ಶನಿವಾರ, ಆಗಸ್ಟ್ 13, 2022
26 °C

‘ಪ್ರಸ್ತ’ದ ವೇಳೆ ಪತಿಯನ್ನೇ ಭಕ್ಷಿಸುವ ಈ ಹೆಣ್ಣಿನ ಮಜಕೂರಾದರು ಏನು?

ಕೆ.ಎಚ್. ಓಬಳೇಶ್‌ Updated:

ಅಕ್ಷರ ಗಾತ್ರ : | |

Prajavani

ಪ್ರತಿಯೊಂದು ಜೀವಿಯ ಬದುಕಿನ ಮೂಲ ಉದ್ದೇಶವೇ ವಂಶಾಭಿವೃದ್ಧಿ. ಹಾಗಾಗಿ, ತನ್ನ ವಂಶವಾಹಿನಿಯನ್ನು ಚಿರಂತನಗೊಳಿಸುವ ಕಾರ್ಯಕ್ಕೆ ಎಲ್ಲ ಜೀವಿಗಳೂ ಮಹತ್ವ ನೀಡುತ್ತವೆ. ಸಂತಾನಾಭಿವೃದ್ಧಿಗೆ ಗಂಡು ಮತ್ತು ಹೆಣ್ಣಿನ ಲೈಂಗಿಕ ಸಂಯೋಗ ಅತ್ಯಗತ್ಯ. ಈ ಕ್ರಿಯೆಯು ಇತರೇ ಕ್ರಿಯೆಗಳಂತೆ ಯಾಂತ್ರಿಕವೂ ಅಲ್ಲ. ಮತ್ತೊಂದೆಡೆ ಉತ್ತಮ ಸಂತಾನ ಪಡೆಯುವ ಹಂಬಲ ಮನುಷ್ಯ ಸೇರಿದಂತೆ ಪ್ರಾಣಿ, ಪಕ್ಷಿ, ಕೀಟ ಜಗತ್ತಿನಲ್ಲೂ ಇದೆ. ಜೊತೆಗೆ, ಈ ಪ್ರಕ್ರಿಯೆಯು ಕೌತುಕಗಳ ಆಗರವೂ ಆಗಿದೆ.

ಸಸ್ಯ ಸಂಕುಲದಲ್ಲಿ ಲೈಂಗಿಕ ಸಂಯೋಗ ಅಷ್ಟೊಂದು ಕುತೂಹಲ ಕೆರಳಿಸುವುದಿಲ್ಲ. ಆದರೆ, ಜೀವ ಜಗತ್ತಿನಲ್ಲಿ ಈ ಕ್ರಿಯೆ ಬೆರಗು ಮೂಡಿಸುತ್ತದೆ. ಅದರಲ್ಲೂ ಕೆಲವು ಜಾತಿಯ ಕೀಟಗಳಲ್ಲಿ ಈ ಕ್ರಿಯೆಯು ಗಂಡಿನ ಹತ್ಯೆಯೊಂದಿಗೆ ಪರ್ಯಾವಸನಗೊಳ್ಳುವುದು ವಿಪರ್ಯಾಸ.

ಜೀವ ಜಗತ್ತಿನಲ್ಲಿ ಶಿಶುಹತ್ಯೆ ಅತಿಹೆಚ್ಚಾಗಿ ಕಂಡುಬರುತ್ತದೆ. ಗುಂಪು ಗುಂಪಾಗಿ ಜೀವಿಸುವ ಪ್ರಾಣಿಗಳಲ್ಲಿ ಇದೊಂದು ಸಾಧಾರಣ ಕ್ರಿಯೆಯೂ ಹೌದು. ಸಿಂಹ ಹಾಗೂ ಕೆಲವು ಜಾತಿಯ ಪ್ರಭೇದದ ಮೀನುಗಳಲ್ಲಿ ಶಿಶುಹತ್ಯೆ ನಡೆಯುತ್ತದೆ. ಕೆಲವು ಕೀಟ ಪ್ರಭೇದಗಳಲ್ಲಿ ಪತಿಹತ್ಯೆ ನಡೆಯುತ್ತದೆ. ಇದಕ್ಕೆ ಒಂಟೆಹುಳುವಿನ ಬದುಕು (ಪ್ರೇಯಿಂಗ್‌ ಮ್ಯಾಂಟಿಸ್– praying mantis‌) ಉದಾಹರಣೆಯಾಗಿದೆ. ಇದಕ್ಕೆ ಕನ್ನಡದಲ್ಲಿ ಸೂರ್ಯನ ಕುದುರೆ ಕೀಟ, ದೇವರ ಕೀಟ ಹಾಗೂ ಕಡ್ಡಿ ಕುದುರೆ ಎಂದೂ ಕರೆಯುತ್ತಾರೆ.  

ಒಂಟೆಹುಳುವಿನ ವೈಜ್ಞಾನಿಕ ಹೆಸರು ಮಾಂಟೊಡಿಯಾ. ಹಸಿರು ಎಲೆಗಳ ಮೇಲೆ ಸಾಮಾನ್ಯವಾಗಿ ಕಂಡುಬರುವ ಇದನ್ನು ಗುರುತಿಸುವುದು ತುಸು ಕಷ್ಟಕರ. ಇದು ಯಾವಾಗಲೂ ತನ್ನ ಮುಂಗಾಲನ್ನು ಕೈಮುಗಿಯುವಂತೆ ಎತ್ತಿ ಹಿಡಿದಿರುತ್ತದೆ. ಇದರ ಉದ್ದವಾದ ಕತ್ತು ನೋಡಲು ಆಕರ್ಷಕ. 180 ಡಿಗ್ರಿ ಆಕಾರದಲ್ಲಿ ತನ್ನ ಕತ್ತನ್ನು ತಿರುಗಿಸುವ ಶಕ್ತಿ ಇದಕ್ಕಿದೆ.

ವಿಶ್ವದಾದ್ಯಂತ ಈ ಪ್ರಭೇದಕ್ಕೆ ಸೇರಿದ ಸುಮಾರು ಎರಡು ಸಾವಿರ ಕೀಟಗಳನ್ನು ಜೀವ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ದೇಹವನ್ನು ಚಲಿಸದೇ ಮುಖವನ್ನು ಅತ್ತಿತ್ತ ಚಲಿಸುವ ವಿಶಿಷ್ಟ ಗುಣ ಈ ಕೀಟಕ್ಕೆ ಸಿದ್ಧಿಸಿದೆ. ಪ್ರಾಚೀನ ಗ್ರೀಕ್‌ ಮತ್ತು ಈಜಿಫ್ಟಿಯನ್ನರು ಈ ಕೀಟಕ್ಕೆ ಅತೀಂದ್ರಿಯ ಶಕ್ತಿ ಇದೆ ಎಂದು ಬಲವಾಗಿ ನಂಬಿದ್ದರು. ಈ ಕೀಟವು ಮಹಾಪುರುಷನ ಅವತಾರ ಎಂಬ ನಂಬಿಕೆ ಗ್ರೀಕರಲ್ಲಿ ಮನೆ ಮಾಡಿತ್ತು.  

ಹೆಣ್ಣು ಒಂಟೆಹುಳು ನೂರಾರು ಮೊಟ್ಟೆಗಳನ್ನು ಇಡುತ್ತದೆ. ಹಾಗಾಗಿ, ಇದು ಹೆಚ್ಚಿನ ಆಹಾರವನ್ನೂ ಬೇಡುತ್ತದೆ. ಇದರ ಲೈಂಗಿಕ ಕ್ರಿಯೆಯೂ ಅಷ್ಟೇ ಕುತೂಹಲಕಾರಿ. ಗಂಡು ಮತ್ತು ಹೆಣ್ಣು ಮೂರು ಗಂಟೆಗಳ ಕಾಲ ಮಿಲನ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಗಂಡು ಹುಳು ನಿಧಾನವಾಗಿ ಹೆಣ್ಣಿನ ಬೆನ್ನೇರುತ್ತದೆ. ಪರಸ್ಪರ ಜನನಾಂಗಗಳು ಸಂಧಿಸಿದ ಬಳಿಕ ಹೆಣ್ಣು ನಿಧಾನವಾಗಿ ತನ್ನ ತಲೆಯನ್ನು ಮೇಲಕ್ಕೆ ಎತ್ತುತ್ತದೆ. ತಕ್ಷಣವೇ ಅದರ ಕಣ್ಣಿಗೆ ಕಾಣುವ ಗಂಡಿನ ತಲೆಯನ್ನು ಹಿಡಿದು ಕತ್ತರಿಸಿ ಭಕ್ಷಿಸಲಾರಂಭಿಸುತ್ತದೆ. ಇದಕ್ಕೆ ವಿಶಿಷ್ಟ ಕಾರಣವೂ ಇದೆ.

ಹೆಣ್ಣು ಮತ್ತು ಗಂಡು ಕೂಡಿದರೂ ಗಂಡಿನ ತಲೆಯಲ್ಲಿ ಹಿಂಜರಿಕೆಯ ನರಕೇಂದ್ರವು ವೀರ್ಯ ಬಿಡುಗಡೆಗೆ ಅಡ್ಡಿಪಡಿಸುತ್ತಿರುತ್ತದೆ. ಹೆಣ್ಣು, ಗಂಡಿನ ತಲೆಯನ್ನು ಕಡಿದು ಹಾಕುವುದರಿಂದ ವೀರ್ಯ ಬಿಡುಗಡೆಗೆ ಸಹಕಾರಿಯಾಗುತ್ತದೆ. ಲೈಂಗಿಕ ಕ್ರಿಯೆ ಪೂರ್ಣಗೊಂಡ ಬಳಿಕ ತನ್ನ ಗಂಡಿನ ದೇಹವನ್ನು ಬಾಲದವರೆಗೂ ಹೆಣ್ಣು ತಿನ್ನರಾಂಭಿಸುತ್ತದೆ.‌

ಈ ಬಗೆಯ ‘ಪ್ರಸ್ತದ ಊಟ’ ಹಲವು ಕೀಟಗಳಲ್ಲಿ ಕಂಡುಬರುತ್ತದೆ. ಲೈಂಗಿಕ ಕ್ರಿಯೆ ಮುಗಿದ ತಕ್ಷಣವೇ ಹೆಣ್ಣು ಕೀಟಗಳು ಗಂಡನನ್ನು ಹಿಡಿದು ತಿಂದು ಹಾಕುತ್ತವೆ. ಇಂತಹ ಆಪತ್ತಿನಿಂದ ಪಾರಾಗಲು ಕೆಲವು ಪ್ರಭೇದಕ್ಕೆ ಸೇರಿದ ಗಂಡು ಕೀಟಗಳು ಹಲವು ತಂತ್ರಗಳನ್ನು ಅನುಸರಿಸುತ್ತವೆ. ಆದರೆ, ಗಂಡು ಒಂಟೆಹುಳುವಿಗೆ ಅಂತಹ ಕಲೆ ಮಾತ್ರ ಸಿದ್ಧಿಸಿಲ್ಲ.

ಜೇಡಗಳಲ್ಲೂ ಪತಿ ಹತ್ಯೆ ಉಂಟು

ಜೇಡಗಳು ವಿಶ್ವದಾದ್ಯಂತ ಕಂಡುಬರುತ್ತವೆ. ಇಡೀ ಜೀವಜಗತ್ತನ್ನು ಆವರಿಸಿರುವ ಅವುಗಳ ಪಯಣವೂ ಅಷ್ಟೇ ಕುತೂಹಲಕಾರಿ. ಮರದ ಕೊಂಬೆಗಳು, ಗಿಡಗಳ ಮೇಲೆ ತನ್ನ ನಾಭಿಯಿಂದ ನೂಲನ್ನು ನೂಲುತ್ತಾ ಗಾಳಿಯಲ್ಲಿ ತೇಲುವ ಇವುಗಳ ಬದುಕು ಕೌತುಕವಾದುದು. ಇವುಗಳ ವಿಸ್ಮಯ ಬದುಕನ್ನು ಕನ್ನಡಿಗರಿಗೆ ಮೊದಲಿಗೆ ಪರಿಚಯಿಸಿದ್ದು ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ. 

ಜೇಡಗಳು ಕೀಟಗಳನ್ನು ಭಕ್ಷಿಸುವುದಿಲ್ಲ. ಅವುಗಳ ಬಾಯಲ್ಲಿ ಉತ್ಪತ್ತಿಯಾಗುವ ವಿಷವನ್ನು ಕೀಟಗಳಿಗೆ ಚುಚ್ಚುತ್ತವೆ. ಆಗ ಕೀಟಗಳ ದೇಹದೊಳಗಿನ ಅಂಗಾಂಗಗಳು ಕರಗಿ ದ್ರವರೂಪ ತಾಳುತ್ತವೆ. ಬಳಿಕ ಜೇಡಗಳು ಎಳೆನೀರು ಕುಡಿದಂತೆ ಅವುಗಳನ್ನು ಹೀರಿಬಿಡುತ್ತವೆ. ಹೆಣ್ಣು ಜೇಡಗಳದ್ದು ತುಂಬಾ ಆಕ್ರಮಣಕಾರಿ ಸ್ವಭಾವ. ಲೈಂಗಿಕ ಕ್ರಿಯೆ ನಡೆಸಲು ಹೆಣ್ಣಿನ ಜಾಲದೊಳಗೆ ಬರುವ ಗಂಡು ಜೇಡಗಳು ಕಾಮಕೇಳಿಯ ಬಳಿಕ, ಹೆಣ್ಣಿನಿಂದ ಕಚ್ಚಿಕೊಂಡು ಬಲಿಯಾಗುವುದು ಉಂಟು.

ಚರಿತ್ರೆಯಲ್ಲಿ ನಾವು ಕೆಲವು ಬುಡಕಟ್ಟು ಜನರು ನರಮಾಂಸ ಭಕ್ಷಣೆ ಮಾಡುತ್ತಿದ್ದರೆಂದು ಕೇಳಿದ್ದೇವೆ. ಹಾಲಿವುಡ್‌ನ ಹಲವು ಹಾರರ್‌ ಸಿನಿಮಾಗಳು ನರಮಾಂಸ ಭಕ್ಷಣೆಯ ಕಥೆಗಳನ್ನು ತೆರೆದಿಟ್ಟಿವೆ. ಒಂದು ಜಾತಿಯ ಪ್ರಾಣಿಯು ತನ್ನದೇ ಜಾತಿಯ ಪ್ರಾಣಿಯನ್ನು ತಿನ್ನುವ ಈ ಪ್ರಕ್ರಿಯೆಗೆ ‘ಸ್ವಜಾತಿ ಭಕ್ಷಣೆ’ ಎಂದು ಕರೆಯುತ್ತೇವೆ. ಜೀವಜಾಲದಲ್ಲಿ ಈ ಪದ್ಧತಿಯು ಅನಿವಾರ್ಯ ಸಂಗತಿಯಾಗಿ ನಡೆದುಕೊಂಡು ಬಂದಿದೆ.

ನಮಗೆ ಪ್ರಾಣಿ ಮತ್ತು ಕೀಟಗಳ ಈ ವರ್ತನೆಯು ಹೇಯವಾಗಿ ಕಾಣಬಹುದು. ಆದರೆ, ಆಹಾರದ ಕೊರತೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶವೂ ಇದರ ಹಿಂದೆ ಅಡಗಿದೆ. ಅನಗತ್ಯ ಸ್ಪರ್ಧೆಗೆ ಕಡಿವಾಣ ಹಾಕುವುದು ಮತ್ತು ಅತಿಸಂತಾನ ನಿಯಂತ್ರಣದ ಉದ್ದೇಶವೂ ಈ ನಿಸರ್ಗ ನಿಯಮದಲ್ಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು