ಮಂಗಳವಾರ, ಸೆಪ್ಟೆಂಬರ್ 21, 2021
22 °C

PV Web Exclusive | ಪಾರಂಪರಿಕ ಅರಣ್ಯ ಹಕ್ಕೆಂಬ ‘ಜೇನುಗೂಡು’

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಅರಣ್ಯ ಭೂಮಿಯ ಹಕ್ಕಿಗಾಗಿ ಪಶ್ಚಿಮಘಟ್ಟದ ಸಹ್ಯಾದ್ರಿ ಶ್ರೇಣಿಯ ಆದಿವಾಸಿಗಳು, ಬುಡಕಟ್ಟು ಜನರು, ಅರಣ್ಯವಾಸಿಗಳು ನಡೆಸುತ್ತಿರುವ ಹೋರಾಟ, ಅನುಭವಿಸುತ್ತಿರುವ ಬವಣೆ ನೋಡಿದಾಗ ಕಾರ್ಲ್‌ಮಾರ್ಕ್ಸ್ ಅವರ ‘Theft Of the wood’ ನೆನಪಾಯಿತು.

ಪ್ರಷ್ಯಾ ದೇಶ ತನ್ನ ಸಾಮ್ರಾಜ್ಯ ವಿಸ್ತರಿಸುತ್ತಾ ಸಾಗಿದಂತೆಲ್ಲ ಮೂಲ ನಿವಾಸಿಗಳನ್ನು ಒಳಗೊಂಡ ಅರಣ್ಯ ಪ್ರದೇಶಗಳೂ ಪ್ರಭುತ್ವದ ಅಡಿ ಬಂದವು. ಅಲ್ಲಿನ ನಿವಾಸಿಗಳು ತಲತಲಾಂತರದಿಂದ ಮರಗಳನ್ನು ಕಡಿದು, ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದರು. ಹೊಸ ಪ್ರಭುತ್ವ ಮರ ಕಡಿಯುವುದನ್ನು ಅಪರಾಧ ಎಂದು ಘೋಷಿಸಿತು.

ಅದುವರೆಗೂ ಅವರ ಹಕ್ಕಾಗಿದ್ದ ಅರಣ್ಯ ಎಂಬ ಜೀವನ ಸಂಗಾತಿ, ನಿತ್ಯದ ಬುದುಕು ಅವರಿಗೆ ಶಾಪವಾಯಿತು. ಪ್ರಭುತ್ವದ ಹೊಸ ನಿಯಮದ ಅಡಿ ಅವರು ತಮ್ಮದೇ ಪ್ರದೇಶದಲ್ಲಿ ಕಳ್ಳರೆಂಬ ಹಣೆಪಟ್ಟಿ ಕಟ್ಟಿಕೊಂಡರು. ಹಲವರು ಬಂಧನಕ್ಕೆ ಒಳಗಾದರು. ಶಿಕ್ಷೆ ಅನುಭವಿಸಿದರು. ಮಾರ್ಕ್ಸ್ ಈ ಕೃತಿಯಲ್ಲಿ ಅರಣ್ಯವಾಸಿಗಳ ಬವಣೆ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಕೊನೆಗೆ ಯಾರು ಕಳ್ಳರು? ಸಾಮ್ರಾಜ್ಯ ದಾಹಿಗಳೋ? ಅರಣ್ಯವಾಸಿಗಳೋ ಎಂಬ ತರ್ಕದ ಚಿಂತನೆ ತೇಲಿ ಬಿಡುತ್ತಾರೆ.

ಪಶ್ವಿಮಘಟ್ಟ ಶ್ರೇಣಿಯ ಕಾನನದಲ್ಲೂ ಪರಂಪರಾಗತವಾಗಿ ನೆಲೆಸಿರುವ ಜನರು ಇಂದಿಗೂ ಭೂ ಹಕ್ಕಿಗಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅರಣ್ಯಾಧಿಕಾರಿಗಳು ನಿಯಮಗಳ ಅಡಿ ಅವರಿಗೆ ಒಂದಿಲ್ಲೊಂದು ಬಗೆಯ ಕಿರುಕುಳ ನೀಡುತ್ತಲೇ ಬಂದಿದ್ದಾರೆ. 1980ರಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿತು. ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರ ಪ್ರದೇಶವನ್ನು 1984ರಲ್ಲಿ ಸರ್ಕಾರ ಅಭಯಾರಣ್ಯ ಎಂದು ಘೋಷಿಸಿತು. ನಂತರ ಹುಲಿ ಸಂರಕ್ಷಣಾ ಯೋಜನೆ ರೂಪಿಸಲಾಗಿದೆ. ಈ ಎಲ್ಲ ಕಾರಣಗಳಿಗಾಗಿ ಮುಳುಗಡೆ ಸಂತ್ರಸ್ತರನ್ನು ಒಕ್ಕಲೆಬ್ಬಿಸುವ ಯತ್ನ ನಡೆಯುತ್ತಲೇ ಇದೆ. ಅರಣ್ಯ ಹಕ್ಕು ಎಂಬದು ಅವರ ಪಾಲಿಗೆ ಜೇನುಗೂಡಿನಂತಾಗಿದೆ. ಕಾನೂನು ಎಂಬ ಜೇನುನೊಣಗಳು ಅವರ ಗೂಡಿನ ಜೇನು ಸವಿಯಲು ಅಡ್ಡಿಯಾಗಿವೆ.

ಅರಣ್ಯವಾಸಿಗಳಿಗೆ ತಮ್ಮದೇ ನೆಲೆ ಸಂರಕ್ಷಿಸಿಕೊಳ್ಳಲು, ಅವರು ನಿಂತ ನೆಲೆಯ ಹಕ್ಕು ಅವರಿಗೇ ನೀಡಲು ಯುಪಿಎ ಸರ್ಕಾರ 2005ರಲ್ಲಿ ಅರಣ್ಯವಾಸಿಗಳ ರಕ್ಷಣೆಗೆ ಕಾನೂನು ರೂಪಿಸಿತ್ತು. 2012ರ ನಂತರ ಅವರ ನೆಲೆ, ಸಾಗುವಳಿ ಮಾಡಿದ ಭೂಮಿಯ ಹಕ್ಕು ಮಂಜೂರು ಮಾಡಲು ಅರಣ್ಯವಾಸಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸಲ್ಲಿಕೆಯಾದ ಅರ್ಜಿಗಳಲ್ಲಿ 12 ಲಕ್ಷಕ್ಕೂ ಹೆಚ್ಚು ಅರ್ಜಿಗಳು ತಿರಸ್ಕೃತವಾಗಿವೆ. ಮೂಲ ಬುಡಕಟ್ಟು ಜನರು ಇಂದಿಗೂ ಅರಣ್ಯ ಉತ್ಪನ್ನಗಳನ್ನೇ ತಮ್ಮ ಜೀವನಕ್ಕೆ ನಂಬಿಕೊಂಡಿದ್ದಾರೆ.

ಪಾರಂಪರಿಕ ಅರಣ್ಯಹಕ್ಕು ಕಾಯ್ದೆ ಜಾರಿಗೆ ಬಂದ ನಂತರ ಅರ್ಹರಲ್ಲದವರೂ ಭೂಮಿಹಕ್ಕು ಪಡೆಯಲು ಅರ್ಜಿ ಸಲ್ಲಿಸಿದ್ದರು. ಶಿವಮೊಗ್ಗ ಜಿಲ್ಲೆಯಲ್ಲೇ 81,501 ಎಕರೆ ಭೂಮಿಯ ಒಡೆತನ ಕೋರಿ 50,172 ಅರ್ಜಿ ಸಲ್ಲಿಸಿದ್ದರು. ಚಿಕ್ಕಮಗಳೂರಿನಲ್ಲಿ 30,648 ಎಕರೆ, ಉತ್ತರ ಕನ್ನಡದಲ್ಲಿ 28,345 ಎಕರೆ ಕೋರಿ ಅರ್ಜಿ ಸಲ್ಲಿಕೆಯಾಗಿವೆ. ಅರಣ್ಯ ಹಕ್ಕು ಕಾನೂನು ದುರುಪಯೋಗ ಮಾಡಿಕೊಂಡ ಪಟ್ಟಭದ್ರರು ಇಲ್ಲೂ ಭೂಮಿ ಕಬಳಿಸಿದ್ದಾರೆ. ನಿಜವಾದ ಬುಕಟ್ಟು ಜನರು, ಆದಿವಾಸಿಗಳು ಭೂ ಹಕ್ಕು ದೊರಕದೇ ಪರಿತಪಿಸುತ್ತಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆ ಸುಪ್ರೀಂ ಕೋರ್ಟ್‌ ಅರಣ್ಯವಾಸಿಗಳನ್ನು ಆ ಜಾಗದಿಂದ ಸ್ಥಳಾಂತರಗೊಳಿಸುವಂತೆ ಆದೇಶಿಸಿತ್ತು.  ಪ್ರಷ್ಯಾ ವಶಕ್ಕೆ ಪಡೆದ ಭೂ ಪ್ರದೇಶದ ಜನರು ಒಂದು ಮರ ಕಡಿದರೆ ನಾಲ್ಕು ಸಸಿಗಳನ್ನು ನೆಡುತ್ತಿದ್ದರು. ಹಾಗೆಯೇ, ಪಶ್ಚಿಮ ಘಟ್ಟದ ಜನರು ತಲತಲಾಂತರದಿಂದ ತಮಗೆ ಅನ್ನ ಕೊಡುವ ಅರಣ್ಯ ಪ್ರದೇಶ ಉಳಿಸಿಕೊಂಡು ಬಂದಿದ್ದಾರೆ. ಸರ್ಕಾರಕ್ಕಿಂತ ಹೆಚ್ಚಿನ ಹೊಣೆ ಅವರೇ ನಿಭಾಯಿಸಿದ್ದಾರೆ. ಆದರೂ, ತಮ್ಮ ಪ್ರದೇಶದಲ್ಲಿ ತಾವೇ ಅನಾಥರಾಗಿದ್ದಾರೆ. 

ಅರಣ್ಯವಾಸಿಗಳು ಇಲ್ಲದ ಯಾವುದೇ ಕಾಡು ನಿರ್ಜೀವ ವಸ್ತುವಿಗೆ ಸಮ. ಅನಾದಿ ಕಾಲದಿಂದಲೂ ಅರಣ್ಯ ಉಳಿಸಿ, ಸಂರಕ್ಷಿಸಿಕೊಂಡು ಬಂದವರು ಆ ಪ್ರದೇಶಗಳ ಮೂಲ ನಿವಾಸಿಗಳು. ಅಲ್ಲಿನ ಗಿಡ–ಮರಗಳನ್ನು ಪ್ರೀತಿಸುವ ಜತೆಗೆ, ಪ್ರಾಣಿ, ಪಕ್ಷಿಗಳ ಜತೆಗೂ ಅವಿನಾಭಾವ ಸಂಬಂಧ ಹೊಂದಿದ್ದರು. ಹುಲಿ, ಸಿಂಹಗಳಂತಹ ಕ್ರೂರ ಪ್ರಾಣಿಗಳೂ ಅಪಾಯ ಮಾಡುತ್ತಿರಲಿಲ್ಲ. ಇಂತಹ ಅನ್ಯೋನ್ಯಕ್ಕೆ ಕಂಟಕ ತಂದಿದ್ದು ಬ್ರಿಟಿಷ್ ಆಡಳಿತ. ಅವರ ಸ್ವಾರ್ಥಕ್ಕೆ, ಅರಣ್ಯ ಉತ್ಪನ್ನಗಳ ಸಾಗಣೆಗೆ ಕಾಡಿಗೇ ಒಂದು ಇಲಾಖೆ ಸೃಷ್ಟಿಸಿದರು. ಬ್ರಿಟಿಷರು ಭಾರತ ಬಿಟ್ಟುಹೋದ ನಂತರ ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಇಂದು ಅರಣ್ಯ ಸಂರಕ್ಷಣೆ, ಪರಿಸರದ ಉಳಿಸುವ ನೆಪದಲ್ಲಿ ಮೂಲ ನಿವಾಸಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಆದಿವಾಸಿಗಳನ್ನು ಹೊರದಬ್ಬಿದರೆ ಆ ಅರಣ್ಯ ಪ್ರದೇಶದ ವಿನಾಶಕ್ಕೆ ನಾಂದಿ ಹಾಡಿದಂತೆ ಎನ್ನುವುದು ವಿಠಲ ಹೆಗಡೆ ಅವರ ಆರೋಪ.

ಮೂಲ ಅರಣ್ಯವಾಸಿಗಳ ಜತೆಗೆ, ಮಲೆನಾಡಿನಲ್ಲಿ ಇನ್ನೊಂದು ಸಮಸ್ಯೆ ಆರು ದಶಕಗಳಿಂದ ಕಾಡುತ್ತಿದೆ. ಅದು ಮುಳುಗಡೆ ಸಂತ್ರಸ್ತರ ಬವಣೆ. 1958–64ರ ಅವಧಿಯಲ್ಲಿ ನಿರ್ಮಾಣವಾದ ಲಿಂಗನಮಕ್ಕಿ ಜಲಾಶಯಕ್ಕಾಗಿ 152 ಹಳ್ಳಿಗಳ 12 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿತ್ತು. ಅವರಿಗೆ ಸೂಕ್ತ ನೆಲೆ ಕಲ್ಪಿಸದ ಕಾರಣ ಇಂದಿಗೂ ಮಲೆನಾಡಿನ ದಟ್ಟ ಅರಣ್ಯದ ನಡುವೆ ಆ ಕುಟುಂಬಗಳೆಲ್ಲ ಚದುರಿಹೋಗಿವೆ. ಅವರಿಗೆ ಇಂದಿಗೂ ಬಹುತೇಕರಿಗೆ ಭೂಮಿ ಹಂಚಿಕೆಯಾಗಿಲ್ಲ. ಅವರೂ ಅರಣ್ಯ ಕಾನೂನುಗಳಿಂದ ವಿಚಲಿತರಾಗಿದ್ದಾರೆ. ಅತ್ತ ನೆಲೆಯೂ ಇಲ್ಲ. ಇತ್ತ ಜಮೀನು, ಜೀವನವೂ ಇಲ್ಲ ಎನ್ನುವ ಸ್ಥಿತಿಯಲ್ಲಿದ್ದಾರೆ.

ಸರ್ಕಾರ ಭೂ ಕಬಳಿಕೆದಾರರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು 2007ರಲ್ಲಿ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದಿತ್ತು. ಇದರಿಂದ ಭೂಮಿ ಅತಿಕ್ರಮಣದ ಆರೋಪದ ಮೇಲೆ ಜಿಲ್ಲೆಯ 4,725 ರೈತರ ವಿರುದ್ಧ ಪ್ರಕರಣ ದಾಖಲಾಗಿತ್ತು. 

ಭೂ ಕಬಳಿಕೆ ವಿಶೇಷ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಭೂ ಕಂದಾಯ ಕಾಯ್ದೆ 2007ಕ್ಕೆ ತಿದ್ದುಪಡಿ ತಂದು ಮಲೆನಾಡಿನ ಸಣ್ಣ ರೈತರಿಗೆ ರಕ್ಷಣೆ ನೀಡಲು ನಿರ್ಧರಿಸಿದೆ. ನಗರ ಪ್ರದೇಶದ ಭೂ ಕಬಳಿಕೆ ತಡೆಯಲು ಈ ಕಾಯ್ದೆ ಜಾರಿಗೆ ತರಲಾಗಿತ್ತು. ಇದರಿಂದ ಮಲೆನಾಡು ಭಾಗದಲ್ಲಿ ಸಾಗುವಳಿ ಮಾಡಿದ ರೈತರಿಗೂ ತೊಂದರೆಯಾಗಿತ್ತು. ತಿದ್ದುಪಡಿ ತರುವ ಮೂಲಕ ಅರಣ್ಯ, ಕಂದಾಯ ಭೂಮಿಗಳಲ್ಲಿ 4 ಎಕರೆಗಿಂತ ಕಡಿಮೆ ಉಳುಮೆ ಮಾಡಿದ ಸಾಗುವಳಿದಾರರಿಗೆ ಕಾನೂನಿನ ಮೂಲಕ ರಕ್ಷಣೆ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು