ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive: ಜಾನುವಾರು ಜೀವ ಉಳಿಸುತ್ತಿದೆ ‘ಅದೇ ಕಣ್ಣು’!

Last Updated 29 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

ಬೋಟ್ಸ್‌ವಾನದ ಅತ್ತ ಪಟ್ಟಣವೂ ಅಲ್ಲ, ಇತ್ತ ಹಳ್ಳಿಯೂ ಅಲ್ಲದ ಊರಿನಲ್ಲಿ ನೆಲೆ ಕಂಡುಕೊಂಡಿರುವ ಕೆಟ್ಸೊ ಅವರದ್ದು ಕೃಷಿ ಹಾಗೂ ಹೈನುಗಾರಿಕೆ ನಂಬಿಕೊಂಡ ಕುಟುಂಬ. ಹಸು ಮೇಯಿಸಲು ಕಾಡಿಗೆ ಹೋಗುವ ಕಾಯಕ ಹಳ್ಳಿಯ ಬಹುತೇಕರದ್ದು. ಕಾಡಿನ ಮೇವು ತಿಂದುಂಡು ಬಲಿಷ್ಠವಾಗಿರುವ ಜಾನುವಾರುಗಳು ನೀಡುವ ಹಾಲು ಊರಿನ ಜನರ ಆದಾಯದ ಮೂಲ.

ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಜಾನುವಾರುಗಳಿಗೆ ವ್ಯಾಘ್ರ, ಸಿಂಹಗಳ ಕಾಟ ಶುರುವಿಟ್ಟುಕೊಂಡಿದೆ. ಹಗಲು, ರಾತ್ರಿ ಎಂಬ ಭೇದವಿಲ್ಲದೆ ಸಿಂಹ ಘರ್ಜನೆ, ಹುಲಿ ಹೆಜ್ಜೆಯ ಸಪ್ಪಳ ಕೇಳುತ್ತದೆ.ಹತ್ತಾರು ಜಾನುವಾರುಗಳು ಹುಲಿರಾಯನ ಹೊಟ್ಟೆ ಸೇರಿದ ಬಳಿಕ, ವ್ಯಾಘ್ರನನ್ನು ಮಟ್ಟಹಾಕಲು ಒಂದೊಂದೇ ಯೋಜನೆಗಳನ್ನು ಜನರು ಜಾರಿಗೆ ತಂದರು. ಆ ಪೈಕಿ ‘ನಕಲಿ ಕಣ್ಣು’ ಹೆಚ್ಚು ಕೆಲಸ ಮಾಡಿದಂತೆ ತೋರಿತು.

ಹೌದು, ಇದೊಂದು ವಿಚಿತ್ರ ಪ್ರಯೋಗ. ಹಸುಗಳ ಹಿಂಭಾಗದಲ್ಲಿ, ತೊಡೆಗಳ ಎರಡೂ ಕಡೆ ಕಣ್ಣಿನ ಚಿತ್ರವನ್ನು ಅಚ್ಚೊತ್ತುವ ಆಲೋಚನೆ ಒಂದಿಷ್ಟು ಫಲ ನೀಡಿದೆ. ಸಾಮಾನ್ಯವಾಗಿ ಪ್ರಾಣಿಗಳ ಹಿಂದಿನಿಂದ ದಾಳಿಯನ್ನು ಯೋಜಿಸುವ ಹುಲಿಗಳಿಗೆ, ಹಸುಗಳ ಮೈಮೇಲೆ ಬಿಡಿಸಲಾಗಿದ್ದ ಕಣ್ಣುಗಳ ಚಿತ್ರಗಳು ವಿಚಿತ್ರ ಅನುಭವ ನೀಡಲು ಶುರುಮಾಡಿದವು. ಬೇಟೆಯು ತನ್ನನ್ನೇ ನೋಡುತ್ತಿದೆ ಎಂಬ ಭಾವ ಮೂಡಿದ ಕೂಡಲೇ ಸಿಂಹ, ಹುಲಿಗಳು ಗುರಿ ಬದಲಿಸಲು ಶುರು ಮಾಡಿದವು. ಹಸುಗಳ ಪ್ರಾಣ ಉಳಿಯಿತು.

ಹುಲಿ ಸೇರಿದಂತೆ ಕಾಡುಮೃಗಗಳು ಒತ್ತಡದಲ್ಲಿವೆ. ಒಂದೆಡೆ ಅವುಗಳ ಬಹುಪಾಲು ಜಾಗವನ್ನು ಮನುಷ್ಯ ತನ್ನ ಕೃಷಿ ಚಟುವಟಿಕೆಗೆ ಬಳಸಿಕೊಂಡಿದ್ದಾನೆ. ಮತ್ತೊಂದೆಡೆ ಅವುಗಳನ್ನು ಗುಂಡಿಟ್ಟು ಕೊಲ್ಲುವ ಅಥವಾ ವಿಷ ಹಾಕಿ ಸಾಯಿಸುವ ಕೃತ್ಯಗಳಿಗೆ ಮನುಷ್ಯ ಇಳಿದಿದ್ದಾನೆ. ಹುಲಿ ದಾಳಿಯಿಂದ ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ರೈತರೇ ಅವುಗಳ ಜೀವಕ್ಕೆ ಎರವಾಗುತ್ತಿದ್ದಾರೆ.

ಬೋಟ್ಸ್‌ವಾನದ ಒಕಾವಂಗೊ ಡೆಲ್ಟಾದಲ್ಲಿ ಇದು ದೀರ್ಘಕಾಲದ ಸಮಸ್ಯೆಯಾಗಿ ಉಳಿದಿದೆ.ಒಕವಾಂಗೊ ನದಿಯಲ್ಲಿ ನೀರಿನ ಪಸೆ ಮಾತ್ರ ಉಳಿದಿದ್ದು, ಅದು ಜೌಗು ಪ್ರದೇಶವಾಗಿ ಮಾರ್ಪಟ್ಟಿದೆ. ಸಾವಿರಾರು ಚದರ ಕಿಲೋಮೀಟರ್ ವಿಸ್ತೀರ್ಣಕ್ಕೆ ಚಾಚಿಕೊಂಡಿರುವ ಇದು ನೂರಾರು ಜಾತಿಯ ವನ್ಯಜೀವಿಗಳ ಆವಾಸಸ್ಥಾನವಾಗಿದೆ. ಒಕವಾಂಗೊದ ಕೆಲವು ಭಾಗಗಳನ್ನು ಸಂರಕ್ಷಿತ ಪ್ರದೇಶಗಳೆಂದು ಘೋಷಿಸಲಾಗಿದೆ. ಇವುಗಳಿಗೆ ಹೊಂದಿಕೊಂಡ ಜಾಗದಲ್ಲಿ ಹೊಲಗದ್ದೆಗಳು ಇವೆ. ಇಲ್ಲಿರುವ ‌ಜಾನುವಾರುಗಳಿಗೆ ಕಾಡಂಚಿನ ಪ್ರಾಣಿಗಳೇ ಕಂಟಕವಾಗಿವೆ.

ರಾತ್ರಿ ಹೊತ್ತು ಕೊಟ್ಟಿಗೆಯಲ್ಲಿ ಜಾನುವಾರುಗಳನ್ನು ಭದ್ರವಾಗಿ ಇರಿಸಲಾಗುತ್ತದೆ. ಆದರೆಹಗಲು ಹೊತ್ತಿನಲ್ಲಿ ತುಂಬಾ ಜಾಗೃತವಾಗಿರುವ ಹುಲಿಗಳು, ಮೇಯಲು ಕಾಡಂಚಿಗೆ ಬರುವ ಜಾನುವಾರುಗಳನ್ನು ಗುರಿಯಾಗಿಸಿ ದಾಳಿ ಎಸಗುತ್ತವೆ. ಹುಲಿಬಾಯಿಗೆ ಸಾಕುಪ್ರಾಣಿಗಳು ಆಹಾರವಾಗದಂತೆ ತಡೆಯಲು ಇಲ್ಲಿನ ರೈತರೇ ಕಂಡುಕೊಂಡಿರುವ ‘ನಕಲಿ ಕಣ್ಣು’ ಯೋಜನೆ ನ್ಯೂಸೌತ್‌ವೇಲ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳಲ್ಲೂ ಅಚ್ಚರಿ ಮೂಡಿಸಿದೆ. ಈ ಐಡಿಯಾ ಹೊಸತಲ್ಲ. ಚಿಟ್ಟೆಗಳು ಹಾಗೂ ಕೆಲವು ಜಾತಿಯ ಮೀನುಗಳ ರೆಕ್ಕೆಗಳಲ್ಲಿ ಮೂಡಿರುವ ಕಣ್ಣಿನ ಚಿತ್ರಗಳು ಶತ್ರುಗಳಿಂದ ಅವುಗಳನ್ನು ಕಾಪಾಡುತ್ತವೆ.

ಒಕಾವಂಗೊ ವ್ಯಾಪ್ತಿಯ 14 ವಿವಿಧ ಫಾರ್ಮ್‌ಗಳಲ್ಲಿದ್ದ ಸುಮಾರು 2,000 ಜಾನುವಾರುಗಳನ್ನು ಅಧ್ಯಯನಕ್ಕೆ ಒಳಪಡಿಸಲಾಯಿತು. ಮೂರು ತಂಡಗಳನ್ನು ಮಾಡಲಾಯಿತು. ಒಂದು ತಂಡದಲ್ಲಿರುವ ಆಕಳುಗಳ ದೇಹದ ಹಿಂಭಾಗದಲ್ಲಿ ದೊಡ್ಡ ಕಣ್ಣಿನ ಚಿತ್ರ ಬಿಡಿಸಲಾಯಿತು. ಎರಡನೇ ಗುಂಪಿನಲ್ಲಿದ್ದ ಜಾನುವಾರುಗಳ ಮೇಲೆX ಎಂದು ಬರೆಯಲಾಯಿತು. ಮೂರನೇ ಗುಂಪಿನ ಜಾನುವಾರುಗಳಿಗೆ ಏನನ್ನೂ ಬರೆಯಲಿಲ್ಲ.

ಕಣ್ಣುಗಳನ್ನು ಸಾಕಷ್ಟು ಕೆಲಸ ಮಾಡಿದ್ದವು. ನಾಲ್ಕು ವರ್ಷಗಳ ಅವಧಿಯಲ್ಲಿ ಮೊದಲ ಗುಂಪಿನಲ್ಲಿದ್ದ 683 ಜಾನುವಾರಗಳ ಪೈಕಿ ಒಂದೂ ಸಹ ಹುಲಿಗೆ ಆಹಾರವಾಗಲಿಲ್ಲ. ಕಣ್ಣಿನ ಚಿತ್ರ ಬಿಡಿಸದ 835 ಪ್ರಾಣಗಳ ಪೈಕಿ 15 ಜಾನುವಾರುಗಳು ಹುಲಿಗೆ ಬಲಿಯಾದವು.X ಚಿಹ್ನೆ ಬರೆದಿದ್ದ ಪ್ರಾಣಿಗಳೂ ಕೊಂಚ ರಕ್ಷಣೆ ಪಡೆದಿದ್ದವು. ಈ ಗುಂಪಿನಲ್ಲಿದ್ದ 543 ಜಾನುವಾರುಗಳಲ್ಲಿ ನಾಲ್ಕು ಮಾತ್ರ ಹತ್ಯೆಯಾದವು.

ಈ ಪ್ರಯೋಗದಲ್ಲಿ ಕೆಲವು ನ್ಯೂನತೆಗಳೂ ಇವೆ. ಗುಂಪಿನಲ್ಲಿರುವ ಎಲ್ಲ ಜಾನುವಾರುಗಳ ಮೇಲೂ ಕಣ್ಣಿನ ಚಿತ್ರ ಬರೆಯುವುದರಿಂದ ಉದ್ದೇಶ ದುರ್ಬಲವಾಗಬಹುದು. ಅಂದರೆ ಈ ತಂತ್ರ ಸಫಲವಾಗುತ್ತದೆ ಎಂದು ಖಚಿತವಾಗಿ ಹೇಳಲಾಗದು. ಸದ್ಯದ ಪ್ರಕಾರ ಈ ತಂತ್ರಗಾರಿಕೆಯು ಕಡಿಮೆ ಖರ್ಚಿನ ಹಾಗೂ ಸುಲಭದ ದಾರಿ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಕಾಲ ಕಳೆದಂತೆ ನಕಲಿ ಕಣ್ಣುಗಳನ್ನು ವ್ಯಾಘ್ರಗಳು ಗುರುತಿಸಲಾರಂಭಿಸಿದರೆ, ತಂತ್ರಗಾರಿಕೆಯ ಕತೆ ಅಲ್ಲಿಗೆ ಮುಗಿದಂತೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT