ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಟ ಜಗತ್ತಿನ ಮರಣಮೃದಂಗ

Last Updated 1 ಜೂನ್ 2019, 19:30 IST
ಅಕ್ಷರ ಗಾತ್ರ

ಅದು ಬೆಂಗಳೂರಿನ ವೈಭವೊಪೇತ ಹೋಟೆಲ್. ಅಂದು ಶುಭ ಸಮಾರಂಭ. ಸ್ನೇಹಿತರ ಜೊತೆಗೆ ನೀವು ಅಲ್ಲಿಗೆ ಹೋಗಿರುತ್ತೀರಿ. ಎರಡು ಅಂಗುಲ ದಪ್ಪದ ಮೃದುವಾದ ವರ್ಣಮಯ ನೆಲಹಾಸು. ಅಗೋಚರ ಬಿಂದುಗಳಿಂದ ಪ್ರತಿಫಲಿಸುವ ಮೇಲು ಬೆಳಕು. ಮೆಲುಧ್ವನಿಯ ಪಾಶ್ಚಾತ್ಯ ಸಂಗೀತ. ಆಗ ನೀವು ಗಂಧರ್ವ ಲೋಕದ ಪರವಶ.

ಕುರ್ಚಿ ಹುಡುಕಲು ತೋಚದೆ ಮೂಲೆಯಲ್ಲಿ ನಿಲ್ಲುತ್ತೀರಿ. ಗೋಡೆ ಮೇಲಿನ ಕನ್ನಡಿಯಲ್ಲಿ‌ ನಿಮ್ಮ ಬಿಂಬ ನೋಡುತ್ತಾ ಮೈಮರೆತು ನಿಂತಾಗ ಮುಗುಳುನಗೆ ಹೊತ್ತ ವೇಟರ್‌ ದಿಢೀರ್‌ ಪ್ರತ್ಯಕ್ಷನಾಗುತ್ತಾನೆ. ನಿಮಗೆ ಸ್ವಾಗತ ಕೋರಿ ಕುರ್ಚಿ ತೋರಿಸುತ್ತಾನೆ. ಆತ ಆಚೆ ಸರಿದ ಮೇಲೆ ಗೆಳೆಯರೊಟ್ಟಿಗೆ ನೀವು ಕಳೆದುಹೋಗುತ್ತೀರಿ. ಮಾತಿನ ಮಧ್ಯೆ ಮಧ್ಯೆ ಕಳೆದು ಹೋದ ನಿನ್ನೆಗಳದ್ದೇ ಕನವರಿಕೆ.

ಟೇಬಲ್‌ ಮೇಲೆ ಬಾಯಿಯ ದುರ್ಗಂಧ ಹೋಗಲಾಡಿಸುವ ಚಾಕೊಲೇಟ್‌ ಇರುತ್ತದೆ. ಮೆಲ್ಲನೆ ಅದನ್ನು ಬಾಯೊಳಗೆ ಹಾಕಿಕೊಂಡು ಚಪ್ಪರಿಸುತ್ತೀರಿ. ವೇಟರ್‌ ತರುತ್ತಿರುವ ಜ್ಯೂಸ್‌ನತ್ತ ನಿಮ್ಮ ದೃಷ್ಟಿ ಹರಿಯುತ್ತದೆ. ಆ ಜ್ಯೂಸ್‌ ಸವಿದು ಊಟದ ಹಾಲ್‌ಗೆ ಹೋಗುವ ಧಾವಂತ ನಿಮ್ಮದು. ಅಲ್ಲಿನ ಬಗೆ ಬಗೆಯ ಭಕ್ಷ್ಯಗಳು ಕಣ್ಣು ಕುಕ್ಕುತ್ತವೆ.

ಅಲ್ಲಿನ ದೊಡ್ಡ ತಟ್ಟೆಯೊಂದರಲ್ಲಿ ಪೇರಿಸಿಟ್ಟ ತರಕಾರಿ, ಹಣ್ಣಿನ ಸಲಾಡ್‌ ಸವಿಯುತ್ತೀರಿ. ಅದರ ರುಚಿಯ ಬಗ್ಗೆ ಸ್ನೇಹಿತರ ಬಳಿ ಹೊಗಳಿಕೆಯ ಸುರಿಮಳೆ ಸುರಿಸುತ್ತೀರಿ. ಇಂತಹ ರುಚಿ ಉಣಬಡಿಸಿದ ಬಾಣಸಿಗನ ಬಗ್ಗೆ ಕೇಳಲು ವೇಟರ್‌ನನ್ನು ಎಡತಾಕುತ್ತೀರಿ. ಆ ಜ್ಯೂಸ್‌, ಸಲಾಡ್‌ನ ರುಚಿಯ ಹಿಂದಿರುವುದು ಜೇನ್ನೊಣಗಳ ಅವಿರತ ಶ್ರಮ. ಅರ್ಥವಾಯಿತೇ? ನಿಮ್ಮ ಬಾಯಿಯ ರುಚಿ ತಣಿಸಿದ್ದು ಬಾಣಸಿಗನಲ್ಲ. ಲಕ್ಷಾಂತರ ದುಂಬಿಗಳು!

ಅಂದಹಾಗೆ ದೇಹದ ಕೊಬ್ಬು ಕರಗಿಸಲು ಬಿಸಿನೀರಿನ ಜೊತೆಗೆ ಜೇನುತುಪ್ಪ, ನಿಂಬೆರಸ ಬೆರೆಸಿ ಕುಡಿಯುವುದು ನಗರವಾಸಿಗಳ ಜೀವನಶೈಲಿ. ಹಾಗಾಗಿ, ಮನುಷ್ಯನ ಆರೋಗ್ಯ ರಕ್ಷಣೆಯಲ್ಲೂ ಇವುಗಳ ಪಾತ್ರ ಹಿರಿದು. ಇವು ಆರೋಗ್ಯಕರ ಸಮಾಜದ ಸಂಕೇತ.

ಪರಿಸರದ ಸಮತೋಲನ ಕಾಪಾಡುವಲ್ಲಿ ಜೇನು ಹುಳುಗಳ ಪಾತ್ರ ಅತ್ಯಮೂಲ್ಯ. ಹೂವುಗಳಿಂದ ಮಕರಂದ ಪಡೆದು ಪರಾಗಸ್ಪ‍ರ್ಶ ಕ್ರಿಯೆಯಲ್ಲಿ ಪಾಲ್ಗೊಳ್ಳುವ ಅವುಗಳದ್ದು ನಿಸರ್ಗದಲ್ಲಿ ಪ್ರಮುಖ ಪಾತ್ರ. ಪರಾಗಸ್ಪರ್ಶದಿಂದಲೇ ಸಸ್ಯಗಳು ಹೂವು ಬಿಟ್ಟು, ಕಾಯಿ ಕಟ್ಟುತ್ತವೆ.

ಬಹುತೇಕರ ಮನೆಯ ಮುಂದೆ ದಾಸವಾಳದ ಗಿಡ ಬೆಳೆಸಿರುವುದನ್ನು ಗಮನಿಸಬಹುದು. ಇದರ ಹೂವಿನಲ್ಲಿ ಗಂಡು ಮತ್ತು ಹೆಣ್ಣು ಒಟ್ಟಾಗಿ ಇರುತ್ತವೆ. ಸ್ವಕೀಯ ಪರಾಗಸ್ಪರ್ಶಕ್ಕೆ ಇಲ್ಲಿ ಅವಕಾಶ ಉಂಟು. ಆದರೆ, ಹೂಗಳು ಅದನ್ನು ‌ಬಯಸುವುದಿಲ್ಲ. ಪರಕೀಯ ಪರಾಗಸ್ಪರ್ಶ ಕ್ರಿಯೆಗೆ ಸದಾಕಾಲ ಇಚ್ಛಿಸುತ್ತವೆ. ಇದು ಹೆಚ್ಚು ಸತ್ವಪೂರ್ಣ. ಜೊತೆಗೆ, ಗುಣಮಟ್ಟದ ಬೀಜಗಳ ಉತ್ಪಾದನೆಗೆ ಸಹಕಾರಿ. ಹಾಗಾಗಿ, ಈ ಕ್ರಿಯೆಯಲ್ಲಿ ತೊಡಗುವ ಜೇನ್ನೋಣಗಳು ಸೇರಿದಂತೆ ಇತರೇ ಕೀಟಗಳದ್ದು ಅದ್ವಿತೀಯ ಕಾರ್ಯ.

ನಾವು ದಿನನಿತ್ಯ ಸೇವಿಸುವ ತರಕಾರಿ, ಹಣ್ಣಿನ ಗಿಡಗಳಿಗೆ ಪರಾಗಸ್ಪ‍ರ್ಶ ಮಾಡುವುದೇ ದುಂಬಿಗಳ ಕೆಲಸ. ಒಂದೊಮ್ಮೆ ಅವು ತಮ್ಮ ಕಾರ್ಯ ಸ್ಥಗಿತಗೊಳಿಸಿದರೆ ನಾವು ಸೇವಿಸುವ ಆಹಾರ ದುಬಾರಿಯಾಗುತ್ತದೆ. ಜೊತೆಗೆ, ಅರ್ಥ ವ್ಯವಸ್ಥೆಯು ಅಪಾಯದ ಸುಳಿಗೆ ಸಿಲುಕುತ್ತದೆ. ಹಾಗಾಗಿಯೇ ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್, ‘ಜೇನ್ನೊಣಗಳು ನಾಶವಾದರೆ ಕೇವಲ ನಾಲ್ಕೇ ವರ್ಷಗಳಲ್ಲಿ ಇಡೀ ಮನುಕುಲ ನಾಶವಾಗಲಿದೆ’ ಎಂದು ಹೇಳಿದ್ದು. ಅವರ ಎಚ್ವರಿಕೆಯ ಮಾತು ನಮಗೆ ಅರ್ಥವಾಗುವುದೇ?

ಜೇನುತುಪ್ಪ ಎಂದಾಕ್ಷಣ ತುಡವೆ ಜೇನು, ಕೋಲ್‌ ಜೇನು, ಹೆಜ್ಜೇನು, ನೆಲ್ಲಿಸರ ಜೇನಿನ ಗೂಡುಗಳು ಕಣ್ಣಿನ ಮುಂದೆ ಹಾದುಹೋಗುತ್ತವೆ. ದುಂಬಿಗಳ ಝೇಂಕಾರ‌ ಕಿವಿಯಲ್ಲಿ ಗುನುಗುಡುತ್ತದೆ. ಕೆರೆಯ ಅಂಚಿನಲ್ಲಿ, ಹೊಲ- ಗದ್ದೆಯ ಬದುಗಳ‌‌ ಮೇಲೆ ಬೆಳೆದು‌ ನಿಂತ ಪೊದೆಗಳಲ್ಲಿ ಕಟ್ಟಿದ ಜೇನನ್ನು‌ ಜತನದಿಂದ ಹೊರತೆಗೆದು ಸವಿದ ಬಾಲ್ಯದ ನೆನಪುಗಳು ಕಾಡದೇ ಇರದು.

ಜೇನು ಹುಳುಗಳಿಂದ ಕಚ್ಚಿಸಿಕೊಂಡು ಊದಿದ ತುಟಿಗಳು, ಕಣ್ಣಿನ ಹುಬ್ಬುಗಳು, ಬಾವು‌ ತುಂಬಿಕೊಂಡ ಮುಖ ಸ್ಮೃತಿಪಟಲದಲ್ಲಿ ಒಮ್ಮೆಲೆ ಸುಳಿಯುತ್ತದೆ. ಆದರೆ, ಮಾನವನಿಗೆ ಅತ್ಯಂತ ಉಪಕಾರಿಯಾದ ಜೇನ್ನೋಣಗಳ ಬದುಕು ದಿನೇ ದಿನೇ ಅಪಾಯದ‌ ಅಂಚಿಗೆ ಸಿಲುಕುತ್ತಿರುವುದು ದುರಂತ.

ಅಪಾಯಕ್ಕೆ ಕಾರಣ ಏನು?

ಕೀಟಗಳ ಲೋಕ ಬಹು ದೊಡ್ಡದು. ಮಾನವ ಮತ್ತು ಅವುಗಳದ್ದು ಬಿಡಿಸಲಾಗದ ನಂಟು. ಅವುಗಳು ಅಪಾಯಕಾರಿ ಎಂದು ನಾವು ಭಾವಿಸುತ್ತೇವೆ. ಹಾಗಾಗಿಯೇ, ನಿರ್ದಯವಾಗಿ ಅವುಗಳನ್ನು ಕೊಲ್ಲಲು ಮುಂದಾಗುತ್ತೇವೆ. ಆದರೆ, ಜೈವಿಕ ಲೋಕದ ಎಲ್ಲ ಕೀಟಗಳು ಹಾನಿಕಾರಕವಲ್ಲ.

ಎಲ್ಲ ಜೀವಿಗಳಂತೆ ಕೀಟಗಳ ಬದುಕು ಕೂಡ ಸಂಕೀರ್ಣ. ಜೀವಜಾಲ ಸುಸ್ಥಿತಿಯಲ್ಲಿ ಇರಲು ಇವುಗಳೇ ಪ್ರಮುಖ ಕೊಂಡಿ. ಅವುಗಳ ಜಗತ್ತಿನಲ್ಲಿ ಅನಗತ್ಯವಾಗಿ ಮೂಗು ತೂರಿಸುವುದೇ ಮಾನವನ ಕೆಲಸ. ಹಾಗಾಗಿ ಜೇನ್ನೊಣ, ಸಗಣಿ ಹುಳು, ಇರುವೆ, ಗೆದ್ದಲು, ಜೀರುಂಡೆ, ಕಡ್ಡಿ ಕೀಟ, ಮಿಡತೆ, ಬೋರಂಗಿ ಹುಳು, ಬಣ್ಣ ಬಣ್ಣದ ಪತಂಗಗಳು ಸೇರಿದಂತೆ ಹಲವು ಜಾತಿಯ ಕೀಟಗಳ ಬದುಕು ಆಪತ್ತಿಗೆ ಸಿಲುಕಿದೆ.

ಮುಂದಿನ ಕೆಲವೇ ವರ್ಷಗಳಲ್ಲಿ ವಿಶ್ವದ ಶೇಕಡ 40ರಷ್ಟು ಕೀಟಗಳು ವಿನಾಶದ ಅಂಚಿಗೆ ಜಾರುತ್ತವೆ ಎನ್ನುತ್ತದೆ ಅಸ್ಟ್ರೇಲಿಯಾದ ಸಂಶೋಧಕರ ವರದಿ. ಮತ್ತೊಂದೆಡೆ ಜಿರಲೆಗಳು, ನೊಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕೀಟಶಾಸ್ತ್ರಜ್ಞರ ಆತಂಕ‌ ಮಡುಗಟ್ಟಲು ಕಾರಣವಾಗಿದೆ.

ಕೀಟಗಳ ಮೂಲ ಸಮಸ್ಯೆ ಎಂದರೆ ಗುಣಮಟ್ಟ ಕಳೆದುಕೊಳ್ಳುತ್ತಿರುವ ಅವುಗಳ ಆವಾಸ. ಸೂಕ್ಷ್ಮ ನೆಲೆಯಾದ ಈ ಪ್ರದೇಶ ಎಲ್ಲ ಕೀಟಗಳ ಬದುಕಿಗೆ ಜೀವಾಳ. ಮನೆಯ ಮುಂದಿನ ಕೈತೋಟ, ಬೇಸಾಯದ‌ಜಮೀನು ಈ ಜೀವ ಪರಿಸರದಲ್ಲಿ ಪ್ರಧಾನ ಪಾತ್ರ. ಕೈತೋಟದ ಉತ್ತಮ ಹವಾಗುಣ ಇವುಗಳ ಬದುಕಿಗೆ ತೀರಾ ಅಗತ್ಯ.

ಗಿಡಗಳು‌ ಹೂ ಬಿಟ್ಟು ಅರಳುತ್ತವೆ. ಅವುಗಳ ಪರಾಗಸ್ಪರ್ಶಕ್ಕೆ ಕೀಟಗಳು ಅತ್ಯಗತ್ಯ. ಈ ಕ್ರಿಯೆಯಿಂದ ಗಿಡಗಳು ವಂಚಿತವಾದರೆ ಜೀವ ಪರಿಸರದಲ್ಲಿ ಏರುಪೇರಾಗುತ್ತದೆ. ಅವುಗಳ ಸಂತಾನಾಭಿವೃದ್ಧಿಗೆ ತೊಡಕಾಗುತ್ತದೆ. ಆಗ ಸಸ್ಯಸಂಕುಲದ ಪಾಡೇನು? ಅವುಗಳ ಪುನರುಜ್ಜೀವನ ಸಾಧ್ಯವೇ? ಹಾಗಾಗಿ, ಕೀಟಗಳ ಜೀವ ಪರಿಸರವನ್ನು ಸಂರಕ್ಷಣೆ ಮಾಡುವುದೇ ಈಗ ಉಳಿದಿರುವ ಏಕೈಕ ದಾರಿ. ಕೀಟಸ್ನೇಹಿ ಕೈತೋಟ ನಿರ್ಮಾಣದತ್ತ ಎಲ್ಲರೂ ಅಲೋಚಿಸುವುದು ಅಗತ್ಯ.

ಬೇಸಾಯ ಪದ್ಧತಿಯ ಬದಲಾವಣೆ, ಕ್ರಿಮಿನಾಶಕ, ಕೀಟನಾಶಕ ಬಳಕೆ, ನಗರೀಕರಣ, ಆಕ್ರಮಣಕಾರಿ ಸಸ್ಯಗಳ ಹಾವಳಿ, ಪರಿಸರ ಮಾಲಿನ್ಯ, ಜಾಗತಿಕ ತಾಪಮಾನವೇ ಕೀಟಗಳ ಬದುಕು ದುಸ್ತರವಾಗಲು ಕಾರಣ. ಶೇಕಡ 75ರಷ್ಟು ಬೆಳೆಗಳಿಗೆ ಪರಾಗಸ್ಪರ್ಶ ನಡೆಯುವುದು‌ ಕೀಟಗಳಿಂದಲೇ. ಆದರೂ, ಅವುಗಳ ಮಹತ್ವ‌ ಮಾತ್ರ ನಮಗೆ ಇಂದಿಗೂ ಅರ್ಥವಾಗುತ್ತಿಲ್ಲ.

ಇವುಗಳ ಅವಸಾನ ಕೇವಲ‌‌ ಮಾನವನ ಬದುಕಿನ ಮೇಲಷ್ಟೇ ಪರಿಣಾಮ ಬೀರುವುದಿಲ್ಲ. ಕೀಟ ಅವಲಂಬಿತ ಪ್ರಾಣಿಗಳು, ಪಕ್ಷಿಸಂಕುಲದ ಮೇಲೂ‌ ದುಷ್ಪರಿಣಾಮ ಬೀರುತ್ತದೆ. ಅವುಗಳ ಆಹಾರದ ಸರಪಳಿಯಲ್ಲಿ ಏರುಪೇರಾಗುತ್ತದೆ.

ಪಕ್ಷಿಗಳ ಬದುಕನ್ನೇ ಗಮನಿಸಿ. ಅವುಗಳು ಮೊಟ್ಟೆ ಇಟ್ಟು ಬೆಚ್ಚನೆಯ‌ ಕಾವು ಕೊಡುತ್ತವೆ. ಮೊಟ್ಟೆಯಿಂದ ಮರಿಗಳು ಹೊರಬಂದ ಮೇಲೆ ಅವುಗಳ ಲಾಲನೆ, ಪೋಷಣೆ ಮಾಡುತ್ತವೆ. ಮರಿಗಳಿಗೆ ಬದುಕಿನ‌ ಪಾಠವನ್ನೂ ಹೇಳಿಕೊಡುತ್ತವೆ. ಅವುಗಳದ್ದು ಭಾವನಾತ್ಮಕ ‌ನಂಟು.

ಪಕ್ಷಿಗಳ ಬದುಕಿನ ಸಾರ್ಥಕತೆ ಅಡಗಿರುವುದೇ ಸಂತಾನಾಭಿವೃದ್ಧಿಯಲ್ಲಿ. ಸಂತಾನ ಮುಂದುವರಿಸಲು ಮರಿಗಳ ಬೆಳವಣಿಗೆಗೆ ಒತ್ತು ನೀಡುತ್ತವೆ. ಸಣ್ಣಪುಟ್ಟ ಕೀಟಗಳ‌ನ್ನು ಹೆಕ್ಕಿ ತಂದು ಮರಿಗಳಿಗೆ ಗುಟುಕು‌ ನೀಡುತ್ತವೆ.

ಹಕ್ಕಿಗಳ ಆಹಾರ ಕ್ರಮವೂ‌‌ ಭಿನ್ನವಾಗಿದೆ. ಅವು ಪ್ರತಿದಿನ ಒಂದೇ ಜಾತಿಯ ಹಣ್ಣನ್ನು‌ ಭಕ್ಷಿಸುವುದಿಲ್ಲ. ಕೇವಲ ಕೀಟಗಳನ್ನೇ ಹೆಕ್ಕುತ್ತಾ ದಿನ‌ ಕಳೆಯುವುದಿಲ್ಲ. ಸೂರ್ಯ ಉದಯಿಸಿ‌‌ ನೆತ್ತಿಗೇರುವ ವೇಳೆಗೆ ನಿರ್ದಿಷ್ಟ ಜಾತಿಯ ಇರುವೆಗಳನ್ನು ಅವು ಭಕ್ಷಿಸುತ್ತವೆ. ಸ್ವಲ್ಪ‌ಹೊತ್ತಿನ ಬಳಿಕ ಕೀಟಗಳ ಬೇಟೆಗೆ‌ ಇಳಿಯುತ್ತವೆ.‌ ಆ ನಂತರ ಹೂವಿನ‌ ಮಕರಂದ ಹೀರಲು ಹಾರುತ್ತವೆ. ಹಾಗಾಗಿ, ಪಕ್ಷಿಗಳ ಆಹಾರ ‌ಪದ್ಧತಿಯಲ್ಲಿ ಕೀಟಗಳಿಗೂ ಪ್ರಧಾನ ಸ್ಥಾನವಿದೆ.

ಜಾಡಮಾಲಿಗಳದ್ದು ಸಂಕಷ್ಟ

ನಿಸರ್ಗದ ಜಾಡಮಾಲಿಗಳಲ್ಲಿ ಅಪೂರ್ವವಾದ ವರ್ಗ ಎಂದರೆ ಸಗಣಿ ಹುಳು. ಪರಿಸರವನ್ನು ಒಪ್ಪ ಮಾಡುವ ಕೆಲಸದಲ್ಲಿಇವುಗಳದ್ದು ವಿಶಿಷ್ಟ ಸ್ಥಾನ.

ನೋಡಲು ದುಂಡಗೆ ಕಾಣುವ ಇವು ಸಮುದಾಯವಾಸಿ. ಜೀವವರ್ತುಲದ ಚಕ್ರ ತಿರುಗಿಸುವಲ್ಲಿ ಇವುಗಳ ಪಾತ್ರವೂ ಬಹುಮುಖ್ಯ. ಜಾನುವಾರುಗಳ ಸಗಣಿಯನ್ನು ಉಂಡೆ ಮಾಡಿ ಹಿಂಗಾಲುಗಳಲ್ಲಿ ಸಾಗಿಸುವುದರಲ್ಲಿ ಇವುಗಳದ್ದು ಅವಿರತ ದುಡಿಮೆ. ಬಿಲದೊಳಗೆ ಆ ಉಂಡೆ ಸೇರಿಸಿ ಭೂಮಿಯ ಫಲವತ್ತತೆ ವೃದ್ಧಿಸಲು ಸಹಕರಿಸುತ್ತವೆ.

ಸೂಕ್ಷ್ಮವಾಗಿ ಅವಲೋಕಿಸಿದಾಗ ಇವುಗಳದ್ದು ಸಾಮಾನ್ಯ ಕೆಲಸವಲ್ಲ. ಮಹತ್ವದ ಕಾರ್ಯ. ಮನುಷ್ಯ ಗಿಡ– ಮರಗಳಿಗೆ ಗೊಬ್ಬರ ಹಾಕಲು ಅಸಡ್ಡೆ ತೋರುವುದು ಸಹಜ. ಭೂಮಿಗೆ ಸಾವಯವ ಗೊಬ್ಬರ ಹಾಕಿ ಹಸನುಗೊಳಿಸುವಲ್ಲಿ ಅವನದು ಇದೇ ಮನಸ್ಥಿತಿ. ಆದರೆ, ಪರಿಸರದಲ್ಲಿ ಜೈವಿಕ‌ ಪುನರ್ ಸೃಷ್ಟಿಗೆ ಇವುಗಳ ‌ಕೊಡುಗೆ ಅನನ್ಯ. ಇವುಗಳ‌ ಬದುಕು ಆಪತ್ತಿಗೆ ಸಿಲುಕಿರುವುದು ವಿಪರ್ಯಾಸ.

ಗೆದ್ದಲು ಪಾತ್ರ

ಗೆದ್ದಲು ಹುಳುಗಳು ಸಮುದಾಯವಾಸಿ. ಆದರೆ, ಇವು ಮಾನವನ ಪಾಲಿಗೆ ವಿನಾಶಕಾರಿ ಕೀಟ. ಪರಿಸರದ ಆರೋಗ್ಯ ಕಾಪಾಡುವಲ್ಲಿ ಇವುಗಳ ಪಾತ್ರ ವಿಶಿಷ್ಟವಾದುದು. ಮರ, ಗಿಡಗಳಲ್ಲಿ ಪಿಷ್ಠ ಪದಾರ್ಥವು ಸೆಲ್ಯುಲೋಸ್‌ ರೂಪದಲ್ಲಿರುತ್ತದೆ. ಇದು ವಿಘಟನೆಯಾಗುವುದಿಲ್ಲ ಎಂದು ನಾವು ಪ್ರಾಥಮಿಕ ಶಾಲಾ ಪಠ್ಯದಲ್ಲಿ ಓದಿರುತ್ತೀವಿ. ಅತ್ಯಂತ ಸಂಕೀರ್ಣವಾದ ಇದನ್ನು ಜೀರ್ಣಿಸಿಕೊಳ್ಳಲು ನಮಗೂ ಸಾಧ್ಯವಾಗುವುದಿಲ್ಲ.

ಪ್ಲಾಸ್ಟಿಕ್‌ ಥರವೇ ವಿಘಟನೆಯಾಗದೆ ಉಳಿಯುವ ಇದನ್ನು ಗೆದ್ದಲು ಹುಳುಗಳು ಸುಲಭವಾಗಿ ಜೀರ್ಣಿಸಿಕೊಂಡು ಸರಳ ವಸ್ತುವಾಗಿ ಮಾಡುತ್ತವೆ. ಒಣಗಿದ ಗಿಡ, ಮರಗಳನ್ನು ಒಡೆದು ಮಣ್ಣು ಮಾಡಿಬಿಡುತ್ತವೆ. ಗೆದ್ದಲುಗಳು ಇಲ್ಲದಿದ್ದರೆ ಯಾವುದೇ ಕಾಡು ಪುಟಿಯುವುದು ಕಷ್ಟಕರ. ಕಾಡನ್ನು ಮತ್ತೆ ಕಟ್ಟುವ ಮತ್ತು ಪುನಶ್ಚೇತನಗೊಳಿಸಲು ಇವುಗಳು ಅತ್ಯಗತ್ಯ. ಜೀವಪರಿಸರದ ಮರುಹುಟ್ಟು ಹಾಗೂ ಜೈವಿಕ ವೈವಿಧ್ಯತೆಯನ್ನು ಜೀವಂತವಾಗಿಡಲು ಗೆದ್ದಲುಗಳ ಶ್ರಮ ದೊಡ್ಡದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT