ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಅಂತಾರಲ್ಲ..

Last Updated 4 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಯಶವಂತಪುರ ರೈಲ್ವೆ ಫ್ಲಾಟ್‌ಫಾರಂ ಒಂದರಲ್ಲಿ ಮಹಿಳೆಯೊಬ್ಬರು ವಿಲವಿಲನೆ ಒದ್ದಾಡಿ ಮೃತಪಟ್ಟ ಘಟನೆ ನೆನಪಿರಬಹುದು.ರೈಲಿನಿಂದ ಇಳಿಯುವಾಗ ನಡೆದ ಅವಘಡದಿಂದ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ಯಾರಾದರೂ ನೆರವಾಗಿ ತಕ್ಷಣ ವೈದ್ಯಕೀಯ ವ್ಯವಸ್ಥೆ ಮಾಡಿದ್ದರೆ ಪರಿಸ್ಥಿತಿ ಭಿನ್ನವಾಗಿರುತ್ತಿತ್ತು. ಆ ಮಹಿಳೆ ಅಂಥದೊಂದು ಮಾನವೀಯ ನೆರವು ನಿರೀಕ್ಷಿಸುತ್ತ ಸ್ಥಳದಲ್ಲೇ ಪ್ರಾಣಬಿಟ್ಟರು. ಬಹುತೇಕರು ಆಕೆಯ ಸ್ಥಿತಿಯನ್ನು ಮೊಬೈಲ್‌ಗಳಲ್ಲಿ ವಿಡಿಯೊ ಮಾಡಿಕೊಂಡರಷ್ಟೇ.

***

ಮಹಾನಗರದಲ್ಲಿ ಇಂಥ ಘಟನೆಗಳು ಪುನರಾವರ್ತನೆಯಾಗುತ್ತಲೇ ಇವೆ. ಕಣ್ಣೆದುರಿಗೆ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳಲು ಹೆಣಗುತ್ತಿದ್ದಾಗ ತಮ್ಮ ಮನದ ಕಣ್ಣುಗಳನ್ನೇ ಮುಚ್ಚಿಕೊಳ್ಳುತ್ತಾರೆ. ಆದರೆ, ಮೊಬೈಲ್‌ ಕ್ಯಾಮೆರಾ ಕಣ್ಣನ್ನು ಮಾತ್ರ ತೆರೆದಿಡುತ್ತಾರೆ. ಇದಷ್ಟೇ ಸಾಧ್ಯವಾಗುತ್ತಿದೆಯಲ್ಲಾ! ಇದನ್ನು ಮೀರಿ ಸಹಜ ಮಾನವೀಯ ಸ್ಪಂದನೆ ಸಾರ್ವಜನಿಕರಿಗೆ ಸಾಧ್ಯವಾಗುತ್ತಿಲ್ಲ. ಅವರನ್ನು ತಡೆಯುತ್ತಿರುವ ಕಾರಣಗಳೇನು? ಈ ಬಗ್ಗೆ ಮಾನಸಿಕ ತಜ್ಞರ ವಿಶ್ಲೇಷಣೆಗಳು ನಮ್ಮನ್ನು ಒಂದಷ್ಟು ಎಚ್ಚರಿಸಲಿ ಎನ್ನುವ ‘ಮೆಟ್ರೊ’ ಕಾಳಜಿ ನಿಮ್ಮೊಂದಿಗೆ..

ಮೊದಲು ಆಸ್ಪತ್ರೆಗೆ ದಾಖಲಿಸಿ

‘ಅಪಘಾತದಲ್ಲಿರುವವರಿಗೆ ಸಹಾಯ ಮಾಡಿದರೆ ಕೋರ್ಟು, ಪೊಲೀಸ್ ಠಾಣೆ ಸುತ್ತಬೇಕಾಗುತ್ತದೆ ಎನ್ನುವ ಭಯವೇ ಜನರನ್ನು ಸಹಾಯ ಮಾಡಲು ಹಿಂದೇಟು ಹಾಕುವಂತೆ ಮಾಡುತ್ತದೆ. ಅಪಘಾತದ ಸಂದರ್ಭದಲ್ಲಿ ಗಾಯಾಳುಗಳ ವಿಡಿಯೊ ಮತ್ತು ಫೋಟೊ ತೆಗೆದು ಸಮಯ ಹಾಳು ಮಾಡಬೇಡಿ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಎಂಬುದು ನನ್ನ ಮನವಿ. ಜೀವ ಉಳಿಯಲು ಕೆಲವೊಮ್ಮೆ ತುರ್ತು ಚಿಕಿತ್ಸೆ ಅತ್ಯಗತ್ಯ. ಗಾಯಾಳುವನ್ನು ದಾಖಲಿಸುವವರ ಹೆಸರು ಮತ್ತು ಸಂಪರ್ಕ ವಿಳಾಸವನ್ನು ತೆಗೆದುಕೊಳ್ಳಬಾರದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಸಹಾಯ ಮಾಡಬೇಕೆನ್ನುವ ಬಯಕೆ ಬಹುತೇಕರಿಗೆ ಇರುತ್ತದೆ. ಆದರೆ, ಇಲ್ಲಿರುವ ಇನ್ನೊಂದು ಕಷ್ಟವೆಂದರೆ ಗಾಯಾಳುವನ್ನು ಸರಿಯಾಗಿ ನಿರ್ವಹಣೆ ಮಾಡದಿರುವ ಸಂಭವವೇ ಹೆಚ್ಚು. ಗಾಯಾಳುವನ್ನು ಹೇಗೆ ಎತ್ತಿಕೊಳ್ಳಬೇಕು. ಆ ಕ್ಷಣದಲ್ಲಿ ನೀರು ಕುಡಿಸಬೇಕೇ ಬೇಡವೇ ಎಂಬುದು ತಿಳಿದಿರುವುದಿಲ್ಲ. ಹಾಗಾಗಿ ಜೀವರಕ್ಷಕ ತರಬೇತಿ ನೀಡುವ ಅಗತ್ಯವಿದೆ. ಮುಖ್ಯವಾಗಿ ಯುವಜನರಿಗೆ ಇದರ ಬಗ್ಗೆ ತರಬೇತಿ ನೀಡಬೇಕು’ ಎನ್ನುವುದು ಅಪೋಲೊ ಆಸ್ಪತ್ರೆಯ ಅಪಘಾತ ಮತ್ತು ತುರ್ತುಚಿಕಿತ್ಸೆ ಕೇಂದ್ರದ ಹಿರಿಯ ಕನ್ಸಲ್ಟೆಂಟ್ ಮತ್ತು ಮುಖ್ಯಸ್ಥ ಡಾ.ಎ.ಎನ್. ವೆಂಕಟೇಶ್ ಅವರ ಕಾಳಜಿ.

ಚಿಕಿತ್ಸೆ ನೀಡದಿದ್ದರೆ ಕ್ರಿಮಿನಲ್ ಕೇಸ್!

2016ರಲ್ಲಿ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪ್ರಕಾರ, ಅಪಘಾತ ಮತ್ತು ತುರ್ತು ಸಂದರ್ಭದಲ್ಲಿ ಯಾರು ಬೇಕಾದರೂ ರೋಗಿ ಅಥವಾ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಬಹುದು. ಹೀಗೆ ದಾಖಲಿಸುವವರ ವಿರುದ್ಧ ಪೊಲೀಸ್ ಆಗಲಿ ಕಾನೂನು ಆಗಲಿ ಯಾವುದೇ ಕ್ರಮ ತೆಗೆದುಕೊಳ್ಳುವಂತಿಲ್ಲ. ಆಸ್ಪತ್ರೆಗೆ ದಾಖಲಿಸುವವರ ಹೆಸರು, ಫೋನ್ ನಂಬರ್, ವಿಳಾಸ ಅಥವಾ ಅವರ ಇತರ ದಾಖಲೆಯನ್ನೂ ಕೇಳುವಂತಿಲ್ಲ. ಗಾಯಾಳುಗಳಿಗೆ ಆದ್ಯತೆ ಮೇರೆಗೆ ತುರ್ತು ಚಿಕಿತ್ಸೆ ನೀಡಬೇಕು. ಚಿಕಿತ್ಸೆ ನೀಡದಿದ್ದಲ್ಲಿ ಅಂಥ ಆಸ್ಪತ್ರೆಯ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬಹುದು ಎನ್ನುತ್ತಾರೆ ಒಬ್ಬ ಪೊಲೀಸ್ ಅಧಿಕಾರಿ.‌

₹ 25 ಸಾವಿರದ ತನಕ ಉಚಿತ ಚಿಕಿತ್ಸೆ

ಹರೀಶ್ ಸಾಂತ್ವನ ಯೋಜನೆಯಲ್ಲಿ ಆರಂಭದ ಮೊದಲ 48 ಗಂಟೆ ಅವಧಿಗೆ ₹ 25ಸಾವಿರದ ತನಕ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರಲ್ಲಿ ₹ 1 ಸಾವಿರದಿಂದ ಹಿಡಿದು ₹ 25 ಸಾವಿರದ ತನಕ ಸೇವೆಗಳು ಸೇರಿವೆ. ಗಾಯದ ತೀವ್ರತೆಯನ್ನು ಸ್ಥಿರಗೊಳಿಸುವುದು, ಹೊಲಿಗೆ ಹಾಕುವುದು ಮತ್ತು ಡ್ರೆಸ್ಸಿಂಗ್ ಮಾಡುವುದು, ತೀವ್ರ ನಿಗಾ ಘಟಕ ಹಾಗೂ ವಾರ್ಡ್ ಆಧಾರಿತ ಚಿಕಿತ್ಸೆ, ಮುರಿತಗಳು, ತಲೆ, ಬೆನ್ನು ಮತ್ತು ಸುಟ್ಟ ಗಾಯಗಳಿಗೆ ಚಿಕಿತ್ಸೆ, ರಕ್ತ ವರ್ಗಾವಣೆದಂತಹ ಚಿಕಿತ್ಸಾ ಸೌಲಭ್ಯ ಸೇರಿದಂತೆ ತಜ್ಞರ ತಂಡ ನಿರ್ಧರಿಸಿರುವ ಸುಮಾರು 25 ಬಗೆಯ ಪ್ಯಾಕೇಜ್(ಸೇವೆಗಳು) ಇದರಲ್ಲಿವೆ. ಮೊದಲ 48 ಗಂಟೆ ಅವಧಿಯ ₹ 25 ಸಾವಿರದ ನಂತರದ ಚಿಕಿತ್ಸೆಯ ಹಣವನ್ನು ರೋಗಿ ಭರಿಸಬೇಕಾಗುತ್ತದೆ.

ಗುಂಪಿನಲ್ಲಿ ಭಿನ್ನ ವರ್ತನೆ

‘ಜನರು ವೈಯಕ್ತಿಕವಾಗಿ ವರ್ತಿಸುವುದಕ್ಕಿಂತ ಗುಂಪಿನಲ್ಲಿ ಭಿನ್ನವಾಗಿ ವರ್ತಿಸುತ್ತಾರೆ. ಅಪಘಾತವಾದಾಗ ಜನರು ಗೊಂದಲದಲ್ಲಿರುತ್ತಾರೆ. ಕಾನೂನು ಏನು ಹೇಳುತ್ತೆ ಅಂತ ಗೊತ್ತಿರುವುದಿಲ್ಲ. ಪ್ರಥಮ ಚಿಕಿತ್ಸೆಯ ಬಗ್ಗೆ ಅರಿವಿನ ಕೊರತೆಯೂ ಇರುತ್ತದೆ. ಸಹಾಯದ ಬಗ್ಗೆ ಅವರಿಗೆ ತೋಚುವುದಿಲ್ಲ. ಶಾಲಾ–ಕಾಲೇಜುಗಳಲ್ಲಿ ಅಪಘಾತದ ಕುರಿತು ಪ್ರಥಮ ಚಿಕಿತ್ಸೆ ನೀಡುವ ಬಗ್ಗೆ ಕನಿಷ್ಠ ತರಬೇತಿಯನ್ನು ನೀಡುವ ಅವಶ್ಯಕತೆ ಇದೆ ಎಂದು ವಿಶ್ಲೇಷಿಸುತ್ತಾರೆ ಸೈಕಾಲಜಿಸ್ಟ್‌ ನಿತ್ಯಾ ಜಿ. ರಾವ್

ಸೆಲ್ಫಿ, ವಿಡಿಯೊದಲ್ಲೇ ಆನಂದ!

‘ತಂತ್ರಜ್ಞಾನ ಮನುಷ್ಯರನ್ನು ಬೆಸೆಯುತ್ತಿದೆ ನಿಜ. ಆದರೆ, ಅಷ್ಟೇ ಪ್ರಮಾಣದಲ್ಲಿ ಮಾನವೀಯತೆ ಕಡಿಮೆಯಾಗುತ್ತಿರುವುದನ್ನು ಅಲ್ಲಗಳೆಯಲಾಗದು. ಇಷ್ಟವಿಲ್ಲದವರ ನಂಬರ್ ಅನ್ನು ಸುಲಭವಾಗಿ ನೀವು ಯಾವುದೇ ಗಿಲ್ಟ್‌ ಇಲ್ಲದೇ ಬ್ಲಾಕ್ ಮಾಡಬಹುದು. ಅದೇ ಗುಣ ನಮ್ಮೆದುರಿಗಿರುವವರ ಮೇಲೆ ಪ್ರಯೋಗಿಸಲಾಗುತ್ತಿದೆ. ಮೊಬೈಲ್ ಬಳಕೆಯಿಂದ ಮಿದುಳಿನಲ್ಲಿರುವ ನಿಯಂತ್ರಣ ವ್ಯವಸ್ಥೆ ಮೇಲೆ ಪರಿಣಾಮವಾಗುತ್ತಿರುವುದು ಅಧ್ಯಯನದಿಂದ ಕಂಡುಬಂದಿದೆ’ ಎನ್ನುತ್ತಾರೆ ನಿಮ್ಹಾನ್ಸ್‌ನ ಸರ್ವೀಸ್ ಫಾರ್ ಹೆಲ್ತಿ ಯೂಸ್‌ ಫಾರ್ ಟೆಕ್ನಾಲಜಿಯ (ಶಟ್‌) ಮುಖ್ಯಸ್ಥ ಡಾ.ಮನೋಜ್‌ಕುಮಾರ್ ಶರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT