ಸೋಮವಾರ, ಮಾರ್ಚ್ 8, 2021
31 °C

ರೋಮ್ಯಾಂಟಿಕ್ ಪ್ರವಾಸಿ ತಾಣಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಸ್ಲರ್, ಕೆನಡಾ
ಇದು ಸದಾ ಹಿಮ ರಾಶಿಯಿಂದ ಕೂಡಿರುವ ಸ್ಥಳ. ಪ್ರೇಮಿಗಳ ಪಾಲಿನ ಸ್ವರ್ಗ. ನೊರೆ ಹಾಲಿನಂತೆ ಸುರಿಯುವ ಮಂಜು ಮನಕ್ಕೆ ಮುದ ನೀಡುವ ಜೊತೆಗೆ ಅದ್ಭುತ ಅನುಭವ ಕೊಡುತ್ತದೆ. ಇದು ಹಿಮ ತುಂಬಿದ ಬೆಟ್ಟಗಳು ಹಾಗೂ ದಟ್ಟ ಹಸಿರಿನ ಕಾನನದ ತಾಣವೂ ಹೌದು. ಇಲ್ಲಿ ಪ್ರೇಮಿಗಳು ಜತೆಯಾಗಿ ಮಂಜಿನಲ್ಲಿ ಜತೆಯಾಗಿ ಸ್ಕೀಯಿಂಗ್ ಮಾಡುತ್ತಾರೆ. ಹಾಗೆ ಸ್ಕೀಯಿಂಗ್ ಮಾಡುವಾಗ ಗಾಳಿಯಲ್ಲೇ ಹಾರಿದಂತಹ ಅನುಭವವನ್ನು ವರ್ಣಿಸಲು ಪದಗಳಿಲ್ಲ.

ತಾಂಜೇನಿಯಾ ಸಫಾರಿ
ತಾಂಜೇನಿಯಾ ಸಮೀಪದ ಕಿಲಿಮಂಜಾರೋ, ಪ್ರೇಮಿಗಳ ನೆಚ್ಚಿನ ತಾಣ. ವನ್ಯಜೀವಿ ಪ್ರಿಯ ಪ್ರೇಮಿಗಳಿಗೆ ಇದು ಸೂಕ್ತ ತಾಣ. ಅಂಥ ಪ್ರೇಮಿಗಳು ತಾಂಜೇನಿಯಾ ಸಫಾರಿಯಲ್ಲಿ ಕಾಡು ಸುತ್ತಾಡಬಹುದು. ಅಲ್ಲಿನ ವನ್ಯಜೀವಿಧಾಮಗಳಲ್ಲಿ ನೀವು ಹಿಂದೆಂದೂ ಕಾಣದ ಪ್ರಾಣಿಗಳನ್ನು ನೋಡಿ ಕಣ್ತುಂಬಿಕೊಳ್ಳಬಹುದು. ಅಲ್ಲಿರುವ ಪ್ರಾಣಿಗಳು ಹಾಗೂ ಕಾಡುಜನರ ನಡುವೆ ಬಾಂಧವ್ಯವನ್ನು ನೋಡಿಯೇ ಸವಿಯಬೇಕು.

ಸ್ಯಾಂಟೊರಿನಿ, ಗ್ರೀಸ್‌
ಇನ್ಸ್‌ಸ್ಟಾಗ್ರಾಂ ಅಥವಾ ಫೇಸ್‌ಬುಕ್ ಖಾತೆ ಹೊಂದಿರುವವರಿಗೆ ಸ್ಯಾಂಟೊರಿನಿ ನಗರ ಪರಿಚಯವಿರುತ್ತದೆ. ‌ ಇತ್ತೀಚಿನ ದಿನಗಳಲ್ಲಿ ಈ ನಗರ ಪ್ರೇಮಿಗಳ ಪಾಲಿನ ನೆಚ್ಚಿನ ತಾಣವಾಗಿದೆ. ಇಲ್ಲಿ ಸಮುದ್ರದ ಮಧ್ಯದಲ್ಲಿ ಕಟ್ಟಡಗಳಿವೆ. ನೀಲಿ ಹಾಗೂ ಬಿಳಿ ಬಣ್ಣ ಲೇಪಿತ ಕಟ್ಟಡಗಳು ಸ್ಥಳದ ಸೌಂದರ್ಯವನ್ನು ಹೆಚ್ಚಿಸಿವೆ. ವಿಸ್ಮಯದ ಸೂರ್ಯಾಸ್ತ ಹಾಗೂ ಅದ್ಭುತ ಕಡಲತೀರಗಳ ಮಿಶ್ರಣ ಈ ನಗರದ ವಿಶೇಷ.

ವಿಟ್ಸಂಡೆ ಐಲೆಂಡ್‌, ಆಸ್ಟ್ರೇಲಿಯಾ
ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್‌ ಸಮೀಪದಲ್ಲಿ ಈ ದ್ವೀಪ. ಇದು ಒಟ್ಟು 74 ಐಲೆಂಡ್‌ಗಳ ಸಂಗಮ. ಇಲ್ಲಿನ ದ್ವೀಪಗಳು ಬಿಳಿಮರಳಿನ ದಡವನ್ನು ಹೊಂದಿವೆ. ಸ್ಫಟಿಕದಂತೆ ಹೊಳೆಯುವ ನೀರು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದೆ. ನಾಲ್ಕು ಮೈಲಿಗಳಷ್ಟು ದೂರದ ಕಡಲತೀರದಲ್ಲಿ ರೋಮ್ಯಾಂಟಿಕ್ ಕ್ಷಣಗಳನ್ನು ಕಳೆಯಬಹುದು.

ಕನ್ನೂರ್
ತಮಿಳುನಾಡಿನಲ್ಲಿರುವ ಬೆಟ್ಟಗಳ ಸಾಲಿನ ತಾಣ. ಇಲ್ಲಿನ ಟೀ ಎಸ್ಟೇಟ್ ಪ್ರವಾಸಿಗರ ಪ್ರಮುಖ ಆಕರ್ಷಣೆ. ಅತ್ಯುತ್ತಮವಾದ ವಸತಿ ಸೌಕರ್ಯಗಳಿದೆ. ಕನ್ನೂರು ಕೇಂದ್ರವಾಗಿಟ್ಟುಕೊಂಡು ಸುತ್ತಲೂ ಅನೇಕ ಪ್ರವಾಸಿ ತಾಣಗಳನ್ನು ನೋಡಿಬರಬಹುದು.

ಬಾಲಿ, ಇಂಡೋನೇಷ್ಯಾ
ಇದು ದೇವರುಗಳ ದ್ವೀಪ. ಪ್ರಪಂಚದಲ್ಲೇ ಅತಿ ಸುಂದರವಾದ ದ್ವೀಪಗಳಿರುವ ತಾಣ. ಈ ಪುಟ್ಟ ದೇಶದಲ್ಲಿ ಸೊಂಪಾದ ಕಾಡುಗಳಿವೆ. ಹಸಿರಿನ ಹೊದಿಕೆಯಿಂದ ಕೂಡಿದೆ ಬೆಟ್ಟಗಳಿವೆ. ಈ ದ್ವೀಪಗಳಲ್ಲಿ ಸೂರ್ಯ ಮುಳುಗಿದಾಗಿನಿಂದ ಹೊತ್ತು ಮೂಡುವವರೆಗೂ ಸಂಗೀತ ಹಾಗೂ ಬಣ್ಣದ ದೀಪಗಳ ಸಮ್ಮಿಲನವಿರುತ್ತದೆ

ತುಲುಮ್‌, ಮೆಕ್ಸಿಕೊ
ಯಾವುದೇ ಒಂದು ಸ್ಥಳ ರೋಮ್ಯಾಂಟಿಕ್ ಆಗಿರಬೇಕು ಎಂದರೆ ವಿಲಕ್ಷಣ ಹಾಗೂ ವಿಭಿನ್ನ ಅನುಭವಗಳು ನಮಗಾಗಬೇಕು. ಈ ರೀತಿ ಭಿನ್ನ ಅನುಭವಗಳು ನಮ್ಮದಾಗಬೇಕು ಎಂದರೆ ತುಲುಮ್‌ಗೆ ಭೇಟಿ ನೀಡಬೇಕು. ಇಲ್ಲಿನ ಕೆಲ ಸ್ಥಳಗಳಲ್ಲಿ ಮಾಯನ್ ಅವಶೇಷಗಳಿರುವುದು ವಿಶೇಷ. ಝೆಲ್‌ಹಾ ಪಾರ್ಕ್ ಎಂಬ ಜಲವಾಸಿ ಉದ್ಯಾನ ಇಲ್ಲಿನ ಪ್ರಮುಖ ಆಕರ್ಷಣೆ. ಡಜನ್‌ಗಟ್ಟಲೆ ಉಷ್ಣವವಲಯದ ಕಡಲತೀರಗಳು ಇಲ್ಲಿನ ಸೌಂದರ್ಯವನ್ನು ಹೆಚ್ಚಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು