ಶನಿವಾರ, ಡಿಸೆಂಬರ್ 7, 2019
22 °C

ನೀವು ಜಿಗಿಯುವ ಕಪ್ಪೆ ಕೇಳಿದ್ದೀರಿ; ಹಾರುವ ಕಪ್ಪೆ ಬಗ್ಗೆ ಗೊತ್ತೇ?

Published:
Updated:
Prajavani

ನೀವು ಜಿಗಿಯುವ ಕಪ್ಪೆ ಕೇಳಿದ್ದೀರಿ. ಆದರೆ, ಹಾರುವ ಕಪ್ಪೆಯ ಬಗ್ಗೆ ಕೇಳಿದ್ದೀರೇ? ಈ ಹಾರುವ ಕಪ್ಪೆಯ ಹೆಸರೇ ಮಲಬಾರಿನ ಹಾರುವ ಕಪ್ಪೆ (Malbar Flying Frog). ಈ ಕಪ್ಪೆಯನ್ನು 1870ರಲ್ಲಿ ಕಂಡು ಹಿಡಿದ ಜರಡೋನ ಎಂಬ ವಿಜ್ಞಾನಿ ಇದಕ್ಕೆ ಮಲಬಾರಿನ ಹಾರುವ ಕಪ್ಪೆ ಎಂದು ನಾಮಕರಣ ಮಾಡಿದರು. ಇವು ಪಶ್ಚಿಮ ಘಟ್ಟದ ಬೆಟ್ಟಗುಡ್ಡಗಳ ಸಾಲುಗಳಲ್ಲಿ ಇವುಗಳು ಹೆಚ್ಚಾಗಿ ಕಂಡು ಬರುವುದರಿಂದ ಇದನ್ನು ಮಲಬಾರಿನ ಹಾರುವ ಕಪ್ಪೆ ಎಂದು ಹೆಸರಿಸಿದರು. ವಿಜ್ಞಾನಿಗಳು ಬಾಲವಿಲ್ಲದ ಕಾರಣ, ಈ ಕಪ್ಪೆಯನ್ನು Anura ವರ್ಗಕ್ಕೆ ಸೇರಿಸಿ ಹಾಗೂ ಮರವಾಸಿ ಇರುವುದರಿಂದ Rachophoridae ಕುಟುಂಬಕ್ಕೆ ಸೇರಿಸಿದ್ದಾರೆ.

ಈ ಕಪ್ಪೆಯು ಸೊಳ್ಳೆಗಳು, ಇರುವೆಗಳು, ಜೀರುಂಡೆಗಳನ್ನು ಆಹಾರವಾಗಿ ತಿನ್ನುತ್ತದೆ. ಇದು 2ರಿಂದ 10 ಸೆಂ.ಮೀ ಉದ್ಧವಿದ್ದು 10–20 ಗ್ರಾಂ ತೂಕವಿರುತ್ತದೆ. ಈ ಪ್ರಭೇದಗಳು ಪಶ್ಚಿಮ ಘಟ್ಟದ ಜಿಲ್ಲೆಗಳಾದ ಉತ್ತರ ಕನ್ನಡ, ಚಾಮರಾಜನಗರ, ಮೈಸೂರು, ಕೊಡಗು, ದಕ್ಷಿಣ ಕನ್ನಡ ಮತ್ತು ಹಾಸನ, ಶಿವಮೊಗ್ಗ ಜಿಲ್ಲೆಗಳಲ್ಲಿ ಕಂಡು ಬರುತ್ತವೆ.

ಈ ಕಪ್ಪೆಯ ದೇಹದ ರಚನೆ ಬಗ್ಗೆ ಹೇಳಬೇಕೆಂದರೆ, ಹೊಟ್ಟೆಯ ಭಾಗ ಅಗಲವಿದ್ದು, ಉದ್ದನಾದ ಕಾಲು ಬೆರಳುಗಳ ನಡುವೆ ಜಾಲಪಾದಗಳು ಜೊತೆಯಾಗಿ ಜಾರಿಳಿಯುವ ವಿಧಾನವನ್ನು ರೂಢಿಸಿಕೊಂಡಿವೆ. ಹಾಗಾಗಿ ಇದರ ನೆರವಿನಿಂದ ಗಾಳಿಯಲ್ಲಿ ಜಾರಿ ಮರದ ರೆಂಬೆಗಳ ನಡುವೆ ಮರದಿಂದ ಮರಕ್ಕೆ ಸಾಮಾನ್ಯವಾಗಿ ಎತ್ತರ ಪ್ರದೇಶದಿಂದ ತಗ್ಗಾದ ಪ್ರದೇಶಕ್ಕೆ ಜಾರಿ ಚಲಿಸುತ್ತವೆ. ಇದುವೆ ಈ ಕಪ್ಪೆಯ ವಿಶೇಷವಾದ ಅದ್ಭುತ ವಿದ್ಯೆ. ಮರದಿಂದ ನೆಕ್ಕಿಳಿಯುವಾಗ ಸುಮಾರು 30–50 ಅಡಿಗಷ್ಟು ಹೆಚ್ಚು ದೂರ ಕ್ರಮಿಸಬಲ್ಲವು. ಹಾಗಾಗಿ ಇದನ್ನು ಮಲಬಾರಿನ ಹಾರುವ ಕಪ್ಪೆ ಎಂದು ಕರೆಯುತ್ತಾರೆ.

ಈ ಕಪ್ಪೆಯ ದೇಹ ಹಸಿರು ಮಿಶ್ರಿತ ಕಂದು ಬಣ್ಣ. ಇವು ಯಾವಾಗಲೂ ಮರಗಿಡಗಳ ನಡುವೆ ವಾಸಿಸುತ್ತವೆ. ಹಾಗಾಗಿ ಶತ್ರುಗಳಿಂದ ಪಾರಾಗಲೂ ಈ ಬಣ್ಣವನ್ನು ಹೊಂದಿರುತ್ತವೆ. ಇನ್ನೊಂದು ವಿಶೇಷವೆನೆಂದರೆ ಈ ಹಸಿರು ಮಿಶ್ರಿತ ಕಂದು ಬಣ್ಣ ಇರುವುದರಿಂದ ಕಾಡುಗಳಲ್ಲಿ ಬಹಳ ಬೇಗ ಕಪ್ಪೆಗಳು ತಮ್ಮ ಜಾತಿಯ ಸಂಗಾತಿಗಳನ್ನು ಆಕರ್ಷಿಸುತ್ತವೆ.

ಸಂತಾನೋತ್ಪತ್ತಿಯಲ್ಲಿ ಗಂಡು ಮತ್ತು ಹೆಣ್ಣು ಸಂಗಾತಿಗಳು ರಾತ್ರಿ ಬಹಳ ಚುರುಕುತನದಿಂದ ಕೆಲಸ ಮಾಡುತ್ತವೆ. ಉಳಿದೆಲ್ಲಾ ಕಪ್ಪೆಗಳಂತೆ ಈ ಕಪ್ಪೆಗಳು ಕೂಡ ಮಳೆಗಾಲದಲ್ಲಿ ಸಂತಾನೋತ್ಪತ್ತಿ ನಡೆಸುತ್ತವೆ. ಇವು ಮರವಾಸಿ. ಸಂತಾನೋತ್ಪತ್ತಿಗಾಗಿ ನೀರಿನ ಕಡೆಗೆ ಬರುತ್ತವೆ. ಗಂಡು ತನ್ನ ಹೆಣ್ಣು ಸಂಗಾತಿಯನ್ನು ಸೆಳೆಯಲು ಟ್ರಿ... ಟ್ರಿ... ಟ್ರಿ... ಎಂದು ಶಬ್ದ ಮಾಡಿ ಕರೆಯುತ್ತದೆ. ಹೆಣ್ಣು ಕಪ್ಪೆಯ ಗಾತ್ರ ಗಂಡಿಗಿಂತ ದೊಡ್ಡದು. ಹೆಣ್ಣು ಕಪ್ಪೆಯು ನಿಂತ ನೀರಿನ ಮೇಲೆ ಇರುವ ಮರ ಗಿಡಗಳ ಎಲೆಗಳನ್ನು ಆಯ್ಕೆ ಮಾಡಿ, ತನ್ನ ಅಂಡನಾಳದಿಂದ ಮೊಟ್ಟೆಗಳನ್ನು ಬುರುಗಿನ ರೂಪದಲ್ಲಿ ಎಲೆಯ ಮೇಲೆ ಬಿಡುಗಡೆ ಮಾಡುತ್ತದೆ. ಅದೇ ಸಮಯದಲ್ಲಿ ಗಂಡು ತನ್ನ ವೀರ್ಯವನ್ನು ಬಿಡುಗಡೆ ಮಾಡುತ್ತದೆ. ಅಮೇಲೆ ಹೆಣ್ಣು ಕಪ್ಪೆಯು ಬುರುಗನ್ನು ಎಲೆಯಿಂದ ಹೊದಿಸುತ್ತದೆ. ಹಾಗಾಗಿ ಅದನ್ನು ನಾವು ಬುರುಗಿನ ಗೂಡು ಎಂದು ಕರೆಯುತ್ತೆವೆ. ಆಮೇಲೆ ವೀರ್ಯ ಮೊಟ್ಟೆಗಳ ಜೊತೆ ಸೇರಿ ಫಲವತ್ತತೆಯನ್ನು ಹೊಂದಿ 6 ರಿಂದ 12 ವಾರಗಳ ಆದಮೇಲೆ ಮೀನಿನಂತೆ ಬಾಲವಿರುವ ಕಪ್ಪೆಯ ಗೊದಮೊಟ್ಟೆ ಮರಿಗಳು ಮೊಟ್ಟೆಯೊಡೆದು ಕೆಳಗಿನ ನೀರಿಗೆ ಬಿದ್ದು, ನೀರಿನಲ್ಲಿ ಜೀವಿಸಿ ರೂಪ ಪರಿವರ್ತನೆಗೊಳ್ಳುತ್ತದೆ.

ರೂಪ ಪರಿವರ್ತನೆ ಎಂದರೆ ಕಪ್ಪೆಗಳು ಮೊದಲು ಹುಟ್ಟಿದಾಗ ಅವುಗಳಿಗೆ ಬಾಲವಿರುತ್ತದೆ. ಹೊಟ್ಟೆಯಲ್ಲಿ ಕರುಳು ಕೂಡ ಉದ್ದವಾಗಿರುತ್ತದೆ. ಆ ಸಮಯದಲ್ಲಿ ಕಪ್ಪೆಗಳ ಮರಿಗಳು ಸಸ್ಯಾಹಾರಿ ಪ್ರಾಣಿಯಾಗಿರುತ್ತವೆ. ಯಾವಾಗ ಮರಿಗಳು ಬೆಳೆಯುತ್ತಾ ದೊಡ್ಡ ಗಾತ್ರವಾಗುತ್ತವೆಯೋ ಆ ಸಮಯದಲ್ಲಿ ಕಪ್ಪೆಗಳ ದೇಹದಲ್ಲಿ ಹಿಂದಿನ ಕಾಲುಗಳು ಬೆಳೆಯುತ್ತವೆ. ಆ ಸಮಯದಲ್ಲಿ ಕಪ್ಪೆಗಳು ಬಾಲವನ್ನು ಹೆಚ್ಚು ಉಪಯೋಗಿಸುವುದಿಲ್ಲ. ಹಾಗಾಗಿ ಕಪ್ಪೆಗಳು ತಮ್ಮ ಬಾಲವನ್ನು ಕಳೆದುಕೊಳ್ಳುತ್ತವೆ. ಆಮೇಲೆ ಅವುಗಳು ಮಾಂಸಾಹಾರಿಯಾಗಿಯೂ ಪರಿವರ್ತನೆಯಾಗುತ್ತವೆ. ಕಪ್ಪೆಗಳು ನೀರಿನಲ್ಲಿ ಮತ್ತು ನೆಲದ ಮೇಲೆ ವಾಸಿಸುವುದರಿಂದ ಅವುಗಳನ್ನು ಉಭಯವಾಸಿ ಪ್ರಾಣಿಗಳು ಎಂದು ಕರೆಯುತ್ತಾರೆ.

ಇವುಗಳ ಮತ್ತೊಂದು ವಿಶೇಷತೆ ಏನೆಂದರೆ ಇವು ಸಂದರ್ಭಕ್ಕೆ ತಕ್ಕಂತೆ ಊಸರವಳ್ಳಿಯ ತರಹ ದೇಹದ ಬಣ್ಣವನ್ನು ಬದಲಾವಣೆ ಮಾಡುತ್ತವೆ. ಬಣ್ಣ ಬದಲಾವಣೆ ಮಾಡುವುದು ಅವುಗಳ ರಕ್ಷಣೆಗಾಗಿ. ಅವುಗಳ ದೇಹದ ಮೇಲ್ಭಾಗ ಹಸಿರಾಗಿದ್ದು, ಕೆಳಭಾಗ ತಿಳಿಹಳದಿ ಇದೆ ಹಾಗೂ ಜಾಲಪಾದಗಳು ಕಿತ್ತಳೆ ಕೆಂಪು ಬಣ್ಣದಂತೆ ಕಾಣುತ್ತವೆ. ಕಪ್ಪೆಗಳು ಜಾಲಪಾದಗಳನ್ನು ಉಪಯೋಗ ಮಾಡಿಕೊಂಡು ನೀರಿನಲ್ಲಿ ಈಜುತ್ತವೆ, ಮರಗಿಡಗಳ ಮೇಲೆ ಹತ್ತುತ್ತವೆ, ಹಾರುತ್ತವೆ. 

ಭಾರತದಲ್ಲಿ ಕಪ್ಪೆಯ 13 ಪ್ರಭೇದಗಳಿವೆ. ಅದರಲ್ಲಿ ಹಾರುವ ಕಪ್ಪೆಯನ್ನು ಸೇರಿಸಿ 4 ಪ್ರಭೇದಗಳು ಪಶ್ಚಿಮ ಘಟ್ಟಗಳ ಸಾಲುಗಳಲ್ಲಿ ಇವೆ. ಅವುಗಳೆಂದರೆ, Rhacophorus pseudomalabaricus, Rhacophorus lateralis, Rhacophorus calcadensis.

**
ನವೀನ ಪ್ಯಾಟಿಮನಿ

ಸಹಾಯಕ ಉಪನ್ಯಾಸಕ, ಪ್ರಾಣಿಶಾಸ್ತ್ರ ವಿಭಾಗ, ಕೆಸಿಡಿ

ಪ್ರತಿಕ್ರಿಯಿಸಿ (+)