ಶುಕ್ರವಾರ, ನವೆಂಬರ್ 27, 2020
18 °C
ಭಾರತದಲ್ಲಿ ವರ್ಷಕ್ಕೆ ಹಾವು ಕಡಿತದಿಂದ ಸರಾಸರಿ 58 ಸಾವಿರ ಮಂದಿ ಸಾವು

PV Web Exclusive | ಹಾವು–ನಾವು, ಸಂಘರ್ಷವೋ ಸಹಬಾಳ್ವೆಯೊ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

Prajavani

ಇಂದು ರಾಷ್ಟ್ರೀಯ ಸರಿಸೃಪಗಳ ದಿನ. ಭೂಮಿಯಲ್ಲಿರುವ ಸರೀಸೃಪಗಳಲ್ಲಿ ಪ್ರಮುಖವಾದ ಹಾವುಗಳ ಜೊತೆ ಮನುಷ್ಯ ಒಂದಿಲ್ಲ ಒಂದು ರೀತಿ ಮುಖಾಮುಖಿ ಆಗುತ್ತಲೇ ಇದ್ದಾನೆ. ಮನುಷ್ಯ ಹಾಗೂ ಹಾವುಗಳ ನಡುವಿನ ಸಂಘರ್ಷದಿಂದಾಗಿ ಭಾರತದಲ್ಲಿ ವರ್ಷದಲ್ಲಿ ಸರಾಸರಿ 58ಸಾವಿರ ಮಂದಿ ಸಾಯುತ್ತಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಮನುಷ್ಯನ ಕೈಯಿಂದ ಹತ್ಯೆಗೀಡಾಗುವ ಹಾವುಗಳ ಸಂಖ್ಯೆಯನ್ನು ಲೆಕ್ಕವಿಟ್ಟವರಿಲ್ಲ. ಈ ಸಂಘರ್ಷಕ್ಕೆ ಇತಿಶ್ರೀ ಹಾಡುವುದೆಂತು?

---

ಕೋವಿಡ್‌ನಿಂದ ಸಾಯುತ್ತಿರುವವರ ಸಂಖ್ಯೆ ಅನೇಕರ ಆತಂಕಕ್ಕೆ ಕಾರಣವಾಗಿರಬಹುದು. ಅ.21ರವರೆಗೆ ದೇಶದಲ್ಲಿ 1,15,833 ಮಂದಿ, ರಾಜ್ಯದಲ್ಲಿ 10,608 ಮಂದಿ ಕೋವಿಡ್‌ನಿಂದ ಕೊನೆಯುಸಿರೆಳೆದಿದ್ದಾರೆ. ಆದರೆ, ನಮ್ಮ ದೇಶದಲ್ಲಿ 2000ದಿಂದ 2019ರವರೆಗೆ ವರ್ಷಕ್ಕೆ ಸರಾಸರಿ 58ಸಾವಿರ ಮಂದಿ ಹಾವಿನ ಕಡಿತದಿಂದ ಸಾವಿಗೀಡಾಗಿದ್ದಾರೆ ಎಂಬ ಅಂಶ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ.

ಕಾಯಿಲೆಗಳಿಂದ ಆಗುವ ಸಾವುಗಳಿಗೆ ಸಿಗುವಷ್ಟು ಪ್ರಚಾರ ಹಾವು ಕಡಿತದಿಂದ ಆಗುವ ಸಾವುಗಳಿಗೆ ಸಿಗದು. ಈ ಶೀತ ರಕ್ತದ ಪ್ರಾಣಿಗಳ ನಂಜು ಮನುಷ್ಯನ ದೇಹವನ್ನು ಸೇರಿ ಆಗುವ ಮರಣಗಳು ಗಣನೆಗೆ ಬಾರದೆಯೇ ಇತಿಹಾಸದ ಪುಟಗಳಲ್ಲಿ ತಣ್ಣಗೆ ಕಳೆದುಹೋಗುತ್ತಿವೆ. ಏಕೆಂದರೆ ಈ ಸಾವುಗಳಲ್ಲಿ ಬಹುಪಾಲು ಸಂಭವಿಸುವುದು ಗ್ರಾಮೀಣ ಪ್ರದೇಶದಲ್ಲಿ. ಅದರಲ್ಲೂ ರೈತರೇ ಹೆಚ್ಚಾಗಿ ಹಾವುಗಳಿಗೆ ಬಲಿಯಾಗುತ್ತಿದ್ದಾರೆ. ಸ್ವಲ್ಪ ಎಚ್ಚರ ವಹಿಸಿದರೆ, ಸಕಾಲದಲ್ಲಿ ಚಿಕಿತ್ಸೆ ಹಾಗೂ ಆರೈಕೆ ಒದಗಿಸಿದರೆ ತಪ್ಪಿಸಬಹುದಾದ ಸಾವುಗಳಿವು.

ಯಾವ ಮುನ್ಸೂಚನೆಯನ್ನೂ ನೀಡದೇ ದಿಢೀರ್‌ ಬಂದೆರಗುತ್ತವೆ ಹಾವು ಕಡಿತದ ಸಾವುಗಳು. ಕುಟುಂಬಗಳ ಆಧಾರ ಸ್ತಂಬದಂತಿರುವ ವ್ಯಕ್ತಿಗಳು ಅರೆ ವಯಸ್ಸಿನಲ್ಲೇ ಇಹಯಾತ್ರೆ ಮುಗಿಸಬೇಕಾದ ಕಠೋರ ಪರಿಸ್ಥಿತಿಯನ್ನು ಇವು ತಂದೊಡ್ಡುತ್ತವೆ. ಹಾವುಗಳ ಕುರಿತು ಜನರಿಗಿರುವ ಅಜ್ಞಾನ ಹಾಗೂ ಭಯವೇ ಈ ಸಾವುಗಳನ್ನು ಮೈಮೇಲೆ ಎಳೆದುಕೊಳ್ಳುವಂತೆ ಮಾಡುತ್ತಿದೆ. ಹಾವುಗಳ ಬಗ್ಗೆ, ಅವುಗಳ ಪರಿಸರ ವ್ಯವಸ್ಥೆ ಬಗ್ಗೆ ತಿಳಿವಳಿಕೆ ಮೂಡಿಸಿ ಅವುಗಳ ಜೊತೆ ಹೊಂದಿಕೊಂಡು ಬದುಕುವಂತಾದರೆ ಇವುಗಳ ಕಡಿತದಿಂದ ಸಾಯುವವರ ಸಂಖ್ಯೆಯನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.

ಭಾರತದಲ್ಲಿ ಒಟ್ಟು 285 ಪ್ರಭೇದಗಳ ಹಾವುಗಳಿವೆ. ಅವುಗಳಲ್ಲಿ ಹೆಚ್ಚಂದರೆ 50 ಪ್ರಭೇದಗಳಷ್ಟು ಹಾವುಗಳು ವಿಷಕಾರಿಯಾಗಿರಬಹುದು. ಆದರೆ, ಮನುಷ್ಯನ ಪ್ರಾಣಕ್ಕೆ ಆಪತ್ತು ಬರುತ್ತಿವುದು ಕೇವಲ ನಾಲ್ಕು ಪ್ರಭೇದಗಳ ಹಾವುಗಳಿಂದಲೇ ಹೆಚ್ಚು. ಕೊಳಕುಮಂಡಲ, ಗರಗಸ ಮಂಡಲ, ನಾಗರಹಾವು ಹಾಗೂ ಕಟ್ಟು ಹಾವುಗಳ ಕಡಿತದಿಂದ ಸಾಯುವವರ ಸಂಖ್ಯೆ ಜಾಸ್ತಿ. 

‘ಮಾನವ ವನ್ಯಜೀವಿ ಸಂಘರ್ಷ ಎಂದರೆ ಹುಲಿ, ಚಿರತೆ ಆನೆಗಳ ಜೊತೆಗಿನ ಸಂಘರ್ಷ ಎಂಬಂತಾಗಿದೆ. ದೇಶದಲ್ಲಿ ವರ್ಷದಲ್ಲಿ 10ಲಕ್ಷಕ್ಕೂ ಅಧಿಕ ಮಂದಿಗೆ ಹಾವು ಕಡಿಯುತ್ತದೆ. ಇದರ ಬಗ್ಗೆ ಗಮನ ಹರಿಸುವವರೇ ಇಲ್ಲ. ಇದರ ಸಂತ್ರಸ್ತರೆಲ್ಲರೂ ಬಡವರೇ. ಅದರಲ್ಲೂ ರೈತರೇ ಹೆಚ್ಚು’ ಎನ್ನುತ್ತಾರೆ ಪ್ರಾಣಿಗಳ ಸಂರಕ್ಷಣೆ ಬಗ್ಗೆ ಕೆಲಸ ಮಾಡುವ ಹ್ಯೂಮೇನ್‌ ಸೊಸೈಟಿ ಇಂಟರ್‌ನ್ಯಾಷನಲ್‌ನ ಹಿರಿಯ ವ್ಯವಸ್ಥಾಪಕ ಸುಮಂತ್‌ ಬಿಂದು ಮಾಧವ್‌.

ರಿಜಿಸ್ಟ್ರಾರ್‌ ಜನರಲ್‌ ಆಫ್‌ ಇಂಡಿಯಾ ಸಂಸ್ಥೆ ಹಾವುಗಳ ಕಡಿತದಿಂದಾಗುವ ಸಾವುಗಳನ್ನು ರಾಷ್ಟ್ರೀಯ ಪ್ರಾತಿನಿಧಿಕ ಮರಣ ಸಮೀಕ್ಷೆ ನೆರವಿನಿಂದ 2011ರಲ್ಲಿ ದಾಖಲೀಕರಿಸಿತು. ‘ಮಿಲಿಯನ್‌ ಡೆತ್‌ ಸ್ಟಡಿ’ ಹೆಸರಿನ ಈ ಸಮೀಕ್ಷೆಯ ಪ್ರಕಾರ ದೇಶದಲ್ಲಿ ವರ್ಷಕ್ಕೆ ಸರಾಸರಿ 45,900 ಮಂದಿ ಹಾವಿನ ಕಡಿತದಿಂದ ಸಾವಿಗೀಡಾತ್ತಿರುವ ಅಂಶ ಬೆಳಕಿಗೆ ಬಂತು. 2019ರಲ್ಲಿ ಇದೇ ಅಧ್ಯಯನದ ಅಂಕಿ ಅಂಶಗಳಿಗೆ ಇತ್ತೀಚಿನ ಬೆಳವಣಿಗೆಳನ್ನು ಸೇರಿಸಿಕೊಂಡು ಪರಿಷ್ಕೃತ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿದೆ. ಯೂನಿವರ್ಸಿಟಿ ಆಫ್‌ ಟೊರಾಂಟೊದ ಸೆಂಟರ್ ಫಾರ್ ಗ್ಲೋಬಲ್‌ ರಿಸರ್ಚ್‌ ಸಂಸ್ಥೆ ರಾಷ್ಟ್ರೀಯ ಪ್ರಾತಿನಿಧಿಕ ಮರಣ ಸಮೀಕ್ಷೆ ಯ ಅಂಕಿ ಅಂಶಗಳಿಗೆ ಮತ್ತೆ 11 ವರ್ಷಗಳ ದತ್ತಾಂಶಗಳನ್ನು ಸೇರಿಸಿ ಈ ಅಧ್ಯಯನ ಕೈಗೊಂಡಿದೆ. ದೇಶದಲ್ಲಿ ದಾಖಲಾದ 87,590 ಹಾವು ಕಡಿತ ಪ್ರಕರಣಗಳನ್ನು ಆಧರಿಸಿ ಸುಧಾರಿತ ವಿಶ್ಲೇಷಣೆ ನಡೆಸಿದೆ.

ಪರಿಷ್ಕೃತ ಅಧ್ಯಯನದ ಪ್ರಕಾರ 2000–2019ರ ನಡುವೆ 12 ಲಕ್ಷ ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಇವರಲ್ಲಿ 6.02ಲಕ್ಷ ಮಂದಿ ಪುರುಷರು ಹಾಗೂ 5.65 ಲಕ್ಷ ಮಂದಿ ಮಹಿಳೆಯರು. 5.43 ಲಕ್ಷ ಮಂದಿಯ (ಶೇ 47) ವಯಸ್ಸು 30ರಿಂದ 69 ವರ್ಷಗಳ ನಡುವೆ, 1.97 ಲಕ್ಷ ಮಂದಿಯ (ಶೇ17) ವಯಸ್ಸು  15ರಿಂದ 29 ವರ್ಷಗಳ ನಡುವೆ ಇದೆ. 3.25 ಲಕ್ಷ ಮಂದಿ ಐದು ವರ್ಷ ಕೆಳಗಿನವರಾಗಿದ್ದರೆ, 1.02 ಲಕ್ಷ ಮಂದಿ 70ವಯಸ್ಸು ದಾಟಿದವರು. 

‘ಈ ಅಂಕಿ ಅಂಶಗಳನ್ನು ನೋಡಿದರೆ ಮಧ್ಯವಯಸ್ಸಿನವರೇ ಹೆಚ್ಚಾಗಿ ಹಾವು ಕಡಿತಕ್ಕೆ ಬಲಿಯಾಗುತ್ತಿರುವುದು ದೃಢಪಡುತ್ತದೆ. ಇವರೆಲ್ಲ ಕುಟುಂಬದ ಆಧಾರ ಸ್ತಂಬ. ಇವರನ್ನು ಕಳೆದುಕೊಳ್ಳುವುದರಿಂದ ಕುಟುಂಬ ತೀವ್ರ ಸಂಕಷ್ಟವನ್ನೆದುರಿಸುತ್ತದೆ. ಅನೇಕರು ಅಂಗವಿಕಲರಾಗಿ ಜೀವನಪರ್ಯಂತ ಯಾತನೆ ಅನುಭವಿಸುತ್ತಾರೆ’ ಎಂದು ವಿಶ್ಲೇಷಿಸುತ್ತಾರೆ ಸುಮಂತ್‌.

ಹಾವುಗಳಿಂದ ಉಂಟಾಗುವ ಸಾವುಗಳನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವ ಆರೋಗ್ಯ ಸಂಸ್ಥೆ 2030ರ ಒಳಗೆ ಈ ಪ್ರಮಾಣವನ್ನು ಅರ್ಧಕ್ಕರ್ಧ ಕಡಿತ ಮಾಡುವ ಗುರಿಯನ್ನು ಹಾಕಿಕೊಂಡಿದೆ. ಈ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸದಸ್ಯ ರಾಷ್ಟ್ರಗಳನ್ನು ಪ್ರೇರೇಪಿಸುತ್ತಿದೆ. 

ಹಳ್ಳಿಗಳಲ್ಲಿ ಸಮಾನ್ಯವಾಗಿ ಕೃಷಿ ಕಾರ್ಯದ ಸಂದರ್ಭದಲ್ಲಿ ಹಾಗೂ ಕತ್ತಲಲ್ಲಿ ಅಡ್ಡಾಡುವಾಗ ಹಾವಿನಿಂದ ಕಡಿತಕ್ಕೊಳಗಾಗುವ ಪ್ರಮೇಯ ಜಾಸ್ತಿ. ಇಂತಹ ಸಂದರ್ಭದಲ್ಲಿ ಹೆಚ್ಚು ಎಚ್ಚರ ವಹಿಸಿದರೆ ಹಾವಿನ ಕಡಿತದಿಂದ ಉಂಟಾಗುವ ಸಾವುಗಳನ್ನು ಖಂಡಿತಾ ತಪ್ಪಿಸಬಹುದು. ರಾತ್ರಿ ಓಡಾಡುವಾಗ ಟಾರ್ಚ್‌ ಬಳಕೆ, ಕೃಷಿ ಕೆಲಸದ ವೇಳೆ ರಬ್ಬರ್‌ ಶೂಗಳ ಬಳಕೆ, ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಎಚ್ಚರ ವಹಿಸಬೇಕಾಗುತ್ತದೆ ಎಂದು ಸಲಹೆ ನೀಡುತ್ತಾರೆ ಹಾವಿನ ವಿಜ್ಞಾನಿ ಜೆರ್ರಿ ಮಾರ್ಟಿನ್‌. 

ಹಳ್ಳಿಗಳ ಸ್ಥಿತಿ ಹೀಗಾದರೆ ನಗರದಲ್ಲಿ ವಿಭಿನ್ನ ಪರಿಸ್ಥಿತಿ ಇದೆ. ಇಲ್ಲಿ ಹಾವು ಮತ್ತಿತರ ಸರೀಸೃಪಗಳ ಆವಾಸವನ್ನು ಮಾನವ ವಸತಿಗಾಗಿ ನಾಶಪಡಿಸಲಾಗುತ್ತಿದೆ. ಮನೆಯೊಳಗೆ ಹಾವು ಕಾಣಿಸಿಕೊಂಡರೆ, ಅವುಗಳ ಮನೆಯ ಜಾಗದಲ್ಲಿ ನಾವಿದ್ದೇವೆ ಎಂದು ಯಾರೂ ಪರಿಭಾವಿಸುವುದಿಲ್ಲ. ಕೆಲವರು ಅವುಗಳನ್ನು ಹೊಡೆದು ಸಾಯಿಸುತ್ತಾರೆ. ಅವು ವಿಷಪೂರಿತವೇ ಎಂದೂ ನೋಡುವುದಿಲ್ಲ. ಇನ್ನು ಕೆಲವರು ಸ್ವಲ್ಪ ದಯೆ ತೋರಿ, ಹಾವು ಹಿಡಿವವರನ್ನು ಕರೆಸಿ ಬೇರೆಲ್ಲಿಗೋ ಅವುಗಳನ್ನು ಬಿಟ್ಟು ಬರುವಂತೆ ಹೇಳುತ್ತಾರೆ.

‘ಹಾವುಗಳನ್ನು ಬೇರೆ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಟ್ಟುಬರುವುದೂ ವೈಜ್ಞಾನಿಕವಾಗಿ ಸೂಕ್ತವಲ್ಲ. ಹಾವುಗಳು ಪರಿಚಿತ ಪರಿಸರದಲ್ಲೇ ಓಡಾಡಿಕೊಂಡಿರಲು ಇಷ್ಟಪಡುವ ಜೀವಿಗಳು. ತಾವಿರುವ ಪರಿಸರದಲ್ಲಿ ಪೊಟರೆಗಳು, ಬಿಲಗಳು ಎಲ್ಲಿವೆ ಎಂಬುದನ್ನು ತಿಳಿದುಕೊಂಡಿರುವ ಈ ಶೀತ ರಕ್ತದ ಪ್ರಾಣಿಗಳು ಅಲ್ಲಿ ಸುರಕ್ಷಿತವಾಗಿ ವಿಶ್ರಾಂತಿ ಪಡೆಯುತ್ತವೆ. ಉಷ್ಣಾಂಶದ ಏರುಪೇರುಗಳನ್ನು ಹೊಂದಿಸಿಕೊಳ್ಳುತ್ತವೆ. ತಮ್ಮನ್ನು ಬೇಟೆಯಾಡುವ ಜೀವಿಗಳಿಂದ ಸುಲಭವಾಗಿ ರಕ್ಷಣೆ ಪಡೆಯುತ್ತವೆ. ಆದರೆ, ಅವುಗಳನ್ನು ಪರಿಚಯವೇ ಇಲ್ಲದ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟರೆ, ಗಲಿಬಿಲಿಗೆ ಒಳಗಾಗುತ್ತವೆ. ತಮ್ಮನ್ನು ಬೇಟೆಯಾಡುವ ಪ್ರಾಣಿಯಿಂದ ರಕ್ಷಣೆ ಪಡೆಯುವುದೂ ಕಷ್ಟ. ಅವು ಬದುಕುಳಿಯುವ ಸಾಧ್ಯತೆಯೂ ಕಡಿಮೆ’ ಎನ್ನುತ್ತಾರೆ ಸುಮಂತ್‌.

‘ಆಹಾರ ಸರಪಣಿಯಲ್ಲಿ ಹಾವುಗಳ ಸ್ಥಾನ ಮಹತ್ವದ್ದು. ಇಲಿಯಂತಹ ದಂಶಕಗಳನ್ನು ಬೇಟೆಯಾಡುವ ಹಾವುಗಳು ಆಹಾರ ಧಾನ್ಯ ಸಂರಕ್ಷಣೆಯಲ್ಲಿ ಬಲುಮುಖ್ಯ ಪಾತ್ರ ವಹಿಸುತ್ತವೆ. ಅವುಗಳ ಸಂತತಿ ನಶಿಸಿದಷ್ಟೂ ಆಹಾರದ ಸರಪಣಿ ಏರುಪೇರಾಗಲಿದೆ. ಪರಿಸರ ವ್ಯವಸ್ಥೆಯಲ್ಲಿ ಅವು ಎಷ್ಟು ಮುಖ್ಯ ಎಂಬುದನ್ನು ಅರಿತುಕೊಂಡು ಅವುಗಳನ್ನು ಸಂರಕ್ಷಿಸಬೇಕಾದ ಹೊಣೆ ಎಲ್ಲರ ಮೇಲಿದೆ’ ಎನ್ನುತ್ತಾರೆ ಪ್ರಾಣಿ ವಿಜ್ಞಾನಿ ಡಾ.ಎನ್‌.ಎ.ಮಧ್ಯಸ್ಥ.

ಇಂದು ರಾಷ್ಟ್ರೀಯ ಸರೀಸೃಪಗಳ ದಿನ

ಅ.21ರಂದು ರಾಷ್ಟ್ರೀಯ ಸರೀಸೃಪಗಳ ದಿನವನ್ನು ಆಚರಿಸಲಾಗುತ್ತದೆ. ಸರೀಸೃಪಗಳ ಸಂರಕ್ಷಣೆಯ ಬಗ್ಗೆ ಈ ದಿನ  ಜನಜಾಗೃತಿ ಮೂಡಿಸಲಾಗುತ್ತದೆ. 

‘ಭೂಮಿಯ ಮೀಸೋಜೋಯಿಕ್‌ ಯುಗದಲ್ಲಿ ಡೈನೋಸಾರಸ್‌ಗಳಂತಹ ಸರೀಸೃಪಗಳೇ ಜಗತ್ತನ್ನು ಆಳುತ್ತಿದ್ದವು. ಕಾರಣಾಂತರಗಳಿಂದ ಅವುಗಳ ಸಂತತಿ ನಶಿಸಿದೆ. ಹಲ್ಲಿ, ಹಾವುಗಳಂತಹ ಕೆಲವೇ ಜಾತಿಗಳ ಸರೀಸೃಪಗಳು ಈಗಲೂ ಉಳಿದುಕೊಂಡಿವೆ‘ ಎನ್ನುತ್ತಾರೆ ಪ್ರಾಣಿವಿಜ್ಞಾನಿ ಡಾ. ಎನ್‌.ಎ.ಮಧ್ಯಸ್ಥ.

‘ಕಾಳಿಂಗ ವಿಶ್ವದ ಅತೀದೊಡ್ಡ ವಿಷಕಾರಿ ಹಾವು. ಪಶ್ಚಿಮಘಟ್ಟದ ಪರಿಸರದಲ್ಲಿ ಮಾತ್ರ ಕಂಡುಬರುವ ಈ ಹಾವು ಮನುಷ್ಯರಿಗೆ ಕಚ್ಚುವುದು ಕಡಿಮೆ. ದರಗೆಲೆಗಳನ್ನು ಒಗ್ಗೂಡಿಸಿ ಗೂಡನ್ನು ನಿರ್ಮಿಸಿ ಅದರಲ್ಲಿ ಮೊಟ್ಟೆ ಇಟ್ಟು ಮರಿ ಮಾಡುವುದು ಇದರ ವಿಶೇಷ. ಮೊಟ್ಟೆ ಇಟ್ಟ ಸಂದರ್ಭದಲ್ಲಿ ಇವು ಹೆಚ್ಚು ಆಕ್ರಮಣಕಾರಿ’ ಎಂದರು.

‘ಉಡಗಳಂತಹ ಸರೀಸೃಪಗಳು ಅಪಾಯದ ಅಂಚಿನಲ್ಲಿವೆ. ಜನ ಮಾಂಸಕ್ಕಾಗಿ ಅವುಗಳನ್ನು ಬೇಟೆಯಾಡುತ್ತಾರೆ. ಅದರ ಚರ್ಮಕ್ಕೂ ಬೇಡಿಕೆ ಇದೆ. ಅವುಗಳ ಕುರಿತು ಜನರಲ್ಲಿ ಕುರುಡು ನಂಬಿಕೆಗಳಿವೆ. ಇದು ಕೂಡಾ ಉಡಗಳ ಸಂತತತಿ ನಶಿಸಲು ಕಾರಣವಾಗುತ್ತಿದೆ’ ಎಂದು ತಿಳಿಸಿದರು.

‘ಉಡಗಳು ಕೂಡಾ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಅನುಸೂಚಿತ ಪ್ರಾಣಿಗಳ ಪಟ್ಟಿ–1ರಲ್ಲಿ ಸ್ಥಾನ ಪಡೆದಿವೆ. ಹುಲಿಗಳಿಗೆ ಸಿಗುವಷ್ಟೇ ರಕ್ಷಣೆ ಈ ದೈತ್ಯ ಹಲ್ಲಿಹಗಳಿಗೂ ಸಿಗಬೇಕು. ಆದರೆ, ದುರಾದೃಷ್ಟವಶಾತ್‌ ಹಾಗಾಗುತ್ತಿಲ್ಲ. ಈಗಲೂ ಉಡಗಳ ಕಳ್ಳಬೇಟೆ ಅವ್ಯಾಹತವಾಗಿ ನಡೆಯುತ್ತಲೇ ಇದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸುಮಂತ್‌ ಬಿಂದು ಮಾಧವ್‌.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು