ಗುರುವಾರ , ಜುಲೈ 7, 2022
23 °C

ಒಳನೋಟ: ಸಂಘರ್ಷಕ್ಕಿಂತ ಸಹಬಾಳ್ವೆಯೇ ಲೇಸು

ಹರ್ಷವರ್ಧನ ಪಿ.ಆರ್. Updated:

ಅಕ್ಷರ ಗಾತ್ರ : | |

Prajavani

ಸಂಘರ್ಷಕ್ಕಿಂತ ಸಹಬಾಳ್ವೆಯೇ ಲೇಸು

- ಹರ್ಷವರ್ಧನ ಪಿ.ಆರ್.

ಮಂಗಳೂರು: ‘ಪರಿಸರ ಸೂಕ್ಷ್ಮ ಪ್ರದೇಶ’ಗಳ ಜೀವವೈವಿಧ್ಯ ಮತ್ತು ನಿವಾಸಿಗಳ ನಡುವಿನ ಸಂಘರ್ಷದ ಬದಲು ಸಹಬಾಳ್ವೆಯಂತೆ ಒಟ್ಟು ಪ್ರಕ್ರಿಯೆಯನ್ನು ನಿರ್ವಹಿಸಿರುವುದು, ನೆಲದ ವಾಸ್ತವಗಳನ್ನು ಕಾನೂನಾತ್ಮಕ ಸಾಕ್ಷ್ಯಾಧಾರದೊಂದಿಗೆ ಮಂಡಿಸಿರುವುದು, ಜಾಗೃತಿ ಮತ್ತು ಜನಾಭಿಪ್ರಾಯಕ್ಕೆ ಮನ್ನಣೆ ಹಾಗೂ ಜನಪ್ರತಿನಿಧಿಗಳು ಬದ್ಧತೆ ಮೆರೆದಿರುವುದರಿಂದ ‘ಕಸ್ತೂರಿರಂಗನ್ ವರದಿ’ ವಿಚಾರದಲ್ಲಿ ಕೇರಳ ಮಾದರಿ ಆಗಿದೆ ಎಂಬುದು ತಜ್ಞರ ಅಭಿಮತ.

ಗಾಡ್ಗೀಳ್ ಹಾಗೂ ಕಸ್ತೂರಿರಂಗನ್‌ ಸಮಿತಿಗೂ ಪೂರ್ವದಲ್ಲಿ ಕೇಂದ್ರ ರಚಿಸಿದ್ದ ಸಮಿತಿಗೆ ಕೇರಳ ಆಕ್ಷೇಪಿಸಿತ್ತು. ಆದರೆ, ಅಧಿಸೂಚನೆಗಳಿಗೆ ಅನುಗುಣವಾಗಿ ಸಿದ್ಧತೆಯನ್ನೂ ಮಾಡಿಕೊಂಡಿತ್ತು. ವರದಿಗೆ ಸಂಬಂಧಿಸಿದ ಸಮಿತಿ, ಭಾಗೀದಾರರು (ನಿವಾಸಿಗಳು), ತಜ್ಞರು ಹಾಗೂ ಜನಪ್ರತಿನಿಧಿಗಳ ಅತಿ ಹೆಚ್ಚು ಸಭೆ ನಡೆದಿರುವುದೂ ಕೇರಳದಲ್ಲಿ.

‘ಈ ಕುರಿತು ನಡೆದ ಸಭೆಗಳಲ್ಲಿ ರಾಜ್ಯದ (ವರದಿ ವ್ಯಾಪ್ತಿಗೊಳಪಟ್ಟ ಪ್ರದೇಶಗಳ) ಸಂಸದರಿಗಿಂತ ಹೆಚ್ಚು ಹಾಜರಾತಿ ಮತ್ತು ವಿಷಯ ಮಂಡನೆಯನ್ನು ಕೇರಳದ ಸಂಸದರು ಮಾಡಿದ್ದಾರೆ’ ಎನ್ನುತ್ತಾರೆ ಭಾರತೀಯ ಕಿಸಾನ್‌ ಸಂಘದ ರಾಜ್ಯ ಘಟಕದ ಜತೆ ಕಾರ್ಯದರ್ಶಿ, ವಕೀಲರಾದ ಸತ್ಯನಾರಾಯಣ ಉಡುಪ.‌
‘ಕಸ್ತೂರಿರಂಗನ್ ಮತ್ತು ಗಾಡ್ಗೀಳ್ ವರದಿಗಳು ಅಂತರ್ಗತ. ಬೇರೆ ಬೇರೆಯಲ್ಲ. ಉಪಗ್ರಹ ಆಧಾರಿತ ನಕ್ಷೆಗಳನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದ್ದು, ಇದರ ಭೌತಿಕ ಪರಿಶೀಲನೆ ನಡೆಸಬೇಕು ಎಂದು ವರದಿಯಲ್ಲೇ ಉಲ್ಲೇಖಿಸಲಾಗಿದೆ. ಇದೇ ಅಂಶವನ್ನು ಬಳಸಿಕೊಂಡ ಕೇರಳವು ಯಶಸ್ವಿಯಾಗಿದೆ’ ಎಂದು ಅವರು ವಿಶ್ಲೇಷಿಸಿದರು.

‘ನಮ್ಮವರಿಗೆ ಇದೂ ಒಂದು ಭಾವನಾತ್ಮಕ ವಿಷಯವಾದರೆ, ಅವರಿಗೆ ರಾಜಕೀಯವು ಜನರ ಬದುಕಿನ ವಿಚಾರ’ ಎಂದು ಹೋರಾಟದಲ್ಲಿರುವ ಕಿಶೋರ್ ಶಿರಾಡಿ, ಸತೀಶ್ ಟಿ.ಎನ್‌. ಕೊಲ್ಲಮೊಗರು ಮತ್ತಿತರರು ಅಭಿಪ್ರಾಯಪಟ್ಟರು.

ಕಸ್ತೂರಿರಂಗನ್ ವರದಿ ಪ್ರಕಾರ ಕೇರಳದ 123 ಹಳ್ಳಿಗಳ 13,108.3 ಚ.ಕಿ.ಮೀ. ವ್ಯಾಪ್ತಿಯನ್ನು ‘ಪರಿಸರ ಸೂಕ್ಷ್ಮ ಪ್ರದೇಶ’ ಎಂದು ನವೆಂಬರ್ 2013ರಲ್ಲಿ ಗುರುತಿಸಲಾಗಿತ್ತು. ಅದರೆ, ಕೇರಳ ಸರ್ಕಾರವು ಕೇರಳ ರಾಜ್ಯ ದೂರ ಸಂವೇದಿ ಮತ್ತು ಪರಿಸರ ಕೇಂದ್ರ (ಕೆಎಸ್ಆರ್‌ಇಸಿ)ದ ಮೂಲಕ ಪ್ರತ್ಯೇಕ ಭೌತಿಕ ಸರ್ವೆ ಹಾಗೂ ಅಧ್ಯಯನ ನಡೆಸಿತು. ಜಿಲ್ಲಾ, ತಾಲ್ಲೂಕು ಹಾಗೂ ಪಂಚಾಯಿತಿ ಮಟ್ಟಗಳಲ್ಲಿ ಸಮಿತಿಗಳನ್ನು ರಚಿಸಿ, ತಜ್ಞರು, ನಿವಾಸಿಗಳು ಹಾಗೂ ಜನಪ್ರತಿನಿಧಿಗಳು ಚರ್ಚಿಸಿ ನಿರ್ಣಯಗಳನ್ನು ಅಂಗೀಕರಿಸಿದ್ದರು. ಇದನ್ನು ಸಂಪುಟ ಉಪಸಮಿತಿ ಪರಿಶೀಲಿಸಿ, ಅಲ್ಲಿನ ವಿಧಾನಸಭೆ ಪಕ್ಷಾತೀತವಾಗಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.

ಉಪಗ್ರಹದ ನಕ್ಷೆಯಲ್ಲಿ ‘ಅರಣ್ಯ ಸಂಬಂಧಿ’ ಎಂದು ಪರಿಗಣಿಸಿದ್ದ, ‘ಹಸಿರು ದಟ್ಟೈಸಿದ ಪ್ರದೇಶ’ಗಳಲ್ಲಿನ ಜನ ಸಾಂದ್ರತೆ, ಕೃಷಿ ಮತ್ತು ತೋಟಗಾರಿಕಾ ಕ್ಷೇತ್ರಗಳ ಕುರಿತ ಮಾಹಿತಿಯನ್ನು ಸರ್ವೆ ಸಂಖ್ಯೆ, ಜನಗಣತಿ ಮತ್ತಿತರ ದಾಖಲೆಗಳ ಮೂಲಕ ನೀಡಿ, ಒಟ್ಟು 3,114.3 ಚ.ಕಿ.ಮೀ. ಪ್ರದೇಶವನ್ನು ಅಧಿಸೂಚನೆಯಿಂದ ಕೇರಳವು ಕೈ ಬಿಡುವಂತೆ ನೋಡಿಕೊಂಡಿತು. 9,107 ಚ.ಕಿ.ಮೀ. ಅರಣ್ಯ ಹಾಗೂ 886.7 ಚ.ಕಿ.ಮೀ. ಅರಣ್ಯ ಸಂಬಂಧಿತ ಪ್ರದೇಶವನ್ನು ಮಾತ್ರ ಪರಿಗಣಿಸಿತ್ತು.

2018ರಲ್ಲಿ ಕೇರಳ ಈ ಅಧಿಸೂಚನೆ ಹೊರಡಿಸಿದ್ದು, ‘ಇದು ಸೂಕ್ಷ್ಮ ಪ್ರದೇಶದ ವಾಸ್ತವಗಳನ್ನು ಆಧರಿಸಿದೆ. ಅಂತಿಮ ಅಧಿಸೂಚನೆ ಹೊರಡಿಸುವ ಮೊದಲು ಕೇಂದ್ರವು ವರದಿಯನ್ನು ಪರಿಷ್ಕರಿಸುವ ವಿಶ್ವಾಸವಿದೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸದನದಲ್ಲಿ ಉಲ್ಲೇಖಿಸಿದ್ದರು.

‘ವರದಿಯ ಸಾಧಕ–ಬಾಧಕ ಕುರಿತ ಅಧ್ಯಯನಕ್ಕೆ ಕೇರಳವು 2014ರಲ್ಲಿ ಉಮ್ಮನ್ ವಿ. ಉಮ್ಮನ್ ನೇತೃತ್ವದ ಸಮಿತಿ ರಚಿಸಿತ್ತು. ಅದು ವರದಿ ವ್ಯಾಪ್ತಿಗೊಳಪಟ್ಟ ಗ್ರಾಮಗಳಿಗೆ ಭೇಟಿ ನೀಡಿ, ಜನರ ಜೊತೆ ಚರ್ಚಿಸಿ, ಅಧ್ಯಯನ ನಡೆಸಿ 2015ರಲ್ಲಿ ವರದಿ ನೀಡಿತ್ತು. ಇದನ್ನು ಕೇರಳ ವಿಧಾನಸಭೆ 2015ರಲ್ಲೇ ಅಂಗೀಕರಿಸಿ, ಕೇಂದ್ರಕ್ಕೆ ಕಳುಹಿಸಿತ್ತು. ಬಳಿಕ 2018ರಲ್ಲೂ ಕಳುಹಿಸಿತ್ತು. ಅಲ್ಲಿ ಪಕ್ಷಾತೀತ, ಜಾತ್ಯತೀತ ಹೋರಾಟಕ್ಕೆ ಜನಪ್ರತಿನಿಧಿಗಳು ಕೈ ಜೋಡಿಸಿದ್ದರು’ ಎನ್ನುತ್ತಾರೆ ಅಲ್ಲಿನ ಹೋರಾಟದ ಅಧ್ಯಯನ ನಡೆಸಿರುವ ಫಾ.ಆದರ್ಶ್‌ ಜೋಸೆಫ್.

ಮಾತಿಗಿಂತ ಕೃತಿಯೇ ಮೇಲು...

‘ಪ್ರಜಾವಾಣಿ’ ಜೊತೆ ಮಾತನಾಡಿದ ವರದಿ ವ್ಯಾಪ್ತಿಗೊಳಪಟ್ಟ ತಳಿಪರಂಬದ ಶಾಸಕ ಜೇಮ್ಸ್ ಮ್ಯಾಥ್ಯೂ, ‘ಹಲವಾರು ಕಾರಣಕ್ಕಾಗಿ ಪರಿಸರವನ್ನು ಕಾಯ್ದುಕೊಳ್ಳಬೇಕಾಗಿದೆ. ಆದರೆ, ಲಭ್ಯ ಸಂಪನ್ಮೂಲದಲ್ಲಿ ಅಲ್ಲಿನ ಜನತೆ ಸುಸ್ಥಿರ ಬದುಕು ನಡೆಸುವುದು ಹೇಗೆ? ವನ್ಯಜೀವಿ ಮತ್ತು ಮನುಷ್ಯ ಹಾಗೂ ಕೃಷಿ ಸಂಘರ್ಷಗಳಿಗೆ ಪರಿಹಾರ ಏನು? ಭೂ ಕುಸಿತ, ಮಳೆ ವ್ಯತ್ಯಯದಂತಹ ಕಾಲಘಟ್ಟದಲ್ಲಿ ಪರಿಸರ ಪೂರಕ ಅಭಿವೃದ್ಧಿ ಹೇಗೆ? ಎಂಬುದರ ಚರ್ಚೆ ಹಾಗೂ ಮಾರ್ಗಸೂಚಿಗಳನ್ನು ಹಸಿರು ನ್ಯಾಯಾಧಿಕರಣದಿಂದ ನಿರೀಕ್ಷಿಸುತ್ತಿದ್ದೇವೆ. ಇದಕ್ಕೆ ಕೇಂದ್ರದ ನೆರವೂ ಸಿಗಬೇಕು’ ಎಂದರು. ‘ಕೇರಳವು ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲೂ ಮುಂದಿದೆ’ ಎನ್ನುವಂತಿತ್ತು ಅಲ್ಲಿನ ಜನಪ್ರತಿನಿಧಿಗಳ ನಿಲುವುಗಳು.

***

ಗಾಡ್ಗೀಳ್ ವರದಿಯತ್ತ ಹಲವರ ಚಿತ್ತ

- ಸದಾಶಿವ ಎಂ.ಎಸ್

ಕಾರವಾರ: ಮಾಧವ ಗಾಡ್ಗೀಳ್ ಸಮಿತಿಯ ವರದಿ ಬಗ್ಗೆ ಕೇಳಿಬಂದ ಟೀಕೆಗಳ ಕಾರಣ, ಅದನ್ನು ಅಧ್ಯಯನ ಮಾಡಿ ಹೊಸ ವರದಿ ನೀಡಲು ಕೇಂದ್ರ ಸರ್ಕಾರವು 2012ರಲ್ಲಿ ಕಸ್ತೂರಿರಂಗನ್ ಸಮಿತಿಯನ್ನು ನೇಮಿಸಿತು.

ಗಾಡ್ಗೀಳ್ ವರದಿಯು ಕಾಡಿನ ನಡುವೆ ಜೀವಿಸುತ್ತಿರುವವರ ಬದುಕಿಗೆ ಹತ್ತಿರವಿದೆ. ಯಾವುದೇ ನಿರ್ಬಂಧಗಳನ್ನು ಹೇರುವ ಮೊದಲು ಸ್ಥಳೀಯರೊಂದಿಗೆ ಚರ್ಚಿಸಬೇಕು ಎಂದು ಶಿಫಾರಸು ಮಾಡಿತ್ತು. ಅಲ್ಲದೇ, ವರದಿ ಸಿದ್ಧಪಡಿಸುವ ಮೊದಲು ಜನರ ಜತೆ ಸಂವಾದ ನಡೆಸ ಲಾಗಿತ್ತು. ಹಾಗಾಗಿ, ಈ ವರದಿಯಿಂದ ಅಷ್ಟಾಗಿ ತೊಂದರೆಯಿಲ್ಲ ಎಂಬುದು ಹಲವರ ಅನಿಸಿಕೆಯಾಗಿದೆ.

ಕಸ್ತೂರಿರಂಗನ್ ನೇತೃತ್ವದ ಸಮಿತಿಯು ಉಪಗ್ರಹ ಆಧಾರಿತ ಚಿತ್ರಗಳನ್ನು ಅಧ್ಯಯನ ಮಾಡಿ ವರದಿ ಸಿದ್ಧಪಡಿಸಿದೆ. ಇದರಲ್ಲಿ ಹಲವು ಅಂಶಗಳು ಬೆಳಕಿಗೆ ಬಂದಿಲ್ಲ. ಇದು ವಾಸ್ತವಾಂಶಗಳಿಂದ ಕೂಡಿಲ್ಲ ಎಂಬುದು ವಿರೋಧಿಸುವವರ ದೂರು ಆಗಿದೆ.

ಈ ವರದಿಗಳ ಬಗ್ಗೆ ಅಧ್ಯಯನ ಮಾಡಿರುವ ಶಿರಸಿ ತಾಲ್ಲೂಕಿನ ಭೈರುಂಬೆಯ ಕೆ.ಎಂ. ಹೆಗಡೆ, ‘ವರದಿಗಳನ್ನು ಅಧ್ಯಯನ ಮಾಡದವರೇ ರೈತರ ದಿಕ್ಕುತಪ್ಪಿಸುತ್ತಿದ್ದಾರೆ. ಗಾಡ್ಗೀಳ್ ವರದಿಯಲ್ಲಿ ಗುರುತಿಸಿದ್ದಕ್ಕಿಂತ ಕಡಿಮೆ ಪ್ರದೇಶವನ್ನು ಕಸ್ತೂರಿರಂಗನ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಹಾಗಾಗಿ ಸರ್ಕಾರವು ಅದರತ್ತ ಒಲವು ಹೊಂದಿದೆ’ ಎನ್ನುತ್ತಾರೆ.

ಗಾಡ್ಗೀಳ್ ವರದಿಯಲ್ಲೇನಿದೆ?:

* ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯು (ಡಬ್ಯು.ಜಿ.ಇ.ಇ.ಪಿ) ಇಡೀ ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇ.ಎಸ್.ಎ) ಎಂದು ಶಿಫಾರಸು ಮಾಡಿದೆ.

* ಈ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿರುವ 142 ತಾಲ್ಲೂಕುಗಳನ್ನು ಒಂದು, ಎರಡು ಮತ್ತು ಮೂರನೇ ಹಂತಗಳ ಪರಿಸರ ಸೂಕ್ಷ್ಮ ವಲಯ (ಇ.ಎಸ್.ಝೆಡ್) ಎಂದು ಗುರುತಿಸಿದೆ.

* ಮೊದಲ ಹಂತದಲ್ಲಿರುವ ತಾಲ್ಲೂಕುಗಳಲ್ಲಿ ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ಬಹುತೇಕ ಎಲ್ಲ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಪ್ರಮಾಣದಲ್ಲಿ ನಿರ್ಬಂಧಿಸಬೇಕು.

* ಇ.ಎಸ್.ಝೆಡ್–1ರ ವ್ಯಾಪ್ತಿಯಲ್ಲಿ ಹೊಸ ಜಲಾಶಯಗಳನ್ನು ನಿರ್ಮಿಸಬಾರದು.

* ಪರಿಸರ ವಿಚಾರಗಳಲ್ಲಿ ಆಡಳಿತವು ಗ್ರಾಮ ಪಂಚಾಯಿತಿಯಿಂದ ಮೇಲಿನ ಹಂತಕ್ಕೆ ಹೋಗಬೇಕು. ಅಧಿಕಾರ ವಿಕೇಂದ್ರೀಕರಣ ಮಾಡಿ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಬಲ ತುಂಬಬೇಕು.

ವರದಿ ಬಗ್ಗೆ ಟೀಕೆಗಳೇನು?

ಗಾಡ್ಗೀಳ್ ವರದಿಯು ಹೆಚ್ಚು ಪರಿಸರ ಪೂರಕವಾಗಿದ್ದು, ವಾಸ್ತವಾಂಶಗಳಿಂದ ಕೂಡಿಲ್ಲ. ಅಲ್ಲದೇ ಮಾಡಿರುವ ಶಿಫಾರಸುಗಳನ್ನು ಜಾರಿ ಮಾಡುವುದು ಕಷ್ಟಸಾಧ್ಯ ಎಂಬ ಟೀಕೆ ಎದುರಾಗಿತ್ತು. ವಿದ್ಯುತ್ ಉತ್ಪಾದನೆ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಂದ ಪಶ್ಚಿಮ ಘಟ್ಟಕ್ಕೆ ಆಗಿರುವ ಹಾನಿಯನ್ನು ಸರಿಪಡಿಸಬೇಕು. ಆದರೆ, ಈ ಶಿಫಾರಸುಗಳನ್ನು ಜಾರಿ ಮಾಡಿದಾಗ ಆಗುವ ಆದಾಯ ನಷ್ಟದ ಭರ್ತಿಯ ಬಗ್ಗೆ ವರದಿಯಲ್ಲಿ ತಿಳಿಸಿಲ್ಲ ಎಂದು ಆಕ್ಷೇಪ ವ್ಯಕ್ತವಾಗಿತ್ತು.

ತಂತ್ರಜ್ಞಾನವನ್ನು ಬಳಸಿಕೊಂಡು ಸಿದ್ಧಪಡಿಸಲಾದ ಕಸ್ತೂರಿರಂಗನ್ ವರದಿಯು ವಾಸ್ತವಾಂಶಗಳಿಂದ ದೂರವಾಗಿದೆ. ಹಲವು ಪ್ರಮಾದಗಳಿಂದ ಕೂಡಿದೆ ಎಂಬ ಟೀಕೆಯಿದೆ. ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಿದ್ದರಿಂದ ಗಣಿಗಾರಿಕೆಯಂಥ ಚಟುವಟಿಕೆಗಳು ಹೆಚ್ಚಬಹುದು. ಇದು ಪರಿಸರಕ್ಕೆ ಮಾರಕವಾಗಬಹುದು ಎಂಬ ಆತಂಕವೂ ಹಲವರದ್ದಾಗಿದೆ.

ಗ್ರಾ.ಪಂ. ಚುನಾವಣೆ ಬಹಿಷ್ಕಾರಕ್ಕೂ ಸಜ್ಜಾದ ಗ್ರಾಮಸ್ಥರು

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ 34 ಗ್ರಾಮಗಳು ಪಟ್ಟಿಯಲ್ಲಿದ್ದು, ಗ್ರಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ನಡೆಸುವಂತಿಲ್ಲ ಎಂಬ ಅಂಶ ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಕಾಫಿ ಬೆಳೆಗಾರರ ಸಂಘಟನೆಗಳು ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಜನರನ್ನು ಪ್ರೇರೇಪಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ಆರಂಭಿಸಿವೆ. ಪ್ರಥಮ ಹಂತದಲ್ಲಿ ಗ್ರಾಮಸ್ಥರು, ಹೋಬಳಿ ಕೇಂದ್ರ ಹಾನಬಾಳ್‌ ಬಂದ್‌ ಮಾಡಿ, ಪ್ರತಿಭಟಿಸಿದ್ದಾರೆ. ವರದಿ ಅನುಷ್ಠಾನಕ್ಕೆ ವಿರೋಧಿಸಿರುವ ಹೆತ್ತೂರು ಹೋಬಳಿಯ ಬೆಳೆಗಾರರ ಸಂಘ, ಹೋಬಳಿಯ ಗ್ರಾಮ ಪಂಚಾಯ್ತಿ ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದೆ.

‘ಯೋಜನೆ, ವರದಿ ಕುರಿತು ಸ್ಥಳೀಯರಿಗೆ ಸರಿಯಾದ ಮಾಹಿತಿ ಇಲ್ಲ. ಅಧಿಕಾರಿಗಳು, ಸ್ಥಳೀಯರಿಗೆ ಸರಿಯಾದ ಮಾಹಿತಿ ನೀಡಬೇಕು. ಅಲ್ಲಿಯವರೆಗೆ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ’ ಎನ್ನುತ್ತಾರೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಮೋಹನ್‌ ಕುಮಾರ್‌.

***

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಗೆ ಮೊರೆ

ಕಸ್ತೂರಿರಂಗನ್‌ ವರದಿ: ರಾಜ್ಯ ಸರ್ಕಾರದ ತೀರ್ಮಾನ

- ರಾಜೇಶ್‌ ರೈ ಚಟ್ಲ

ಬೆಂಗಳೂರು: ಕಸ್ತೂರಿರಂಗನ್‌ ಸಮಿತಿ ಮಾಡಿದ ಶಿಫಾರಸಿನಿಂದ ಎದುರಾಗಿರುವ ಸಮಸ್ಯೆಗಳು ಮತ್ತು ತನ್ನ ಕಾಳಜಿ ಯನ್ನು ರಾಜ್ಯ ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮುಂದೆ ಬಿಚ್ಚಿಡಲು ನಿರ್ಧರಿಸಿದೆ. ಆ ಮೂಲಕ, ಆತಂಕದಲ್ಲಿರುವ ಮಲೆನಾಡು ಭಾಗದ ಜನರ ಅಳಲಿಗೆ, ಜನಪ್ರತಿನಿಧಿಗಳ ಅಹವಾಲಿಗೆ ‘ನ್ಯಾಯ’ ಕಲ್ಪಿಸಲು ಮುಂದಾಗಿದೆ.

ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸಿರುವ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ‘ಪರಿಸರ ಸೂಕ್ಷ್ಮ ಪ್ರದೇಶ’ದೊಳಗೆ ಸೇರಿರುವ ಗ್ರಾಮಸ್ಥರ ಹಿತಾಸಕ್ತಿ ಕಾಪಾಡಲು ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ ವರದಿಯಲ್ಲಿ ಗುರುತಿಸಿದ ರಾಜ್ಯದ ಅರಣ್ಯ ಮತ್ತು ಅರಣ್ಯೇತರ ಭೂಮಿಯನ್ನೊಳಗೊಂಡ 1,533 ಗ್ರಾಮಗಳಿರುವ 20,668 ಚದರ ಕಿ.ಮೀ ಪ್ರದೇಶವನ್ನು ಕಡಿಮೆಗೊಳಿಸುವಲ್ಲಿ ಈ ಯಾವ ಕ್ರಮಗಳೂ ಫಲ ನೀಡಿಲ್ಲ. ಹೀಗಾಗಿ, ಮುಂದೆ ಯಾವುದೇ ತೀರ್ಮಾನ ಕೈಕೊಳ್ಳದಿರಲು ನಿರ್ಧರಿಸಿರುವ ಸರ್ಕಾರ, ಹಸಿರು ನ್ಯಾಯಮಂಡಳಿಗೆ ವಿಷಯ ಒಯ್ಯಲಿದೆ.

‘ರಾಷ್ಟ್ರೀಯ ಹಸಿರು ನ್ಯಾಯ ಮಂಡ ಳಿಯು ರಾಜ್ಯದ ನೈಜ ಕಾಳಜಿಯನ್ನು ಸಮರ್ಪಕವಾಗಿ ಪರಿಗಣಿಸಿಲ್ಲ. ಅಷ್ಟೇ ಅಲ್ಲ, ಈ ವಿಷಯವನ್ನು ನಿರಂತರವಾಗಿ ಮುಂದೂಡುತ್ತಲೇ ಬಂದಿದೆ. ಸದ್ಯದ ಪರಿಸ್ಥಿತಿ ಮುಂದುವರಿದರೆ ಕೇಂದ್ರ ಸರ್ಕಾರ ತಾನಾಗಿಯೇ ನಿರ್ಧಾರ ತೆಗೆದು ಕೊಂಡು, ‘ಪರಿಸರ ಸೂಕ್ಷ್ಮ ಪ್ರದೇಶ’ಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಅಂತಿಮಗೊಳಿಸಬಹುದು’ ಎಂಬ ಆತಂಕ ರಾಜ್ಯ ಸರ್ಕಾರಕ್ಕಿದೆ.

ಕೇಂದ್ರ ಸರ್ಕಾರ 2014ರಿಂದ ಈ ವಿಷಯದಲ್ಲಿ ನಾಲ್ಕು ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಈ ಎಲ್ಲ ಅಧಿಸೂಚನೆಗಳಿಗೆ ರಾಜ್ಯಗಳಿಂದ ಆಕ್ಷೇಪಣೆ ಆಹ್ವಾನಿಸಿದ್ದು, ರಾಜ್ಯ ಸರ್ಕಾರ ಕೂಡ ಆಕ್ಷೇಪಣೆ ಸಲ್ಲಿಸಿದೆ. ಈ ಅಧಿಸೂಚನೆಗಳು 18 ತಿಂಗಳು ಮಾತ್ರ ಚಾಲ್ತಿಯಲ್ಲಿರುತ್ತವೆ. ಹೀಗಾಗಿ ಅಧಿಸೂಚನೆಗಳ ಅವಧಿ ಮುಕ್ತಾಯಗೊಂಡಿದೆ.

ಇತ್ತೀಚಿನ ಬೆಳವಣಿಗೆಯಲ್ಲಿ, ಸಾರ್ವ ಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಆಧರಿಸಿ ಕಸ್ತೂರಿರಂಗನ್‌ ವರದಿಯಲ್ಲಿರುವ ವಿಷಯವನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕೈಗೆತ್ತಿಕೊಂಡಿದೆ. ಈ ವರದಿಯನ್ನು ಜಾರಿಗೊಳಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿ ರುವ ನ್ಯಾಯ ಮಂಡಳಿ, ವರದಿಯಲ್ಲಿರುವ ಶಿಫಾರಸುಗಳನ್ನು ಅನುಷ್ಠಾನಗೊಳಿಸದಿದ್ದರೆ ಕೇಂದ್ರದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.

ಈ ಹಿಂದಿನ ಕರಡು ಅಧಿಸೂಚ ನೆಗಳ ಅವಧಿ ಮುಕ್ತಾಯಗೊಂಡಿರುವುದರಿಂದ, ಕೇಂದ್ರ ಸರ್ಕಾರ ಹೊಸದಾಗಿ ಅಧಿಸೂಚನೆ ಹೊರಡಿಸಬೇಕಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಗಳ ಅಭಿಮತ ಪಡೆದರೆ ಮುಂದೆ ಸಮಸ್ಯೆ ಉದ್ಭವಿಸದು.

ವರದಿ ಅನುಷ್ಠಾನಗೊಂಡಿಲ್ಲ ಎಂದು ಸಲ್ಲಿಕೆಯಾಗಿದ್ದ ಮೂಲ ಅರ್ಜಿ ಯನ್ನು ನವೆಂಬರ್‌ 22ರಂದು ವಿಚಾರಣೆ ನಡೆಸಿದ ಸಂದರ್ಭದಲ್ಲಿ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ, ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. 2020ರ ಮಾರ್ಚ್‌ 31ರ ಒಳಗೆ ಕರಡು ಅಧಿಸೂ ಚನೆ ಅಂತಿಮಗೊಳಿಸದಿದ್ದರೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪರಿಸರ ಸೂಕ್ಷ್ಮ ವಲಯ (ಇಎಸ್‌ಜೆಡ್‌) ವಿಭಾ ಗದ ಸಲಹೆಗಾರರ ವೇತನವನ್ನು ಬಿಡುಗಡೆ ಮಾಡಬಾರದು ಎಂದು ಆದೇಶಿಸಿತ್ತು.

ಅಧಿಕಾರಿಯು 2020ರ ಡಿಸೆಂಬರ್‌ 31ರ ಒಳಗೆ ಕರಡು ಅಧಿಸೂಚನೆ ಅಂತಿಮಗೊಳಿಸಬೇಕು. ಅಂತಿಮಗೊಳಿಸದಿದ್ದರೆ ಅಧಿಕಾರಿಯ ವೇತನವನ್ನು ಹಸಿರು ನ್ಯಾಯ ಮಂಡಳಿಯ ನಿಯಮ ಗಳ ಪ್ರಕಾರ ಬಿಡುಗಡೆಗೊಳಿಸುವುದಿಲ್ಲ ಎಂದು 2020ರ ಸೆಪ್ಟೆಂಬರ್‌ನಲ್ಲಿ ಆದೇಶಿಸಿದೆ. ಆ ಗಡುವಿನ ಒಳಗೆ, ವರದಿಯಲ್ಲಿರುವ ಅಂಶಗಳ ಬಗ್ಗೆ ರಾಜ್ಯ ಸರ್ಕಾರ ಅಂತಿಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ.

ವರದಿಗೆ ರಾಜ್ಯದ ಪ್ರತಿಕ್ರಿಯೆ ಏನು?

* ಅರಣ್ಯ ಪ್ರದೇಶ, ಸಂರಕ್ಷಿತ ಪ್ರದೇಶ ಮತ್ತು ಸಂರಕ್ಷಿತ ಪ್ರದೇಶದ ಪಕ್ಕದ ಪರಿಸರ ಸೂಕ್ಷ್ಮ ವಲಯವನ್ನು ಮಾತ್ರ ‘ಪರಿಸರ ಸೂಕ್ಷ್ಮ ಪ್ರದೇಶ (ಇಎಸ್‌ಎ) ಎಂದು ಘೋಷಿಸಬೇಕು

* ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಕಟ್ಟಡ ನಿರ್ಮಾಣ ಮತ್ತು ನಗರಾಭಿವೃದ್ಧಿಯನ್ನು ನಿಯಂತ್ರಿಸಬೇಕು. ಆದರೆ, ಅದನ್ನು ನಿಷೇಧಿಸಬಾರದು.

* ಚಾಲ್ತಿಯಲ್ಲಿರುವ ಜಲ ವಿದ್ಯುತ್‌ ಯೋಜನೆಗಳ ವಿಸ್ತರಣೆಯನ್ನು ಉದಾರೀಕರಣಗೊಳಿಸಬೇಕು

* ನಗರಪ್ರದೇಶವನ್ನು ಹೊರತುಪಡಿಸಬೇಕು

* ಎ– ವರ್ಗದ ಆಸ್ಪತ್ರೆ, ಉದ್ಯಮಗಳನ್ನು ನಿಷೇಧಿಸಬಾರದು (ನಿಯಂತ್ರಣ ವಿಧಿಸಿ ಅನುಮತಿ ನೀಡಬೇಕು)

* ವರದಿಯಲ್ಲಿ ಪ್ರಸ್ತಾಪಿಸಿರುವ ಆರ್ಥಿಕ ಪ್ರೋತ್ಸಾಹವನ್ನು ಅಕ್ಷರಶಃ ಕಾರ್ಯರೂಪಕ್ಕೆ ತರಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು