ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆ ಹುಲಿ ಬೇಟೆಗಾರರ ಸೆರೆಹಿಡಿದ ಸಿಬ್ಬಂದಿ ಕಾರ್ಯಕ್ಕೆ ಜಾವಡೇಕರ್‌ ಮೆಚ್ಚುಗೆ

Last Updated 7 ಸೆಪ್ಟೆಂಬರ್ 2020, 15:32 IST
ಅಕ್ಷರ ಗಾತ್ರ

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕಲ್ಲಹಳ್ಳ ವಲಯದಲ್ಲಿ ಈಚೆಗೆ ಹುಲಿಯೊಂದನ್ನು ಗುಂಡಿಟ್ಟು ಕೊಂದಿದ್ದ ಐವರು ಆರೋಪಿಗಳನ್ನು ಬಂಧಿಸಿರುವ ಅರಣ್ಯಾಧಿಕಾರಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವ ಪ್ರಕಾಶ್ ಜಾವಡೇಕರ್‌ ಟ್ವೀಟ್‌ ಮಾಡಿದ್ದಾರೆ.

‘ಕಡಿಮೆ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಇದಕ್ಕಾಗಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳಿಗೆ ಅಭಿನಂದನೆಗಳು’ ಎಂದಿದ್ದಾರೆ.

ಆರೋಪಿಗಳ ಪತ್ತೆಗಾಗಿ ಬಂಡೀಪುರದ ವಿಶೇಷ ಹುಲಿ ಸಂರಕ್ಷಣಾ ಪಡೆಯ ‘ರಾಣಾ’ ಎಂಬ ಶ್ವಾನವನ್ನು ಕರೆ ತರಲಾಗಿತ್ತು. ಅನುಮಾನ ಬಂದ ಪ್ರದೇಶಕ್ಕೆ ತೆರಳಿ ಪರಿಶೀಲಿಸಿದಾಗ ಈ ಶ್ವಾನವು ಸಂತೋಷ್ ಎಂಬ ಕೂಲಿ ಕಾರ್ಮಿಕನ ಮನೆಗೆ ಹೋಗಿತ್ತು. ಮಂಚದಡಿ ಜಿಂಕೆ ಮಾಂಸ ಸಿಕ್ಕಿತ್ತು. ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಹುಲಿಯನ್ನು ಬೇಟೆಯಾಡಿರುವುದು ಖಚಿತವಾಗಿತ್ತು.

ಆರೋಪಿಗಳಿಂದ ಹುಲಿಯ 13 ಉಗುರು, 2 ಕೋರೆ ಹಲ್ಲು ಹಾಗೂ 2 ಬೈಕ್ ಮತ್ತು ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿತ್ತು.

‘ರಾಣಾ’ ಸಾಹಸ: ಅರಣ್ಯ ಅಕ್ರಮ ಪತ್ತೆಯಲ್ಲಿ ಪಳಗಿರುವ ‘ರಾಣಾ’, ಜರ್ಮನ್‌ ಶಫರ್ಡ್‌ ತಳಿಯಾಗಿದ್ದು ನಿವೃತ್ತಿ ಸನಿಹದಲ್ಲೂ ಸಾಹಸ ಮೆರೆದಿದೆ. ಈ ಶ್ವಾನಕ್ಕೆ ನಿವೃತ್ತಿ ನೀಡಬೇಕೆಂದು ಅಧಿಕಾರಿಗಳು ಶಿಫಾರಸು ಮಾಡಿದ್ದಾರೆ. ಆದರೆ, ಹುಲಿ ಬೇಟೆಗಾರರನ್ನು ಪತ್ತೆ ಮಾಡುವ ಮೂಲಕ ಅದು ತನ್ನ ಸಾಮರ್ಥ್ಯ ಕುಂದಿಲ್ಲ ಎಂಬ ಸಂದೇಶ ರವಾನಿಸಿದೆ. ಈ ಶ್ವಾನಕ್ಕೆ ಈಗ ಏಳು ವರ್ಷ. ಕಾಳ ಕಾಳ್ಕರ್‌ ಎಂಬುವವರು ಈ ಶ್ವಾನವನ್ನು ನೋಡಿಕೊಳ್ಳುತ್ತಿದ್ದಾರೆ.

ರಾಣಾ

ತೀಕ್ಷ್ಣ ಬುದ್ಧಿ ಹಾಗೂ ಚುರುಕುತನದಿಂದಾಗಿ ಅರಣ್ಯ ಇಲಾಖೆಯಲ್ಲಿ ಮನೆ ಮಾತಾಗಿರುವ ‘ರಾಣಾ’, ಅಧಿಕಾರಿಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದ ಹಲವು ಪ್ರಕರಣಗಳನ್ನೂ ಭೇದಿಸಿದೆ. 2015ರಲ್ಲಿ, ಇಲ್ಲಿಗೆ ಬರುವ ಮುನ್ನ ಮಧ್ಯಪ್ರದೇಶದ ಭೋಪಾಲ್‌ನ ವಿಶೇಷ ಸಶಸ್ತ್ರ ಮೀಸಲು ಪಡೆಯಲ್ಲಿ ಅರಣ್ಯ ಅಪರಾಧ ಪತ್ತೆಗೆ ಸಂಬಂಧಿಸಿದಂತೆ 11 ತಿಂಗಳು ತರಬೇತಿ ಪಡೆದಿತ್ತು. ಹುಲಿ ಮತ್ತು ಚಿರತೆ ಮೂಳೆ ಪತ್ತೆ, ಜಿಂಕೆ ಮಾಂಸ ಪತ್ತೆ, ಹಾವು, ಜೀವಂತ ಪಕ್ಷಿಗಳನ್ನು ಪ್ಯಾಕ್‌ ಮಾಡಿದರೂ ವಾಸನೆಯಿಂದಲೇ ಪತ್ತೆ ಮಾಡುವ ಚಾಲಾಕಿತನ ಹಾಗೂ ಸಾಮರ್ಥ್ಯ ಹೊಂದಿದೆ. ಸುಮಾರು 22 ಪ್ರಕರಣಗಳಲ್ಲಿ ಪತ್ತೆ ಕಾರ್ಯಕ್ಕೆ ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT