ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲದ ಅತಿಥಿ ನೆಲ ಆರ್ಕಿಡ್‌

Last Updated 25 ಜುಲೈ 2020, 19:45 IST
ಅಕ್ಷರ ಗಾತ್ರ

ಪ್ರಕೃತಿ ತನ್ನೊಡಲಲ್ಲಿ ಅದೆಷ್ಟು ಅಚ್ಚರಿಗಳನ್ನು ಹುದುಗಿಸಿಟ್ಟುಕೊಂಡಿದೆಯೋ! ಕಾಲಕ್ಕೆ ತಕ್ಕಂತೆ ಅವೆಲ್ಲಾ ಒಂದೊಂದಾಗಿ ಹೊರಗೆ ಬರುತ್ತವೆ. ಅಂತಹ ಕೌತುಕ ನನಗೆ ಕಾಣಿಸಿದ್ದು ಊರಿನಲ್ಲಿ ಸಂಜೆ ವಿಹಾರಕ್ಕೆ ಹೋಗುವ ಜಾಗದಲ್ಲಿ. ಮಳೆ ಹೆಚ್ಚು ಸುರಿದೊಡನೆ ಹಸಿರು ಹುಲ್ಲಿನ ಹಾಸು ದಟ್ಟವಾಗುತ್ತಿದ್ದಂತೆ ಅದೆಲ್ಲಿದ್ದರೋ ಇದ್ದಕ್ಕಿದ್ದಂತೆ ಶ್ವೇತ ಕನ್ನಿಕೆಯರು ಪ್ರತ್ಯಕ್ಷವಾಗಿದ್ದರು.

ಭೂಮಿಯೊಳಗಿನಿಂದ ನೆಲಕ್ಕೆ ಅಂಟಿಕೊಂಡಂತೆ ಹೃದಯದಾಕಾರದ ಒಂದೇ ಒಂದು ಚಿಕ್ಕ ಎಲೆ ಮೊದಲು ಹೊರಗೆ ಬಂತು. ಅದರಿಂದ ಹೊರಟ ಎರಡಿಂಚು ಉದ್ದದ ತೊಟ್ಟಿನ ತುದಿಯ ರಚನೆಯಲ್ಲಿ ಆರ್ಕಿಡ್ ಹೂವುಗಳನ್ನು ಹೋಲುವಂತಹ ಚಿಕ್ಕ ಚಿಕ್ಕ ಬಿಳಿಯ ಹೂಗಳು ಅಲ್ಲಲ್ಲಿ ತಲೆಯೆತ್ತಿ ನಿಂತಿದ್ದವು. ಮಳೆ ಬಿದ್ದೊಡನೆ ಭೂಮಿಯಿಂದ ಎದ್ದು ಬರುವ ಹೆಬನೇರಿಯ ಎಂದು ಕರೆಸಿಕೊಳ್ಳುವ ಈ ನೆಲ ಆರ್ಕಿಡ್‌ಗಳು ಪ್ರಕೃತಿಯ ಮಳೆಗಾಲದ ಅತಿಥಿಗಳು. ಇಂತಹ ನೆಲ ಆರ್ಕಿಡ್‌ಗಳಲ್ಲಿ 850ಕ್ಕೂ ಹೆಚ್ಚು ಬಗೆಗಳಿವೆಯಂತೆ.

ಅವುಗಳಲ್ಲಿ ಒಂದು ಜಾತಿಯನ್ನು ನೋಡುವ ಅದೃಷ್ಟ ನನ್ನದಾಗಿದ್ದು ಈ ಕೊರೊನಾ ಕರುಣಿಸಿದ ಭಾಗ್ಯ. ಲಾಕ್‌ಡೌನ್ ಮತ್ತು ಬೆಂಗಳೂರಲ್ಲಿ ಹೆಚ್ಚಿದ ಕೋವಿಡ್-19 ವಿಪತ್ತಿನಿಂದ ಹೆಚ್ಚು ದಿನ ಊರಿನಲ್ಲೇ ಉಳಿದಿದ್ದರಿಂದ ನಿಸರ್ಗದ ಇಂತಹ ಅದ್ಭುತ ಸೃಷ್ಟಿಯು ಹತ್ತಿರವೇ ನೋಡಲು ಸಿಕ್ಕಿತು.

ಇದಕ್ಕೆ ‘ಬಿಳಿ ಕೊಕ್ಕರೆ’ ಎಂಬ ಹೆಸರೂ ಇದೆ. ಭಾರತವಲ್ಲದೇ ಚೀನಾ, ಜಪಾನ್‌ನಲ್ಲೂ ಇವು ಹೆಚ್ಚು ಬೆಳೆಯುತ್ತವೆ. ಈ ಗಿಡದಲ್ಲಿ ಸಾಮಾನ್ಯವಾಗಿ 7 ಎಲೆಗಳಿದ್ದು, ಒಂದು ಸೆಂ.ಮೀ. ಅಗಲ, 10– 15 ಸೆಂ.ಮೀ. ಉದ್ದವಿರುತ್ತದೆ. ಹೂವು 50 ಸೆಂ.ಮೀ.ವರೆಗೂ ಬೆಳೆಯುವುದಲ್ಲದೇ ಕದಿರುಗಳು ಹೆಚ್ಚಾಗಿ ಕಂಡುಬರುತ್ತವೆ. ಜೂನ್‌ನಲ್ಲಿ ನೆಲದಿಂದ ಎಲೆಯೊಂದಿಗೆ ಮೂಡುವ ಈ ಆರ್ಕಿಡ್‌, ಆಗಸ್ಟ್‌ವರೆಗೂ ಕಾಣಿಸಿಕೊಂಡು ಕಣ್ಮರೆಯಾಗಿ ಬಿಡುತ್ತದೆ.

ನೆಲದಡಿ ಸಣ್ಣ ಗೆಡ್ಡೆಗಳಿದ್ದು, ಇದೇ ಗಿಡಕ್ಕೆ ಶಕ್ತಿ ಒದಗಿಸುವ ಕೆಲಸ ಮಾಡುತ್ತದೆ. ಹೊಸ ಗೆಡ್ಡೆಗಳು ಬಂದಂತೆ ಹಳೆಯ ಗೆಡ್ಡೆಗಳು ನಾಶವಾಗುತ್ತವೆ. ಹೆಚ್ಚಾಗಿ ಗದ್ದೆಯ ಬದುವಿನಲ್ಲಿ ಬೆಳೆಯುವ ಈ ಆರ್ಕಿಡ್‌ ಇದೀಗ ವಿನಾಶದ ಅಂಚಿನಲ್ಲಿದೆ. ಮನೆಯಂಗಳ, ಚೆಟ್ಟಿಯಲ್ಲಿ ಬೆಳೆಸುವುದಾದರೆ ಗೆಡ್ಡೆಗಳು ತೋಟಗಾರಿಕೆ ಇಲಾಖೆಯಲ್ಲಿ ಲಭ್ಯ. ಇವುಗಳನ್ನು ನೀರಿನಲ್ಲಿ ಒಂದು ದಿನ ನೆನೆಸಿಟ್ಟು ನಂತರ ಮಣ್ಣೊಳಗೆ ಹೂತಿಟ್ಟರೆ ಚಿಗುರು ಮೂಡಿಬರುತ್ತದೆ.

ಇವಿಷ್ಟು ಹೂವಿನ ಬಗ್ಗೆ ವಿವರವಾದರೆ ಈ ಬಿಳಿ ಹೂವುಗಳನ್ನು ನೋಡುತ್ತಿದ್ದಂತೆ ತಕ್ಷಣ ನೆನಪಾಗಿದ್ದು ಹೈಸ್ಕೂಲ್‌ನ ಪಠ್ಯದಲ್ಲಿದ್ದ ಕವಿ ವಿಲಿಯಂ ವರ್ಡ್ಸ್‌ವರ್ತ್ ಬರೆದ ‘ಡ್ಯಾಫೊಡಿಲ್ಸ್’ ಕವನ. ಏಕಾಂಗಿಯಾಗಿ ಬೇಸರ, ದುಗುಡದಲ್ಲಿ ತಿರುಗಾಡುತ್ತಿದ್ದ ಕವಿಯ ಕಣ್ಣಿಗೆ ನದಿಯ ತೀರದಲ್ಲಿ ಗಾಳಿಗೆ ತೊನೆದಾಡುತ್ತಿದ್ದ ಹಳದಿ ಬಣ್ಣದ ಡ್ಯಾಫೊಡಿಲ್ಸ್ ಹೂವುಗಳು ಕಾಣಿಸಿದವು. ಅದರ ಸೌಂದರ್ಯಕ್ಕೆ ಮನಸೋತ ಕವಿಯ ಮನಸ್ಸು ತಣ್ಣಗಾಗಿ ನಿರಾಳವಾದ ಬಗ್ಗೆ ಆ ಕವನದಲ್ಲಿ ವಿವರಣೆಯಿದೆ.

ಬಂಗಾರದ ಬಣ್ಣದ ಆ ಡ್ಯಾಫೊಡಿಲ್ಸ್ ಹೂಗಳು ಹೊಯ್ದಾಡುತ್ತಿದ್ದ ಕವಿಯ ಮನಸ್ಸಿಗೆ ಆ ಕ್ಷಣಕ್ಕೆ ಶಕ್ತಿ ತುಂಬಿದ್ದಲ್ಲದೇ ಮುಂದೆಯೂ ಮನಸ್ಸು ಖಿನ್ನತೆಗೆ ಜಾರಿದಾಗ, ವ್ಯಗ್ರಗೊಂಡಾಗ ಗಾಳಿಗೆ ನರ್ತಿಸುತ್ತಿದ್ದ ಆ ಹೂಗಳ ಸೌಂದರ್ಯ, ಸ್ವಚ್ಛಂದತೆಯನ್ನು ನೆನಪಿಸಿಕೊಂಡು ಮನಸ್ಸು ಹಗುರಗೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾನೆ. ಹೌದಲ್ಲ, ಕವಿವಾಣಿ ಎಷ್ಟು ಸತ್ಯ. ಜಗತ್ತಿನ ಯಾವುದೋ ಮೂಲೆಯಲ್ಲಿ, ಯಾವುದೋ ಕಾಲದಲ್ಲಿ ಕವಿ ಹೇಳಿದ್ದು, ಅನುಭವಿಸಿದ್ದು ಈಗ ಮುಖಾಮುಖಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT