ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಎರಡನೇ ಅತಿ ಚಿಕ್ಕ ಪಕ್ಷಿ ವೀಬಿಲ್‌

Last Updated 10 ಫೆಬ್ರುವರಿ 2019, 13:29 IST
ಅಕ್ಷರ ಗಾತ್ರ

ದೈತ್ಯಗಾತ್ರದ ಪಕ್ಷಿಗಳು ಎಂದ ಕೂಡಲೇಉಷ್ಟ್ರಪಕ್ಷಿ ನೆನಪಾಗುತ್ತದೆ. ಅದೇ ರೀತಿ ಅತಿ ಚಿಕ್ಕ ಗಾತ್ರದ ಪಕ್ಷಿ ಎಂದಾಗ ನೆನಪಾಗುವುದು ಹಮ್ಮಿಂಗ್‌ಬರ್ಡ್. ಗಾತ್ರದಲ್ಲಿ ಅತಿ ಚಿಕ್ಕದಾದ ಹಕ್ಕಿಗಳಲ್ಲಿ ವೀಬಿಲ್‌ ಕೂಡ ಒಂದು. ಇದು ಹಮ್ಮಿಂಗ್ ಬರ್ಡ್‌ ನಂತರ ಎರಡನೇ ಅತಿ ಚಿಕ್ಕ ಹಕ್ಕಿ. ಇದರ ವೈಜ್ಞಾನಿಕ ಹೆಸರು ಸ್ಮಿಕ್ರೊನಿಸ್‌ ಬ್ರಿವಿರಾಸ್ಟ್ರಿಸ್ (Smicrornis brevirostris). ಇಂದಿನ ಪಕ್ಷಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.

ಹೇಗಿರುತ್ತದೆ?

ಇದುಅಕಾಂಥಿಜಿಡೆ ಕುಟುಂಬಕ್ಕೆ ಸೇರಿದ ಒಂದು ಪಕ್ಷಿ ಪ್ರಭೇದ. ನೋಡುವುದಕ್ಕೆ ಗುಬ್ಬಚ್ಚಿಯ ಹಾಗೆ ಕಾಣುತ್ತದೆ. ಪುಟ್ಟ ದೇಹಾಕೃತಿಯಿಂದಾಗಿಯೇ ಇದಕ್ಕೆ ವೀಬಿಲ್ ಎಂಬ ಹೆಸರು ಬಂದಿದೆ. ಕಪ್ಪು–ಬಿಳಿ ಮತ್ತು ತಿಳಿಹಳದಿ ಪುಕ್ಕದಿಂದ ದೇಹ ಆವರಿಸಿರುತ್ತದೆ. ಕೊಕ್ಕು ಪುಟ್ಟದಾಗಿದ್ದಿ, ಚೂಪಾಗಿರುತ್ತದೆ. ಕಣ್ಣುಗಳು ಕಂದು ಬಣ್ಣದಲ್ಲಿರುತ್ತವೆ. ತಲೆ ಮತ್ತು ಕತ್ತಿನ ಭಾಗ ಕಂದು ಬಣ್ಣದಲ್ಲಿದ್ದರೆ, ದೇಹ ಹಳದಿಮಿಶ್ರಿತ ಹಸಿರು ಬಣ್ಣದಲ್ಲಿರುತ್ತದೆ. ದೇಹದ ಕೆಲಭಾಗವು ಬಿಳಿ ಬಣ್ಣದ ಗರಿಗಳಿಂದ ಆವೃತವಾಗಿರುತ್ತದೆ. ಉದ್ದವಾದ ಬಾಲದ ರೆಕ್ಕೆಗಳನ್ನು ಹೊಂದಿರುತ್ತದೆ.

ಎಲ್ಲೆಲ್ಲಿದೆ?

ಇದು ಆಸ್ಟ್ರೇಲಿಯಾದಲ್ಲೇ ಅತಿ ಚಿಕ್ಕ ಪಕ್ಷಿ ಪ್ರಭೇದವಾಗಿದೆ. ಇಲ್ಲಿನ ಟಾಸ್ಮಾನಿಯಾ ದ್ವೀಪ ಪ್ರದೇಶವನ್ನು ಹೊರತುಪಡಿಸಿ, ಆಸ್ಟ್ರೇಲಿಯಾದ ಬಹುತೇಕ ಭೂಪ್ರದೇಶ, ಹುಲ್ಲುಗಾವಲುಗಳು ಮತ್ತು ಅರಣ್ಯಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ಆಹಾರ

ಇದು ಮಿಶ್ರಾಹಾರಿ ಪಕ್ಷಿಯಾಗಿದೆ. ಹೆಚ್ಚಾಗಿ ಕೀಟಗಳನ್ನು ಹಾಗೂ ಲಾರ್ವಾಗಳು, ವಿವಿಧ ಬಗೆಯ ಧಾನ್ಯಗಳನ್ನು ತಿನ್ನುತ್ತದೆ.‌

ವರ್ತನೆ ಮತ್ತು ಜೀವನಕ್ರಮ

ಇದು ಹುಲ್ಲು ಮತ್ತು ಮರದ ಎಲೆಗಳನ್ನು ಬಳಸಿಕೊಂಡು ಚಿಕ್ಕದಾದ ಸುಂದರ ಗೂಡನ್ನು ಕಟ್ಟುತ್ತದೆ. ಗಂಡು ಹೆಣ್ಣು ಪಕ್ಷಿಗಳು ಜೊಡಿಯಾಗಿ ಮತ್ತು ಗುಂಪಿನಲ್ಲಿ ವಾಸಿಸಲು ಇಷ್ಟಪಡುತ್ತವೆ. ದಿನದ ಬಹುತೇಕ ಸಮಯವನ್ನು ಮರಗಳ ಮೇಲೆಯೇ ಕಳೆಯುತ್ತದೆ. ಸಾಮನ್ಯವಾಗಿ ಒಂದು ನಿರ್ದಿಷ್ಟ ಪ್ರದೇಶದ ಸುತ್ತಲಿನ ಪ್ರದೇಶಗಳಲ್ಲಿ ದೀರ್ಘಕಾಲದವರೆಗೆ ಜೀವಿಸುತ್ತದೆ.

ಸಂತಾನೋತ್ಪತ್ತಿ

ಜುಲೈ ಮತ್ತು ಮೇ ತಿಂಗಳ ನಡುವಿನ ಸಮಯವು ಇದರ ಸಂತಾನೋತ್ಪತ್ತಿಗೆ ಪ್ರಶಸ್ತವಾಗಿರುತ್ತದೆ. ಹೆಣ್ಣು ಪಕ್ಷಿ ಒಂದು ಬಾರಿಗೆ 2 ರಿಂದ 3 ಮೊಟ್ಟೆಗಳನ್ನು ಇಡುತ್ತದೆ. ಈ ಮೊಟ್ಟೆಗಳು ಬಿಳಿಮಿಶ್ರಿತ ಕಂದು ಬಣ್ಣದಲ್ಲಿ ಇರುತ್ತವೆ. ಅವುಗಳಿಗೆ ಸುಮಾರು 12 ದಿನಗಳವರೆಗೆ ಕಾವು ಕೊಡುತ್ತದೆ. ಮರಿಗಳು ವಯಸ್ಕ ಹಂತಕ್ಕೆ ಬರುವವರೆಗೆ ಗಂಡು ಮತ್ತು ಹೆಣ್ಣು ಪಕ್ಷಿಗಳೆರಡು ಮರಿಗಳ ಪೋಷಣೆಯ ಜವಾಬ್ದಾರಿಯನ್ನು ಹೊರುತ್ತವೆ.

ಗಾತ್ರ ಮತ್ತು ತೂಕ

8 ರಿಂದ 9 ಸೆಂ.ಮೀ:ದೇಹದ ಉದ್ದ

8 ಗ್ರಾಂ:ತೂಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT