಾಜ–ರಾಣಿ’ಯರೇ ಈ ದಾಸ ಮಂಗಟ್ಟೆಗಳು (ಗ್ರೇಟ್‌ ಹಾರ್ನ್‌ಬಿಲ್ಸ್‌). ಅವುಗಳು ನನ್ನನ್ನು ಎಷ್ಟೊಂದು ಕಾಡಿದ್ದವೆಂದರೆ ನಾನು ಅವುಗಳ ದಾಸನಾಗಿಬಿಟ್ಟಿದ್ದೆ.

ನಮ್ಮ ಕಾಡಿನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಪಕ್ಷಿಗಳು ಇವೆ. ಅವುಗಳಲ್ಲಿ ವಿಶೇಷ ಪಂಗಡಕ್ಕೆ ಸೇರಿದ ಬಾನಾಡಿಗಳು ಇವು. ಇವುಗಳನ್ನು ಕಾಡಿನ ರೈತರು ಎಂದೂ ಕರೆಯುವುದುಂಟು. ಭಾರತದಲ್ಲಿ ಒಟ್ಟು ಒಂಬತ್ತು ಬಗೆಯ ಮಂಗಟ್ಟೆಗಳು ಕಂಡು ಬರುತ್ತವೆ. ಇವುಗಳಲ್ಲಿ ನಾಲ್ಕು ಪ್ರಭೇದಗಳು ನಮ್ಮ ರಾಜ್ಯದಲ್ಲಿವೆ. ಅದರಲ್ಲೂ ಅವುಗಳು ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿಯೇ ಹೆಚ್ಚಾಗಿ ಕಂಡುಬರುತ್ತವೆ.

ಹಾರ್ನ್‌ಬಿಲ್ ಎಂಬುದು ಲ್ಯಾಟಿನ್ ಭಾಷೆಯ ಪದ. ಹಾರ್ನ್ ಎಂದರೆ ಕೊಂಬು. ಬಿಲ್ ಎಂದರೆ ಕೊಕ್ಕು. ಇವೆರಡೂ ಪದಗಳು ಸೇರಿ ಹಾರ್ನ್‌ಬಿಲ್ ಎಂದಾಗಿದೆ. ಅಂದರೆ ಕೊಂಬು ಕೊಕ್ಕಿನ ಪಕ್ಷಿ ಎಂದರ್ಥ.

ದಾಸ ಮಂಗಟ್ಟೆ ಒಂಬತ್ತು ಬಗೆಯ ಮಂಗಟ್ಟೆಗಳಲ್ಲೇ ಅತಿ ಸುಂದರ ಪಕ್ಷಿ. ಇದರ ಉದ್ದ ಸುಮಾರು ನಾಲ್ಕು ಅಡಿ ಹಾಗೂ ಅಗಲ ಸುಮಾರು ಒಂದೂವರೆ ಅಡಿ. ಈ ಹಕ್ಕಿಗಳ ಪುಕ್ಕಗಳಲ್ಲಿ ಕಪ್ಪು ಮತ್ತು ಬಿಳಿ ಬಣ್ಣವೇ ಅಧಿಕ. ಇವುಗಳ ಕೊಕ್ಕುಗಳು ತಲೆಗಿಂತ ದೊಡ್ಡ ಗಾತ್ರ ಹೊಂದಿರುತ್ತವೆ. ಇದರ ಕೊಕ್ಕಿನದು ಹಳದಿ ಮತ್ತು ಕೆಂಪುಮಿಶ್ರಿತ ಬಣ್ಣ.

ಕಾಡಿನ ಮೇಲ್ಚಾವಣಿಯಲ್ಲಷ್ಟೇ ಅಲ್ಲದೆ, ದೊಡ್ಡದಾದ ಕಣಿವೆಗಳಲ್ಲೂ ಕಂಡುಬರುತ್ತದೆ ಈ ಪಕ್ಷಿ. ಇದು ಹಾರಾಡುವಾಗ ರೆಕ್ಕೆ ಬಡಿತದ ಶಬ್ದವು ಬಹಳ ದೂರದವರೆಗೂ ಕೇಳಿಬರುತ್ತದೆ. ಈ ಹಕ್ಕಿ ಹಾರಾಡುವುದನ್ನು ನೋಡುವುದೇ ಒಂದು ಸಂತೋಷದ ಕ್ಷಣ. ಗಂಡುಹಕ್ಕಿ ಗಾತ್ರದಲ್ಲಿ ಹೆಣ್ಣಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಗಂಡುಹಕ್ಕಿಯ ಕಣ್ಣಿನ ಬಣ್ಣ ಕೆಂಪು. ಕೆಂಪು ಕಣ್ಣಿನ ಸುತ್ತಲೂ ಕಪ್ಪು ಉಂಗುರ ಇರುತ್ತದೆ. ಆದರೆ, ಹೆಣ್ಣುಹಕ್ಕಿಯ ಕಣ್ಣಿನ ಬಣ್ಣ ಬಿಳಿ ಮತ್ತು ಕಣ್ಣಿನ ಸುತ್ತ ಕೆಂಪು ಉಂಗುರ ಇರುತ್ತದೆ.

ದಾಸ ಮಂಗಟ್ಟೆಗಳು ಆಲ, ಗೋಣಿ, ಅತ್ತಿ, ಬಸರಿ, ರಾಮಪತ್ರೆ, ನೇರಳೆ ಹಣ್ಣುಗಳನ್ನು ತಿನ್ನುತ್ತವೆ. ಇವುಗಳಿಗೆ ಹಣ್ಣುಗಳು ಮಾತ್ರ ಆಹಾರವಲ್ಲ. ಹಾವು, ಇಲಿ, ಬಾವಲಿ, ಅಳಿಲು ಹಾಗೂ ಸಣ್ಣ ಹಕ್ಕಿಗಳ ಮೊಟ್ಟೆಗಳನ್ನೂ ಭಕ್ಷಿಸುತ್ತವೆ.

ಮಂಗಟ್ಟೆಗಳು ಮೊಟ್ಟೆ ಇಟ್ಟು ಮರಿಮಾಡಲು ಗೂಡು ಕಟ್ಟುವುದಿಲ್ಲ. ಇವು ಎತ್ತರದ ಮರಗಳಲ್ಲಿ ಸ್ವಾಭಾವಿಕವಾಗಿ ಇರುವ ದೊಡ್ಡ ಪೊಟರೆಗಳನ್ನು ಗೂಡಾಗಿ ಬಳಸಿಕೊಳ್ಳುತ್ತವೆ. ಡಿಸೆಂಬರ್‌ನಿಂದ ಜೂನ್ ತಿಂಗಳ ಅವಧಿಯಲ್ಲಿ ಅವುಗಳು ವಂಶಾಭಿವೃದ್ಧಿಯನ್ನು ಮಾಡುತ್ತವೆ. ಇವು ಸುಮಾರು 6–7 ವರ್ಷಗಳವರೆಗೆ ಮೊಟ್ಟೆ ಇಟ್ಟು ಮರಿಗಳನ್ನು ಮಾಡಲು ಒಂದೇ ಗೂಡನ್ನು ಬಳಸುತ್ತವೆ. ಸಂತಾನ ಅಭಿವೃದ್ಧಿ ಮಾಡುವ ಸುಮಾರು ಒಂದು ತಿಂಗಳ ಮುಂಚಿತವಾಗಿ ಗಂಡು ಮತ್ತು ಹೆಣ್ಣು ಜೊತೆಗೂಡಿ ಪೊಟರೆಯನ್ನು ಸ್ವಚ್ಛ ಮಾಡಿಕೊಳ್ಳುತ್ತವೆ. ಹೆಣ್ಣುಹಕ್ಕಿ ಮೊಟ್ಟೆ ಇಡಲು ಪೊಟರೆಯೊಳಗೆ ಹೋಗಿ ತನ್ನ ಸುಮಾರು 18ರಿಂದ 20 ಪುಕ್ಕಗಳನ್ನು ಬೀಳಿಸುತ್ತದೆ. ಅದರ ಮೇಲೆ ಒಂದು ಅಥವಾ ಎರಡು ಮೊಟ್ಟೆಗಳನ್ನು ಇಡುತ್ತದೆ. ಹೆಣ್ಣುಹಕ್ಕಿ ಪೊಟರೆಯೊಳಗೆ ಇರುವಾಗ ಗಂಡು ಹಕ್ಕಿಯು ಅದಕ್ಕೆ ಬೇಕಾದ ಆಹಾರವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ತಂದುಕೊಡುತ್ತದೆ.

ಇವುಗಳ ಕೊರಳಿನ ಭಾಗದಲ್ಲಿ ಚೀಲದಂತಹ ರಚನೆಯಿರುತ್ತದೆ. ಸುಮಾರು 140 ಆಲದ ಹಣ್ಣುಗಳನ್ನು ಸಂಗ್ರಹಿಸುವ ಸಾಮರ್ಥ್ಯವುಳ್ಳ ದೊಡ್ಡದಾದ ಚೀಲ ಅದು. ಹಣ್ಣು ಬಿಟ್ಟಿರುವ ಮರಗಳಲ್ಲಿ ಕುಳಿತು ಬೇಕಾದಷ್ಟು ಹಣ್ಣು ತಿಂದು ಬಳಿಕ ಇನ್ನಷ್ಟು ಹಣ್ಣುಗಳನ್ನು ಕಿತ್ತು ಗಂಟಲು ಚೀಲದೊಳಗೆ ತುಂಬಿಕೊಂಡು ಗೂಡಿನಲ್ಲಿರುವ ತಾಯಿ ಮತ್ತು ಮರಿಗೆ ನೀಡುತ್ತದೆ.

ಹೆಣ್ಣು ಹಕ್ಕಿಯು ಸುಮಾರು ಒಂದೂವರೆಯಿಂದ ಎರಡು ತಿಂಗಳು ಪೊಟರೆಯ ಒಳಗಡೆ ಇರುತ್ತದೆ. ಮರಿ ಆಹಾರ ತಿನ್ನುವಷ್ಟು ದೊಡ್ಡದಾದ ಮೇಲೆ ಪೊಟರೆಯಿಂದ ಹೆಣ್ಣುಹಕ್ಕಿ ಹೊರಗಡೆ ಬರುತ್ತದೆ. ತಾಯಿ ಹಕ್ಕಿ ಹೊರಗಡೆ ಬಂದ ನಂತರ ಸುಮಾರು ಒಂದು ತಿಂಗಳು ಮರಿ ಪೊಟರೆಯೊಳಗೆ ಬೆಳವಣಿಗೆ ಹೊಂದುತ್ತದೆ. ಆ ಸಮಯದಲ್ಲಿ ಗಂಡುಹಕ್ಕಿ ಮತ್ತು ಹೆಣ್ಣುಹಕ್ಕಿ ಸೇರಿ ತಮ್ಮ ಮರಿಗೆ ಆಹಾರವನ್ನು ನೀಡುತ್ತವೆ.

ದಾಸ ಮಂಗಟ್ಟೆ ವರ್ಷದಲ್ಲಿ ಒಂದು ಸಾರಿ ಮಾತ್ರ ಮರಿ ಮಾಡುತ್ತದೆ. ಮರಿ ಗೂಡಿನಿಂದ ಹೊರಗಡೆ ಬರುವ ದಿನ ನೋಡುಗರಿಗೆ ಹಬ್ಬದ ವಾತಾವರಣ. ಆಗ ಅದು ತನಗೆ ತಂದುಕೊಟ್ಟ ಆಹಾರವನ್ನು ತಿನ್ನದೆ ಹೊರಗೆ ಬಿಸಾಡುತ್ತದೆ. ಬಿಸಾಡಿದ ಆಹಾರವನ್ನು ಮತ್ತೆ ಅಪ್ಪ–ಅಮ್ಮ ತಂದು ಕೊಡುತ್ತವೆ. ಮರಿಗಳು ಹೀಗೆ ಮಾಡಲು ಕಾರಣ ‘ನಾನು ದೊಡ್ಡವನಾಗಿದ್ದೇನೆ. ನೀವು ಆಹಾರ ಕೊಡುವುದು ಬೇಡ. ನಾನು ಗೂಡಿನಿಂದ ಹೊರಗಡೆ ಬಂದು ಆಹಾರ ತಿನ್ನುತ್ತೇನೆ’ ಎಂಬುದಾಗಿ ಇರಬಹುದು. ಇದಾದ ನಂತರ ಸುಮಾರು ಒಂದು ಗಂಟೆಯಲ್ಲಿ ಮರಿ ಗೂಡಿನಿಂದ ಹೊರಕ್ಕೆ ಬರುತ್ತದೆ. ಮರಿ ಗೂಡಿನಿಂದ ಹೊರಗೆ ಬರುವಾಗ ಅದಕ್ಕೆ ಕೊಂಬು ಇರುವುದಿಲ್ಲ. ಗೂಡಿನಿಂದ ಹೊರಗೆ ಬಂದ ಎರಡು ತಿಂಗಳಿಗೆ ಕೊಂಬು ಬರುತ್ತದೆ. ಮರಿ ಗೂಡಿನಿಂದ ಹೊರಗಡೆ ಬಂದಮೇಲೆ ಅಪ್ಪ–ಅಮ್ಮ ಒಟ್ಟಾಗಿ ಸುಮಾರು ಹದಿನೈದು ದಿನ ಹಾರಾಟವನ್ನು, ಆಹಾರ ಹುಡುಕಿ ತಿನ್ನುವುದನ್ನು ಕಲಿಸುತ್ತವೆ.

ಮಂಗಟ್ಟೆ ರಕ್ಷಣೆ ಬೇಡುವ ಪಕ್ಷಿಗಳು. ಆವಾಸ ಸ್ಥಾನಗಳ ಕೊರತೆ, ಆಹಾರಗಳ ಸಮಸ್ಯೆ, ಬೇಟೆಗಾರರ ಭಯ ಹಾಗೂ ವಾತಾವರಣದ ಅಸ್ಥಿರತೆ ಅವುಗಳಿಗೆ ಸವಾಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು