ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ಇಳಿದಿದೆ; ತಲ್ಲಣ ಉಳಿದಿದೆ...

Last Updated 26 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

1990 ರ ದಶಕದ ನಡುವಿನ ಅವಧಿ ಅದು. ಆ ಊರಿನವರೆಲ್ಲ ಬೊಬ್ಬೆ ಹಾಕಿದರು, ಧರಣಿಯನ್ನೂ ನಡೆಸಿದರು. ಕಾಳಿಯೊಂದಿಗಿನ ಕಳ್ಳುಬಳ್ಳಿಯ ಸಂಬಂಧ ಬಿಟ್ಟು ಕದಲಲಾರವೆಂದು ಪಟ್ಟು ಹಿಡಿದರು. ಆದರೆ, ಆಡಳಿತಶಾಹಿ ಬಿಡಬೇಕಲ್ಲ, ಹಿತ್ತಲ ಬೇಲಿಯನ್ನಷ್ಟೇ ಕಂಡಿದ್ದ ಅವರನ್ನು ಜೈಲಿಗಟ್ಟಿತು. ಕಂಬಿಗಳ ನಡುವಿನ ಬಂದಿಗಳು ಮೆತ್ತಗಾದಾಗ, ಆಡಳಿತ ಗೆಲುವಿನ ನಗೆ ಬೀರಿತು.

ಕಾಳಿ ನದಿಗೆ ಕೊಡಸಳ್ಳಿಯಲ್ಲಿ ಅಣೆಕಟ್ಟು ಕಟ್ಟುವುದೆಂದು ನಿರ್ಧಾರವಾಯಿತು. ಆಗ ಕೊಡಸಳ್ಳಿ, ಬರಬಳ್ಳಿ, ಸಾತೊಡ್ಡಿ, ಬೀರಕೋಲು, ಬೊಗರಿಗದ್ದೆ ಮೊದಲಾದ ಹಳ್ಳಿಗಳ ಕೃಷಿಕರು, ‘ಕೊಡಸಳ್ಳಿ ನಿರಾಶ್ರಿತರು’ ಎಂಬ ಹಣೆಪಟ್ಟಿ ಹೊತ್ತು ಅಲ್ಲಿಂದ ಹೊರಬಿದ್ದರು. ಕಾಳಿಯ ನಂಟನ್ನು ಕಳಚಿಕೊಂಡ ಅವರಿಗೆ ಗಂಗಾವಳಿ (ಬೇಡ್ತಿ) ಆಶ್ರಯದಾಯಿನಿ ಆದಳು.

ಶಿರಸಿ, ಯಲ್ಲಾಪುರ ಹಾಗೂ ಅಂಕೋಲಾ ಈ ಮೂರು ತಾಲ್ಲೂಕುಗಳು ಸಂಧಿಸುವ, ಗಂಗಾವಳಿ ನದಿ ತಟದ ಹೆಗ್ಗಾರ, ಕಲ್ಲೇಶ್ವರ, ಕನಕನಳ್ಳಿ ಈ ಮೂರು ಪುನರ್ವಸತಿ ಗ್ರಾಮಗಳಲ್ಲಿ ಕೊಡಸಳ್ಳಿ ಸಂತ್ರಸ್ತರು ಹೊಸ ಬದುಕು ಪ್ರಾರಂಭಿಸಿದರು. ಕನಕನಳ್ಳಿ ಗಂಗಾವಳಿಗೆ ತುಸು ದೂರ. ಹೆಗ್ಗಾರ ಮತ್ತು ಕಲ್ಲೇಶ್ವರ ನದಿಯ ಬದಿಗೆ ಹರಡಿಕೊಂಡಿವೆ. ಸಮೃದ್ಧ ನೆಲದಲ್ಲಿ ಶ್ರಮಪಟ್ಟು ಅಡಿಕೆ ತೋಟ ಬೆಳೆಸಿದ ಇವರೆಲ್ಲ ಆರ್ಥಿಕ ಸ್ಥಿತಿವಂತರೂ ಆದರು. ಹುಟ್ಟೂರಿನ ನೆನಪು ಮಾಸಿ, ಹೊಸ ಮಣ್ಣಿನ ಕಂಪು ಅನುಭವಿಸುತ್ತಿರುವಾಗಲೇ ಧುತ್ತನೆ ಬಂದೆರಗಿದ ನೆರೆ ಇವರನ್ನು ಅಕ್ಷರಶಃ ನಲುಗಿಸಿದೆ.

ಗಂಗಾವಳಿಯ ಮುನಿಸು

ಶಾಂತ ಮಾತೆಯಂತಿದ್ದ ಗಂಗಾವಳಿ ಅದೇಕೊ ನಾಗರಪಂಚಮಿಯಂದು ಮುನಿಸಿಕೊಂಡಳು. ಭುಸುಗುಡುತ್ತ ನುಗ್ಗಿದ ಈಕೆ ಊರಿನ ಮೇಲೆ ಮನಬಂದಂತೆ ದಾಳಿ ಮಾಡಿದಳು. ಅಡಿಕೆ ತೋಟ, ಭತ್ತದ ಗದ್ದೆ, ಮನೆ, ಕಟ್ಟೆ, ಪಂಚಾಯ್ತಿ, ತೂಗುಸೇತುವೆ ಹೀಗೆ ಮಾನವ ನಿರ್ಮಿತ ಸಕಲವೂ ಕ್ಷುಲ್ಲಕ ಎಂಬಂತೆ ನಿರ್ನಾಮ ಮಾಡಿ, ಎಲ್ಲವನ್ನೂ ಕಬಳಿಸಿಕೊಂಡು ಮುನ್ನಡೆದಳು ತನ್ನ ಏಕಪಾತ್ರಾಭಿನಯದಲ್ಲಿ. ಆಕೆಯ ಐದು ದಿನಗಳ ಕೋಪ, ಒಡಲ ಮಕ್ಕಳ ಬದುಕನ್ನು 50 ವರ್ಷ ಹಿಂದಿಕ್ಕಿದೆ. ಹಸಿರು ಸ್ವರ್ಗದ ನಡುವೆ ಕುಟೀರಗಳಿದ್ದ ಸುಂದರ ಊರುಗಳು ಈಗ ಹಾಳು ಸುರಿಯುತ್ತಿವೆ.

ಕಾಳಿಯಂತಾಗಿದ್ದ ಗಂಗಾವಳಿ, ಏನೂ ಆಗಿಲ್ಲದವರಂತೆ ಮಂದಸ್ಮಿತೆಯಾಗಿ ಹರಿಯುತ್ತಿದ್ದಾಳೆ. ಈಗ ಅಲ್ಲಿ ಆಕೆಯೊಂದೇ ಚಲನಶೀಲ. ಇನ್ನೆಲ್ಲವೂ ನಿಸ್ತೇಜದಂತೆ ಗೋಚರಿಸುತ್ತಿವೆ.

ನೆರೆ ಇಳಿದ ಮೇಲೆ ಈ ಗ್ರಾಮಗಳ ಚಿತ್ರಣವೇ ಬದಲಾಗಿದೆ. ಊರಿಗೆ ಊರೇ ಮೌನವನ್ನು ಹೊದ್ದುಕೊಂಡಿದೆ. ಆತಂಕದ ಸುಳಿಯಲ್ಲಿಯೇ ಪುನಃ ಬದುಕನ್ನು ಕಟ್ಟುವ ಕಾರ್ಯದಲ್ಲಿ ತೊಡಗಿದ್ದಾರೆ ಜನರು.

‘ಕಾಳಿ ನದಿ ಪಾತ್ರದ ಫಲವತ್ತಾದ ಭೂಮಿಯನ್ನು ಬಿಟ್ಟು ಬರಲೊಲ್ಲೆವೆಂದು ಹಟ ಮಾಡಿದೆವು. ನಮ್ಮ ಹಟ ನಡೆಯಲಿಲ್ಲ. ಬಾಲ್ಯ ಕಳೆದ ಬರಬಳ್ಳಿಯನ್ನು ಬಿಟ್ಟು ಹೊಸ ನೆಲೆಗೆ ಬಂದಾಗ, ಆರಂಭದಲ್ಲಿ ಅಪರಿಚಿತವೆನಿಸಿದರೂ, ಗಂಗಾವಳಿ ನಮ್ಮನ್ನು ಅಮ್ಮನಂತೆ ಪೊರೆದು ನೋವನ್ನು ಮರೆಸಿದ್ದಳು. ನೀರು ಮತ್ತು ನೆರೆ ನಮಗೆ ಹೊಸತೇನಲ್ಲ. ಆದರೆ, ಈ ಬಾರಿಯ ಮಹಾಪೂರ ಹುಟ್ಟಿಸಿದ ನಡುಕ ಇನ್ನೂ ತಣಿದಿಲ್ಲ’ ಎನ್ನುತ್ತ ಇಳಿವಯಸ್ಸಿನ ಕೃಷ್ಣ ಭಾಗವತರು ದಿಕ್ಕುತೋಚದಂತೆ ಕುಳಿತಿದ್ದರು.

ಅವರ ಮನೆ ದಾಟಿ, ತೋಟದೊಳಗಿನ ಪ್ರಶಾಂತ ಭಟ್ಟ ಅವರ ಮನೆ ತಲುಪಿದೆ. ಕಾಂಕ್ರೀಟ್ ರಸ್ತೆಗೆ ಹೊಂದಿಕೊಂಡಿರುವ ಮನೆಯದು. ‘ಅಂತೂ ಮೂರು ಲೋಡ್ ಹೂಳು ಹೊರಹಾಕಿ ಮನೆ ಒಳಬದಿ ಸ್ವಚ್ಛ ಮಾಡಿ ಆತು’ ಎನ್ನುತ್ತಲೇ ಹೊರಬಂದರು ಅವರು. ನೆರೆಪೀಡಿತ ಊರು ನೋಡಲು ಹೋಗಿದ್ದ ನಾನು, ಮಾತಿಗೆ ಕಿವಿಯಾಗಿ ಅವರನ್ನು ಹಿಂಬಾಲಿಸಿದೆ.

‘ನದಿ ತೀರದ ನಾಗರಿಕತೆಯವರು ನಾವು, ನದಿ ತಟವೇ ಬೇಕೆಂದು ಹೆಗ್ಗಾರಿಗೆ ಬಂದು ಉಳಿದಿದ್ದೆವು. ನದಿಯಂಚಿನವರು ಎಂಬ ಕೊಂಚ ಅಹಂಕಾರವೂ ನಮಗಿತ್ತು. ಗಂಗಾವಳಿಗೆ ಪ್ರವಾಹ ಬಂದು ಸೇತುವೆಯ ಮೇಲೆ ಒಂದೆರಡು ತಾಸು ನೀರು ಹರಿದಾಗ ಅದನ್ನು ಕಂಡು ಸಂಭ್ರಮಿಸುತ್ತಿದ್ದೆವು. ತೋಟಕ್ಕೆ ಬಂದು ಮರಗಳನ್ನು ಮುತ್ತಿಕ್ಕಿ ಹೋದಾಗಲೂ ನಮಗೆ ಭಯವಿರಲಿಲ್ಲ. ಆದರೆ, ಈ ವರ್ಷದ ಪ್ರವಾಹದ ಭೀಕರತೆ ಮರೆಯಲಾಗದ ದುಃಸ್ವಪ್ನದಂತೆ ನಡೆದು ಹೋಯಿತು’ ಎನ್ನುವಾಗ ಯುವಕ ಪ್ರಶಾಂತ ಭಟ್ಟ ದಿಙ್ಮೂಢರಾಗಿದ್ದರು.

‘ಒಂದೇ ಊರಿನಲ್ಲಿ ಮೂರು ದ್ವೀಪಗಳನ್ನು ಸೃಷ್ಟಿಸಿ ಜಲದಿಗ್ಭಂದನ ಹಾಕಿತು ಗಂಗಾವಳಿ. ಜೀವ ಉಳಿಸಿಕೊಂಡರೆ ಹೇಗಾದರೂ ಜೀವನವಾದೀತೆಂದು ಗುಡ್ಡದ ತುದಿಯಲ್ಲಿರುವ ಮನೆಗಳಿಗೆ ಸೇರಿದೆವು. ಆಗ ನೆನಪಾಗುತ್ತಿತ್ತು ‘ತಮ್ಮಾ ನಿಮ್ಮನೆಯೆಲ್ಲ ಮಹಾಪೂರದ ಗಡಿಯೊಳಗಿದ್ದು ನೋಡ್ಕ’ ಎಂದು ಊರಿನ ಮೂಲನಿವಾಸಿ ಹಿರಿಯರೊಬ್ಬರು ಹೇಳಿದ ಮಾತು. 60 ವರ್ಷಗಳ ಹಿಂದೆ ಪ್ರವಾಹ ಬಂದಾಗ ನಾವು ಇಲ್ಲಿರಲಿಲ್ಲ. ಹೀಗಾಗಿ ನಮಗೆ ಎಂದಿಗೂ ಪ್ರವಾಹದ ರೌದ್ರತೆ ಅರಿವಿಗೆ ಬಂದಿರಲಿಲ್ಲ.

‘ಮಗಳು ಸ್ಕೂಲ್ ಬ್ಯಾಗ್ ತಂದುಕೊಡು ಎಂದು ವರಾತ ಹಿಡಿದಳು. ಇಬ್ಬರು ಸ್ನೇಹಿತರೊಂದಿಗೆ ನಾನು ಮನೆಗೆ ಬಂದು ನೆಲಕ್ಕಿದ್ದ ಒಂದಿಷ್ಟು ಅಡಿಕೆ ಚೀಲಗಳನ್ನು ಅಟ್ಟಕ್ಕೆ ಪೇರಿಸಿ, ಮಗಳ ಸ್ಕೂಲ್ ಬ್ಯಾಗ್ ಹಾಗೂ ನನ್ನದೊಂದು ಕ್ಯಾಮೆರಾ ಕುತ್ತಿಗೆಗೆ ಹಾಕಿಕೊಂಡು ವಾಪಸ್ಸಾಗುವಾಗ, ನಮ್ಮನೆ ಜಗುಲಿ ಪ್ರವೇಶಿಸಿತ್ತು ನೀರು. ದಾರಿಯಲ್ಲಿ ಮೊಣಕಾಲು ಮಟ್ಟದ ನೀರು. ಮೂವರು ಕೈಹಿಡಿದು ಸಾಗಿದರೂ, ನಡೆಯಲಾಗದಷ್ಟು ನೀರಿನ ಸೆಳವು. ಆಗಲೇ ಗೊತ್ತಾಗಿದ್ದು, ಈಜು ಬಂದವರಿಗೂ ಪ್ರವಾಹದ ವಿರುದ್ಧ ಈಜುವುದು ಸುಲಭವಲ್ಲ ಅಂತ’ ಎನ್ನುತ್ತಲೇ ಅವರು ಪಂಪ್‌ ತೊಳೆದುಕೊಂಡು ಕೊಳೆರೋಗ ಬಂದಿರುವ ತೋಟಕ್ಕೆ ಔಷಧ ಸಿಂಪಡಿಸಲು ಹೊರಟರು.

‘ಎಲ್ಲರೂ ಮನೆ ಚೊಕ್ಕ ಮಾಡ್ತಿದ್ದಾರೆ. ನನಗೆ ಆ ಕೆಲಸವೂ ಇಲ್ಲ. ಗಂಗಾವಳಿಯೇ ನನ್ನ ಮನೆಯನ್ನ ಚೊಕ್ಕ ಮಾಡಿ ಹೋಗಿದ್ದಾಳೆ’ ಎಂದು ಮಾರ್ಮಿಕವಾಗಿ ಹೇಳಿದ ಕಲ್ಲೇಶ್ವರದ ನಾರಾಯಣ ಹರಿಕಾಂತ ಅವರ ಮಾತು ಮನಸ್ಸನ್ನು ಮೆತ್ತಗೆ ಮಾಡಿತ್ತು. ಸಮುದ್ರ ಸೇರುವ ತವಕದಲ್ಲಿ ಅಂಬಿಗರು, ಸಿದ್ದಿಗರು, ಬಡಕೂಲಿಕಾರರ ಮನೆಗಳನ್ನು ಗಂಗಾವಳಿ ಬಾಚಿಕೊಂಡು ನಡೆದಿದ್ದಾಳೆ. ಎಲ್ಲರೂ ಬರಿಗೈಯಲ್ಲಿ ಬದುಕು ಶುರು ಮಾಡಿದ್ದಾರೆ ಮತ್ತೆ ಎಂದರು ಗಣಪ ಸಿದ್ದಿ.

ಗಂಗಾವಳಿಯ ರೋಷ ಊರಿನ ಸಂಪರ್ಕ, ಸಂಬಂಧ ಸೇತುವೆಯನ್ನು ಕಳಚಿದೆ. ರಾಮನಗುಳಿ–ಕಲ್ಲೇಶ್ವರ, ಡೋಂಗ್ರಿ–ಸುಂಕನಾಳ ನಡುವಿನ ಎರಡು ತೂಗುಸೇತುವೆಗಳನ್ನು ತುಂಡರಿಸಿದೆ. ಇಲ್ಲಿ ದಶಕದ ಹಿಂದಿನ ಮತ್ತದೇ ದೋಣಿ ಸಂಚಾರ ಆರಂಭವಾಗಿದೆ. ಆದರೆ, ಊರ ಜಗಳಗಳೆಲ್ಲ ನೀರಿನಲ್ಲಿ ಮುಳುಗಿವೆ, ಜೊತೆಗೆ ಅಹಂಕಾರವೂ. ರಾಗ–ದ್ವೇಷ ಕರಗಿ, ಮನುಷ್ಯರ ನಡುವೆ ಪ್ರೀತಿಯ ಧಾರೆ ಹರಿದಿದೆ.

ಗಂಗಾವಳಿ ನಮ್ಮನ್ನು ಒಪ್ಪಿಕೊಂಡಿಲ್ಲವೇ ಅಥವಾ ನಾವೇ ಆಕೆಯ ಗಡಿಯನ್ನು ಅತಿಕ್ರಮಿಸಿಕೊಂಡು ಸಲುಹಿದ ಅಮ್ಮನಿಗೆ ನೋವು ಕೊಟ್ಟೆವಾ ಇಂತಹ ಗೊಂದಲಗಳು ಉಳಿದಿವೆ.

ಮತ್ತದೇ ‘ಸಂತ್ರಸ್ತರು’ಹಣೆಪಟ್ಟಿ

‘ನೆರೆ ಇಳಿದ ಮೇಲೆ ಸಮಸ್ಯೆಯ ಗಂಭೀರತೆ ಅರಿವಾಗುತ್ತಿದೆ. ಇದು ಈ ವರ್ಷಕ್ಕೆ ಅಂತ್ಯವಲ್ಲ ಎನ್ನುವ ಅಭದ್ರ ಭಾವ ಕಾಡುತ್ತಿದೆ. ನೆರೆ ಇಳಿದಿದೆ, ಆದರೆ ತಲ್ಲಣ ಉಳಿದಿದೆ. ಸೌಲಭ್ಯಗಳ ಕೊರತೆಯಿಲ್ಲದಂತೆ ನಾವು ಅನುಕೂಲಸ್ಥರಾಗಿದ್ದರೂ ‘ಮುಳುಗಡೆ ಸಂತ್ರಸ್ತರು’ ಎಂಬ ಹಣೆಪಟ್ಟಿ ನಮ್ಮನ್ನು ಸದಾ ಇರಿಯುತ್ತಿತ್ತು. ಈಗ ‘ಸಂತ್ರಸ್ತರು’ ಪಟ್ಟ ಪುನರಾವರ್ತನೆಯಾಗಿದೆ’ ಎಂದು ಬೇಸರಿಸಿಕೊಂಡರು ಪ್ರಶಾಂತ ಭಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT