ಮುಂಗಾರು ಮಳೆ.... ಐದಕ್ಷರ ಉಲಿದರೆನೇ ಎಂಥ ಮುದ. ಅದರಲ್ಲೂ ಮಲೆನಾಡಿನ ಮನಗಳಿಗೆ ಮುಂಗಾರು ಮಳೆ ಎಂದರೆ ಅದೊಂದು ವರ್ಣಿಸಲಾರದ ಅನುಭೂತಿ. ಉತ್ತರ ಕನ್ನಡದ ಮಲೆನಾಡಿನಲ್ಲೇ ಹುಟ್ಟಿ ಬೆಳೆದ ನಾನೀಗ ಹುಬ್ಬಳ್ಳಿ ವಾಸಿ. ಇಲ್ಲಿ ಆಗೀಗ ಮುಂಗಾರು ಮಳೆ ಧೋ ಎಂದು ಸುರಿದಾಗ ನೆನಪಾಗೋದು ಮಾತ್ರ ನಮ್ಮೂರು ಶಿರಸಿ ಮಳೆಯೇ. ಆದರೆ ಈ ಬಾರಿ ನನ್ನ ತವರಿನ ಮುಂಗಾರು ಮಳೆಯ ಆ ಲಾಲಿತ್ಯ, ಬೆರಗಿನ ಸಾಂಗತ್ಯವನ್ನು ಮನಸಾರೆ ಅನುಭವಿಸಲು ಈ ಹಾಳಾದ ಕೊರೊನಾ ಬಿಡಲಿಲ್ಲ.
ಮುಂದಿನ ದಾರಿ ಮಸುಕಾಗುವಷ್ಟರ ಮಟ್ಟಿಗೆ ಸುರಿವ ಮಳೆಯಲ್ಲಿ ಹೆಜ್ಜೆಯಿಟ್ಟು ಸಾಗುವಾಗ ಮನಸ್ಸಿನೊಳಗೆ ಒತ್ತರಿಸಿ ಬರುವ ಖುಷಿ ಇದೆಯಲ್ಲ; ಅದಕ್ಕೆ ಯಾವುದೂ ಸಾಟಿಯಿಲ್ಲ. ಉಟ್ಟ ಅರಿವೆಗಳು ಒದ್ದೆಮುದ್ದೆಯಾದರೂ ಅದರ ಪರಿವೇ ಇರದು. ನೋಡನೋಡುತ್ತಲೇ ಹಳ್ಳದ ಅಂಚುಗಳನ್ನೂ ತಬ್ಬಿಕೊಂಡು ಮರದ ದಿನ್ನೆಗಳನ್ನು ದೂಡಿಕೊಂಡು ಹರಿಯುವ ರೌದ್ರರಮಣೀಯ ನೀರ ನೋಟದ ಬೆರಗು ಮನದಲ್ಲಿಂದಿಗೂ ಹಸಿರಾಗುಳಿದ ನೆನಪು.ಆ ದಿನಗಳು ಮತ್ತೆ ನೆನಪಾದವು. ಆದರೆ ಈ ವರ್ಷ ಕೊರೊನಾ ಕಾರಣ ಕರಗಿ ಹೋದ ಮುಂಗಾರು ಮಳೆಯ ಎಲ್ಲ ಅನುಭೂತಿಯನ್ನು ಮುಂದಿನ ವರ್ಷದ ಮುಂಗಾರಿಗೆ ಕಾಪಿಡುತ್ತಿದ್ದೇನೆ.
ಆದರೂ ಮುಂಗಾರಿನ ಆ ಸುಂದರ ಮೆಲುಕುಗಳು ಮನಸ್ಸನ್ನು ಬಾಚಿ ತಬ್ಬಿಕೊಂಡಂತೆ ಅನಿಸುತ್ತಿದೆ. ಸುತ್ತ ಮುತ್ತ ಎಲ್ಲೆಲ್ಲೂ ಹಸಿರು ಹೊದ್ದ ಪ್ರಕೃತಿಯ ನಡುವೆ ಹೆಜ್ಜೆ ಹಾಕಿ ಅದರೊಳಗೇ ಪರವಶಳಾಗಬೇಕು. ಮಳೆಗೆ ಪಾಚಿಗಟ್ಟಿದ ಹಸಿರ ನೆಲದಲ್ಲಿ ಜುಳುಜುಳು ಹರಿವ ನೀರೊಳಗೆ ಕಾಲಾಡಿಸುತ್ತ ಹೆಜ್ಜೆ ಹಾಕುತ್ತ ಹಾದಿಗುಂಟದ ಗಿಡಮರಗಳ ಹೆರೆಗಳು ದಪ್ಪದಪ್ಪ ಮಳೆ ಹನಿಗೆ ಬಾಗಿ ನೆಲ ಮುಟ್ಟುವಂತೆ ಕಾಣುವಾಗ ಅವುಗಳನ್ನು ಕೈಗಳಿಂದ ಅಲುಗಿಸಿ, ಆ ಪಳಪಳ ಹೊಳೆಯುವ ತುಂತುರ ಹನಿಗಳು ಮೈಮೊಗಕ್ಕೆಲ್ಲ ಸೋಕಿ ತನ್ಮಯಳಾಗಬೇಕು. ಸುತ್ತ ಹಸಿರು ತಬ್ಬಿದ ಗುಡ್ಡವೋ ಇಲ್ಲ ಬೆಟ್ಟದ ತುತ್ತತುದಿಯಲ್ಲಿ ನಿಂತು ಹೋಹೋ... ಎಂದು ಕೂಗಬೇಕು. ಮಲೆನಾಡಿನ ಬಳಕುವ ಹಾಲ್ನೊರೆ ಬೆಡಗಿಯರ ಬಿನ್ನಾಣ ಕಂಡು ನಸುನಾಚಬೇಕು. ದಟ್ಟನೆಯ ಕಾಡುಗಳ ನಡುವೆ ಹಸಿರ ಸಿರಿಯನ್ನು ಸೀಳಿಕೊಂಡು ಜಿಗಿಯುವ ಜಲಧಾರೆ ಕಂಡು ಮೈಮನ ಪುಳಕಗೊಳ್ಳಬೇಕು. ದಟ್ಟನೆಯ ಮರಗಳ ಹೊತ್ತು ನಿಂತ ಕಣಿವೆಯಲ್ಲಿ ಜೋರು ಮಳೆ ನಿಂತ ಮೇಲೆ ಮೇಲೇಳುವ ಹೊಗೆ ಮೋಡಗಳ ಮುತ್ತುವ ಪರಿ ಕಂಡು ನನ್ನನ್ನೇ ನಾ ಮರೆಯಬೇಕು.
ಪಾಚಿಗಟ್ಟಿದ ಬಂಡೆ ಮೇಲೆ ಕಾಲಿಟ್ಟು ಜಾರಬೇಕು. ಮಲೆನಾಡಿನ ಉಂಬಳಗಳಿಗೂ ನಾನು ರಕ್ತದಾನಿಯಾಗಬೇಕು. ಒಣ ಮರಮಟ್ಟು ಬಿದ್ದು ಕೊಳೆತು ಅದರಿಂದ ಮೇಲೇಳುವ ಅಣಬೆಗಳ ವೈಯಾರ ಕಂಡು ಬೀಗಬೇಕು. ಮಳೆಗೆ ನೆನೆದು ಮಣ್ಣಿನ ಜೊತೆ ಮುಕ್ಕಾಗುವ ಎಲೆಗಳ ಮೇಲೆ ಹರಿದಾಡುವ ಬಣ್ಣಬಣ್ಣದ ಹಾವು, ಹರಿಣಿ, ಏಡಿ, ಚೇಳುಗಳ ಕಂಡು ಹೌಹಾರಬೇಕು. ಮಲೆನಾಡಿನ ವಿಭಿನ್ನ ಲೈವ್ ಮ್ಯೂಸಿಕ್ ಜೀರುಂಡೆಯ ಚೀರಾಟ ಕೇಳುತ್ತ ಬ್ಲಾಂಕೆಟ್ ಹೊದ್ದು ಮುದುಡಿ ಮಲಗಿ, ಬೆಚ್ಚನೆಯ ಕನಸ ಹೊಸೆಯಬೇಕು.
ರಪರಪ ಎಂದು ಒಂದೇ ಸಮನೆ ಸುರಿಯುವ ಮಳೆಯಲ್ಲಿ ಕಂಬಳಿ ಕೊಪ್ಪೆ ಹೊದ್ದು ಬೆಚ್ಚಗೆ ಸಾಗಬೇಕು. ಮಳೆ ನೀರು ಕುಡಿದು ಮೆತ್ತಗಾಗುವ ಮರದ ತೊಗಟೆಗಳ ನಡುವಿನಿಂದ ಹೊರಗಿಣುಕುವ ಆರ್ಕಿಡ್ ಬಳ್ಳಿ, ಎಲೆಗಳನ್ನು ಬೊಗಸೆಯಲ್ಲಿ ಹಿಡಿಯಬೇಕು. ಮರಕ್ಕೆ ಹಿಡಿದ ಬಂದಳಿಕೆಯಿಂದ ಇಳಿದು ಲಾಸ್ಯವಾಡುವ ಸೀತಾಳೆ ದಂಡೆಗಳ ಒನಪು ವೈಯ್ಯಾರ ಕಂಡು ಒಳಗೊಳಗೇ ಬೆರಗಾಗಬೇಕು. ಕಿರು ಹೂವನ್ನು ಮುತ್ತಿಕ್ಕಿ ಓಲಾಡುವ ಮಳೆ ಹನಿಯನ್ನು ಬೊಗಸೆಯಲ್ಲಿ ಹಿಡಿಯಬೇಕು.
ಬಿರುಸಿನ ಮಳೆಗೆ ಹಿಡಿದ ಕೊಡೆ ಹಾರಿ ಹೋಗಿ ತೋಯ್ದು ಕೊಪ್ಪೆಯಂತಾಗಿ ಮೈ ಮನ ಆರ್ದ್ರಗೊಳ್ಳಬೇಕು. ನಾಬಿಯಿಂದೆದ್ದು ಬರುವ ಚಳಿಗೆ ಹಲ್ಲುಗಳು ಕಟಕಟ ಅನ್ನಬೇಕು. ಮಳೆಗೆ ತೊಯ್ದು ಬಾಗಿದ ಮರಗಳ ನಡುವಿನ ಕಪ್ಪು ಡಾಂಬರು ರಸ್ತೆಯಲ್ಲಿ ಬರಿಗಾಲಲ್ಲಿ ಹೆಜ್ಜೆ ಹಾಕಬೇಕು. ಮಳೆಗೆ ಪಾಚಿಗಟ್ಟಿ ಚಾವಣಿ, ಗೋಡೆ ಹಸಿರು ಹಸಿರಾಗಿ ಕಂಗೊಳಿಸುವ ಹಳ್ಳಿ ಹಾದಿಯ ತಂಗುದಾಣಗಳಲ್ಲಿ ಕುಳಿತು ಕಾಲಕಳೆಯಬೇಕು. ಧೋ... ಎಂದು ಸುರಿವ ಮಳೆಯನ್ನೇ ಧೇನಿಸಬೇಕು.
ಹಳ್ಳಿ ಮನೆಯ ಕಟ್ಟಿಗೆ ಒಟ್ಟುವ ಒಲೆ ಮೇಲೆ ಇಟ್ಟ ಹಲಸಿನ ಹಣ್ಣಿನ ಕಡಬಿನ ಘಮಲನ್ನು ದೀರ್ಘವಾಗಿ ಆಗ್ರಾಣಿಸಬೇಕು. ಬಾಳೆ ಎಲೆಯ ಮೇಲೆ ಕಡಬನ್ನು ಇಟ್ಟು, ಅದರ ಮೇಲೆ ತುಪ್ಪ ಹೊಯ್ದು ಮನಸೋಇಚ್ಚೆ ತಿನ್ನಬೇಕು. ಒದ್ದೆ ಕಂಬಳಿಗಳ ಒಣಗಿಸುವ ಹೊಡಚಲ ಬೆಂಕಿಯಲ್ಲಿ ಹಲಸಿನ ದಾನಿ, ಗೇರು ಬೀಜ ಎಸೆದು ಸುಟ್ಟು ತಿನ್ನಬೇಕು. ಕಳಲೆ ಸಾರನ್ನು ಬಿಸಿಬಿಸಿ ಅನ್ನದ ಮೇಲೆ ಹರವಿ ಅದರಿಂದ ಮೇಲೆಳುವ ಹಬೆಯ ನೋಡುತ್ತ ಉಣ್ಣಬೇಕು. ಆ ಸ್ವಾದವ ಅನುಭವಿಸಬೇಕು.
ಈ ವರುಷದ ಕೊರೊನಾ ತುಂಬಿದ ಮುಂಗಾರಿನಲ್ಲಿ ಇದ್ಯಾವ ಆಸೆಗಳೂ ಈಡೇರಲಿಲ್ಲ. ಹಳೆಯ ನೆನಪುಗಳ ಮೆಲುಕು ಹಾಕುತ್ತ ಮುಂದಿನ ವರ್ಷದ ಮುಂಗಾರಿಗೆ ಕಾಯಬೇಕಷ್ಟೆ.
ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ....
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.