ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಅಮೆರಿಕ ತೋಳ ‘ಕಲಪಿಯೊ’

Last Updated 5 ಫೆಬ್ರುವರಿ 2020, 15:05 IST
ಅಕ್ಷರ ಗಾತ್ರ

ಚುರುಕಾಗಿ ಬೇಟೆಯಾಡುವುದಕ್ಕೆ ಹೆಸರುವಾಸಿಯಾದ ಪ್ರಾಣಿಗಳಲ್ಲಿ ತೋಳವೂ ಒಂದು. ಗಾತ್ರ ಮತ್ತು ಆಕಾರಕ್ಕೆ ತಕ್ಕಂತೆ ವಿಶ್ವದಾದ್ಯಂತ ಹಲವು ತೋಳ ಪ್ರಭೇದಗಳನ್ನು ಗುರುತಿಸಲಾಗಿದೆ. ದಕ್ಷಿಣ ಅಮೆರಿಕ ಖಂಡದ ಎರಡನೇ ಅತಿದೊಡ್ಡ ತೋಳ ಪ್ರಭೇದವಾದ ಕಲಪಿಯೊ (Culpeo) ಬಗ್ಗೆ ಇಂದಿನ ಪ್ರಾಣಿ ಪ್ರಪಂಚದಲ್ಲಿ ತಿಳಿಯೋಣ.

ಹೇಗಿರುತ್ತದೆ?

ಕಂದು, ಕಪ್ಪು ಹಾಗೂ ಬಿಳಿ ಬಣ್ಣದ ಕೂದಲು ದಟ್ಟವಾಗಿ ಬೆಳೆದಿರುವ ಮಂದವಾದ ತುಪ್ಪಳ ದೇಹವನ್ನು ಆವರಿಸಿರುತ್ತದೆ. ಬೆನ್ನು, ಸೊಂಟ, ಕತ್ತು, ಹಾಗೂ ಭುಜಗಳ ಭಾಗ ಕಪ್ಪು, ಬಿಳಿ ಮಿಶ್ರಿತ ಬಣ್ಣದಲ್ಲಿದ್ದರೆ, ದೃಢವಾದ ಕಾಲುಗಳು, ಕುತ್ತಿಗೆ, ತಲೆ, ಕಿವಿಗಳು ಕಂದು ಬಣ್ಣದಲ್ಲಿರುತ್ತವೆ. ಬಾಲವೂ ಕಂದು, ಕಪ್ಪು, ಬಿಳಿ ಮಿಶ್ರಿತ ಬಣ್ಣಗಳಲ್ಲಿದ್ದು, ದಟ್ಟವಾದ ಕೂದಲಿನಿಂದ ಕೂಡಿರುತ್ತದೆ. ಎದೆ ಮತ್ತು ಉದರ ಭಾಗಗಳು ಬಿಳಿ ಬಣ್ಣದಲ್ಲಿರುತ್ತವೆ. ಮೂತಿ ನೀಳವಾಗಿದ್ದರೆ, ತಲೆ ದೊಡ್ಡದಾಗಿರುತ್ತದೆ. ಕಣ್ಣುಗಳು ದೊಡ್ಡದಾಗಿದ್ದು, ಕಂದು ಹಾಗೂ ಕಪ್ಪು ಮಿಶ್ರಿತ ಬಣ್ಣಗಳಲ್ಲಿರುತ್ತವೆ. ಎಲೆಯಾಕಾರದ ಮಧ್ಯಮಗಾತ್ರದ ಕಿವಿಗಳು ಸದಾ ಸೆಟೆದುಕೊಂಡಿರುತ್ತವೆ.

ವಾಸಸ್ಥಾನ

ದಕ್ಷಿಣ ಅಮೆರಿಕ ಖಂಡದ ಅರ್ಜೆಂಟೀನಾ, ಚಿಲಿ, ಬೊಲಿವಿಯಾ, ಕೊಲಂಬಿಯಾ, ಈಕ್ವೆಡಾರ್, ಪೆರು ರಾಷ್ಟ್ರಗಳಲ್ಲಿ ಇದರ ಸಂತತಿ ಇದೆ. ಆ್ಯಂಡಿಸ್ ಪರ್ವತಶ್ರೇಣಿಯ ದಕ್ಷಿಣ ಭಾಗದಲ್ಲಿ ಇದು ಹೆಚ್ಚಾಗಿ ವಾಸಿಸುತ್ತಿದೆ. ದಟ್ಟವಾಗಿ ಗಿಡಮರಗಳು ಬೆಳೆದಿರುವ ಕಾಡುಪ್ರದೇಶ, ಪರ್ವತ ಪ್ರದೇಶ, ಕಣಿವೆ ಪ್ರದೇಶ, ಅರೆಮರುಭೂಮಿ ಹೀಗೆ ಹಲವು ಪ್ರದೇಶಗಳಿಗೆ ಇದು ಹೊಂದಿಕೊಳ್ಳುತ್ತದೆ.

ಜೀವನಕ್ರಮ ಮತ್ತು ವರ್ತನೆ

ಇದು ಜೀವಿತಾವಧಿಯ ಬಹುತೇಕ ಅವಧಿಯನ್ನು ಒಂಟಿಯಾಗಿಯೇ ಕಳೆಯುತ್ತದೆ. ಪ್ರತಿಯೊಂದು ಕಲಪಿಯೊ ನಿರ್ದಿಷ್ಟ ಗಡಿ ಗುರುತಿಸಿಕೊಂಡು ವಾಸಿಸುತ್ತಿರುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ ಮಾತ್ರ ಸಂಗಾತಿಯೊಂದಿಗೆ ಕಾಣಿಸಿಕೊಳ್ಳುತ್ತದೆ. ಈ ಅವಧಿಯಲ್ಲಿ ಮರಿಗಳೂ ಜೊತೆಗಿರುತ್ತವೆ. ವಾಸಿಸುತ್ತಿರುವ ಪ್ರದೇಶಕ್ಕೆ ಅನುಗುಣವಾಗಿ ಇದು ನಿರ್ದಿಷ್ಟ ಅವಧಿಗಳಲ್ಲಿ ಮಾತ್ರ ಚಟುವಟಿಕೆಯಿಂದ ಇರುತ್ತದೆ. ಕೆಲವು ಪ್ರದೇಶಗಳಲ್ಲಿ ಹಗಲಿನಲ್ಲಿ ಆಹಾರ ಅರಸಿ ಸುತ್ತಿದರೆ, ಕೆಲವು ಪ್ರದೇಶಗಳಲ್ಲಿ ರಾತ್ರಿಯಲ್ಲಿ ಚುರುಕಾಗಿರುತ್ತದೆ. ದೇಹದ ಭಂಗಿಗಳು, ಕಿವಿಗಳು, ಬಾಲದ ಚಲನೆ ಹಾಗೂ ವಿವಿಧ ಬಗೆಯ ಸದ್ದುಗಳ ಮೂಲಕ ಇದು ಸಂವಹನ ನಡೆಸುತ್ತದೆ. ದೇಹಕ್ಕೆ ಬೇಕಾಗುವ ಆಹಾರ ದೊರೆತರೆ ಸೋಮಾರಿಯಾಗಿ ಕಾಲ ಕಳೆಯುತ್ತದೆ.

ಆಹಾರ

ಇದು ಸರ್ವಭಕ್ಷಕ ತೋಳ. ಬಹುತೇಕ ಮಾಂಸಾಹಾರಿಯೂ ಹೌದು. ದಂಶಕಗಳು, ಮೊಲಗಳು, ಹಕ್ಕಿಗಳು, ಹಲ್ಲಿಗಳು, ಸರೀಸೃಪಗಳು, ಮೊಟ್ಟೆಗಳ.. ಹೀಗೆ ಸಂದರ್ಭಕ್ಕೆ ಅನುಗುಣವಾಗಿ ವಿವಿಧ ಬಗೆಯ ಪ್ರಾಣಿಗಳ ಮಾಂಸವನ್ನು ಇದು ಭಕ್ಷಿಸುತ್ತದೆ. ಅಪರೂಪಕ್ಕೆ ಕೆಲವು ಬಗೆಯ ಹಣ್ಣುಗಳು ಹಾಗೂ ಎಲೆಗಳನ್ನೂ ತಿನ್ನುತ್ತದೆ.

ಸಂತಾನೋತ್ಪತ್ತಿ

ಆಗಸ್ಟ್‌ನಿಂದ ಅಕ್ಟೋಬರ್‌ ವರೆಗಿನ ಅವಧಿಯಲ್ಲಿ ಇದು ಸಂತಾನೋತ್ಪತ್ತಿ ನಡೆಸುತ್ತದೆ. ತನ್ನ ಗಡಿ ವ್ಯಾಪ್ತಿಯಲ್ಲಿನ ಎಲ್ಲ ಹೆಣ್ಣುತೋಳಗಳ ಮೇಲೆ ಗಂಡುತೋಳ ಜೊತೆಯಾಗುತ್ತದೆ. ಹೆಣ್ಣುತೋಳ ಸುಮಾರು 60 ದಿನ ಗರ್ಭಧರಿಸಿ 2ರಿಂದ 5 ಮರಿಗಳಿಗೆ ಜನ್ಮ ನೀಡುತ್ತದೆ. ಇದರ ಮರಿಯನ್ನು ಪಪ್ (Pup) ಎನ್ನುತ್ತಾರೆ.

ಮರಿಗೆ ಜನಿಸಿದಾಗ ಕೂದಲು ಬೆಳೆದಿರುವುದಿಲ್ಲ. ಕಣ್ಣುಗಳನ್ನೂ ಬಿಟ್ಟಿರುವುದಿಲ್ಲ. ಸುಮಾರು 170 ಗ್ರಾಂ ತೂಕವಿರುತ್ತವೆ. ಸುಮಾರು 2 ತಿಂಗಳ ವರೆಗೆ ಸಂಪೂರ್ಣವಾಗಿ ತಾಯಿತೋಳದ ಆರೈಕೆಯಲ್ಲಿ ಬೆಳೆಯುತ್ತದೆ. 7 ತಿಂಗಳು ತುಂಬುವ ಹೊತ್ತಿಗೆ ದಷ್ಟಪುಷ್ಟವಾಗಿ ದೊಡ್ಡಗಾತ್ರದ ತೋಳವಾಗುತ್ತದೆ. 1 ವರ್ಷದ ಹೊತ್ತಿಗೆ ವಯಸ್ಕ ಹಂತ ತಲುಪುತ್ತದೆ.

ಸ್ವಾರಸ್ಯಕರ ಸಂಗತಿಗಳು

* ವಿವಿಧ ಬಗೆಯ ಜೀವಿಗಳನ್ನು ಇದು ಭಕ್ಷಿಸುತ್ತಿರುವುದರಿಂದ ಕಾಡಿನಲ್ಲಿರುವ ಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಕಾಪಾಡುವುದಕ್ಕೆ ನೆರವಾಗುತ್ತಿದೆ.

* ವಿವಿಧ ಬಗೆಯ ಹಣ್ಣುಗಳನ್ನು ತಿಂದು ಬೀಜಗಳನ್ನು ಕಾಡಿನಲ್ಲಿ ಉದುರಿಸಿ ಕಾಡು ಬೆಳೆಯುವುದಕ್ಕೂ ನೆರವಾಗುತ್ತಿದೆ.

* ದೈತ್ಯಗಾತ್ರದ ಪರಭಕ್ಷಕ ಪ್ರಾಣಿಗಳು ತಿಂದು ಬಿಟ್ಟ ಪ್ರಾಣಿಗಳ ಮಾಂಸವನ್ನೂ ಭಕ್ಷಿಸುವುದರ ಜತೆಗೆ ಪರಿಸರ ಸಂರಕ್ಷಣೆಗೂ ಕೊಡುಗೆ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT