ಶನಿವಾರ, ಡಿಸೆಂಬರ್ 3, 2022
19 °C

ಬಂಡೀಪುರ ಮತ್ತು ನಾವು- ಕೃಪಾಕರ ಸೇನಾನಿ ಲೇಖನ

ಕೃಪಾಕರ ಸೇನಾನಿ Updated:

ಅಕ್ಷರ ಗಾತ್ರ : | |

ಬಂಡೀಪುರ ಹುಲಿ ರಕ್ಷಿತಾರಣ್ಯ ಎಂದು ಘೋಷಿತವಾಗಿ ಇದೀಗ ಭರ್ತಿ ಐವತ್ತು ವರ್ಷ. ದಶಕಗಳಿಂದ ಈ ಅರಣ್ಯದ ಬೆಳವಣಿಗೆಗಳನ್ನು ಬಲು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿರುವ ನಾಡಿನ ಅನನ್ಯ ವನ್ಯಜೀವಿ ತಜ್ಞರು ಹುಲಿ ರಕ್ಷಣೆಯ ಹೆಜ್ಜೆಗಳ ಕುರಿತು ದಾಖಲಿಸಿದ ಪುಟ್ಟ ಚರಿತ್ರೆಯೊಂದು ಇಲ್ಲಿದೆ

–––

ಶಿಕಾರಿ ದಿಗ್ಗಜರು ಬರೆದಿರುವ ಪುಸ್ತಕಗಳ ಬಗ್ಗೆ ಒಮ್ಮೆ ಪೂರ್ಣಚಂದ್ರ ತೇಜಸ್ವಿ ಅವರೊಂದಿಗೆ ಚರ್ಚಿಸುತ್ತಿದ್ದೆವು. ಅಲ್ಲಿ ನಿರೂಪಿಸಿರುವ ಘಟನೆಗಳು ಹೆಚ್ಚು ಉತ್ಪ್ರೇಕ್ಷಿತವಾಗಿ ಕಾಣುತ್ತವೆ ಎಂಬ ನಮ್ಮ ಮಾತಿಗೆ, ಮುಂದೆ ನೀವು ಹೇಳುವ ಸಂಗತಿಗಳನ್ನು ಜನ ಹಾಗೇ ಭಾವಿಸಿದರೆ ಆಶ್ಚರ್ಯಪಡಬೇಡಿ ಎಂದು ಹೇಳಿದ್ದರು. ಬಂಡೀಪುರ ಅಭಯಾರಣ್ಯದ ನೆನಪುಗಳನ್ನು ದಾಖಲಿಸಲು ಹೊರಟಾಗ ತೇಜಸ್ವಿ ನೆನಪಾದರು.

ಅದು ಎಂಬತ್ತರ ದಶಕ, ಕಾಲೇಜು ಓದು ಮುಗಿದಿದ್ದ ದಿನಗಳು. ಕಾಡಿನ ಬಗ್ಗೆ ಅಪರಿಮಿತ ಕುತೂಹಲವಿದ್ದ ನಮಗೆ ಅಡವಿಯಲ್ಲಿ ಅಲೆದಾಡುವ ಬಯಕೆ ತೀವ್ರವಾಗಿತ್ತು. ಬಿಡುವು ಸಿಕ್ಕಾಗ ಬಂಡೀಪುರ ಕಾಡಿಗೆ ಹೋಗುತ್ತಿದ್ದೆವು. ಆಗ ಬಂಡೀಪುರದಲ್ಲಿ ದನಗಳದ್ದೇ ಸಾಮ್ರಾಜ್ಯ. ಸಾವಿರಾರು ಜಾನುವಾರುಗಳು ಕಾಡಿನಂಗಳದಲ್ಲಿ ನುಸುಳಿ ಹೋಗಿರುತ್ತಿದ್ದವು. ವ್ಯವಸಾಯಕ್ಕಿಂತ ಸಗಣಿ ಗೊಬ್ಬರ ಮಾಡುವುದೇ ಲೇಸೆಂದು ರೈತರು ಭಾವಿಸಿದ್ದಿರಬಹುದು. ಜೊತೆಗೆ ಸೌದೆ ಸಂಗ್ರಹಿಸಲು ನೂರಾರು ತಂಡಗಳು ಪ್ರತಿನಿತ್ಯ ಕಾಡಿನೊಳಗೆ ಪ್ರವೇಶಿಸುತ್ತಿದ್ದವು. ಮಳೆಯ ಸೂಚನೆಯನ್ನು ಗ್ರಹಿಸಿ ಗೂಡಿನಲ್ಲಿದ್ದ ಮೊಟ್ಟೆಗಳನ್ನೆಲ್ಲ ಹೊತ್ತು ಅವಸರದಿಂದ ಬೇರೊಂದು ಸ್ಥಳಕ್ಕೆ ದೌಡಾಯಿಸುವ ಇರುವೆಗಳಂತೆ ಸೌದೆಯ ಹೊರೆಗಳನ್ನು ತಲೆಯ ಮೇಲಿಟ್ಟುಕೊಂಡು ನೂರಾರು ಮಂದಿ ಊರುಗಳತ್ತ ತೆರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹಲವರು ಸೈಕಲ್‌ಗಳಲ್ಲಿ, ಇನ್ನು ಕೆಲವರು ಎತ್ತಿನಗಾಡಿಗಳಲ್ಲಿ ಸೌದೆಯನ್ನು ಕೊಂಡೊಯ್ಯುತ್ತಿದ್ದರು. ಇವರನ್ನು ತಡೆಯಲು ಬೆರಳೆಣಿಕೆಯ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದರು. ಕೆಲವೊಮ್ಮೆ ಪರಿಸ್ಥಿತಿ ಕೈಮೀರಿ, ಸಂಘರ್ಷಕ್ಕೆ ತಿರುಗಿ, ಹಳ್ಳಿಯತ್ತ ಬಂದ ಅರಣ್ಯ ಇಲಾಖೆಯ ವಾಹನಗಳು ಜಖಂಗೊಂಡು ನಿಂತಿದ್ದ ಉದಾಹರಣೆಗಳೂ ಇದ್ದವು.

ಇದೆಲ್ಲದರ ನಡುವೆ ಬಂಡೀಪುರದ ಸುತ್ತಮುತ್ತಲಿನ ಪರಿಸರದ ಸೌಂದರ್ಯಕ್ಕೇನೂ ಕೊರತೆ ಇರಲಿಲ್ಲ. ಮುಂಗಾರಿನಲ್ಲಿ ಕೃಷಿ ಭೂಮಿಗಳಲ್ಲಿ ಸೂರ್ಯಕಾಂತಿ ಹೂವುಗಳು ಅರಳಿ ಕಂಗೊಳಿಸುತ್ತಿದ್ದವು. ಗೋಪಾಲಸ್ವಾಮಿ ಬೆಟ್ಟದ ನೆತ್ತಿಯೇರಿ ನೋಡಿದಾಗ ಇಡೀ ಭೂಮಂಡಲವೇ ಹಳದಿಯಾದಂತಹ ಅನುಭವ. ಕಲಾವಿದ ವ್ಯಾನ್‌ಗಾಂಗ್‌ನ ಕ್ಯಾನ್‌ವಾಸ್‌ಗಳನ್ನು ನೆನಪಿಸುವಂತಹ ನೋಟ.

ಸೂರ್ಯಕಾಂತಿ ಹೂವುಗಳಲ್ಲಿ ಬೀಜ ಮೂಡಿದಾಗ ಮೋಡಗಳಂತೆ ಅಲೆ ಅಲೆಯಾಗಿ ಇಳಿದು ಬೆಳೆಗೆ ಲಗ್ಗೆಹಾಕುವ ಗಿಳಿಗಳು. ತಗಡಿನ ಡಬ್ಬಿಗಳನ್ನು ಬಡಿದು ಅವುಗಳನ್ನು ಬೆದರಿಸಿ ಓಡಿಸುತ್ತಿದ್ದ ರೈತರು. ಆ ಸದ್ದಿಗೆ ತಲೆ ಕೆಡಿಸಿಕೊಳ್ಳದೆ ಪಕ್ಕದ ಹೊಲಕ್ಕೆ ಹಾರಿ ಮತ್ತೆ ತಮ್ಮ ಕೆಲಸವನ್ನು ಮುಂದುವರಿಸುತ್ತಿದ್ದ ಗಿಳಿಗಳು. ಅಲ್ಲೊಂದು ಇಲ್ಲೊಂದು ಯಾವುದೋ ಹೊಲದಲ್ಲಿ ಬಿತ್ತಿದ ಬಿಳಿಜೋಳ ಕಾಳುಗಟ್ಟುವ ಹೊತ್ತಿಗೆ ಮಹಾರಾಷ್ಟ್ರದಿಂದ ಸಕುಟುಂಬ ಪರಿವಾರ ಸಮೇತ ಬರುತ್ತಿದ್ದ ರೋಸಿ ಪ್ಲಾಸ್ಟರ್‌ ಹಕ್ಕಿಗಳ ಗುಂಪು. ಮರಿಗಳಿಗೆ ಕಾಳು ಉಣಿಸಿ ಬೆಳೆಸಿ ಹಾರಿ ಹೋಗುತ್ತಿದ್ದವು. ಆ ದಿನಗಳಲ್ಲಿ ಕಾಡು ಪ್ರವಾಸಿಗರ ತಾಣವಾಗಿರಲಿಲ್ಲ. ಕೇವಲ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಹಿಂದಿರುಗುವುದು ಸಮಾಜದ ಪಾಲಿಗೆ ಪ್ರವಾಸವಾಗಿರುತ್ತಿತ್ತು. ಕಾಡು, ವಿಷಜಂತುಗಳು, ಕ್ರೂರ ಪ್ರಾಣಿಗಳು ಜೀವಿಸುವ ಅಪಾಯಕಾರಿ ಪ್ರಪಂಚವೆಂದೇ ಆಗಿನ ಸಮಾಜ ತೀರ್ಮಾನಿಸಿದ್ದಿರಬಹುದು. ಇದರಿಂದ ಕಾಡುಗಳಿಗೆ ಪ್ರವಾಸಿಗರ ಪ್ರವಾಸೋದ್ಯಮದ ಒತ್ತಡ ಇರಲಿಲ್ಲ.

ಇಂತಹ ಪ್ರಶಾಂತ ವಾತಾವರಣದಲ್ಲಿ ನಾವು ಪದೇ ಪದೇ ಬಂಡೀಪುರಕ್ಕೆ ಭೇಟಿ ನೀಡುತ್ತಿದ್ದೆವು. ನಮ್ಮ ಆಸಕ್ತಿಯನ್ನು ಗಮನಿಸಿದ ಅಧಿಕಾರಿಗಳು ಪ್ರೀತಿಯಿಂದ ಪ್ರೋತ್ಸಾಹಿಸುತ್ತಿದ್ದರು. ಮುಂಜಾನೆಯಿಂದ ಸಂಜೆಯವರೆಗೆ ನಮ್ಮ ಅಂಬಾಸೆಡರ್‌ ಕಾರಿನಲ್ಲಿ ಕಾಡಿನೆಲ್ಲೆಡೆ ಓಡಾಡುವ ಸವಲತ್ತನ್ನು ನೀಡಿದ್ದರು. ಈ ಎಲ್ಲ ಅನುಕೂಲಗಳ ನಡುವೆ ಹಲವಾರು ವರ್ಷಗಳ ಕಾಲ ಅಲೆದಾಡಿದರೂ ಹುಲಿಗಳು ಮಾತ್ರ ಕಾಣಲೇ ಇಲ್ಲ. ಕಾಡಿನಲ್ಲಿ ಮುಕ್ತವಾಗಿ ಬದುಕುವ ಹುಲಿಯನ್ನು ನೋಡಬೇಕೆಂಬ ಬಯಕೆ ಮರೀಚಿಕೆಯಾಗಿಯೇ ಉಳಿಯಿತು.

ಆಗ ಇಲಾಖೆಯ ಲೆಕ್ಕದಲ್ಲಿ ಬಂಡೀಪುರ ಅರಣ್ಯದಲ್ಲಿ ನಲ್ವತ್ತು ಹುಲಿಗಳಿದ್ದವು. ಹಾಗಿದ್ದರೆ ಇಷ್ಟು ದಿನಗಳಲ್ಲಿ ಒಂದಾದರೂ ನಮಗೆ ಕಾಣಬೇಕಿತ್ತಲ್ಲ ಎಂಬ ಪ್ರಶ್ನೆ ಎದುರಾಗುತ್ತಿತ್ತು. ಇದರ ಜೊತೆಗೆ ಬಂಡೀಪುರದಲ್ಲಿ ಹುಲಿಗಳೇ ಇಲ್ಲ, ‘ಹುಲಿ ಯೋಜನೆ’ ಎಂಬ ಫಲಕದ ಮೇಲೆ ಚಿತ್ರ ಬರೆದಿದ್ದಾರೆ ಅಷ್ಟೆ ಎಂದು ಸಾರ್ವಜನಿಕ ವಲಯದಲ್ಲಿ ಮಾತನಾಡಿಕೊಳ್ಳುವ ಧ್ವನಿಯಲ್ಲಿ ನಿಜವಿರಬೇಕು ಎನಿಸುತ್ತಿತ್ತು. ಆದರೆ, ಕಾಡಿನ ರಸ್ತೆಗಳಲ್ಲಿ ಆಗಾಗ್ಗೆ ಮೂಡುತ್ತಿದ್ದ ಹುಲಿಯ ಹೆಜ್ಜೆ ಗುರುತುಗಳು ಆ ಗುಮಾನಿಯಲ್ಲಿ ಸತ್ಯಾಂಶವಿಲ್ಲ ಎಂಬುದನ್ನು ಮನವರಿಕೆ ಮಾಡಿಕೊಡುತ್ತಿದ್ದವು. ಹುಲಿಗಳು ನಿಶಾಚರಿಗಳು. ಅವು ಬೆಳಗಿನ ಹೊತ್ತು ಹೊರ ಬರುವುದಿಲ್ಲವೆಂದು, ಸೂರ್ಯ ಕಣ್ಮರೆಯಾದ ನಂತರವಷ್ಟೇ ಕಾರ್ಯಪ್ರವೃತ್ತವಾಗುತ್ತವೆಂದು ಹಲವರು ತಿಳಿಸಿದರು.

ಆನಂತರ ಅದೆಷ್ಟೋ ಬೆಳಂದಿಗಳ ರಾತ್ರಿಗಳನ್ನು ಮರದ ಮೇಲಿನ ಅಟ್ಟಣಿಗೆಯಲ್ಲಿ ಕಳೆದೆವು. ಅದೊಂದು ಅದ್ಭುತ ಅನುಭವವಾದರೂ ಹುಲಿಯನ್ನು ಮಾತ್ರ ನೋಡಲಾಗಲಿಲ್ಲ.

ಹಾಗಾದರೆ ಇದ್ದೂ ಕಾಣದ ಹುಲಿಗಳನ್ನು ಪತ್ತೆ ಹಚ್ಚುವುದಾದರೂ ಹೇಗೆ ಎಂಬ ತಿಳಿವಳಿಕೆಯನ್ನು ಪಡೆಯಲು ಸ್ಥಳೀಯ ಬುಡಕಟ್ಟು ಜನರೊಂದಿಗೆ, ಇಲಾಖೆಯ ಸಿಬ್ಬಂದಿಯೊಂದಿಗೆ ಸಂವಾದಿಸಿದೆವು. ಅಯ್ಯೋ, ಮೂರು ಮೂರು ವರ್ಷ ಹುಲಿ ಯೋಜನೆಯ ನಿರ್ದೇಶಕರಾಗಿ ಕೆಲಸ ನಿರ್ವಹಿಸಿದವರಿಗೂ ಕಂಡಿಲ್ಲ ಎಂದಾಗ ನಿರಾಸೆಯಾಯಿತು. ನಂತರ 1995ರಲ್ಲಿ ಕಾಡುನಾಯಿಗಳ ಅಧ್ಯಯನಕ್ಕೆಂದು ಬಂಡೀಪುರದಲ್ಲಿ ನೆಲೆಗೊಂಡೆವು. ಕಾಲ್ನಡಿಗೆಯಲ್ಲಿ ಕಾಡನ್ನು ಅನ್ವೇಷಿಸಲು ಆರಂಭಿಸಿದೆವು. ಆಗ ಕಾಡು ವಿಭಿನ್ನವಾಗಿ ಕಾಣತೊಡಗಿತು. ಬೇರೆ ಬೇರೆ ಕಥೆಗಳನ್ನು ಹೇಳಲು ಆರಂಭಿಸಿತು.

ಒಮ್ಮೆ ಪ್ರಾಣಿಗಳು ಬಳಸುವ ಜಾಡಿನಲ್ಲಿ ನಡೆದಿದ್ದಾಗ ಹುಲಿಯ ಹೆಜ್ಜೆಗಳು ಮೂಡಿದ್ದವು. ಹೊಸದಾಗಿ ಮೂಡಿದ್ದ ಆ ಹೆಜ್ಜೆ ಗುರುತುಗಳು ಸ್ವಲ್ಪವೂ ಮಾಸಿರಲಿಲ್ಲ. ಎಚ್ಚರಿಕೆಯಿಂದ ಅಕ್ಕಪಕ್ಕದ ಪೊದರುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪರಿಶೀಲಿಸುತ್ತಾ ಹೆಜ್ಜೆ ಗುರುತುಗಳನ್ನು ಹಿಂಬಾಲಿಸುತ್ತಾ ಸಾಗಿದೆವು. ತುಸು ದೂರದ ಬಳಿಕ ಹೆಜ್ಜೆಗಳು ಕೆರೆಯತ್ತ ಮುಖ ಮಾಡಿದ್ದವು. ಗಿಡ ಮರಗಳ ಮರೆಯಲ್ಲಿ ಸದ್ದಿಲ್ಲದೆ ಸಾಗಿ ಕೆರೆಯಂಗಳಕ್ಕೆ ಬಂದೆವು. ಕೆರೆಯ ನಡುಭಾಗದಲ್ಲಿ ಹುಲಿ ವಿರಮಿಸಿ ಮಲಗಿತ್ತು. ನಮ್ಮ ಉಪಸ್ಥಿತಿಯ ಸುಳಿವು ಅದಕ್ಕೆ ಸಿಕ್ಕಿರಲಿಲ್ಲ. ಸುಮಾರು ಒಂದೂವರೆ ತಾಸಿನವರೆಗೆ ಸ್ವಲ್ಪ ದೂರದಲ್ಲಿ ಕುಳಿತು ಹುಲಿಯನ್ನು ವೀಕ್ಷಿಸುತ್ತಿದ್ದೆವು. ಇದ್ದಕ್ಕಿದ್ದಂತೆ ನೀರಿನಿಂದ ಮೇಲೆದ್ದ ಹುಲಿ ಮೈಮುರಿದು ಮೆಲ್ಲಗೆ ಹೆಜ್ಜೆಹಾಕುತ್ತಾ ಕಾಡಿನಲ್ಲಿ ಮರೆಯಾಯಿತು.

ಇದಾದ ಹತ್ತು ನಿಮಿಷಗಳ ಬಳಿಕ ಇಲಾಖೆಯ ವಾಹನ ಪ್ರವಾಸಿಗರನ್ನು ಅಲ್ಲಿಗೆ ಕರೆತಂದಿತು. ಆಗಷ್ಟೇ ನಮಗೆ ವಸ್ತುಸ್ಥಿತಿ ಅರ್ಥವಾದದ್ದು. ಕ್ಷೋಭೆಗೊಳಗಾಗಿದ್ದ ಕಾಡಿನಲ್ಲಿ ಹುಲಿಗಳು ಅತಿ ಸೂಕ್ಷ್ಮವಾಗಿ ವರ್ತಿಸುತ್ತಿದ್ದವು. ಹೀಗಾಗಿ ಆ ಹುಲಿ ಪ್ರವಾಸಿಗರು ಆಗಮಿಸುವ ಸೂಚನೆಯನ್ನು ಮುಂಚಿತವಾಗಿ ಗ್ರಹಿಸಿ ಕೆರೆಯಿಂದ ಹೊರನಡೆದಿತ್ತು. ನಿರ್ದೇಶಕರಿಗೆ ಹುಲಿಯ ಸ್ವಭಾವವನ್ನು ವಿವರಿಸಿದಾಗ, ‘ಅಯ್ಯೋ, ಇನ್ನೆರಡು ತಿಂಗಳಲ್ಲಿ ನಿವೃತ್ತಿಯಾಗುತ್ತಿದ್ದೇನೆ. ಹುಲಿ ಯೋಜನೆಯ ನಿರ್ದೇಶಕನಾಗಿ ಮೂರು ವರ್ಷ ಕೆಲಸ ಮಾಡಿ ಹುಲಿ ನೋಡಿಲ್ಲವೆಂದರೆ ಜನ ನಗುತ್ತಾರೆ. ನನಗೊಮ್ಮೆ ತೋರಿಸಿ’ ಎಂದರು. ಅವರ ಅದೃಷ್ಟಕ್ಕೆ ಮತ್ತೆ ಅದೇ ಘಟನೆ ಮರುಕಳಿಸಿತು.

ಈಗ ಬಂಡೀಪುರದ ಚಿತ್ರ ಬದಲಾಗಿದೆ. ಹುಲಿಗಳ ಸಂಖ್ಯೆ ವೃದ್ಧಿಸಿದೆ. ಅವುಗಳ ವರ್ತನೆಯಲ್ಲೂ ಬದಲಾವಣೆ ಕಂಡಿದೆ. ಪ್ರವಾಸಿಗರನ್ನು ಕಂಡರೆ ಅವುಗಳು ಈಗ ನಾಚಿ ಮರೆಯಾಗುವುದಿಲ್ಲ. ಇದು ಪವಾಡದಂತೆ ಒಮ್ಮೆಲೇ ಬದಲಾವಣೆಯಾದ ದೃಶ್ಯವಲ್ಲ. ಕಾಡನ್ನು ಕಾಡುತ್ತಿದ್ದ ಹಲವು ಸಮಸ್ಯೆಗಳು ಗಣನೀಯವಾಗಿ ಇಳಿಮುಖಗೊಂಡಿವೆ. ಜಾನುವಾರುಗಳ ಸಮಸ್ಯೆ ಕೂಡ ಇಳಿಮುಖವಾಗಿದೆ. ಕಾಡಿನಂಚಿನ 220 ಹಳ್ಳಿಗಳಿಗೆ ‘ನಮ್ಮ ಸಂಘ’ ಸೇವಾ ಸಂಸ್ಥೆ ವಿತರಿಸುತ್ತಿರುವ ಅಡುಗೆ ಅನಿಲ ಸೌಲಭ್ಯದಿಂದ ಜನರು ಕಾಡಿನೊಳಗೆ ನುಸುಳುತ್ತಿಲ್ಲ. ವನ್ಯಜೀವಿಗಳ ಬೇಟೆಯು ನಿಯಂತ್ರಣದಲ್ಲಿದೆ. ಈ ಎಲ್ಲಾ ಕಾರಣಗಳಿಂದ ಬಂಡೀಪುರ ಚೇತರಿಸಿಕೊಂಡಿದೆ. ಇಲ್ಲಿ ಇಲಾಖೆಯ ಹಲವು ದಕ್ಷ ಅಧಿಕಾರಿಗಳ ಕೊಡುಗೆಯನ್ನು ಸ್ಮರಿಸಬೇಕು. ಹುಲಿ ಯೋಜನೆಯ ಪರಿಕಲ್ಪನೆಯನ್ನು ಚಿಂತಿಸಿ, ಯೋಜನೆ ಅನುಷ್ಠಾನಗೊಳಿಸಿದ ಅಂದಿನ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಕೊಡುಗೆಯೂ ಅನನ್ಯವಾದದ್ದು.

ಈ ಮೇಲಿನ ಟಿಪ್ಪಣಿಗಳಿಂದ ‘ಹುಲಿ ಯೋಜನೆ’ಯ ಐವತ್ತು ವರ್ಷಗಳನ್ನು ಪೂರೈಸಿದ ಬಂಡೀಪುರ ಅಪಾಯಗಳಿಂದ ಮುಕ್ತವಾಗಿದೆ ಎಂದು ಹೇಳಲಾಗುವುದಿಲ್ಲ. ಕಾಡಿನಂಚಿನಲ್ಲಿರುವ, ಕಂದಾಯ ಇಲಾಖೆಗೆ ಸೇರಿದ ಕಾಡುಗಳೆಲ್ಲ ಸಾಗುವಳಿ ಭೂಮಿಯಾಗಿ ತ್ವರಿತವಾಗಿ ರೂಪಾಂತರಗೊಳ್ಳುತ್ತಿವೆ. ಬೆಳೆ ಸಂರಕ್ಷಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ. ಮಾನವ–ವನ್ಯಜೀವಿ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಆನೆಗಳಿಗೆ ನಾವು ನೀಡಿರುವ ಕಾಡಿನ ವಿಸ್ತೀರ್ಣ ಅತ್ಯಲ್ಪ. ಬೆಳೆದ ಹುಲಿ ಮರಿಗಳು ಹೊಸ ನೆಲೆಯನ್ನು ಹುಡುಕುತ್ತಾ ಕಾಫಿ ತೋಟಗಳಲ್ಲಿ, ಜಮೀನುಗಳಲ್ಲಿ ಅಸಹಾಯಕವಾಗಿ ನಿಂತಿವೆ.

ಇದೆಲ್ಲಕ್ಕಿಂತ ಕಾಡನ್ನು ಬೆಂಕಿಯಂತೆ ಆವರಿಸುತ್ತಿರುವ ಲಂಟಾನಾ ಕಳೆ. ಹೇಗೋ ಕಾಡು ಹೊಕ್ಕಿದ ಈ ಕಳೆಯ ಪ್ರಾಬಲ್ಯದೆದುರು ಸ್ಥಳೀಯ ಸಸ್ಯಪ್ರಭೇದಗಳು ಧೃತಿಗೆಟ್ಟಿವೆ. ಮುಂದೊಂದು ದಿನ ಇವು ಸೃಷ್ಟಿಸಬಹುದಾದ ಅಪಾಯವನ್ನು ಅಂದಾಜಿಸುವುದು ಕಷ್ಟ. ಇದು ಇಡೀ ಜೀವ ಪರಿಸರವನ್ನು ಅಸ್ತವ್ಯಸ್ತಗೊಳಿಸುವ ಸೂಚನೆಗಳನ್ನು ಈಗಾಗಲೇ ನಮೂದಿಸಿದೆ. ಇದೇ ರೀತಿ ಸೆನ್ನಾ ಸ್ಪೆಕ್ಟಾಬಿಲಿಸ್‌ ಎಂಬ ಅಮೆರಿಕ ಮೂಲದ ಸಸ್ಯಗಳು ಕಾಡನ್ನು ಆಕ್ರಮಿಸುತ್ತಿರುವ ಸುದ್ದಿ ಸಹ ಆತಂಕಕಾರಿಯಾಗಿದೆ. ಹಾಗಾಗಿ ಹುಲಿಗಳ ಸಂಖ್ಯೆ ವೃದ್ಧಿಸಿತೆಂಬ ಕಾರಣದಿಂದ ಐವತ್ತು ವರ್ಷಗಳ ಸಾಧನೆಯನ್ನು ನೆನೆದು ಹಿಗ್ಗುವಂತಿಲ್ಲ. ವೃದ್ಧಿಸಿದ ಸಂಖ್ಯೆ ಜೀವಿಯ ಭವಿಷ್ಯವನ್ನು ನಿರ್ಧರಿಸುವ ಅಂಶವಾಗುವುದಿಲ್ಲ. ಬದಲಾಗಿ ಅವುಗಳಲ್ಲಿ ಭರವಸೆ ಮೂಡಿಸುವ ಅನುಶಂಗಿಕ ವೈವಿಧ್ಯ ಉಳಿದಿದೆಯೇ ಎಂಬುದನ್ನು ಖಾತರಿ ಮಾಡಿಕೊಳ್ಳಬೇಕು.

ಇಲ್ಲಿ ಬದಲಾಗಬೇಕಿರುವುದು ಆಳುವವರ ಮನಃಸ್ಥಿತಿ. ಅಗಲವಾದ ಎಕ್ಸ್‌ಪ್ರೆಸ್‌ ರಸ್ತೆಗಳಿಂದ, ಉದ್ದನೆಯ ಸೇತುವೆಗಳಿಂದ, ಬೃಹತ್‌ ಕಟ್ಟಡಗಳಿಂದ ಸುಭದ್ರ ದೇಶ ಕಟ್ಟಬಹುದೆಂಬ ಅವಿವೇಕ ಚಿಂತನೆಗಳಿಂದ ಹೊರಬರಬೇಕು. ಅಂದಗೆಡದ ವೃಕ್ಷ ಸಂಪತ್ತು ಆಯಾ ದೇಶಗಳ, ಪ್ರದೇಶಗಳ, ಸಂಸ್ಕೃತಿಯನ್ನು, ಪ್ರಗತಿಯನ್ನು ಪ್ರತಿನಿಧಿಸುವ ಪ್ರತಿಬಿಂಬಗಳಾಗಿರುತ್ತವೆ. ಅಭಿವೃದ್ಧಿ ಹಾಗೂ ವಿಕಾಸದ ಹಾದಿಯನ್ನು, ಅರ್ಥವ್ಯಾಪ್ತಿಯನ್ನು ಮತ್ತೆ ಪರಿಶೀಲಿಸಿ ಪುನರ್‌ವ್ಯಾಖ್ಯಾನಿಸುವುದು ಇಂದಿನ ಅಗತ್ಯ. ಈ ಮೂಲತತ್ವವನ್ನು ಅಳವಡಿಸಿಕೊಂಡಾಗ ಕಾಡು ಇನ್ನಷ್ಟು ಕಾಲ ನಿಶ್ಚಿಂತೆಯಿಂದ ಮುಂದುವರಿಯುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು