ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಬಾನಾಡಿಗಳ ಬವಣೆ- ಬಾರದ ವಲಸೆ ಪಕ್ಷಿಗಳು

Last Updated 29 ಜನವರಿ 2022, 20:26 IST
ಅಕ್ಷರ ಗಾತ್ರ

ಬಾಗಲಕೋಟೆ: ಈ ವರ್ಷ ಚಳಿಗಾಲದಲ್ಲಿ ಇಲ್ಲಿನ ಆಲಮಟ್ಟಿ ಜಲಾಶಯದ ಹಿನ್ನೀರ ಹಾದಿಯಲ್ಲಿ ಫ್ಲೆಮಿಂಗೊ ಸೇರಿ ವಲಸೆ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದಿಲ್ಲ. ರಾಜ್ಯದ ಬಹುತೇಕ ಕಡೆ ಕೆರೆ ಕುಂಟೆಗಳಿಗೆ ಹೊರದೇಶಗಳಿಂದ ಬರುವ ‘ಅತಿಥಿಗಳ’ ಸಂಖ್ಯೆ ಬೇರೆ ಬೇರೆ ಕಾರಣಗಳಿಂದ ಗಣನೀಯವಾಗಿ ಕುಸಿದಿದೆ.

ಗುಜರಾತ್‌ನ ಕಛ್ ಖಾರಿಯಿಂದ (ರಣ್‌ ಆಫ್‌ ಕಛ್) ಸಂತಾನೋತ್ಪತ್ತಿಗಾಗಿಯೇ ಪ್ರತಿವರ್ಷ ಶರದೃತುವಿನಲ್ಲಿ ಫ್ಲೆಮಿಂಗೊ ಪಕ್ಷಿಯು ಹಿನ್ನೀರ ಪ್ರದೇಶಕ್ಕೆ ಬರುತ್ತವೆ. ಜೊತೆಗೆ ಮಧ್ಯ ಏಷ್ಯಾದಲ್ಲಿ ಕಾಣಸಿಗುವ ಪಟ್ಟೆತಲೆ ಹೆಬ್ಬಾತು (ಬಾರ್‌ ಹೆಡೆಡ್‌ ಗೂಸ್), ಆಸ್ಟ್ರೇಲಿಯಾ ಖಂಡದಿಂದ ಬರುವ ಮೂಡಣದ ಚಿಟವ ಹಕ್ಕಿ‌ ಸೇರಿದಂತೆ ಹತ್ತಾರು ಬಗೆಯ ಅತಿಥಿಗಳು ವಲಸೆ ಬರುತ್ತವೆ.

ಹಿನ್ನೀರು ಆವರಿಸಿರುವ ಬೀಳಗಿ ತಾಲ್ಲೂಕು ಹೆರಕಲ್ ಬ್ಯಾರೇಜ್, ಗಲಗಲಿ, ಕದಂಪುರ, ಚಿಕ್ಕಸಂಗಮ, ಹಳೆಯ ಅನಗವಾಡಿಯಿಂದ ಕುಂದರಗಿ ರಸ್ತೆ, ಸಾಲಗುಂದಿ, ನೆಕ್ಕರಗುಂದಿ, ಸಿಂದಗಿ, ಕೊರ್ತಿ, ಕೊಲ್ಹಾರ, ಬಾಗಲ
ಕೋಟೆ ತಾಲ್ಲೂಕಿನ ಗುಡ್ಡದ ಮಲ್ಲಾಪುರ, ಬೆನ್ನೂರು, ರಾಂಪುರ, ಅಚನೂರು, ಸೀತಿಮನಿ ಸುತ್ತಲಿನ ಪ್ರದೇಶ ಚಳಿಗಾಲದಲ್ಲಿ ಪಕ್ಷಿ ಕಾಶಿಯಾಗಿ ಬದಲಾಗುತ್ತವೆ.

‘ಮೂರು ವರ್ಷಗಳಿಂದ ಚಳಿಗಾಲದಲ್ಲಿ ಡ್ಯಾಂ ನೀರು (ಹಿನ್ನೀರು) ಹಿಂದಕ್ಕೆ ಸರಿದಿಲ್ಲ. ಹೀಗಾಗಿ ಫ್ಲೆಮಿಂಗೊ ಮಾತ್ರವಲ್ಲ ವಲಸೆ ಪಕ್ಷಿಗಳ್ಯಾವೂ ಹಿಂದಿನಂತೆ ದೊಡ್ಡ ಸಂಖ್ಯೆಯಲ್ಲಿ ಕಾಣಸಿಗುತ್ತಿಲ್ಲ’ ಎನ್ನುತ್ತಾರೆ ಸ್ವತಃ ಪಕ್ಷಿ ವೀಕ್ಷಕರೂ ಆದ ಬೀಳಗಿ ವಲಯ ಅರಣ್ಯಾಧಿಕಾರಿ ಹಣಮಂತ ಡೋಣಿ.

‘ಕಳೆದ ವರ್ಷ ಡಿಸೆಂಬರ್ 8ಕ್ಕೆ ಫ್ಲೆಮಿಂಗೊ ಹಿನ್ನೀರಿನಲ್ಲಿ ಕಾಣಸಿಕ್ಕಿದ್ದವು. ಈ ವರ್ಷ ಬಹುತೇಕ ಒಂದು ತಿಂಗಳು (ನ.8) ಮೊದಲೇ ಕಾಣಸಿಕ್ಕರೂ ನಂತರ ದೊಡ್ಡ ಪ್ರಮಾಣದಲ್ಲಿ ಅವುಗಳ ಚಲನವಲನ ಕಂಡು ಬಂದಿಲ್ಲ’ ಎನ್ನುತ್ತಾರೆ.

ಆಲಮಟ್ಟಿ ಜಲಾಶಯದಿಂದ ನವೆಂಬರ್ ಮೊದಲ ವಾರ ಕಾಲುವೆಗೆ ನೀರು ಹರಿಸಲಾಯಿತು. ಈ ವೇಳೆ ನೀರಿನ ಸಂಗ್ರಹ 517 ಮೀಟರ್‌ಗೆ ಇಳಿದಿತ್ತು. ಆದರೆ ನವೆಂಬರ್ ಕೊನೆ, ಡಿಸೆಂಬರ್‌ನಲ್ಲಿ ಮಳೆ ಹೆಚ್ಚಾಗಿ ಮತ್ತೆ ಜಲಾಶಯದಲ್ಲಿ 519 ಮೀಟರ್‌ಗೆ ನೀರು ಸಂಗ್ರಹವಾಗಿದೆ. ಇದರಿಂದ ಹೊರಗಿನಿಂದ ಬಂದ ಅತಿಥಿಗಳಿಗೆ ಆಹಾರ ಸಂಗ್ರಹಕ್ಕೆ ಅಡಚಣೆಯಾಯಿತು. ಹಿನ್ನೀರ ಪಾತ್ರದಲ್ಲಿ ನೀರು ಕಡಿಮೆಯಾಗಿ ಕೆಸರು ತುಂಬಿದ್ದರೆ ಪಕ್ಷಿಗಳ ವಾಸಕ್ಕೆ, ಹುಳು–ಹುಪ್ಪಟೆಗಳ ಭೂರಿ ಭೋಜನಕ್ಕೆ ಅನುಕೂಲ. ಅದೇ ನೀರು ತುಂಬಿಕೊಂಡರೆ ಆಹಾರದ ಕೊರತೆ. ಈ ಅಡಚಣೆಯಿಂದ ಅವು ಬೇರೆ ಕಡೆ ಹೋಗಿರಬಹುದು. ವಾತಾವರಣದಲ್ಲಿನ ಬದಲಾವಣೆಯಿಂದ ಕಳೆದ ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿ ಪುನರಾವರ್ತನೆ ಆಗುತ್ತಿದೆ. ವಲಸೆ ಹಕ್ಕಿಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ.

‘2017ರಲ್ಲಿ 10 ಸಾವಿರಕ್ಕೂ ಹೆಚ್ಚು ಫ್ಲೆಮಿಂಗೊ ಇಲ್ಲಿಗೆ ಬಂದಿರುವುದನ್ನು ಅರಣ್ಯ ಇಲಾಖೆಯ ಮೂಲಕ ದಾಖಲಿಸಿದ್ದೇವೆ. ಈಗ 300ರಷ್ಟು ಕಾಣಸಿಗುತ್ತಿವೆ. ಈ ಬಗ್ಗೆ ಹೆಚ್ಚಿನ ಅಧ್ಯಯನ ಅಗತ್ಯವಿದೆ’ ಎನ್ನುವ ಅಭಿಪ್ರಾಯ ಡೋಣಿ ಅವರದು.

ಪಕ್ಷಿ ಸಂರಕ್ಷಣಾ ಪ್ರದೇಶ

ಆಲಮಟ್ಟಿ ಹಿನ್ನೀರಿಗೆ ಎಲ್ಲಿಂದಲೋ ಬರುವ ಈ ದೇವದೂತರ (ವಲಸೆ ಹಕ್ಕಿಗಳು) ರಕ್ಷಣೆಗೆ ಅರಣ್ಯ ಇಲಾಖೆ ಟೊಂಕ ಕಟ್ಟಿ ನಿಂತಿದೆ. ಇಡೀ ಪ್ರದೇಶವನ್ನು ಪಕ್ಷಿ ಸಂರಕ್ಷಣಾ ಪ್ರದೇಶ ಎಂದು ಗುರುತಿಸಿ ಬೇಟೆ ನಿಷೇಧಿಸಿದೆ. ಚಳಿಗಾಲದಲ್ಲಿ ಹಿನ್ನಿರು ಪ್ರದೇಶದಲ್ಲಿ ಪಕ್ಷಿಗಳ ಚಲನವಲನ ಅರಿಯಲು, ಅವುಗಳಿಗೆ ರಕ್ಷಣೆ ನೀಡಲು ಸಿಬ್ಬಂದಿ ನಿಯೋಜಿಸುತ್ತಿದೆ.

ಬೋನಾಳಕ್ಕೂ ಬಾರದ ಹಕ್ಕಿಗಳು

ಯಾದಗಿರಿ: ಸುರಪುರ ತಾಲ್ಲೂಕಿನ ಬೋನಾಳ ಕೆರೆ ಪಕ್ಷಿಧಾಮ ರಾಜ್ಯದಲ್ಲಿಯೇ ದೊಡ್ಡ ಪಕ್ಷಿಧಾಮವಾಗಿದ್ದರೂ ಪ್ರವಾಸಿ ತಾಣವಾಗಿ ರೂಪುಗೊಂಡಿಲ್ಲ. ದೇಶ–ವಿದೇಶಗಳಿಂದ ಸಾವಿರಾರು ಸಂಖ್ಯೆಯ ವಿವಿಧ ಬಗೆಯ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ಬರುತ್ತಿದ್ದವು. ಇತ್ತೀಚಿಗೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗಿದೆ.

ಸುರಪುರ ನಗರದಿಂದ 12 ಕಿ.ಮೀ. ದೂರದಲ್ಲಿರುವ ಬೋನಾಳ ಕೆರೆ ಪಕ್ಷಿಧಾಮಕ್ಕೆ ಅರ್ಜೆಂಟಿನಾ, ರಷ್ಯಾ, ಸೈಬಿರೀಯಾ ಮುಂತಾದ ದೇಶಗಳಿಂದ ಪಕ್ಷಿಗಳು ಬರುತ್ತಿದ್ದವು. ಬೋನಾಳ ಕೆರೆಯು 600ಕ್ಕೂ ಹೆಚ್ಚು ಎಕರೆ ವಿಸ್ತಾರ ಹೊಂದಿದೆ. ಕೃಷ್ಣಾ ನದಿಯಿಂದ ಕೆರೆಗೆ ನೀರು ಹರಿಸಲಾಗುತ್ತಿದೆ.

ದೇಶಿ ಪಕ್ಷಿಗಳಾದ ರಾಜಹಂಸ, ರೆಡ್ ಪಿಕಾಕ್, ಕರಿತಲೆ ಹಕ್ಕಿ, ಕಿರು ಬೆಳ್ಳಕ್ಕಿ, ದೊಡ್ಡ ಬೆಳ್ಳಕ್ಕಿ, ವೈಟ್‌ ನೆಕಡ್ ಸ್ಟೋಕ್, ಬಿಳಿ ಕತ್ತಿನ ಕೊಕ್ಕರೆ, ಕೆಂಪು ಬಣ್ಣದ ಬುಲ್ ಬುಲ್, ವಿದೇಶ ಪಕ್ಷಿಗಳಾದ ಡಾರ್ಟರ್, ಬ್ಲಾಕ್ ಹೆಡೆಡ್ ಐಬಿಸ್, ಲಾರ್ಜ್ ಎರೆಟ್, ಪೋಚಾರ್ಡ್ ಇಂಡಿಯನ್‌ ಶಾಗ್, ಸ್ನೇಕ್ ಬರ್ಡ್, ಇಂಡಿಯನ್‌ ಮೋರ್‌ಹೆನ್, ಪ್ವೆಡ್, ಕಿಂಗ್ ಫಿಷರ್, ಕೊರೂಜಿನ್ ಬರ್ಡ್ ಸೇರಿದಂತೆ ಇನ್ನೂ ಹಲವಾರು ಪ್ರಭೇದದ ಪಕ್ಷಿ ಸಂಕುಲ ಇಲ್ಲಿಗೆ ಆಗಮಿಸುತ್ತಿದ್ದವು. ವರ್ಷದಿಂದ ವರ್ಷಕ್ಕೆ ಪಕ್ಷಿಗಳ ಬರುವಿಕೆ ಕಡಿಮೆಯಾಗುತ್ತಾ ಸಾಗುತ್ತಿದೆ.

‘ಅತಿ ಹೆಚ್ಚು ಮೊಬೈಲ್ ಟವರ್‌ಗಳ ಬಳಕೆ, ಪ್ರವಾಸೋದ್ಯಮ ಇಲಾಖೆ ಮತ್ತು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಪಕ್ಷಿಗಳು ಮೊದಲಿನಂತೆ ಸಂತಾನೋತ್ಪತಿಗಾಗಿ ಬರುತ್ತಿಲ್ಲ. ಅಲ್ಲದೇ ಕೆರೆಯ ಸುತ್ತಮುತ್ತ ಭತ್ತದ ಗದ್ದೆಗಳಿದ್ದು, ಅತಿಯಾದ ರಾಸಾಯನಿಕ ಬಳಕೆಯಿಂದಲೂ ಪಕ್ಷಿಗಳು ಇತ್ತ ಬಾರದಿರಲು ಕಾರಣವಾಗಿದೆ’ ಎಂದು ಗ್ರಾಮಸ್ಥರಾದ ರಾಹುಲ್‌ ಹುಲಿಮನಿ, ಕ್ಷೀರಲಿಂಗಯ್ಯ ಹಿರೇಮಠ, ಬಸವರಾಜ ಕಟ್ಟಿಮನಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT