ಶುಕ್ರವಾರ, ಅಕ್ಟೋಬರ್ 23, 2020
26 °C

PV Web Exclusive: ರಮ್ಯ ಗೀತೆ ಹಾಡುವ ಮಳೆ ರಕ್ಕಸ ಹೇಗಾದೀತು?

ರಾಘವೇಂದ್ರ ಕೆ. ತೊಗರ್ಸಿ Updated:

ಅಕ್ಷರ ಗಾತ್ರ : | |

Prajavani

‘ಮಳೆ ಬಂದರೆ ಕೇಡಲ್ಲ; ಮಗ ಉಂಡರೆ ಕೇಡಲ್ಲ’ ಎನ್ನುವುದು ಜನಪದ ಗಾದೆ. ಜಲ ಜೀವ ಜಗತ್ತಿನ ಆಧಾರ ಎನ್ನುವ ಸತ್ಯ ದರ್ಶನಕ್ಕೆ ಡಾರ್ವಿನ್‌ನ ‘ವಿಕಾಸವಾದ’ವನ್ನೇ ಓದಬೇಕಿಲ್ಲ. ಸಕಲ ಜೀವರಾಶಿಯ ಸೃಷ್ಟಿಯ ಮೂಲ ನೀರು. ಅದಕ್ಕೇ ಅದು ‘ಜೀವ ಜಲ’ ಎನ್ನುವುದು ನಿರ್ವಿವಾದ. ಆ ಹಿನ್ನೆಲೆಯಲ್ಲೇ ನಮ್ಮ ಜನಪದರು ‘‌ಹುಯ್ಯೊ ಹುಯ್ಯೊ ಮಳೆರಾಯ/ ಹೂವಿನ ತೋಟಕೆ ನೀರಿಲ್ಲ.../ ಬಾರೋ ಬಾರೋ ಮಳೆರಾಯ/ ಬಾಳೆಯ ತೋಟಕೆ ನೀರಿಲ್ಲ... ಎನ್ನುವ ಗೀತೆಯನ್ನು ಮಳೆ ಆಮಂತ್ರಿಸಿ ಹಾಡುತ್ತಾರೆ. 

ದೇಶ– ಕಾಲದ ತುರ್ತಿಗೆ ಯಾವುದೇ ಕಲೆ – ಕಾವ್ಯ ಮಿಡಿಯುತ್ತದೆ. ಬಹುಶಃ ವರ್ಷವಿಡೀ ಮಳೆ ಸುರಿಯುವ ಪ್ರದೇಶದಲ್ಲಿ ‘ರೈನ್‌ ರೈನ್‌ ಗೋ ಅವೇ...’ ಎನ್ನುವ ಕಾವ್ಯದ ಹುಟ್ಟಿಗೆ ಕಾರಣವಾಗಬಹುದು. ಆದರೆ ಭಾರತೀಯರಾದ ನಾವು ಹಾಗಲ್ಲ. ನೀರಲ್ಲಿ ದೈವವನ್ನು ಕಂಡವರು, ನೆಲದ ನೀರಿನಲ್ಲಿ ಗಂಗೆ ಗೋಚರಿಸಿದರೆ, ಮಳೆ ಹನಿಯಲ್ಲಿ ವರುಣನನ್ನು ಕಂಡಿದ್ದೇವೆ. ಇಂತಹ ಪಾರಂಪರಿಕ ಹಿನ್ನೆಲೆ ರಕ್ತಗತವಾಗಿರುವುದರಿಂದ ನಮ್ಮ ಸೃಜನಶೀಲ ಕಲೆಯಲ್ಲೆಲ್ಲಾ ಆ ಭಾವ ಅವತರಿಸಿದೆ. 

‘ಮತ್ತೆ ಮಳೆ ಹುಯ್ಯಲಿದೆ ಎಲ್ಲ ನೆನಪಾಗಲಿದೆ, ಸುಖ ದುಃಖ ಬಯಕೆ ಭಯ ಒಂದೆ ಎರಡೇ...’ ಹೀಗೆ ಅನಂತಮೂರ್ತಿ ಕವಿತೆಯೊಂದರಲ್ಲಿ ಭಾವ ಮಿಡಿತವನ್ನು ಕಟ್ಟಿಕೊಟ್ಟಿದ್ದಾರೆ. ಮರೆವಿನ ಮೋಡ ಕವಿದ ಮನಸಿಗೆ ಮಳೆ ಹನಿ ನನಪಿನ ಸೆಲೆ ಎನ್ನುವುದನ್ನು ಅದು ಹೇಳುತ್ತದೆ. ಆ ಕವಿತೆಯ ನಿರೂಪಕ ‘ಬಯಲ ಸೀಮೆಯ ಹುಡುಗನ... ನೆನಪುಂಟೆ ಗುಟ್ಟಾಗಿ ನೆನಸುವೆನು... ನನ್ನ ಬಿಸಿಲಿಗೆ ಕೊರಳಿ ಅರಳಿರುವ ಹೂವೆ... ಎಂದು ನವಿರಾಗಿ ತನ್ನ ಕೋರಿಕೆಯನ್ನು ಮುಂಗಾರಿನ ಮಳೆಯ ಬೆಳಗಲ್ಲಿ ಕಾಣುತ್ತಾನೆ. 

ಆ ನಿರೂಪಕನ ಮನದಾಳದಲ್ಲಿ ಎಲ್ಲೋ ‘ಕಾಮನ ಬಿಲ್ಲು ಕಮಾನು ಕಟ್ಟಿದೆ... ಮೋಡದ ನಾಡಿನ ಬಾಗಿಲಿಗೆ....’ ಎಂದು ಕುವೆಂಪು ಅವರ ಹಾಡಿನಲ್ಲಿ ಮಿಂದು ಎದ್ದ ನೆನಪಾಗಿರಬೇಕು. ಮುಂಗಾರಿನ ಮಳೆ ಹೊಳವಿನ ಆಗಸದಲ್ಲಿ ಮೂಡುವ ಕಾಮನ ಬಿಲ್ಲಿನ ನೆರಳಲ್ಲಿ ಆಡಿದ ನೆನಪಿನ ಬೀಜ ಮತ್ತೆ  ಅವನಲ್ಲಿ ಮೊಳಕೆ ಒಡೆದಂತಿದೆ.


ಬಿಸಿಲ – ಮಳೆಯ ಹೊತ್ತಿನಲ್ಲಿ ಆಗಸದ ಬಾಗಿಲಿಗೆ ಕಾಮನಬಿಲ್ಲಿನ ತೋರಣ...

ಮಳೆನಾಡಿನ ಗರ್ಭದಂತಿರುವ ತನ್ನೂರಿನ ಮೋಹಕ್ಕೆ ಕುವೆಂಪು ಅಲ್ಲಿನ ದಟ್ಟಕಾಡು ಮತ್ತು ಹೇರಳ ಮಳೆಯೇ ಕಾರಣ ಎನ್ನುವಂತೆ ‘ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ/ ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ/ ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ/ ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕಾಡಿಗೆ’ ಎಂದು ಹಾಡುತ್ತಾರೆ. ಸ್ವತಃ ಕುವೆಂಪು ಅವರ ವಾಚನವನ್ನು ಕೇಳುತ್ತಿದ್ದರೆ ಎಂತಹವರಿಗೂ ಕ್ಷಣ ರೋಮಾಂಚನ ಆಗದೆ ಇರದು. 

ಕನ್ನಡದಲ್ಲಿಯೇ ಸಾವಿರಾರು ಕವಿತೆಗಳು ಮಳೆಯ ಹನಿಯಿಂದಲೇ ಮೂಡಿ ಬಂದಿವೆ. ಅಂದರೆ ಮಳೆಯನ್ನು ಎಲ್ಲರೂ ಧ್ಯಾನಿಸಿರುತ್ತಾರೆ ‘ಮೋಡಗಳ ಮೇಲೆ ಮೋಡಗಳು ಏರಿ ಕಪ್ಪೆನಿಸಿವೆ/ ಈ ಪ್ರಿಯೆ ನನ್ನ ಯಾಕೆ ಕಾಯಿಸುವೆ/ ಬಾಗಿಲ ಹೊರಗೆ ಒಂಟಿಯಾಗಿ...’ ಎಂದು ರವೀಂದ್ರನಾಥ ಟ್ಯಾಗೋರ್‌ ಅವರ ಕವಿತೆಯೊಂದು ಮಳೆ ರಮಿಸಲು ಕನವರಿಸುತ್ತದೆ. ಅಂದರೆ ಮಳೆಯಲ್ಲಿ ಮಿಂದೇಳದ ಮನಸ್ಸು ಎಲ್ಲೂ ಇರಲಾರದು. ‘ಮಳೆ ಬರುವ ಕಾಲಕ್ಕೆ/ ಒಳಗ್ಯಾಕ ಕೂತೇವ/ ಇಳೆಯೊಳಗೆ ಜಳಕ ಮಾಡೋಣು/ ಮೋಡಗಳ ಆಟ ನೋಡೋಣು... ಎನ್ನುವ ಬೇಂದ್ರೆ ಮತ್ತೆ ನೆನಪಾಗದೆ ಇರಲಾರರು.  

‘ಮಳೆ ನಿಂತು ಹೋದಮೇಲೆ ಹನಿಯೊಂದು ಮೂಡಿದೆ... ಮಾತೆಲ್ಲ ಮುಗಿದ ಮೇಲೆ ಧ್ವನಿಯೊಂದು ಕಾಡಿದೆ...’ ಎಂದೇ ಸಿನಿಮಾ ಕೂಡ ಮಳೆಯನ್ನು ನೋಡಿದೆ. ಮಳೆ ದಟ್ಟವಾಗಿ ಕಾಡಿದ್ದರಿಂದ ಶೃಂಗಾರ ಸಂದರ್ಭದಲ್ಲೆಲ್ಲಾ ಕೃತಕ ಮಳೆಯನ್ನಾದರೂ ತಂದು ಜೋಡಿಯನ್ನು ಹಾಡಿ ಕುಣಿಸುವುದು ಸಿನಿಮಾ ದೃಶ್ಯ ಕಾವ್ಯದ ಒಂದು ಭಾಗ. 

ಕಾಲಮಾನದ ಅನುಸಾರ ನೈಸರ್ಗಿಕವಾಗಿ ಸುರಿಯಬೇಕಾದ ಮುಂಗಾರು ಏನಾದರೂ ತಡವಾಯಿತೋ ಜನ ತಡಬಡಾಯಿಸಿ ಮಳೆರಾಯನ ಕರೆಗೆ ಮೊರೆ ಹೋಗುತ್ತಾರೆ. ಶಾಸ್ತ್ರಬಲ್ಲವರಿಂದ ‘ಪರ್ಜನ್ಯ ಹೋಮ’ ಮಾಡಿಸುತ್ತಾರೆ. ಮಳೆಯ ಜಪದಲ್ಲಿ ‘ಸಪ್ತ ಭಜನೆ’, ‘ಕಪ್ಪೆಗಳ ಮದುವೆ’, ‘ಕತ್ತೆಗಳ ಮದುವೆ’ಯನ್ನು ಮಾಡಿಸಿ ಮಳೆಯ ಆಗಮನವನ್ನು ನಿರೀಕ್ಷಿಸುತ್ತಾರೆ. ಕಲ್ಯಾಣ ಕರ್ನಾಟಕದಂತಹ ಕಡಿಮೆ ಮಳೆ ಬೀಳುವ ಬಿಸಿಲ ನಾಡಿನಲ್ಲೂ ಮಕ್ಕಳು ‘ಗುರ್ಜಿ ಹರಕೆ’ಯನ್ನು ಹೊತ್ತು ಮಳೆಗಾಗಿ ಪ್ರಾರ್ಥಿಸುತ್ತಾರೆ. 


ಟೊಮೆಟೊ ಬೆಳೆಯೊಳಗೆ ನೀರು ನುಗ್ಗಿರುವುದು

ಎಲ್ಲ ಏಕೆ ನೆನಪಾಗುತಿದೆ?

ಮಳೆ ರಕ್ಕಸವೇ? ಎನ್ನುವ ಪ್ರಶ್ನೆ ಈ ಎಲ್ಲ ನೆನಪನ್ನು ಮತ್ತೆ ಕೆದಕುತ್ತಿದೆ. ಪತ್ರಕರ್ತ ಎಚ್‌.ಬಿ. ಮಂಜುನಾಥ್‌ ಅವರು ಅತಿವೃಷ್ಟಿ ಕುರಿತು ಸುದ್ದಿ ಮಾಧ್ಯಮಗಳು ಸೃಷ್ಟಿಸುತ್ತಿರುವ ಪದ ಪ್ರಳಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದರಲ್ಲಿ  ‘‘ಕರ್ನಾಟಕದಲ್ಲಿ ಅತಿವೃಷ್ಟಿ ಆಗುತ್ತಿದೆ ನಿಜ. ಮಳೆ ಬರದಿದ್ದರೆ ಅನಾವೃಷ್ಟಿಯಾಗುತ್ತದೆ. ಅದು ಏನೇ ಆದರೂ ನಿಸರ್ಗ ಸಹಜ ಪ್ರಕ್ರಿಯೆ. ಅದನ್ನು ‘ರಣಕೇಕೆ’ ‘ರಾಕ್ಷಸ ಜಲ’ ‘ರಾಕ್ಷಸ’ ‘ಪಿಶಾಚಿ...’ ಎಂಬ ಪದ ಪುಂಜ ಬಳಸುವುದು ಸರಿಯಲ್ಲ. ಚಿಕ್ಕ ಮಕ್ಕಳೂ ಮಳೆ ಎಂದರೆ ಸಾಯಿಸುವ ರಾಕ್ಷಸ ಎಂದು ಪರಿಭಾವಿಸುತ್ತಿದ್ದಾರೆ, ಅದು ತಪ್ಪು’’ ಎಂದು ಅವರು ಭಾಷಾ ಪ್ರಯೋಗವನ್ನು ಪ್ರಶ್ನಿಸಿದ್ದಾರೆ. ಭಾಷೆಯ ಸೂಕ್ಷ್ಮತೆಯನ್ನು ಅರಿತಾಗ ಮಳೆಯನ್ನು ರಾಕ್ಷಸ– ಪಿಶಾಚಿ ಎಂದು ಕಾರ್ಯಕ್ರಮ ರೂಪಿಸುವ ಔಚಿತ್ಯ ಪ್ರಶ್ನೆ ಕಾಡುತ್ತದೆ. 

ಜಲನಿಧಿ ಬಳಕೆ ಪರಿಹಾರ 

ಮಳೆ ನೀರಿನ ಅಸಮರ್ಪಕ ನಿರ್ವಹಣೆಯೇ ಇದಕ್ಕೆಲ್ಲ ಕಾರಣ ಎನ್ನುವುದು ಜಲ ಪರಿಣಿತರ ಅಭಿಮತ. ನಿರಂತರ ಜಲಮೂಲಗಳು ಉಡುಗುತ್ತಲೇ ಇವೆ. ಅಂತರ್ಜಲ ವರ್ಷದಿಂದ ವರ್ಷಕ್ಕೆ ಕಡಿಮೆ ಆಗುತ್ತಿದೆ. ಅಂದರೆ ಮಳೆ ನೀರಿನ ಇಂಗುವಿಕೆ ಕಡಿಮೆ ಆಗುತ್ತಿದೆ. ನೆಲದ ದಾಹ ನೀಗಿಸುವ ಕರೆಗಳು ಕಿರಿದಾಗುತ್ತಿವೆ. ಒತ್ತುವರಿ ಅಂಗಳ ಹಳ್ಳಿಯಲ್ಲಿ ಸಾಗುವಳಿ ಆಕ್ರಮಿಸಿದರೆ, ನಗರಗಳಲ್ಲಿ ಕಟ್ಟಡಗಳು ತಲೆ ಎತ್ತುತ್ತವೆ. ಅದಕ್ಕೊಂದು ಶಾಶ್ವತ ಪರಿಹಾರ ರೂಪಿಸದ ಹೊರತು ಯಾವ ಕಾಲಕ್ಕೂ ಪರಿಹಾರ ಸಾಧ್ಯ ಇಲ್ಲ. ಕೆರೆ– ಜಲಾಶಯಗಳು ಸೇರಿದಂತೆ ಜಲಮೂಲಗಳ ಹೂಳು ತೆಗೆದು ಜಲದ ಕಣ್ಣು ರಕ್ಷಿಸುವ ಬಗ್ಗೆ ಚಿಂತನೆ ಆಗಬೇಕು.  ನೀರಿನ ಅಭಾವ ಪರಿಹಾರದ ಜೊತೆ ಮಳೆಯ ನೀರನ್ನು ವೈಜ್ಞಾನಿಕವಾಗಿ ಉಯೋಗಿಸುವ ಮರುಪೂರ್ಣದಂತಹ ಪ್ರಕ್ರಿಯೆಯೂ ಜೊತೆ ಜೊತೆಗೆ ಆಗಬೇಕು.

ಹಾಹಾ​ಕಾರದಲ್ಲಿ ಖಾಲಿ ಕೊಡಗಳ ಮೆರವಣಿಗೆ

ಪ್ರತಿವರ್ಷವೂ ನೀರಿನ ಅಭಾವವನ್ನು ಎದುರಿಸುತ್ತಿದ್ದೇವೆ. ಮಲೆನಾಡಿನ ಪ್ರದೇಶವೂ ಸೇರಿದಂತೆ ರಾಜ್ಯದ ಹೆಚ್ಚಿನ ಪ್ರದೇಶ ಮಾರ್ಚ್‌– ಏಪ್ರಿಲ್‌ ತಿಂಗಳಿನಲ್ಲಿ ನೀರಿಗಾಗಿ ಪರಿತಾಪಿಸುತ್ತಿದೆ. ಬೆಂಗಳೂರಿನ ಮಹಾನಗರದಲ್ಲಿ ಆ ಸಮಯದಲ್ಲಿ ಟ್ಯಾಂಕರ್‌ ನೀರಿನ ಮಾರಾಟದ ಭರಾಟೆ ಜೋರಿರುತ್ತದೆ. ಆಗೆಲ್ಲ ಶರಾವತಿಯ ಲಿಂಗನಮಕ್ಕಿ ಜಲಾಶಯದಿಂದ ನೀರು ತರುವ ಯೋಜನೆ ಚಿಗುರೊಡೆಯುತ್ತದೆ. ಅಂತೆಯೇ ಬಯಲ ನಾಡಿಗೆ ಎತ್ತಿನಹೊಳೆಯ ತಿರುವಿನ ಯೋಜನೆಯೂ ಮರು ಜೀವ ಪಡೆಯುತ್ತದೆ. ಅವೆಲ್ಲ ಅವೈಜ್ಞಾನಿಕ ಯೋಜನೆ, ಪರಿಣಾಮಕಾರಿಯಲ್ಲ. ಉಪಕಾರಕ್ಕಿಂತ ಅಪಕಾರವೇ ಹೆಚ್ಚು ಎನ್ನುವ ಪರಿಸರ ತಜ್ಞರ ಒತ್ತಾಸೆಯನ್ನು ಬದಿಗೊತ್ತಿ ಕೋಟ್ಯಂತರ ವೆಚ್ಚದ ಚಿಂತನೆಯನ್ನು ವ್ಯವಸ್ಥೆ ಮಾಡುತ್ತಲೇ ಇರುತ್ತದೆ. 

ನೀರ ಅಭಾವದ ಬೇಗುದಿ ತಾಳಲಾಗದೆ ‘ನೀರಿನ ಹಾಹಾಕಾರ ಎಂದು ಖಾಲಿ ಕೊಡಗಳ ಮೆರವಣಿಗೆ’ ಮಾಧ್ಯಮದಲ್ಲಿ ಸಾಗುತ್ತದೆ. ಅಂತಹ ಕಾರ್ಯಕ್ರಮ ನೋಡಿದಾಗ ‘ಮಳೆ ರಕ್ಕಸ’ ಏನಾದ ಅನ್ನಿಸದೇ ಇರದು. ಆಗ ಕೆ.ಎಸ್. ನರಸಿಂಹಸ್ವಾಮಿ ಅವರ ‘ಇಕ್ಕಳ’ ಮತ್ತೆ ನೆನಪಾಗುತ್ತದೆ. 

ಚಿಗುರ ಚಿನ್ನದ ನಡುವೆ ಹೂವ ಬಯಸುವರು

ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು

ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ

ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ...

ಹೀಗೆ ಹೀಗಳಿಯುವ ಬದಲು ನಿಸರ್ಗ ಸಹಜವಾಗಿ ಬದುಕುವ ಮತ್ತು ನಿಸರ್ಗ ಸಂಪತ್ತನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮಾತ್ರವೇ ಶಾಶ್ವತ ಪರಿಹಾರ. ಬೆಂಗಳೂರು ಮಾತ್ರವಲ್ಲ ಸಣ್ಣ ಪಟ್ಟಣಗಳೂ ಒಂದು ಸಣ್ಣ ಮಳೆಗೆ ಪ್ರವಾಹವನ್ನು ಎದುರಿಸಬೇಕಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಒಂದಲ್ಲ ಒಂದು ಸಾವು ನೋವಿನ ವರದಿ ಆಗುತ್ತಲೇ ಇರುತ್ತವೆ. ಅಂದರೆ ಅದಕ್ಕೆ ಸ್ವಯಂ ಕೃತ ಅಪರಾಧಗಳೇ ಕಾರಣ. ಮಳೆ ನೀರು ಹರಿಯಬೇಕಾದ ಚರಂಡಿಯನ್ನು ನುಂಗಿ ಕಟ್ಟಡಗಳು ತಲೆ ಎತ್ತಿವೆ. ರಾಜಕಾಲುವೆ ಕೂಡ ಭೂದಾಹಿಗಳ ಒಡಲು ಹೊಕ್ಕಿದೆ. ಇರುವ ಕಿರು ಜಲ ದಾರಿಗಳು ಕೂಡ ಕಸಕಡ್ಡಿಯಿಂದ  ಕಟ್ಟಿವೆ. ಅಂದ ಮೇಲೆ ಬಿದ್ದ ಮಳೆಯ ನೀರು ಎತ್ತ ಹರಿಯಬೇಕು? ವರ್ಷವೂ ಬೆಂಗಳೂರಿನಲ್ಲಿ ಸಂಭವಿಸುವ ‘ಜಲಪ್ರವಾಹ’ ಒತ್ತುವರಿ ತೆರವಿನ ಭರವೆಸಯನ್ನು ಪಡೆಯುತ್ತದೆಯೇ ಹೊರತು ಶಾಶ್ವತ ಪರಿಹಾರವನ್ನು ಅಲ್ಲ. 

ಮಳೆ ರಮ್ಯಗೀತೆಯ ಪಲ್ಲವಿ ಇದ್ದಂತೆ ಅದು ರೋಮಾಂಚನ ಸಿಂಚನವನ್ನು ನಿರಂತರ ಮಾಡುತ್ತದೆ. ಪ್ರತಿ ಮಳೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿವೆ. ಅಪರೂಪದ ಸ್ವಾತಿ ಮಳೆಯ ಹನಿಯನ್ನು ಸಂಗ್ರಹಿಸಿ ಇಡುವ ಪದ್ಧತಿ ಈಗಲೂ ಇದೆ. ಅಕ್ಟೋಬರ್‌ ಹೊತ್ತಿಗೆ ಬರುವ ‘ವಿಷಾತಿ’ ಮಳೆ ಜೀವ ಸಂಕುಲದ ವೈದ್ಯ ಎಂದೇ ಜನಪದರು ಭಾವಿಸಿದ್ದಾರೆ. ಅಂದರೆ ಆ ಹೊತ್ತಿನಲ್ಲಿ ಕಾಲ ಸಂಕ್ರಮಣದಲ್ಲಿ ಮಳೆಗಾಲ ಚಳಿಗಾಲಕ್ಕೆ ಕಾಲೂರಿರುತ್ತದೆ. ಆಗ ಜೀವ ಕಂಟಕ ಬ್ಯಾಕ್ಟೀರಿಯ – ವೈರಸ್‌ಗಳು ಉಲ್ಬಣವಾಗುತ್ತವೆ. ಆ ಸಮಯದಲ್ಲಿ ಮಳೆ ಏನಾದರೂ ಸುರಿದರೆ ಅದನ್ನೆಲ್ಲ ನಿಯಂತ್ರಿಸುತ್ತದೆ. ಮೃಗಶಿರ, ಆರಿದ್ರ (ಆದ್ರಿ) ಮಳೆ ಸಾಮಾನ್ಯವಾಗಿ ಉತ್ತಮ ಮಳೆ. ಅವೇನಾದರೂ ಕೈ ಕೊಟ್ಟವೋ ಬರಗಾಲ ಖಚಿತ ಎನ್ನುವುದು ನಮ್ಮ ನಂಬಿಕೆ. ಸಾಮಾನ್ಯವಾಗಿ ಆಗಸ್ಟ್‌ ತಿಂಗಳಲ್ಲಿ ಕೆರೆ ಕಟ್ಟೆಗಳು ತುಂಬುತ್ತವೆ. ಆ ಸುಮಾರಿಗೆ ಸುರಿಯುವ ಉತ್ತರಿ ಮತ್ತು ಹುಬ್ಬಿ ಮಳೆ ಮೀನು ಕಾಲ. ಮೀನಿನ ಶಿಕಾರಿಗೆ ಸಕಾಲವೂ ಹೌದು. ಕಂಬಳಿ ಹೊತ್ತು ರಾತ್ರಿ ಹೊತ್ತು ಹರಿಯವ ನೀರಿನಲ್ಲಿ ಕಾಪಿಟ್ಟು ಕಾಯುವವ ಎಂದಾದರು ಮಳೆಯನ್ನು ಶಪಿಸುತ್ತಾನಾ. 

ನಿರುಪದ್ರವಿ ಮಂಗಟೆ ಎಂಬ ಪಕ್ಷಿಯ ಜೀವನ ಕ್ರಮವೇ ವಿಚಿತ್ರ. ಸಾಮಾನ್ಯವಾಗಿ ಪಕ್ಷಿ ಸಂಕುಲವೆಲ್ಲ ಸುರಿಯುವ ಮಳೆಗೆ ಗೂಡಲ್ಲಿ ಬೆಚ್ಚಗಿರಲು ಬಯಸಿದರೆ, ಮಂಗಟೆ ಹಾರಾಟ ಬಯಸುತ್ತದೆ. ಧೋ ಎಂದು ಸುರಿಯುವ ಮಳೆಯಲ್ಲಿ ಮಂಗಟೆ ಹಾರಾಡಿದರೆ ಆ ವರ್ಷ ಉತ್ತಮ ಮಳೆ ಎಂದು ಮಲೆಕುಡಿಯ ಸಮುದಾಯ ಬಯಸುತ್ತದೆ. ಆ ಪಕ್ಷಿಯನ್ನು ಯಾರೂ ಬೇಟೆ ಆಡುವುದಿಲ್ಲ. ಅದು ತನ್ನ ಮರಿಗಳನ್ನು ಆರು ತಿಂಗಳು ಪೋಷಿಸುತ್ತದೆ ಎನ್ನುವುದೇ ಕಾರಣ. ಸಕಲ ಜೀವ ಸಂಕುಲ ಪೋಷಿಸುವ ಮಳೆ ಹೇಗೆ ತಾನೆ ರಕ್ಕಸವಾದೀತು?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು