ಪಿಥೌರಗಢ: ಇದೇ ಮೊದಲ ಬಾರಿಗೆ ಉತ್ತರಾಖಂಡದ ಪಿಥೌರಗಢ ಜಿಲ್ಲೆಯ ದರ್ಮ ಕಣಿವೆಯಲ್ಲಿ 11,120 ಮೀಟರ್ ಎತ್ತರದ ಪರ್ವತ ಶ್ರೇಣಿಯಲ್ಲಿ ಹಿಮಚಿರತೆ ಪತ್ತೆಯಾಗಿದೆ ಜಿಲ್ಲೆಯ ವಿಭಾಗೀಯ ಅರಣ್ಯ ಅಧಿಕಾರಿ ಮೋಹನ್ ದಗಾರೆ ಗುರುವಾರ ತಿಳಿಸಿದ್ದಾರೆ.
ಹಿಮಾಲಯದ ಎತ್ತರ ಶ್ರೇಣಿಗಳ ಪ್ರಾಣಿ ಸಂಕುಲದ ಕುರಿತು ಅಧ್ಯಯನ ನಡೆಸುತ್ತಿರುವ ತಂಡದ ಕಣ್ಣಿಗೆ ಜಿಲ್ಲೆಯ ದಾರ್ ಗ್ರಾಮದ ಬಳಿ ಹಿಮಚ್ಛಾದಿತ ಪ್ರದೇಶದಲ್ಲಿ ಹಿಮಚಿರತೆ ಕಂಡುಬಂದಿದೆ ಎಂದು ಅವರು ತಿಳಿಸಿದ್ದಾರೆ.
ತಂಡವು ಸುಮಾರು 20 ಮೀಟರ್ ದೂರದಿಂದ ಕ್ಯಾಮೆರಾದಲ್ಲಿ ಹಿಮಚಿತರೆಯನ್ನು ಸೆರೆಹಿಡಿದಿದೆ. ಹಿಮಚಿರತೆಗಳು ಸಾಮಾನ್ಯವಾಗಿ 12,000 ಅಡಿಗಿಂತ ಎತ್ತರದ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತವೆ. ದಾರ್ ಗ್ರಾಮವು 11,120 ಮೀಟರ್ ಎತ್ತರದಲ್ಲಿದ್ದು, ಇದೇ ಮೊದಲಬಾರಿಗೆ ಇಷ್ಟು ಕಡಿಮೆ ಎತ್ತರದ ಹಿಮಾಲಯ ಶ್ರೇಣಿಯಲ್ಲಿ ಈ ತಳಿ ಕಾಣಿಸಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಅತಿ ಎತ್ತರದ ಹಿಮಾಲಯ ಶ್ರೇಣಿಯಲ್ಲಿ ಭಾರಿ ಹಿಮಪಾತವಾಗುತ್ತಿರುವ ಕಾರಣ ಹಿಮಚಿರತೆ ತನ್ನ ಎಂದಿನ ವಾಸಸ್ಥಾನಕ್ಕಿಂತ ಕಡಿಮೆ ಎತ್ತರದ ಪ್ರದೇಶಕ್ಕೆ ಬಂದಿರಬಹುದು ಎಂದು ಅವರು ಅಂದಾಜಿಸಿದ್ದಾರೆ.
ಇದಕ್ಕೂ ಮೊದಲು ಹಿಮಚಿರತೆಗಳು ಗರ್ವಾಲ್ ಹಿಮಾಲಯದ ನಂದಾದೇವಿ ಶ್ರೇಣಿ, ಹಿಮಾಚಲ ಪ್ರದೇಶದ ಕೆಲ ಭಾಗಗಳು ಮತ್ತು ಲಡಾಖ್ ಪ್ರದೇಶದಲ್ಲಿ ಕಂಡು ಬಂದಿದ್ದವು. ಅಂತರ್‌ರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟದ (ಐಯುಸಿಎನ್) ಕೆಂಪುಪಟ್ಟಿಯಲ್ಲಿ ಹಿಮಚಿರತೆ ಸ್ಥಾನ ಪಡೆದಿದೆ. ಇದನ್ನು ದುರ್ಬಲ ತಳಿ ಎಂದು ಕರೆಯಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.