ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಲ್ಲದೆ 10 ತಿಂಗಳು ಜೀವಿಸುವ ಜಿಂಕೆ!

Last Updated 11 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ನೀರಿಲ್ಲದೇ ಹೆಚ್ಚು ಕಾಲ ಜೀವಿಸುವ ಪ್ರಾಣಿಗಳು ಎಂದ ಕೂಡಲೇ ಮರುಭೂಮಿಗಳಲ್ಲಿ ವಾಸಿಸುವ ಒಂಟೆಗಳು ನೆನಪಾಗುತ್ತವೆ. ಇಲಿಗಳೂ ನೀರಿಲ್ಲದೇ ಹಲವು ವರ್ಷಗಳ ಜೀವಿಸಲಬಲ್ಲವು ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಪ್ರಾಣಿಗಳಂತೆಯೇ ಹೆಚ್ಚು ಕಾಲ ನೀರಿಲ್ಲದೇ ಜೀವಿಸುವಂತಹ ಸಿಮಿಟರ್ ಆರಿಕ್ಸ್‌ (Scimitar Oryx) ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿಯೋಣ.

ಇದರ ವೈಜ್ಞಾನಿಕ ಹೆಸರು ಆರಿಕ್ಸ್ ಡಮಾ (Oryx dammah). ಹಸು, ಎಮ್ಮೆ, ಎತ್ತುಗಳಂತೆ ಇದು ಕೂಡ ಸಸ್ಯಾಹಾರಿ ಪ್ರಾಣಿಗಳ ಬೊವಿಡೇ (Bovidae) ಕುಟುಂಬಕ್ಕೆ ಸೇರಿದ್ದು, ಹಿಪೊಟ್ರ್ಯಾಗಿನೇ (Hippotraginae)
ಉಪ ಕುಟುಂಬ ಮತ್ತು ಅರ್ಟಿಯೊಡಾಕ್ಟಿಲಾ (Artiodactyla) ಗುಂಪಿನಲ್ಲಿ ವರ್ಗೀಕರಿಸಲಾಗಿದೆ.

ಹೇಗಿರುತ್ತದೆ?

ಇದು ಜಿಂಕೆಯಾದರೂ ದೇಹರಚನೆ ಬಹುತೇಕ ಮೇಕಯ ದೇಹರಚನೆಯ್ನನೇ ಹೋಲುತ್ತದೆ. ದೇಹವೆಲ್ಲಾ ಬಿಳಿ ಬಣ್ಣದ ನಯವಾದ ತುಪ್ಪಳದಿಂದ ಕೂಡಿರುತ್ತದೆ.ಕತ್ತು, ಕುತ್ತಿಗೆಯಿಂದು ಹಿಡಿದು ಎದೆ ಭಾಗದ ವರೆಗೆ ಕಂದು ಬಣ್ಣದ ತುಪ್ಪಳವಿರುತ್ತದೆ. ಕಾಲುಗಳು ನೀಳವಾಗಿದ್ದು, ಎರಡು ಗೊರಸುಗಳು ಇರುತ್ತವೆ. ಬಾಲ ಪುಟ್ಟದಾಗಿದ್ದು, ಎತ್ತಿನ ಬಾಲದಂತೆ ರಚನೆಯಾಗಿರುತ್ತದೆ. ಮೂತಿ ನೀಳವಾಗಿದ್ದು, ಮೇಕೆಯನ್ನೇ ಹೋಲುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಪ್ಪು ಬಣ್ಣದಲ್ಲಿರುತ್ತವೆ. ಎಲೆಯಾಕಾರದ ಕಿವಿಗಳು ಎತ್ತಿನ ಕಿವಿಗಳನ್ನೇ ಹೋಲುತ್ತವೆ. ನೀಳವಾದ ಕೋಡುಗಳು ಈ ಜಿಂಕೆಯ ಆಕರ್ಷಣೆಗಳಲ್ಲಿ ಒಂದು.

ವಾಸಸ್ಥಾನ

ಆಫ್ರಿಕಾ ಖಂಡದಲ್ಲಿ ಮಾತ್ರ ಕಾಣಸಿಗುವ ಜಿಂಕೆಗಳಲ್ಲಿ ಇದು ಕೂಡ ಒಂದು. ಈ ಹಿಂದೆ ಉತ್ತರ ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ಇದರ ಸಂತತಿ ಹೆಚ್ಚಾಗಿ ವಿಸ್ತರಿಸಿತ್ತು. ಪ್ರಸ್ತುತ ಟುನಿಷಿಯಾ, ಮೊರಾಕೊ, ಸೆನೆಗಲ್‌ನ ಸಂರಕ್ಷಿತ ಪ್ರದೇಶಗಳಲ್ಲಿ ಮಾತ್ರ ಇವೆ.

ಹುಲ್ಲು ಹೆಚ್ಚಾಗಿ ಬೆಳೆದಿರುವ ಪ್ರದೇಶ, ಅರೆ ಮರುಭೂಮಿ ಮತ್ತು ಮರುಭೂಮಿ ಪ್ರದೇಶಗಳ ಅಂಚುಗಳಲ್ಲಿ ಈ ಜಿಂಕೆಯನ್ನು ಕಾಣಬಹುದು.

ಜೀವನಕ್ರಮ ಮತ್ತು ವರ್ತನೆ

ಇದು ಗುಂಪಿನಲ್ಲಿ ವಾಸಿಸಲು ಇಷ್ಟಪಡುವ ಪ್ರಾಣಿ. ಒಂದು ಗುಂಪಿನಲ್ಲಿ 2ರಿಂದ 40 ಆರಿಕ್ಸ್‌ಗಳು ಇರುತ್ತವೆ. ಗುಂಪಿನಲ್ಲೇ ಆಹಾರ ಹುಡುಕುತ್ತಾ ಅಲೆಯುತ್ತವೆ. ಗುಂಪಿನಲ್ಲಿರುವ ಪ್ರಬಲ ಗಂಡು ಆರಿಕ್ಸ್‌ ಪಾರಮ್ಯ ಮೆರೆಯುತ್ತದೆ. ಚಳಿಗಾಲದಲ್ಲಿ ಸಹಾರಾ ಮರುಭೂಮಿ ಪ್ರದೇಶದ ಉತ್ತರ ಭಾಗಕ್ಕೆ ನೂರಾರು ಆರಿಕ್ಸ್‌ಗಳು ಸೇರಿ ವಲಸೆ ಹೋಗುತ್ತವೆ.

ಇದು ಹಗಲು ಮತ್ತು ರಾತ್ರಿ ಎರಡೂ ಅವಧಿಯಲ್ಲೂ ಚಟುವಟಿಕೆಯಿಂದ ಇರುತ್ತದೆ. ಉಳಿದ ಅವಧಿಗೆ ಹೋಲಿಸಿದರೆ ಮುಂಜಾನೆ ಮತ್ತು ಸಂಜೆ ಹೆಚ್ಚು ಚುರುಕಾಗಿರುತ್ತದೆ. ಬಿಸಿಲಿ ಹೆಚ್ಚಾಗಿರುವ ಅವಧಿಯಲ್ಲಿ ನೆರಳು ಇರುವ ಪ್ರದೇಶಗಳಲ್ಲಿ ವಿಶ್ರಾಂತಿ ಪಡೆಯುತ್ತದೆ. ನೆರಳು ಸಿಗದೇ ಇದ್ದರೆ, ದೃಢವಾದ ಗೊರಸುಗಳಿಂದ ದೇಹ ಹಿಡಿಸುವಷ್ಟು ನೆಲವನ್ನು ಅಗೆದು ವಿಶ್ರಾಂತಿ ಪಡೆಯುತ್ತದೆ.

ಗಂಡು ಆರಿಕ್ಸ್‌ಗಳು ಆಗಾಗ್ಗೆ ಕಾಳಗ ನಡೆಸಿದರೂ ಹಿಂಸೆಯ ಸ್ವರೂಪ ಪಡೆಯುವುದಿಲ್ಲ. ಕೆಲಹೊತ್ತು ಕಾದಾಡಿದ ನಂತರ ಸುಮ್ಮನಾಗುತ್ತವೆ. ಶಬ್ದಗಳಿಗಿಂತ ಹೆಚ್ಚಾಗಿ ಕಿವಿಗಳ ಚಲನೆ, ಬಾಲದ ಚಲನೆ ಮತ್ತು ದೇಹದ ಭಂಗಿಗಳ ಮೂಲಕ ಸಂವಹ ನಡೆಸುತ್ತದೆ.

ಆಹಾರ

ಇದು ಸಂಪೂರ್ಣ ಸಸ್ಯಾಹಾರಿ ಪ್ರಾಣಿ. ವಿವಿಧ ಬಗೆಯ ಗಿಡಗಳ ಎಲೆಗಳು ಮತ್ತು ಹುಲ್ಲು ಇದರ ಪ್ರಮುಖ ಆಹಾರ. ಬೇರುಗಳು, ಪೊದೆಗಿಡಗಳ ಎಲೆಗಳು, ನೀರಿನ ಅಂಶ ಹೆಚ್ಚಾಗಿರುವ ಗಿಡಗಳ ಎಲೆಗಳು, ಧಾನ್ಯಗಳು, ಹಣ್ಣುಗಳು, ಹೂಗಳನ್ನು ಸೇವಿಸುತ್ತದೆ. ನೀರಿಲ್ಲದೇ ಹಲವು ದಿನಗಳ ಕಾಲ ಬದುಕುಳಿಯುವ ಸಾಮರ್ಥ್ಯ ಇದಕ್ಕಿದೆ.

ಸಂತಾನೋತ್ಪತ್ತಿ

ಆಹಾರ ದೊರೆಯುವ ಪ್ರಮಾಣಕ್ಕೆ ಅನುಗುಣವಾಗಿ ಮತ್ತು ಸೂಕ್ತ ವಾತಾವರಣವಿದ್ದರೆ ಇದು ಸಂತಾನೋತ್ಪತ್ತಿ ನಡೆಸುತ್ತದೆ. ಹೆಣ್ಣು ಆರಿಕ್ಸ್‌ ಸುಮಾರು 9 ತಿಂಗಳು ಗರ್ಭಧರಿಸಿ ಒಂದು ಮರಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಕಾಫ್ (Calf) ಎನ್ನುತ್ತಾರೆ. ಮ

ಆಗಷ್ಟೇ ಜನಿಸಿದ ಮರಿ 10–15 ಕೆ.ಜಿ. ತೂಕವಿರುತ್ತದೆ. ಸುಮಾರು ಮೂರು ತಿಂಗಳ ವರೆಗೆ ಮರಿಯನ್ನು ತಾಯಿ ಆರಿಕ್ಸ್‌ ಹಾಲುಣಿಸಿ ಬೆಳೆಸುತ್ತದೆ. 14 ವಾರಗಳ ನಂತರ ಮರಿ ಸ್ವತಂತ್ರವಾಗಿ ಆಹಾರ ಹುಡುಕಲು ಆರಂಭಿಸುತ್ತದೆ. 2 ವರ್ಷಗಳೊಳಗೆ ಮರಿ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ಪುರಾತನ ಈಜಿಪ್ಟ್ ನಾಗರಿಕರು ಈ ಜಿಂಕೆಯನ್ನು ಸಾಕುಪ್ರಾಣಿಯಾಗಿ ಬೆಳೆಸಿಕೊಂಡ ಕುರುಹುಗಳು ದೊರೆತಿವೆ.

* ಹರಿತವಾದ ಕತ್ತಿಗಳಂತೆ ಇದರ ಕೋಡುಗಳು ನೀಳವಾಗಿ ಬೆಳೆಯುವುದರಿಂದ ಇದಕ್ಕೆ ಸಿಮಿಟರ್ ಆರಿಕ್ಸ್ ಎಂದು ಹೆಸರಿಡಲಾಗಿದೆ.

* ಇದರ ತುಪ್ಪಳ ವಿಶೇಷವಾಗಿ ರಚನೆಯಾಗಿದ್ದು, ಸೂರ್ಯರಶ್ಮಿಯಿಂದ ರಕ್ಷಿಸಿಕೊಳ್ಳಲು ನೆರವು ನೀಡುತ್ತದೆ.

* ಏರಿದ ಬಿಸಿಲಿನ ತಾಪಮಾನಕ್ಕೆ ತಕ್ಕಂತೆ ಇದು ಕೂಡ ದೇಹದ ಉಷ್ಣಾಂಶವನ್ನು 46 ಡಿಗ್ರಿ ಸೆಲ್ಸಿಯಸ್‌ಗೆ ಹೆಚ್ಚಿಸಿಕೊಳ್ಳುತ್ತದೆ. ದೇಹಕ್ಕೆಲ್ಲಾ ನಿರ್ದಿಷ್ಟ ಉಷ್ಣಾಂಶದಲ್ಲಿ ರಕ್ತ ಪೂರೈಕೆಯಾಗುವಂತೆ ವಿಶೇಷವಾಗಿ ಇದರ ರಕ್ತನಾಳಗಳು ಕಾರ್ಯನಿರ್ವಹಿಸುತ್ತವೆ.

* ಈ ಜಿಂಕೆಯ ನೀರಿಲ್ಲದೇ ಸುಮಾರು 10 ತಿಂಗಳ ವರೆಗೆ ಬದುಕುವ ಸಾಮರ್ಥ್ಯ ಹೊಂದಿದೆ. ದೇಹದಲ್ಲಿನ ನೀರು ಮೂತ್ರದ ರೂಪದಲ್ಲಿ ಹೊರಹೊಗದಂತೆ ಕಾಪಾಡಲು ವಿಶೇಷವಾಗಿ ಮೂತ್ರಪಿಂಡಗಳು ರಚನೆಯಾಗಿವೆ.

ಗಾತ್ರ ಮತ್ತು ಜೀವಿತಾವಧಿ

ದೇಹದ ತೂಕ- 91 ರಿಂದ 120 ಕೆ.ಜಿ., ದೇಹದ ಉದ್ದ -140 ರಿಂದ 240 ಸೆಂ.ಮೀ,ದೇಹದ ಎತ್ತರ- 3 ರಿಂದ 3.5 ಅಡಿ,ಜೀವಿತಾವಧಿ-20 ವರ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT