ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ ವೈವಿಧ್ಯತೆಗೆ ಕಂಟಕವಾಗುತ್ತಿರುವ ಚಾರಣ: ಪರಿಸರವಾದಿಗಳ ಆತಂಕ

ವಾರಾಂತ್ಯದಲ್ಲಿ ಜಿಲ್ಲೆಯ ಬೆಟ್ಟಗಳಲ್ಲಿ ಬೇಕಾಬಿಟ್ಟಿ ರಾತ್ರಿ ವೇಳೆ ಠಿಕಾಣಿ ಹೂಡುತ್ತಿರುವ ಟೆಕ್ಕಿಗಳು
Last Updated 19 ಜನವರಿ 2021, 1:58 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ವಿವಿಧ ಸಂರಕ್ಷಿತ ಅರಣ್ಯ ಪ್ರದೇಶಗಳು, ಬೆಟ್ಟಗಳಲ್ಲಿ ದಿನೇ ದಿನೇ ಅಕ್ರಮ ಚಾರಣ ಹೆಚ್ಚುತ್ತಿರುವುದು ಜೀವ ವೈವಿಧ್ಯಕ್ಕೆ ಕಂಟಕವಾಗುತ್ತಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಚಾರಣಿಗರ ಸ್ವರ್ಗ ಎನಿಸಿಕೊಂಡಿರುವ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳು 2017ರಲ್ಲಿ ಸ್ಕಂದಗಿರಿ ಮತ್ತು ಆವಲಬೆಟ್ಟ ಬೆಟ್ಟಗಳಲ್ಲಿ ‘ಚಾರಣ ಪಥ’ಗಳನ್ನು (ಎಕೋಟ್ರೇಲ್ಸ್) ಗುರುತಿಸಿ ಚಾರಣಿಗರಿಗೆ ಮುಕ್ತಗೊಳಿಸಿದ್ದವು.

ಚಾರಣಿಗರಿಗೆ ಮತ್ತು ಜೀವವೈವಿಧ್ಯತೆಗೆ ತೊಂದರೆ ಆಗುವುದು ತಪ್ಪಿಸುವ ನಿಟ್ಟಿನಲ್ಲಿ ಉಭಯ ಇಲಾಖೆಗಳು ಎರಡು ಚಾರಣ ಮಾರ್ಗದಲ್ಲಿ ವಿಚಾರಣಾ ಕೇಂದ್ರವನ್ನು ತೆರೆದು, ಶುಲ್ಕ ವಿಧಿಸಿ, ಮಾರ್ಗದರ್ಶಕರನ್ನು ನಿಯೋಜಿಸಿ ವ್ಯವಸ್ಥಿತವಾಗಿ ಚಾರಣಕ್ಕೆ ಅನುವು ಮಾಡಿಕೊಟ್ಟಿದ್ದವು.

ಆದರೆ, ಸಮೀಪದ ರಾಜಧಾನಿ ಬೆಂಗಳೂರಿನಿಂದ ಜಿಲ್ಲೆಗೆ ಚಾರಣಕ್ಕಾಗಿಯೇ ದಾಂಗುಡಿ ಇಡುತ್ತಿರುವ ಟೆಕ್ಕಿಗಳು ನಿಗದಿತ ಚಾರಣ ಪಥಗಳನ್ನು ಹೊರತುಪಡಿಸಿ ನಿರ್ಬಂಧಿತ ಪ್ರದೇಶಗಳೆಲ್ಲ ಚಾರಣದ ಹೆಸರಿನಲ್ಲಿ ಮನಸೋ ಇಚ್ಛೆ ತಿರುಗಾಟ ನಡೆಸುವುದು, ಮೋಜಿನ ಕೂಟಗಳನ್ನು ಆಯೋಜಿಸುವುದು, ತ್ಯಾಜ್ಯ ಹರಡುವುದು ಮಾಡುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗುತ್ತಿವೆ.

ಸದ್ಯ, ತಾಲ್ಲೂಕಿನ ಹರಿಹರಪುರ, ಕೌರವನಹಳ್ಳಿ, ಬಿಸಾಗ್ನಿ, ಬ್ರಹ್ಮಗಿರಿ ಬೆಟ್ಟಗಳಲ್ಲಿ ಬೆಂಗಳೂರು ಮೂಲದ ಚಾರಣ ಆಯೋಜನೆ ಸಂಸ್ಥೆಗಳು ವಾರಾಂತ್ಯದಲ್ಲಿ ಕಾನೂನುಬಾಹಿರವಾಗಿ ರಾತ್ರಿ ವೇಳೆ ಚಾರಣ ಏರ್ಪಡಿಸಿ, ಮೋಜಿನ ಕೂಟಗಳನ್ನು ಆಯೋಜಿಸುತ್ತಿವೆ ಎನ್ನುವುದು ಪರಿಸರವಾದಿಗಳ ಆರೋಪ.

‘ರಾತ್ರಿ ವೇಳೆಯಲ್ಲಿ ಬೆಟ್ಟಗಳಲ್ಲಿ ಚಾರಣದ ಹೆಸರಿನಲ್ಲಿ ರಾಜಾರೋಷವಾಗಿ ಮೋಜಿನ ಕೂಟಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸಂಬಂಧ ಇಲಾಖೆ ಅಧಿಕಾರಿ, ಸಿಬ್ಬಂದಿ ಇದನ್ನೆಲ್ಲ ಕಂಡರೂ ಕಾಣದಂತೆ ಜಾಣ ಕುರುಡು ಪ್ರದರ್ಶಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡಿಸುತ್ತಿದೆ’ ಎನ್ನುತ್ತಾರೆ ಪರಿಸರವಾದಿ ಕಲ್ಯಾಣ್.

‘ರಾತ್ರಿ ವೇಳೆ ಅರಣ್ಯ ಪ್ರದೇಶಗಳಲ್ಲಿ ಟೆಂಟ್‌ ಹಾಕಿಕೊಂಡು ಠಿಕಾಣಿ ಹೂಡುವ ಚಾರಣಿಗರು ಬೆಂಕಿ ಹಾಕಿಕೊಂಡು ಮೋಜಿನ ಕೂಟ ನಡೆಸುವುದರಿಂದ ಪ್ರಾಣಿಗಳು ಹೆದರಿ ವಲಸೆ ಹೋಗುತ್ತಿವೆ. ಬೇಸಿಗೆ ಸಮಯದಲ್ಲಿ ಬೆಟ್ಟಕ್ಕೆ ಬೆಂಕಿ ಬೀಳುವ ಆತಂಕ ಎದುರಾಗುತ್ತಿದೆ. ಆದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’ ಎಂದು ಒತ್ತಾಯಿಸಿದರು.

‘ಅರಣ್ಯ ಮತ್ತು ಪ್ರವಾಸೋದ್ಯಮ ಇಲಾಖೆಗಳ ಸಿಬ್ಬಂದಿ ಮಾರ್ಗದರ್ಶನದಲ್ಲಿ ಸ್ಕಂದಗಿರಿ, ಆವಲಬೆಟ್ಟದಲ್ಲಿ ಚಾರಣ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಆದರೆ, ಅವುಗಳನ್ನು ಹೊರತುಪಡಿಸಿ ಯಾವುದೇ ಸುರಕ್ಷತೆ ಇಲ್ಲದೆ ರಾತ್ರಿ ವೇಳೆ ಬೇಕಾಬಿಟ್ಟಿ ಬೆಟ್ಟ ಹತ್ತಿ ಪ್ರಾಣಿಗಳಿಗೆ ತೊಂದರೆ ನೀಡುವುದು ಯಾವ ನ್ಯಾಯ’ ಎಂದು ಪರಸರವಾದಿ ವರುಣ್ ಪ್ರಶ್ನಿಸಿದರು.

‘ಚಾರಣದ ಹೆಸರಿನಲ್ಲಿ ದುಡ್ಡು ಮಾಡುವ ಉದ್ಯಮ ಆರಂಭಿಸಿದವರಲ್ಲಿ ಪರಿಸರದ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇವತ್ತು ಅನೇಕ ಬೆಟ್ಟಗಳಲ್ಲಿ ಗಲೀಜು ಮಾಡಲಾಗುತ್ತಿದೆ. ಕೆಲವೆಡೆ ದಾರಿ ತಪ್ಪಿ ತೊಂದರೆ ಸಿಲುಕಿದವರ ಉದಾಹರಣೆಗಳು ಇವೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಮೂಕ ಪ್ರೇಕ್ಷಕರಂತಿರುವುದು ಸೋಜಿಗ ಮೂಡಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಜಿಲ್ಲಾ ಅರಣ್ಯ ಸಂರಕ್ಷಣಾ ಅಧಿಕಾರಿ ಅರ್ಸಲನ್ ಅವರನ್ನು ಸಂಪರ್ಕಿಸಲಾಯಿತು. ಆದರೆ, ಅವರು ಸಂಪರ್ಕಕ್ಕೆ ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT