ಶುಕ್ರವಾರ, ಸೆಪ್ಟೆಂಬರ್ 24, 2021
21 °C

ಬಂಡೀಪುರದಲ್ಲಿ ಮತ್ತೊಂದು ಹುಲಿ ಮರಿಯ ಕಳೇಬರ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲದ ಉಪವಿಭಾಗದ ನುಗು ವಲಯದಲ್ಲಿ ಸೋಮವಾರ ಮತ್ತೊಂದು ಹುಲಿ ಮರಿಯ ಕಳೇಬರ ಪತ್ತೆಯಾಗಿದೆ. 

ಭಾನುವಾರ ಇದೇ ಪ್ರದೇಶದಲ್ಲಿ ಮೂರು ಹುಲಿ ಮರಿಗಳು ಪತ್ತೆಯಾಗಿದ್ದವು. ಒಂದು ಹೆಣ್ಣು ಮರಿ ಅಲ್ಲೇ ಮೃತಪಟ್ಟಿದ್ದರೆ, ಇನ್ನೆರಡು ಶೋಚನೀಯ ಸ್ಥಿತಿಯಲ್ಲಿ ಇದ್ದವು. ಅರಣ್ಯ ಅಧಿಕಾರಿಗಳು ತಕ್ಷಣ ಚಿಕಿತ್ಸೆಗಾಗಿ ಎರಡೂ ಮರಿಗಳನ್ನು ಮೈಸೂರಿನ ಮೃಗಾಲಯಕ್ಕೆ ತೆಗೆದುಕೊಂಡು ಹೋದರೂ ಒಂದು ಹೆಣ್ಣು ಮರಿ ಮೃತಪಟ್ಟಿತ್ತು. ಗಂಡು ಮರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. 

ಮರಿಗಳಿಗೆ ಜನ್ಮ ನೀಡಿದ ತಾಯಿ ಹುಲಿಯನ್ನು ಹುಡುಕುವುದಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಭಾನುವಾರ ಮರಿಗಳು ಪತ್ತೆಯಾದ ಸ್ಥಳದಿಂದ 500 ಮೀಟರ್‌ ವ್ಯಾಪ್ತಿಯಲ್ಲಿ ಸೋಮವಾರ ಇನ್ನೊಂದು ಹೆಣ್ಣು ಮರಿಯ ಮೃತದೇಹ ಪತ್ತೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.  

ಮರಿಗಳು ಹುಟ್ಟಿ ಒಂದು ತಿಂಗಳು ಆಗಿರಬಹುದು. ಹಸಿವಿನಿಂದಾಗಿ ಮರಿ ಮೃತಪಟ್ಟಿರುವುದು ಭಾನುವಾರ ನಡೆಸಿದ ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿತ್ತು. ಮರಿ ಹಾಕಿದ ಕೆಲವೇ ದಿನಗಳಲ್ಲಿ ತಾಯಿ ಹುಲಿ ಮರಿಗಳಿಂದ ಬೇರ್ಪಟ್ಟಿರಬಹುದು. ಇದರಿಂದಾಗಿ ಅವುಗಳಿಗೆ ಸರಿಯಾಗಿ ಆಹಾರ ಸಿಕ್ಕಿರಲಿಲ್ಲ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. 

‘ಮರಿಗಳಲ್ಲಿ ಸೋಂಕು ಕಂಡುಬಂದ ಕಾರಣಕ್ಕೆ ತಾಯಿ ಹುಲಿ ಅವುಗಳಿಂದ ದೂರ ಹೋಗಿರುವ ಸಾಧ್ಯತೆ ಇದೆ. ಅದಕ್ಕಾಗಿ ಹುಡುಕಾಟ ಮುಂದುವರೆದಿದೆ. ಸ್ಥಳದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿವೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು