ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!

Last Updated 10 ಜನವರಿ 2020, 19:30 IST
ಅಕ್ಷರ ಗಾತ್ರ
ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
ADVERTISEMENT
""
ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
""
ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
""
ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
""

ಸಾಮಾನ್ಯವಾಗಿ ಡಿಸೆಂಬರ್ 16ರಿಂದ ಶೂನ್ಯಮಾಸ ಪ್ರಾರಂಭದ ಸಮಯದಲ್ಲಿ ಇಬ್ಬನಿ ವಾತಾವರಣ ಹೆಚ್ಚಿರುವುದರಿಂದ ಒಂದಷ್ಟು ದಿನ ಬೆಳಕಿನ ಕೋಲುಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಡಿಸೆಂಬರ್‌ನಲ್ಲಿ ಆಕಾಶದಲ್ಲಿ ಮಳೆಗಾಲದಂತೆ ಮೋಡಗಳಿದ್ದವು. ಇಬ್ಬನಿಗಳು ಸೃಷ್ಟಿಯಾಗುವುದಕ್ಕೆ ಅವಕಾಶವೇ ಇಲ್ಲದಂತಾಗಿತ್ತು. ಜನವರಿ ಬಂದೇ ಬಿಟ್ಟಿತು. ಈತನಕ ಚಳಿಗಾಲದ ಚಳಿ ಅನುಭವಕ್ಕೇ ಬರಲಿಲ್ಲ. ಇಬ್ಬನಿಗಳಿಲ್ಲವೆಂದ ಮೇಲೆ ಬೆಳಕಿನ ಕೋಲುಗಳು ಹೇಗೆ ಸೃಷ್ಟಿಯಾಗಬೇಕು? ಈ ಚಳಿಗಾಲದಲ್ಲಿ ಬೆಳಕಿನ ಕೋಲುಗಳಿಲ್ಲದ ಬೆಂಗಳೂರನ್ನು ನೆನಪಿಸಿಕೊಳ್ಳುವುದು ಬೇಸರ ಮೂಡಿಸಿತು ಎನ್ನುತ್ತಾರೆ ಫೊಟೊಗ್ರಾಫರ್‌ ಶಿವು ಕೆ.

ಈ ಚಳಿಗಾಲದಲ್ಲಿ ಬೆಂಗಳೂರಿನಲ್ಲಿ ಚಳಿಯಿಲ್ಲ. ಮುಂಜಾನೆ ನಾಲ್ಕುಗಂಟೆ ಸಮಯದಲ್ಲೂ ಕೊರೆಯುವ ತಂಡಿ ಚಳಿಯಿಲ್ಲ. ಸ್ವೆಟರ್, ಜರ್ಕಿನ್‌ ಹಾಕಿಕೊಂಡು ಹೋಗುವ ಮಾತೇ ಇಲ್ಲ. ಇದು ಚಳಿಗಾಲವೇ ಅನ್ನಿಸುವಷ್ಟರ ಮಟ್ಟಿಗೆ ಬದಲಾಗಿ ಹೋಗಿದೆ ಈ ಕಾಲ.

ವರ್ಷವಿಡೀ ವಾತಾವರಣದ ಬದಲಾಣೆಯನ್ನು ಫೋಟೊಗ್ರಫಿ ಮನಸ್ಸು ಗಮನಿಸುತ್ತಿರುತ್ತದೆ. ಯಾವುದೇ ಬಗೆಯ ಫೋಟೊಗ್ರಫಿಗೆ ತಕ್ಕಕಾಲವಲ್ಲದ ಬೇಸಿಗೆ, ತುಸು ಹೊಂದಿಕೊಳ್ಳುವ ಮಳೆಗಾಲದ ಮೋಡದ ವಾತಾವರಣಗಳನ್ನು ಗಮನಿಸುತ್ತಾ, ಯಾವಾಗ ಇವೆಲ್ಲ ಮುಗಿದು ಅದ್ಬುತ ನೆರಳು-ಬೆಳಕಿನ ಹಿತವಾದ ತಂಪು ವಾತಾವರಣ ಬರುತ್ತದೋ ಎಂದು ಕಾಯುತ್ತಿರುತ್ತೇನೆ.

ಚಳಿಗಾಲ ನನಗಿಷ್ಟವಾಗಲು ಮೊದಲ ಕಾರಣ ಬೆಳಿಗ್ಗೆ ಮತ್ತು ಸಂಜೆಯ ನನ್ನ ಪಿಕ್ಟೋರಿಯಲ್ ಫೋಟೊಗ್ರಫಿಗೆ ಬೇಕಾದ ಬೆಳಕು. ಎರಡನೆಯದು, ದಿನವಿಡಿ ಹಿತವಾದ ಚುಮುಚುಮು ಚಳಿಯಲ್ಲಿ ತಕ್ಕಮಟ್ಟಿಗೆ ಮೈ ಬೆಚ್ಚಗಿಡುವ ಹಿತವಾದ ಬಿಸಿಲು ಮತ್ತು ಕೊರೆಯುವ ಚಳಿಯಲ್ಲಿ ಬೆಂಕಿ ಹಾಕಿಕೊಂಡು ಅದನ್ನು ಕಾಯಿಸುವುದರಲ್ಲಿನ ಸುಖ.

ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
ಜೆಪಿ ಪಾರ್ಕ್‌

ಮಳೆಗಾಲ ಶುರುವಾದರೆ ಮುಗಿಯಿತು. ದಿನದ 24ಗಂಟೆಗಳೂ ಮೋಡ ಕವಿದ ವಾತಾವರಣ. ಮುಂಗಾರಿನ ಜೂನ್, ಜುಲೈ, ಆಗಸ್ಟ್ ಮುಗಿದು ಸೆಪ್ಟೆಂಬರ್‌ ಬರುವ ಹೊತ್ತಿಗೆ ಮೋಡ ಕವಿದ ವಾತಾವರಣ ಬದಲಾಗಿ ಹತ್ತಿಯನ್ನು ಅಲ್ಲಲ್ಲಿ ಸೇರಿಸಿಟ್ಟಂತೆ ಮೋಡಗಳು ಕಾಣಿಸುತ್ತವೆ. ಹಿಂಗಾರು ಪ್ರಾರಂಭವಾಗುವ ಆಕ್ಟೋಬರ್, ನವೆಂಬರ್ ಹೊತ್ತಿಗೆ ಮತ್ತಷ್ಟು ಮೋಡಗಳು ಕರಗಿ ಆಕಾಶದಲ್ಲಿ ಶುದ್ಧ ಬಿಳಿ ಬಣ್ಣದ ಹತ್ತಿಯನ್ನು ಅಲ್ಲಲ್ಲಿ ಆಕಾಶದಲ್ಲಿ ಎಸೆದಂತೆ ತೆಳುವಾಗಿ ಮೋಡಗಳು ಕಾಣಿಸುತ್ತವೆ.

ನವೆಂಬರ್ ಮುಗಿದು ಡಿಸೆಂಬರ್ ಬಂತೆಂದರೆ ಚಳಿಗಾಲ ಶುರು. ನಿಧಾನವಾಗಿ ಬೆಣ್ಣೆ ಮೋಡಗಳೆಲ್ಲಾ ಮಾಯವಾಗುತ್ತ ಆಕಾಶ ತಿಳಿನೀಲಿಯಾಗುವುದನ್ನು ನೋಡಲು ಮನಸ್ಸು ಕಾತರಿಸುತ್ತದೆ. ಮುಂಜಾನೆ ಚಳಿಯಿದ್ದರೂ ಬೆಳಿಗ್ಗೆ ಉದಯಿಸುವ ಸೂರ್ಯನ ಬೆಳಕಿನಲ್ಲಿ ಫೋಟೊಗ್ರಫಿ ಮಾಡಬಹುದು.

ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
ಕಬ್ಬನ್‌ ಪಾರ್ಕ್‌

ಬೆಳಿಗ್ಗೆ ಮತ್ತು ಸಂಜೆ ಹೊತ್ತು ಹಿತವಾದ ಚುಮುಚುಮು ಸೂರ್ಯನ ಸಹಜ ಬೆಳಕಿನಲ್ಲಿ ಪಿಕ್ಟೋರಿಯಲ್ ಫೋಟೊಗ್ರಫಿಯನ್ನು ಮಾಡುವುದು ನನ್ನ ಪ್ರತಿ ಚಳಿಗಾಲದ ಕನಸು. ಮುಖ್ಯವಾಗಿ ಚಳಿಗಾಲದ ಮುಂಜಾನೆಗಳನ್ನು ನಾನು ಹೆಚ್ಚು ಗಮನಿಸುತ್ತೇನೆ.

ಕೆಲವೊಮ್ಮೆ ನಸುಕಿನ ನಾಲ್ಕು ಗಂಟೆಗೆ ಎದ್ದು ಹೊರಬಂದು ಮೊದಲು ಆಕಾಶವನ್ನು ನೋಡುತ್ತೇನೆ. ಚೂರು ಮೋಡವಿಲ್ಲದೇ ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿದರೆ ಮನಸ್ಸು ಉಲ್ಲಾಸಗೊಳ್ಳುತ್ತದೆ. ಯಾವತ್ತು ಹೀಗೆ ಮೋಡವಿಲ್ಲದ ತಿಳಿನೀಲಿ ಪರಿಶುದ್ಧ ಆಕಾಶ ಕಾಣಿಸುತ್ತದೋ ಅವತ್ತು ರಾತ್ರಿ ಬೆಂಗಳೂರಿನಲ್ಲಿ ಹಿಮವಾತಾವರಣ ಸೃಷ್ಟಿಯಾಗುತ್ತದೆ. ಅದಕ್ಕೆ ಸಾಕ್ಷಿಯಾಗಿ ರಸ್ತೆಗಳಲ್ಲಿ ನಿಲ್ಲಿಸಿರುವ ಕಾರು, ಸ್ಕೂಟರುಗಳ ಮೇಲೆ ಇಬ್ಬನಿಗಳು ಬಿದ್ದಿರುತ್ತವೆ. ಇಂಥ ವಾತಾವರಣದಲ್ಲಿ ಸೃಷ್ಟಿಯಾದ ಇಬ್ಬನಿಗಳಿಂದಾಗಿ ಮುಂಜಾನೆ ನಾಲ್ಕು ಗಂಟೆಗೆ ಕೊರೆಯುವ ಚಳಿಯ ವಾತಾವರಣ ಇರುತ್ತದೆ.

ನಿಧಾನವಾಗಿ ಸೂರ್ಯೋದಯವಾಗಿ ಕಿರಣಗಳು ಇಬ್ಬನಿಗಳ ಮೇಲೆ ಬೀಳುತ್ತಿದ್ದಂತೆ ಸೃಷ್ಟಿಯಾಗುತ್ತವೆ ನೋಡಿ ‘ಬೆಳಕಿನ ಕೋಲುಗಳು’!

ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
ಬಿಎಎಲ್‌ ಪಾರ್ಕ್‌

ಚಿಕ್ಕವಯಸ್ಸಿನಲ್ಲಿ ಚಳಿಗಾಲದಲ್ಲಿ ಮುಂಜಾನೆ ಚಳಿ ಕಾಯಿಸಿಕೊಳ್ಳಲು ಕೂರುತ್ತಿದ್ದೆವು. ನಡುವೆ ಹೀಗೆ ಸೃಷ್ಟಿಯಾದ ಬೆಳಕಿನ ಕೋಲುಗಳನ್ನು ಹಿಡಿಯಲು ಅದರತ್ತ ಓಡುತ್ತಿದ್ದೆವು. ನನ್ನ ಅನುಭವದ ಪ್ರಕಾರ ಸಾಮಾನ್ಯವಾಗಿ ಡಿಸೆಂಬರ್ ಪ್ರಾರಂಭದಲ್ಲಿ ಕೆಲವೊಂದು ಇಂಥ ಬೆಳಕಿನ ಕೋಲುಗಳು ಸೃಷ್ಟಿಯಾದರೂ ಡಿಸೆಂಬರ್ 16ರಿಂದ ಶೂನ್ಯಮಾಸ ಪ್ರಾರಂಭವಾಗುತ್ತದಲ್ಲ, ಆ ಸಮಯದಲ್ಲಿ ಇಬ್ಬನಿ ವಾತಾವರಣ ಹೆಚ್ಚಿರುವುದರಿಂದ ಖಚಿತವಾಗಿ ಒಂದಷ್ಟು ದಿನ ಈ ಬೆಳಕಿನ ಕೋಲುಗಳು ಸೃಷ್ಟಿಯಾಗುತ್ತವೆ.

ಆದರೆ ಈ ಡಿಸೆಂಬರ್‌ನಲ್ಲಿ ಆಕಾಶದಲ್ಲಿ ಮಳೆಗಾಲದಂತೆ ಮೋಡಗಳಿದ್ದವು. ಯಾವುದೇ ಚಂಡಮಾರುತ ಇಲ್ಲದಿದ್ದರೂ ಈ ರೀತಿ ಆಕಾಶದಲ್ಲಿ ಮೋಡಗಳು ಇರುವುದರಿಂದ ಇಬ್ಬನಿಗಳು ಸೃಷ್ಟಿಯಾಗುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ. ಚಳಿಗಾಲದ ಚಳಿ ಆಗುತ್ತಲೇ ಇಲ್ಲ. ಚಳಿ ಇಲ್ಲ, ಇಬ್ಬನಿಗಳಿಲ್ಲವೆಂದ ಮೇಲೆ ಬೆಳಕಿನ ಕೋಲುಗಳು ಹೇಗೆ ಸೃಷ್ಟಿಯಾಗಬೇಕು? ಹೀಗೆ ಚಳಿಗಾಲದಲ್ಲೂ ಮಳೆಗಾಲದ ವಾತಾವರಣದ ಮೋಡಗಳಿರುವುದಕ್ಕೆ ಕಾರಣವೇನು ಅಂತ ಹವಾಮಾನ ಇಲಾಖೆ ತಿಳಿಸಬೇಕು. ಈ ಚಳಿಗಾಲದಲ್ಲಿ ಬೆಳಕಿನ ಕೋಲುಗಳಿಲ್ಲದ ಬೆಂಗಳೂರನ್ನು ನೆನಪಿಸಿಕೊಳ್ಳುವುದು ಬೇಸರವೆನಿಸುತ್ತದೆ.

-ಚಿತ್ರ /ಲೇಖನ: ಶಿವು ಕೆ.

***

ಬೆಳಕಿನ ಕೋಲುಗಳಿಲ್ಲದ ಬೆಂಗಳೂರು ಚಳಿಗಾಲ!
ಎಸ್‌. ವಿಷ್ಣುಕುಮಾರ್‌ ಅವರ ಛಾಯಾಚಿತ್ರ

‘ಫ್ರೀಜಿಂಗ್‌ ಎ ಮೊಮೆಂಟ್’ ಛಾಯಾಚಿತ್ರಗಳ ಪ್ರದರ್ಶನ

ಆರ್ಟ್‌ ಹೌಸ್‌ ವತಿಯಿಂದ ‘ಫ್ರೀಜಿಂಗ್‌ ಎ ಮೊಮೆಂಟ್’ ಛಾಯಾಚಿತ್ರ ಪ್ರದರ್ಶನ ಶನಿವಾರ (ಜ 11) ದಿಂದ ಆರಂಭಗೊಳ್ಳಲಿದೆ. ದಕ್ಷಿಣ ಭಾರತದ ಎಂಟು ಮಂದಿ ಛಾಯಾಚಿತ್ರಗಾರರ ಛಾಯಾಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಛಾಯಾಚಿತ್ರಗಾರರಾದ ಅನು ಜಾನ್ ಡೇವಿಡ್, ಗಿರಿಧರ್ ಖಾಸನಿಸ್‌, ಜಯಕುಮಾರ್ ಸಿ, ಕೌಸ್ತುಭಾ ಎಲ್.ಡಿ, ನರಸಿಂಹ ಪ್ರಕಾಶ್, ಸಂತೋಷ್ ಪೈ, ಉಮೇಶ್ ಯುವಿ ಮತ್ತು ವಿಷ್ಣುಕುಮಾರ್ ಎಸ್ ಅವರ ಅತ್ಯುತ್ತಮ ಕೃತಿಗಳು ಪ್ರದರ್ಶನಗೊಳ್ಳಲಿವೆ.

ದಕ್ಷಿಣ ಭಾರತದ ಯುವ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲು ಉತ್ತೇಜಿಸುವ ಆರ್ಟ್‌ಹೌಸ್‌, ಹೊಸ ಕಲಾವಿದರಿಗೂ ಉತ್ತಮ ವೇದಿಕೆ ಕಲ್ಪಿಸುತ್ತಿದೆ. ಸಾಂಪ್ರದಾಯಿಕ ಹಾಗೂ ಸಮಕಾಲೀನ ಕಲಾಕೃತಿಗಳ ಅನಾವರಣಕ್ಕೆ ಉತ್ತಮ ಸ್ಥಳಾವಕಾಶ ಮಾಡಿಕೊಡುತ್ತಿದೆ.

ಎಚ್‌.ವಿ ಪ್ರವೀಣ್‌ಕುಮಾರ್‌, ಎಚ್‌. ಸತೀಶ್‌, ಕೆ.ಎಸ್‌. ಶ್ರೀನಿವಾಸ್‌ ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಸ್ಥಳ: ಆರ್ಟ್‌ ಹೌಸ್, ಅರಮನೆ ರಸ್ತೆ, ವಸಂತನಗರ, ಸಂಜೆ 6.30.

ಪ್ರದರ್ಶನ: ಜ.12ರಿಂದ 18ರವರೆಗೆ ಬೆಳಿಗ್ಗೆ 10.30ರಿಂದ ಸಂಜೆ 6.30.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT