ಶನಿವಾರ, ಜುಲೈ 31, 2021
28 °C

ಆನೆ ಸಾವು ಪ್ರಕರಣ: ಎನ್‌ಜಿಟಿಯಿಂದ ಸಮಿತಿ ರಚನೆ, ವರದಿಗೆ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇರಳದಲ್ಲಿ ಈಚೆಗೆ ನಡೆದಿದ್ದ ಗರ್ಭಿಣಿ ಆನೆ ಸಾವಿನ ಅಮಾನವೀಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ), ಈ ಬಗ್ಗೆ ಸಮಿತಿಯೊಂದನ್ನು ರಚಿಸಿದ್ದು, ಘಟನೆ ಕುರಿತು ವರದಿ ಸಲ್ಲಿಸಲು ಸೂಚಿಸಿದೆ.

ಅನಾನಸ್‌ ಹಣ್ಣಿನಲ್ಲಿ ಸ್ಪೋಟಕವನ್ನು ಇಟ್ಟಿದ್ದ ಮಾನವನ ಕ್ರೌರ್ಯಕ್ಕೆ ಆನೆ ಬಲಿಯಾಗಿತ್ತು. ನೋವು ತಡೆಯಲಾರದೇ ವೆಲಿಯಾರ್‌ ನದಿಯಲ್ಲಿ ಆಶ್ರಯ ಪಡೆದಿದ್ದ ಆನೆ ಅಲ್ಲಿಯೇ ಮೇ 27ರಂದು ಸತ್ತಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಆನೆಯು ಗರ್ಭ ಧರಿಸಿತ್ತು ಎಂಬ ಅಂಶವೂ ತಿಳಿದುಬಂದಿತ್ತು.

ಸ್ಪೋಟದ ಪರಿಣಾಮ ಆನೆಯ ಬಾಯಿಗೆ ತೀವ್ರವಾಗಿ ಪೆಟ್ಟಾಗಿತ್ತು. ಏನನ್ನೂ ತಿನ್ನಲು ಆಗತ್ತಿರಲಿಲ್ಲ. ಈ ಪ್ರಕರಣದ ವಿರುದ್ಧ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗಿದ್ದು, ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿಯೂ ಸಂಬಂಧಿತ ಸುದ್ದಿಯು ವೈರಲ್‌ ಆಗಿತ್ತು ಎಂಬುದನ್ನು ಎನ್‌ಜಿಟಿ ಗಮನಿಸಿದೆ.

ಮಾನವ–ವನ್ಯಜೀವಿಗಳ ಸಂಘರ್ಷವನ್ನು ತಡೆಯಲು ಇರುವ ವಿವಿಧ ನಿಯಮಗಳನ್ನು ಪರಿಣಾಮಕಾರಿಯಾಗಿ ಪಾಲಿಸದೇ ಇರುವುದು ಸೇರಿದಂತೆ ವಿವಿಧ ಕಾರಣಗಳಿಗೆ ಇಂಥ ಘಟನೆ ನಡೆದಿದೆ. ಈ ಬೆಳವಣಿಗೆಗಳಿಂದ ಕಾಡುಪ್ರಾಣಿಗಳ ಜೀವಕ್ಕೂ ಅಪಾಯ ಎದುರಾಗಿದೆ ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಕೆ.ರಾಮಕೃಷ್ಣನ್, ಸೈಬಾಲ್ ದಾಸ್‌ಗುಪ್ತಾ ಅವರಿದ್ದ ಪೀಠವು ಈ ಸಂಬಂಧ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ, ಕೇರಳ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ್ದು, ಜುಲೈ 10ರೊಳಗೆ ಉತ್ತರ ದಾಖಲಿಸುವಂತೆ ಸೂಚಿಸಿತು.

ವಾಸ್ತವ ಸ್ಥಿತಿ ತಿಳಿಯುವುದು ಹಾಗೂ ವನ್ಯಜೀವಿಗಳ ರಕ್ಷಣೆ, ಭವಿಷ್ಯದಲ್ಲಿ ಮಾನವ–ಕಾಡುಪ್ರಾಣಿಗಳ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತೆಯನ್ನು ವಹಿಸಬೇಕಿದ್ದು, ಇದಕ್ಕಾಗಿ ಜಂಟಿ ಸಮಿತಿಯನ್ನು ರಚಿಸಲಾಗಿದೆ ಎಂದು ಎನ್‌ಜಿಟಿ ಜೂನ್‌ 5ರಂದು ಹೊರಡಿಸಿದ ಆದೇಶದಲ್ಲಿ ತಿಳಿಸಿದೆ.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಂತದ ಅಧಿಕಾರಿ, ಕೇರಳದ ಮುಖ್ಯ ವನ್ಯಜೀವಿ ವಾರ್ಡ್, ದಕ್ಷಿಣ ವಲಯದ ವನ್ಯಜೀವಿ ಅಪರಾಧ ನಿಯಂತ್ರಣ ಮಂಡಳಿಯ ಹಿರಿಯ ಅಧಿಕಾರಿ, ಸೈಲೆಂಟ್‌ ವ್ಯಾಲಿ ವಿಭಾಗದ ವನ್ಯಜೀವಿ ವಾರ್ಡನ್‌, ಮನ್ನಾರರ್‌ಕಾಡ್‌, ಪುನಲೂರು ವಿಭಾಗದ ವಿಭಾಗೀಯ ಅರಣ್ಯಾಧಿಕಾರಿ ಹಾಗೂ ಪಾಲಕ್ಕಾಡ್‌ ಜಿಲ್ಲಾಧಿಕಾರಿ ಅವರು ಸಮಿತಿಯಯಲ್ಲಿ ಇರುತ್ತಾರೆ. ಸಮಿತಿಯು ಭವಿಷ್ಯದಲ್ಲಿ ಇಂಥ ಪ್ರಕರಣ ತಡೆಗೆ ಕೈಗೊಳ್ಳಬೇಕಾದ ದೀರ್ಘಾವಧಿ ಕಾರ್ಯಕ್ರಮಗಳು ಸೇರಿದಂತೆ ವಿವಿಧ ಆಯಾಮಗಳನ್ನು ಕುರಿತು ವರದಿ ನೀಡಲಿದೆ.

ಆನೆ ಸಾವು ಪ್ರಕರಣವನ್ನು ಕುರಿತ ಪತ್ರಿಕಾ ವರದಿಗಳನ್ನು ಆಧರಿಸಿ ನ್ಯಾಯಮಂಡಳಿಯ ಈ ಸಂಬಂಧ ಸ್ವಯಂಪ್ರೇರಿತವಾಗಿ ಮೊಕದ್ದಮೆಯನ್ನು ದಾಖಲಿಸಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು