ಭಾನುವಾರ, ನವೆಂಬರ್ 1, 2020
19 °C

PV Web Exclusive: ನೆಡುತೋಪುಗಳಲ್ಲಿ ಶ್ರೀಮಂತರ ಗುಡಿಸಲುಗಳು!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಲೆನಾಡಿನಲ್ಲಿ ಹರಡಿಕೊಂಡಿರುವ ಅಕೇಶಿಯಾ ನೆಡುತೋಪುಗಳಲ್ಲಿ ರಾತ್ರೋರಾತ್ರಿ ಭಾರಿ ಸಂಖ್ಯೆಯ ಗುಡಿಸಲುಗಳು ತಲೆಎತ್ತುತ್ತಿವೆ. ಆ ಗುಡಿಸಲುಗಳನ್ನು ಹಾಕಿರುವುದು ಯಾವ ಬಡವರೂ ಅಲ್ಲ. ನಿರ್ಗತಿಕರು, ಅಲೆಮಾರಿಗಳಲ್ಲ; ಬಂಡವಾಳಶಾಹಿ ಪಟ್ಟಭದ್ರರು. ಗುಡಿಸಲು ಹಾಕಿದ ನಂತರ ಸುತ್ತಮುತ್ತ ಹತ್ತಾರು ಎಕರೆ ಪ್ರದೇಶಕ್ಕೆ ಬೇಲಿ ಹಾಕಿಕೊಳ್ಳುತ್ತಿದ್ದಾರೆ.

ಇದೇ ಪ್ರವೃತ್ತಿ ಮುಂದುವರಿದರೆ ಮೂರ‍್ನಾಲ್ಕು ತಿಂಗಳಲ್ಲಿ ನೆಡುತೋಪುಗಳೇ ಕಣ್ಮರೆಯಾಗುತ್ತವೆ ಎಂದು ಹೊಸನಗರದ ಪರಿಸರ ಹೋರಾಟಗಾರ ಗಿರೀಶ್ ಆಚಾರ್ ಕರೆ ಮಾಡಿ ಮಾಹಿತಿ ನೀಡಿದ್ದರು. ಆರೋಪಕ್ಕೆ ಪೂರಕವಾಗಿ ಹತ್ತು ಹಲವು ಫೋಟೊ, ವಿಡಿಯೊ ಹಾಕಿದ್ದರು. ಅವರ ಮಾಹಿತಿ ನಂತರ ಹೊಸನಗರ, ತೀರ್ಥಹಳ್ಳಿ, ಶಿವಮೊಗ್ಗ ತಾಲ್ಲೂಕಿನ ಭಾಗಗಳಲ್ಲಿ ಸುತ್ತು ಹಾಕಿದಾಗ ಅವರ ಆರೋಪ ನೂರಕ್ಕೆ ನೂರು ಸತ್ಯವಾಗಿತ್ತು. ನೆಡುತೋಪುಗಳಲ್ಲಿನ ಮರಗಳನ್ನು ಉರುಳಿಸಿ, ಉಳುಮೆಗೆ ಸಜ್ಜು ಮಾಡುತ್ತಿರುವ ದೃಶ್ಯ ಎಲ್ಲೆಡೆ ಕಂಡುಬಂತು.

ಅಕೇಶಿಯಾ ತೋಪಾದ ನೈಸರ್ಗಿಕ ಕಾಡು: ದಟ್ಟ ನೈಸರ್ಗಿಕ ಮರ, ಗಿಡಗಳಿದ್ದ 30 ಸಾವಿರ ಹೆಕ್ಟೇರ್ ಪ್ರದೇಶವನ್ನು ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆಗೆ ಅಗತ್ಯವಾದ ಕಚ್ಚಾ ಸಾಮಗ್ರಿ ಪೂರೈಸಲು ನಾಲ್ಕು ದಶಕಗಳ ಹಿಂದೆ ನೀಡಲಾಗಿತ್ತು. ನಂತರ ಅಲ್ಲಿನ ನೈಸರ್ಗಿಕ ಅಮೂಲ್ಯ ಸಂಪತ್ತು ನಾಶ ಮಾಡಿ ಏಕಜಾತಿಯ ನೆಡುತೋಪುಗಳನ್ನು ಬೆಳೆಸಲಾಗಿತ್ತು. 

1980ರಲ್ಲಿ ಕೇಂದ್ರ ಸರ್ಕಾರ ರೂಪಿಸಿದ ಅರಣ್ಯ ಸಂರಕ್ಷಣಾ ಕಾಯ್ದೆ, ಪರಿಸರ ಸೂಕ್ಷ್ಮವಲಯ, ಜೀವ ವೈವಿಧ್ಯ ತಾಣ ಮತ್ತಿತರ ಯೋಜನೆಗಳಿಂದಾಗಿ ಶೆಟ್ಟಿಹಳ್ಳಿ ಹಾಗೂ ಶರಾವತಿ ಅಭಯಾರಣ್ಯದ ವ್ಯಾಪ್ತಿಯಲ್ಲಿನ 3,250 ಹೆಕ್ಟೇರ್ ಒಳಗೊಂಡ 109 ನೆಡುತೋಪುಗಳನ್ನು ಮರಳಿ ವನ್ಯಜೀವಿ ವಿಭಾಗದ ವಶಕ್ಕೆ ಪಡೆಯಲಾಗಿತ್ತು. ಪ್ರಸ್ತುತ 22,500 ಹೆಕ್ಟೇರ್ ಒಳಗೊಂಡ ನೆಡುತೋಪುಗಳು ಎಂಪಿಎಂ ಅಧೀನದಲ್ಲಿವೆ.

ಗೇರುಸೊಪ್ಪಾ, ಶಂಕರನಾರಾಯಣ (ವಾರಾಹಿ), ಕತಗಾಲ (ಅಘನಾಶಿನಿ), ಕಾಳಿ, ಬೇಡ್ತಿ, ಶರಾವತಿ ಕಣಿವೆಗಳು, ತುಂಗಾ, ಭದ್ರಾ, ಕಾವೇರಿ ಕಣಿವೆಗಳಲ್ಲಿ ನೆಡುತೋಪು ಬೆಳೆಸಲಾಗಿದೆ. ಕೋಗಾರ, ಅಮ್ಮನಘಟ್ಟ, ನಗರ, ಜೋಯಿಡಾ, ತಿನೇಘಾಟ್, ಬಿಸಗೋಡು, ನಂದೊಳ್ಳಿ, ಕದ್ರಾ, ವಾನಳ್ಳಿ, ಉಂಚಳ್ಳಿ, ಕೊಡಚಾದ್ರಿ, ಬಸರಿಕಟ್ಟೆ, ಕುಮಾರಧಾರಾ, ಕೊಪ್ಪ, ಕಳಸ, ಸಾಲ್ಕೋಡ, ಮಹಿಮೆ ಕ್ಯಾದಗಿ, ಮಸ್ಕಿ, ಹೆಗ್ಗರಣಿ ಮೊದಲಾದ ಇಳಿಜಾರು ಬೆಟ್ಟಗಳ ಸೂಕ್ಷ್ಮ ಪ್ರದೇಶಗಳಲ್ಲೂ  ನೆಡುತೋಪುಗಳಿವೆ.

ಮೈಸೂರಿನ ಕೃಷ್ಣರಾಜ ಒಡೆಯರ್ ಕಾಲದಲ್ಲಿ (1936–37) ಎಪಿಎಂ ಸ್ಥಾಪಿಸಲಾಗಿತ್ತು. ನ್ಯೂಸ್‌ಪ್ರಿಂಟ್‌ ಸೇರಿ ಗುಣಮಟ್ಟದ ಕಾಗದ ಉತ್ಪಾದನೆಗೆ ಖ್ಯಾತಿ ಪಡೆದಿದ್ದ ಕಾರ್ಖಾನೆಯಲ್ಲಿ 5 ಸಾವಿರ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಒಂದು ಕಾಲದಲ್ಲಿ ಮುಂಬೈ ಷೇರು ಮಾರುಕಟ್ಟೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಈ ಕಾರ್ಖಾನೆ ಪೈಪೋಟಿ ಎದುರಿಸಲಾಗದೆ ಕಳೆದ ಕೆಲವು ವರ್ಷಗಳಿಂದ ನಷ್ಟದ ಹಾದಿಯಲ್ಲಿ ಸಾಗಿತ್ತು. ಐದು ವರ್ಷಗಳಿಂದ ಉತ್ಪಾದನೆ ಸ್ಥಗಿತಗೊಳಿಸಿ, ಬಾಗಿಲು ಮುಚ್ಚಲಾಗಿದೆ.

ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ 525 ಸ್ಥಳಗಳಲ್ಲಿ ನೆಡುತೋಪುಗಳಿವೆ. ಈಗ ಎಪಿಎಂ ಬಂದ್‌ ಆಗಿರುವ ಪರಿಣಾಮ ಭೂಮಿ ಅತಂತ್ರವಾಗಿದೆ. ಪ್ರಸಕ್ತ ವರ್ಷದ ಆಗಸ್ಟ್‌ನಲ್ಲೇ ಗುತ್ತಿಗೆ ಒಪ್ಪಂದದ ಅವಧಿಯೂ ಮುಕ್ತಾಯವಾಗಿದೆ. ಸರ್ಕಾರ ಇದುವರೆಗೂ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದ ಕಾರಣ ಖಾಸಗಿ ವ್ಯಕ್ತಿಗಳು, ಪಟ್ಟಭದ್ರರು ನೆಡುತೋಪು ಅತಿಕ್ರಮಣ ಮಾಡುತ್ತಿದ್ದಾರೆ. ಎಂಪಿಎಂ ಅರಣ್ಯ ವಿಭಾಗದಲ್ಲಿದ್ದ ಅರಣ್ಯ ಅಧಿಕಾರಿಗಳು, ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸಲಾಗಿದೆ. ನೆಡುತೋಪುಗಳ ಸಂರಕ್ಷಣೆಗೆ ಒತ್ತಾಯವಿದ್ದರೂ ಸರ್ಕಾರ ಯಾವುದೇ ನಿರ್ಣಯ ಕೈಗೊಂಡಿಲ್ಲ. ಈಗ ಅಷ್ಟೂ ನೆಡುತೋಪುಗಳು ಪಟ್ಟಭದ್ರರ ಪಾಲಾಗುತ್ತಿವೆ.


ಹೊಸನಗರ ತಾಲ್ಲೂಕು ಬಳಿ ನೆಡುತೋಪುಗಳಲ್ಲಿ ತಲೆ ಎತ್ತಿರುವ ಗುಡಿಸಲು

ಎಂಪಿಎಂ ಅರಣ್ಯ ಇಲಾಖೆ ಜತೆ ಮಾಡಿಕೊಂಡ ಗುತ್ತಿಗೆ ಷರತ್ತುಗಳ ಉಲ್ಲಂಘನೆಯಾಗಿದೆ. ಹಾಗಾಗಿ, ನೆಡುತೋಪು ಪ್ರದೇಶವನ್ನು ಅರಣ್ಯ ಇಲಾಖೆ ವಶಕ್ಕೆ ನೀಡಬೇಕು ಎಂದು ಒತ್ತಾಯಿಸಿ ಪಶ್ಚಿಮಘಟ್ಟದ ಪರಿಸರ ಸಂಘಟನೆ ಸದಸ್ಯರು ಹೋರಾಟ ಮಾಡಿದ್ದರು. ಆ ಪ್ರದೇಶದಲ್ಲಿ ಸ್ವಾಭಾವಿಕ ಕಾಡು, ಹಣ್ಣು ಹಂಪಲು, ಸ್ಥಳೀಯ ಜಾತಿಯ ಮರ, ಔಷಧೀಯ ಸಸ್ಯಗಳನ್ನು ಬೆಳೆಸಬೇಕು ಎಂದು ಮಲೆನಾಡಿನ ಪ್ರಗತಿಪರರು, ಪರಿಸರವಾದಿಗಳು, ಅರಣ್ಯ ವಾಸಿಗಳು 25 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ‘ನಮ್ಮ ಊರಿಗೆ ಅಕೇಶಿಯಾ ಬೇಡ ಒಕ್ಕೂಟ’ ರಚಿಸಿಕೊಂಡು ವಕೀಲ ಕೆ.ಪಿ.ಶ್ರೀಪಾಲ್ ಮತ್ತಿತರರು ಆರು ತಿಂಗಳಿನಿಂದ ನಿರಂತರವಾಗಿ ಸರಣಿ ಸಭೆಗಳು, ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಜಿಲ್ಲೆಯಲ್ಲಿ ಒಂದು ಲಕ್ಷ ಎಕರೆ ಅರಣ್ಯ ಒತ್ತುವರಿ ಕಾರಣದಿಂದ ನಾಶವಾಗಿದೆ. ಎಂಪಿಎಂಗೆ ನೀಡಿದ್ದ ಭೂಮಿಯನ್ನು ಹಿಂದಕ್ಕೆ ಪಡೆದು ಅರಣ್ಯ ಅಭಿವೃದ್ಧಿ ಪಡಿಸಿದರೆ ಈಗಾಗಲೇ ಆಗಿರುವ ಅರಣ್ಯ ನಾಶಕ್ಕೆ ಬದಲಾಗಿ ಸ್ವಾಭಾವಿಕ ಅರಣ್ಯ ಬೆಳೆಲು ಸಾಧ್ಯವಾಗುತ್ತದೆ ಎನ್ನುವುದು ವೃಕ್ಷಲಕ್ಷ ಆಂದೋಲನ ಕಾರ್ಯಕರ್ತರ ಬೇಡಿಕೆ. 

ಏಕ ಜಾತಿಯ ನೆಡುತೋಪುಗಳಿಂದ ಸೂಕ್ಷ್ಮ ಪರಿಸರ, ಜೀವಸಂಕುಲದ ಮೇಲೆ ಆಗುತ್ತಿರುವ ಪರಿಣಾಮ, ಪ್ರಾಕೃತಿಕ ಅವಘಡ ಕುರಿತು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ಅಧ್ಯಯನ ಕೇಂದ್ರ ಎಚ್ಚರಿಸಿದೆ. ನೆಡುತೋಪುಗಳ ಪ್ರಸ್ತುತ ಸ್ಥಿತಿಗತಿ, ಒತ್ತುವರಿ, ವಿಸ್ತೀರ್ಣ, ಅಲ್ಲಿರುವ ಮರಗಳು, ಅವುಗಳ ಮೌಲ್ಯ ಕುರಿತು ಅರಣ್ಯ ಇಲಾಖೆ ವರದಿ ನೀಡಿದ್ದರೂ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈಗ ಅಡಿಕೆ, ಶುಂಠಿ ಬೆಳೆಗಳು ನೆಡುತೋಪುಗಳಲ್ಲಿ ತಲೆಎತ್ತುತ್ತಿವೆ.

ಪುನಃ ಗುತ್ತಿಗೆ ನೀಡುವ ಚಿಂತನೆ: ಖಾಸಗಿ ಸಹಭಾಗಿತ್ವದಲ್ಲಿ ಎಂಪಿಎಂ ಪುನಶ್ಚೇತನಕ್ಕೆ ಪ್ರಕ್ರಿಯೆಗಳು ಆರಂಭವಾಗಿವೆ. ಹಿಂದೆ ಅರಣ್ಯ ಭೂಮಿ ಗುತ್ತಿಗೆ ನೀಡುವಾಗ ವಿಧಿಸಿದ್ದ ಷರತ್ತುಗಳನ್ನು ಪಾಲಿಸಿಲ್ಲ. ಕೋರ್ಟ್‌ ಆದೇಶವನ್ನೂ ಪಾಲಿಸಿಲ್ಲ ಎಂಬ ದೂರುಗಳ ಮಧ್ಯೆಯೂ ಮತ್ತೆ ಗುತ್ತಿಗೆ ನೀಡುವ ಕುರಿತು ಚರ್ಚೆ ನಡೆಯುತ್ತಿದೆ.

ಕಟಾವು ಭೂ ಕುಸಿತಕ್ಕೆ ದಾರಿ, ತಜ್ಞರ ಎಚ್ಚರಿಕೆ: ಉರುವಲು ಕಟ್ಟಿಗೆ, ಪ್ಲೈವುಡ್, ಕಾಗದ ಕಾರ್ಖಾನೆ ಮತ್ತಿತರ ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯ ಇಲಾಖೆ ನೆಡುತೋಪುಗಳನ್ನು ಬೆಳೆಸುತ್ತದೆ. 10ರಿಂದ 15 ವರ್ಷಗಳ ನಂತರ ಈ ಮರಗಳ ಕಟಾವು ಮಾಡಿ ಹರಾಜು ಹಾಕುತ್ತದೆ. ಗುಡ್ಡಗಳು ಕುಸಿಯುತ್ತಿರುವ ಈ ಸಮಯದಲ್ಲಿ ಮಲೆನಾಡಿನ ನದಿ ಕಣಿವೆಗಳು, ಇಳಿಜಾರು ಪ್ರದೇಶಗಳಲ್ಲಿ ಬೆಳೆಸಿರುವ ನೆಡುತೋಪುಗಳ ಕಟಾವು ಮಾಡದಂತೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಪಶ್ಚಿಮಘಟ್ಟದ ವ್ಯಾಪ್ತಿಯ ಶಿವಮೊಗ್ಗ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 4 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಸಲಾದ 11 ಲಕ್ಷ ಮರಗಳ ಕಟಾವಿಗೆ ಸಿದ್ಧತೆ ನಡೆದಿದೆ. ಈ ಬಾರಿ ಸುರಿದ ಮಳೆಗೆ ಹಲವು ಗುಡ್ಡ-ಬೆಟ್ಟಗಳು ಕಿಲೋಮೀಟರ್‌ಗಟ್ಟಲೆ ಜರುಗಿವೆ. ಕೆಲ ಗುಡ್ಡಗಳು ಬಾಯ್ತೆರೆದು ಬಿರುಕು ಬಿಟ್ಟಿವೆ. 

ಕೊಡಗಿನಲ್ಲಿ ನಡೆದ ಭೂಕುಸಿತಗಳಿಗೆ ಅರಣ್ಯ ನಾಶವೇ ಕಾರಣ. ಕುಸಿತ ತಡೆಯಲು ಅರಣ್ಯ ನಾಶ ತಪ್ಪಿಸಬೇಕು. ಖಾಲಿ ಇದ್ದ ಭೂಮಿಗೆ ಹಸಿರು ಹೊದಿಕೆ ನಿರ್ಮಿಸಬೇಕು ಎಂದು ಭಾರತೀಯ ಭೂ ವಿಜ್ಞಾನ ಸರ್ವೇಕ್ಷಣಾಲಯದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನದಿ ಕಣಿವೆಗಳು, ಇಳಿಜಾರು ಪ್ರದೇಶಗಳಲ್ಲಿ ನೆಡುತೋಪು ಕಟಾವು ಮಾಡಿದರೆ ಹಸಿರು ರಕ್ಷಾ ಕವಚಕ್ಕೆ ಧಕ್ಕೆಯಾಗಿ ಮಣ್ಣಿನ ಮೇಲ್ಪದರ ಕೊಚ್ಚಿಹೋಗುತ್ತದೆ. ಗುಡ್ಡಗಳು ಸಡಿಲಗೊಂಡು ಭೂಕುಸಿತವಾಗುತ್ತದೆ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಅರಣ್ಯ ಹಕ್ಕು, ಮುಳುಗಡೆ ಸಂತ್ರಸ್ತರ ಪುನರ್ವಸತಿ, ಜಲಾಶಯಗಳು, ವಿದ್ಯುತ್ ಯೋಜನೆ ಮತ್ತಿತರ  ಕಾರಣಗಳಿಗಾಗಿ ಸಾಕಷ್ಟು ಅರಣ್ಯ ಪ್ರದೇಶ ನಾಶವಾಗಿದೆ. ಎಂಪಿಎಂಗೆ ನೀಡಿದ್ದ ನೆಡುತೋಪು ಜಾಗವನ್ನು ಸಂರಕ್ಷಿಸಿ, ಅಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಿದರೆ ಪರಿಸರ ಸಮತೋಲನಕ್ಕೆ ಸಹಕರಿಯಾಗುತ್ತದೆ. ಮಲೆನಾಡಿನ ಜೀವ ವೈವಿಧ್ಯದ ಸಂರಕ್ಷಣೆಯೂ ಆಗುತ್ತದೆ. ಭವಿಷ್ಯದ ಪೀಳಿಗೆಗೂ ಅನುಕೂಲವಾಗುತ್ತದೆ. ಪಟ್ಟಭದ್ರರು, ಭೂಗಳ್ಳರಿಂದ ಸಂರಕ್ಷಣೆಯೂ ದೊರಕುತ್ತದೆ.


ಕಣಿವೆ ಪ್ರದೇಶದಲ್ಲಿ ಮರಗಳ ಕಟಾವು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು