ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ: ಹೀಗೊಂದು ಸಮೀಕ್ಷೆ

ಅಪಾರ್ಟ್‌ಮೆಂಟ್‌ಗಳಿಗೆ ವಿದ್ಯಾರ್ಥಿಗಳಿಂದ ಫುಲ್‌ ಮಾರ್ಕ್ಸ್‌
Last Updated 20 ಜನವರಿ 2019, 19:45 IST
ಅಕ್ಷರ ಗಾತ್ರ

ಘನತ್ಯಾಜ್ಯ ನಿರ್ವಹಣೆ ಮತ್ತು ಪ್ಲಾಸ್ಟಿಕ್‌ ಬಳಕೆ ಮಹಾನಗರಕ್ಕಂಟಿಕೊಂಡ ಕ್ಯಾನ್ಸರ್‌ ಗಡ್ಡೆಗಳು. ಇದರ ನಿರ್ಮೂಲನೆಗೆ ನಡೆಯುತ್ತಿರುವ ಪ್ರಯತ್ನಗಳು ಎಷ್ಟರಮಟ್ಟಿಗೆ ಕಾರ್ಯದಕ್ಷತೆಯಿಂದ ಕೂಡಿವೆ. ಇದರಲ್ಲಿ ಸಾರ್ವಜನಿಕರ ಹೊಣೆಗಾರಿಕೆ ಮತ್ತು ವ್ಯವಸ್ಥೆಯ ಅಸಡ್ಡೆ ಎಷ್ಟು? ಅಸಲಿ ಜಾಡು ಹಿಡಿದ ನಗರದ ಎಳೆ ಮನಸುಗಳು ಸಮೀಕ್ಷೆ ನಡೆಸಿ ವರದಿಯನ್ನೂ ಸಿದ್ಧಪಡಿಸಿವೆ.

ರಾಜರಾಜೇಶ್ವರಿನಗರದ ನ್ಯಾಷನಲ್‌ ಹಿಲ್‌ವೀವ್ ಪಬ್ಲಿಕ್‌ ಶಾಲೆಯ (ಎನ್‌ಎಚ್‌ವಿಪಿಎಸ್‌) ಏಳನೇ ತರಗತಿಯಿಂದ 10ನೇ ತರಗತಿವರೆಗಿನ 13 ವಿದ್ಯಾರ್ಥಿಗಳ ತಂಡ ಈ ಕಾರ್ಯ ಮಾಡಿದೆ.

ರಾಜರಾಜೇಶ್ವರಿನಗರ (ಆರ್‌.ಆರ್‌ ನಗರ)ದಲ್ಲಿ ಅಪಾರ್ಟ್‌ಮೆಂಟ್‌ಗಳ ಭರಾಟೆ ಹೆಚ್ಚು. ಇಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿನ ಘನತ್ಯಾಜ್ಯ ನಿರ್ವಹಣೆ ಮತ್ತು ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಬಳಕೆ ಕುರಿತ ಸಮೀಕ್ಷೆ ಇದಾಗಿದೆ.

ಅಪಾರ್ಟ್‌ಮೆಂಟ್‌ಗಳು ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿವೆಯಾ ಆಥವಾ ಬಿಬಿಎಂಪಿಯನ್ನೇ ಅವಲಂಬಿಸಿವೆಯಾ? ಹಸಿ ಕಸ, ಒಣ ಕಸ, ಸ್ಯಾನಿಟರಿ ಕಸ ಸಮರ್ಪಕವಾಗಿ ವಿಂಗಡಣೆ ಆಗುತ್ತಿದೆಯಾ? ಹಸಿ ಕಸವನ್ನು ಕಾಂಪೋಸ್ಟ್‌ ಮಾಡಿ ರಸ ಗೊಬ್ಬರ ಮಾಡಲಾಗುತ್ತಿದೆಯಾ? ಕಸ ವಿಂಗಡಣೆ ಮನೆ ಮನೆಗಳಲ್ಲಿ ಆಗುತ್ತಿದೆಯಾ? ಅದರ ವಿಲೇವಾರಿ ಹೇಗಾಗುತ್ತಿದೆ? ಎನ್ನುವ ಪ್ರಶ್ನೆಗಳೊಂದಿಗೆ ವಿದ್ಯಾರ್ಥಿಗಳ ತಂಡ ರಾಜರಾಜೇಶ್ವರಿ ನಗರದ 25 ಅಪಾರ್ಟ್‌ಮೆಂಟ್‌ಗಳ ಕದತಟ್ಟಿತು.

ಅಂತೆಯೇ ಇಲ್ಲಿನ ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಎಷ್ಟರ ಮಟ್ಟಿಗೆ ಇದೆ. ಪ್ಲಾಸ್ಟಿಕ್‌ ಕವರ್‌ಗಳ ನಿಷೇಧದ ಕುರಿತು ಹೋಟೆಲ್‌ ಮಾಲೀಕರು, ಕಾರ್ಮಿಕರುಗಳಿಗೆ ಜ್ಞಾನ ಇದೆಯಾ? ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಏನನ್ನು ಬಳಸಲಾಗುತ್ತಿದೆ? ಎಂಬುದರ ಪರಿಶೀಲನೆಯನ್ನು 15 ಹೋಟೆಲ್‌ಗಳಲ್ಲಿ ಈ ತಂಡ ಮಾಡಿದೆ. ತಾವು ಕಂಡಿದ್ದನ್ನು, ವಿದ್ಯಾರ್ಥಿಗಳು ಸಮೀಕ್ಷಾ ವರದಿಯಲ್ಲಿ ದಾಖಲಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣೆ: ಆರ್‌.ಆರ್ ನಗರದ 25 ಅಪಾರ್ಟ್‌ಮೆಂಟ್‌ಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಪರಿಶೀಲಿಸಿದ ವಿದ್ಯಾರ್ಥಿಗಳು 1ರಿಂದ 10 ಅಂಕಗಳನ್ನು ನೀಡಿದ್ದಾರೆ. ಕಳಪೆ ನಿರ್ವಹಣೆಗೆ 1 ಅಂಕ, ಅತ್ಯುತ್ತಮ ನಿರ್ವಹಣೆಗೆ 10 ಅಂಕಗಳನ್ನು ನೀಡಿದ್ದಾರೆ.

ಕೆಲ ಅಪಾರ್ಟ್‌ಮೆಂಟ್‌ಗಳು ಘನ ತ್ಯಾಜ್ಯವನ್ನು ಮೂರು ಹಂತಗಳಲ್ಲಿ (ಹಸಿ, ಒಣ, ಸ್ಯಾನಿಟರಿ) ವಿಂಗಡಿಸಿ, ಪ್ರತ್ಯೇಕವಾಗಿ ಸಂಗ್ರಹಿಸಿ ವಿಲೇವಾರಿ ಮಾಡುತ್ತಿವೆ. ಕೆಲವು ಎರಡು ಹಂತಗಳನ್ನಷ್ಟೇ ಪಾಲಿಸುತ್ತಿವೆ. ಸ್ಯಾನಿಟರಿ ಕಸವನ್ನು ಒಣ ಕಸದ ಜತೆಗೆ ಮಿಶ್ರಣಗೊಳಿಸಿ ವಿಲೇವಾರಿ ಮಾಡುತ್ತಿರುವ ಅಪಾರ್ಟ್‌ಮೆಂಟ್‌ಗಳೂ ಇವೆ. ಕೆಲವೆಡೆ ಕಸವನ್ನು ವಿಂಗಡಿಸದೆ ವಿಲೇವಾರಿ ಮಾಡಲಾಗುತ್ತಿದೆ. ಈ ಅಂಶ ಆಧರಿಸಿ ವಿದ್ಯಾರ್ಥಿಗಳು ಅಂಕ ನೀಡಿದ್ದಾರೆ.

ಇಲ್ಲಿನ ಗಗನ್‌ ವಿಹಾರ್‌, ಲಿ ಗ್ರಾಂಡ್‌ ಪಾರ್ಕ್‌ ವೀವ್‌, ಮಂತ್ರಿ ಆಲ್ಪೈನ್‌, ಮೆಲೊಡಿ ಮತ್ತು ಎಸ್‌ಜಿಎಸ್‌ಡಿ ಡ್ರೀಮ್‌ಲ್ಯಾಂಡ್‌ ಅಪಾರ್ಟ್‌ಮೆಂಟ್‌ಗಳಿಗೆ 10 ಅಂಕಗಳನ್ನು ಈ ವಿದ್ಯಾರ್ಥಿಗಳ ತಂಡ ನೀಡಿದೆ.

ಬ್ರೊಕೆಡ್‌ ವಿಸ್ಟಾ, ಎಲೆಗೆಂಟ್‌ ಎಂಬೆಸ್ಸಿ 3, ಲೇಕ್‌ ವೀವ್‌, ಮಾರ್ಸ್‌ ಮೆಡೋವ್ಸ್‌ ಮತ್ತು ಪಿರಮಿಡ್‌ ಟೆಂಪಲ್‌ ಬೆಲ್ಸ್‌ ಅಪಾರ್ಟ್‌ಮೆಂಟ್‌ಗಳು 9 ಅಂಕಗಳನ್ನು ಪಡೆದಿವೆ. ಅವನಿ ಅಮೂಲ್ಯ 8 ಅಂಕಗಳನ್ನು ಪಡೆದಿದ್ದರೆ, ಧ್ಯಾನೇಶ್ವರಿ ಪ್ಯಾರಡೇಸ್‌, ಶಿವಗಂಗಾ ಪರ್ಲ್ಸ್‌, ಸಾಯಿ ಶಕ್ತಿ ಎನ್‌ಕ್ಲೈವ್‌, ಸವೆನ್‌ ಹಿಲ್ಸ್‌ ಅಪಾರ್ಟ್‌ಮೆಂಟ್‌, ಗಾನಾ ರೆಸಿಡೆನ್ಸಿ, ಅರ್ಚಿತಾ–2, ಡೆಕ್ಕನ್‌ ಆರ್ಕೆಡ್‌ ಅಪಾರ್ಟ್‌ಮೆಂಟ್‌ಗಳು 7 ಅಂಕಗಳನ್ನು ಪಡೆದಿವೆ.

ಡೆಕ್ಕನ್‌ ಆರ್ಕೆಡ್‌–1, ಅರ್ಚಿತಾ–1, ಅಮೆತಿ, ಧ್ಯಾನೇಶ್ವರಿ ಅಪಾರ್ಟ್‌ಮೆಂಟ್‌ಗಳಿಗೆ ವಿದ್ಯಾರ್ಥಿಗಳು 1ರಿಂದ 6 ಅಂಕಗಳನ್ನು ನೀಡಿದ್ದಾರೆ.

ಪ್ಲಾಸ್ಟಿಕ್‌ ಜಾಗೃತಿ: ಪ್ಲಾಸ್ಟಿಕ್‌ ಕವರ್‌ಗಳ ಬಳಕೆ ನಿಷೇಧವಿದ್ದರೂ ನಗರದ ಹಲವು ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್‌ ಕವರ್‌ಗಳ ಬಳಕೆ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈ ಕುರಿತು ಆರ್‌.ಆರ್‌ ನಗರದ 15 ಹೋಟೆಲ್‌ಗಳನ್ನು ಪರಿಶೀಲಿಸಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಡೆ ಪ್ಲಾಸ್ಟಿಕ್‌ ಬಳಕೆಯಾಗುತ್ತಿದ್ದದ್ದು ಕಂಡು ಬಂದಿದೆ.

ಬೈಟು ಕಾಫಿ, ರಾಜರಾಜೇಶ್ವರಿ ಕ್ಯಾಂಟಿನ್‌, ಕಾಪಿಕಟ್ಟೆ ಹೋಟೆಲ್‌ಗಳನ್ನು ಈ ವಿದ್ಯಾರ್ಥಿಗಳ ತಂಡ ಹಸಿರು ಪಟ್ಟಿಯಲ್ಲಿ ಗುರುತಿಸಿದೆ. ಇಲ್ಲಿ ಬಹುತೇಕ ಪ್ಲಾಸ್ಟಿಕ್‌ ಬಳಕೆ ಇಲ್ಲ, ಸ್ವಚ್ಛ, ಶುಚಿ ಪರಿಸರ ಇದ್ದು, ಗ್ರಾಹಕರ ಆರೋಗ್ಯಕ್ಕೆ ಒತ್ತು ನೀಡಲಾಗಿದೆ ಎಂದು ವಿದ್ಯಾರ್ಥಿಗಳು ವರದಿಯಲ್ಲಿ ತಿಳಿಸಿದ್ದಾರೆ.

ಬ್ರಾಹ್ಮಿನ್ಸ್‌ ಹೋಂ ಮೇಡ್ಸ್‌ ಫುಡ್ಸ್‌, ದಾವಣಗೆರೆ ತಟ್ಟೆ ಇಡ್ಲಿ, ಹಳ್ಳಿ ಊಟ ವೆಜ್‌, ‘ಡಬಲ್‌ ರೋಡ್‌’ ಬದಿಯಲ್ಲಿನ ವ್ಯಾಪಾರಿಗಳನ್ನು ಕೆಂಪು ಪಟ್ಟಿಯಲ್ಲಿ ಗುರುತಿಸಲಾಗಿದ್ದು, ಇಲ್ಲಿ ಪ್ಲಾಸ್ಟಿಕ್‌ ಬಳಕೆ ಹೆಚ್ಚು ಎನ್ನುತ್ತದೆ ವರದಿ.

ಬ್ರಾಹ್ಮಿನ್ಸ್‌ ಕಾಫಿ ಕೆಫೆ, ಉಡುಪಿ ಬ್ರಾಹ್ಮಿಣ್‌ ಕೆಫೆ, ಇಂದ್ರಪ್ರಸ್ಥ, ಮಂದಾರ ಗ್ರ್ಯಾಂಡ್‌, ಮೊನಿಷ್‌ ಕಾರ್ನರ್‌, ಪಂಚಮಿ ವೆಜ್‌, ದಾವಣಗೆರೆ ಬೆಣ್ಣೆದೋಸೆ, ಕ್ಯಾಪ್ಟನ್‌ ಕುಕ್‌ ಫುಡ್‌ ಕಾರ್ನರ್‌ ಹೋಟೆಲ್‌ಗಳನ್ನು ಹಳದಿ ಪಟ್ಟಿಗೆ ಸೇರಿವೆ.

**

ವಿದ್ಯಾರ್ಥಿಗಳ ಸಮುದಾಯ ಸೇವೆ

ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) ಪಠ್ಯಕ್ರಮದ ಪ್ರಕಾರ ವಿದ್ಯಾರ್ಥಿಗಳು 20 ಗಂಟೆಗಳ ಕಾಲ ಸಮುದಾಯ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದಕ್ಕೆ ಅವರಿಗೆ ಅಂಕ/ಗ್ರೇಡ್‌ ಸಿಗುತ್ತದೆ. ಇದಕ್ಕಾಗಿ ಎನ್‌ಎಚ್‌ವಿಪಿಎಸ್‌ ವಿದ್ಯಾರ್ಥಿಗಳು ರಾಜರಾಜೇಶ್ವರಿ ನಗರದ ಎನ್‌ಜಿಒ ‘ರೀಸೈಕಲ್‌ ಇನ್ಷಿಯೆಟಿವ್‌ ಫಾರ್‌ ಎ ಸೇಫ್‌ ಎನ್ವಿರಾನ್‌ಮೆಂಟ್‌’ (ಆರ್‌ಐಎಸ್‌ಇ) ಸಂಪರ್ಕಿಸಿದರು.

‘ಈ ವಿದ್ಯಾರ್ಥಿಗಳಿಗೆ ರಾಜರಾಜೇಶ್ವರಿನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಮತ್ತು ಹೋಟೆಲ್‌ಗಳಲ್ಲಿನ ಪ್ಲಾಸ್ಟಿಕ್‌ ಬಳಕೆ ಕುರಿತು ಸಮೀಕ್ಷಾ ವರದಿ ಸಿದ್ಧಪಡಿಸುವಂತೆ ಸೂಚಿಸಲಾಯಿತು. ಅವರು ಸಂಗ್ರಹಿಸಿದ ದತ್ತಾಂಶ ಆಧರಿಸಿ ವಿದ್ಯಾರ್ಥಿಗಳ ಸಮೀಕ್ಷಾ ವರದಿ ಸಿದ್ಧಪಡಿಸಲಾಗಿದೆ. ಬಿಬಿಎಂಪಿಯ ‘ಹೆಲ್ತ್‌ ಇನ್ಸ್‌ಪೆಕ್ಟರ್‌’ ಅವರಿಂದ ಅನುಮತಿ ಪಡೆಯಲಾಗಿತ್ತು. ಬಳಿಕ ಸಮೀಕ್ಷಾ ವರದಿಯ ಪ್ರತಿಗಳನ್ನು ಅವರಿಗೂ ನೀಡಿದ್ದೇವೆ’ ಎನ್ನುತ್ತಾರೆ ಆರ್‌ಐಎಸ್‌ಇನ ಸಂಸ್ಥಾಪಕಿ ವೀಣಾ ರಾಜಪ್ಪ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT