ನಾಪೋಕ್ಲು: ಪಟ್ಟಣದಲ್ಲಿ ಬೆಳ್ಳಕ್ಕಿ ಕಲರವ

7

ನಾಪೋಕ್ಲು: ಪಟ್ಟಣದಲ್ಲಿ ಬೆಳ್ಳಕ್ಕಿ ಕಲರವ

Published:
Updated:
Deccan Herald

ನಾಪೋಕ್ಲು: ಪಟ್ಟಣದಲ್ಲಿ ಈಗ ಬೆಳ್ಳಕ್ಕಿಗಳ ಕಲರವ ಶುರುವಾಗಿದೆ. ಇಲ್ಲಿನ ಅಪ್ಪಚ್ಚ ಕವಿ ರಸ್ತೆಯ ಉದ್ದಗಲಕ್ಕೂ ಮರಗಳಲ್ಲಿ ಬೆಳ್ಳಕ್ಕಿಗಳು ಮನೆಮಾಡಿವೆ. ಕೆಲವೆಡೆ ಬಿಳಿ ಬಣ್ಣದ ನೂರಾರು ಹಕ್ಕಿಗಳು ಹಚ್ಚಹಸುರಿನ ಮರಗಳಲ್ಲಿ ಗೂಡುಕಟ್ಟಿ ಮೊಟ್ಟೆಗಳನ್ನಿಟ್ಟು ವಂಶಾಭಿವೃದ್ಧಿ ಸಂಭ್ರಮದಲ್ಲಿ ನಿರತವಾಗಿವೆ.

ಎಲ್ಲಿಂದಲೋ ವಲಸೆ ಬರುವ ಬೆಳ್ಳಕ್ಕಿಗಳು ಮೂರು ತಿಂಗಳು ಸಂತಾನೋತ್ಪತ್ತಿ ಮಾಡಿ ಮತ್ತೆ ಮಾಯವಾಗಿಬಿಡುತ್ತವೆ. ನೀಲಾಕಾಶದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಾ ಅಕ್ಕಪಕ್ಕದ ಗದ್ದೆಗಳಲ್ಲಿ ಆಹಾರ ಹುಡುಕುತ್ತಾ ಹಾರಾಡುವ ಈ ಹಕ್ಕಿಗಳಿಗೆ ಇಲ್ಲಿನ ಹಚ್ಚಹಸುರಿನ ಮರಗಳು ವಂಶಾಭಿವೃದ್ಧಿಯ ತಾಣವಾಗಿದೆ.

ಆಸುಪಾಸಿನ ಹಸಿರಿನ ಮರಗಳು, ಹಿತಕರ ವಾತಾವರಣವಿರುವುದರಿಂದ ನೂರಾರು ಸಂಖ್ಯೆಯ ಬೆಳ್ಳಕ್ಕಿಗಳು ಪ್ರತಿವರ್ಷದಂತೆ ೀ ಬಾರಿಯೂ ಅತಿಥಿಗಳಾಗಿವೆ. ಈ ಹಕ್ಕಿಗಳು ಮೇ ತಿಂಗಳಲ್ಲಿ ಬಂದು, ತೋಟ, ಗದ್ದೆಗಳಲ್ಲಿ ಸಿಗುವ ಸಣ್ಣಪುಟ್ಟ ಕಡ್ಡಿಗಳನ್ನು ಹೆಕ್ಕಿ ಇಲ್ಲಿನ ಮರಗಳಲ್ಲಿ ಗೂಡು ಕಟ್ಟಲು ಪ್ರಾರಂಭಿಸುತ್ತವೆ. ಮಳೆಗಾಲದಲ್ಲಿ ಮೊಟ್ಟೆಗಳನ್ನಿಟ್ಟು ಕಾವು ಕೊಟ್ಟು ಮರಿಮಾಡಿ ಅವುಗಳ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಳ್ಳುತ್ತವೆ.

ಬೆಳ್ಳಕ್ಕಿಗಳ ನಡುವೆ ಕೃಷ್ಣವರ್ಣದ ನೀರು ಕಾಗೆಗಳು ಕೂಡ ಇಲ್ಲಿವೆ. ಒಂದೇ ಮರದಲ್ಲಿ ಎರಡೂ ಪಕ್ಷಿಗಳು ಗೂಡು ಕಟ್ಟಿ ಸೌಹಾರ್ದ ಸಂಬಂಧ ಬೆಸೆದುಕೊಂಡಿವೆ. ನೀರು ಕಾಗೆಗಳು ಇಲ್ಲಿನ ಆಸುಪಾಸಿನ ಕೆರೆಗಳಲ್ಲಿ ಸಿಗುವ ಮೀನುಗಳನ್ನು ಹಿಡಿದು ತಂದು ತನ್ನ ಮರಿಗಳನ್ನು ಪೋಷಿಸುತ್ತಿವೆ.

ಕೊಡಗಿನಲ್ಲಿ ಮುಂಗಾರು ಆರಂಭವಾಗುತ್ತಿದ್ದಂತೆಯೇ ಎಲ್ಲೆಂದರಲ್ಲಿ ಅಡ್ಡಾಡಿಕೊಂಡಿದ್ದ ಬೆಳ್ಳಕ್ಕಿಗಳು ಇದೀಗ ಗುಂಪುಗೂಡಿ ಆಶ್ರಯ ತಾಣವನ್ನರಸುತ್ತಿವೆ.

ಕೆಲವು ವರ್ಷಗಳ ಹಿಂದೆ ನಾಪೋಕ್ಲು ಪಟ್ಟಣದ ಸಮೀಪದಲ್ಲಿನ ಕಾವೇರಿ ನದಿ ತೀರದ ಚೆರಿಯಪರಂಬು ನೆಡುತೋಪನ್ನು ಗೂಡು ಕಟ್ಟುವ ಕ್ರಿಯೆಗೆ, ಸಂತಾನಾಭಿವೃದ್ಧಿ ಕಾರ್ಯಕ್ಕೆ ಈ ಬೆಳ್ಳಕ್ಕಿಗಳು ಆಶ್ರಯಿಸಿಕೊಂಡಿದ್ದವು. ಇದೀಗ ನೆಡುತೋಪಿನ ಮರಗಳನ್ನು ಅರಣ್ಯ ಇಲಾಖೆ ಕಡಿದು ತೆರವುಗೊಳಿಸಿದ್ದರಿಂದ ಪಟ್ಟಣ ವ್ಯಾಪ್ತಿಯ ಮರಗಳನ್ನು ಆಶ್ರಯಿಸಿಕೊಂಡಿವೆ. 

ನಾಟಿ ಮಾಡಿರುವ ಹಸಿರು ಗದ್ದೆಗಳ ನಡುವೆ ಅತ್ತಿತ್ತ ನೋಡುತ್ತಾ ಹೊಂಚು ಹಾಕಿ ಹುಳಗಳನ್ನು ಹಿಡಿಯುವ ಇವು ಗುಂಪಾಗಿ ವಾಸಿಸುತ್ತವೆ. ಪ್ರಕೃತಿ ಪ್ರಿಯರ ಕಣ್ಣಿಗೆ ಹಬ್ಬವನ್ನು ಉಂಟು ಮಾಡುವ ಬೆಳ್ಳಕ್ಕಿಗಳ ದರ್ಬಾರು ಈಗ ಎಲ್ಲೆಲ್ಲೂ ಕಂಡುಬಂದಿದೆ.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !