ಭಾನುವಾರ, ಜುಲೈ 3, 2022
26 °C

ಆಳ– ಅಗಲ: ಮತಚೀಟಿಗೆ ಆಧಾರ್‌ ಜೋಡಣೆ ಕಡ್ಡಾಯವೂ ಅಲ್ಲ ಐಚ್ಛಿಕವೂ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನರ ದತ್ತಾಂಶ ರಕ್ಷಣೆ ಮತ್ತು ಖಾಸಗಿತನ ರಕ್ಷಣೆಗಾಗಿ ಭಾರತದಲ್ಲಿ ಕಾನೂನುಗಳು ಇಲ್ಲ. ಹಾಗಾಗಿ, ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆಯನ್ನು ಜೋಡಿಸುವುದಕ್ಕೆ ತೀವ್ರ ಆಕ್ಷೇಪ‍ ವ್ಯಕ್ತವಾಗಿದೆ. ಮತದಾರರ ಗುರುತಿನ ಚೀಟಿ ಹೊಂದಿರುವವರ ದತ್ತಾಂಶ ಭಾರತದ ಚುನಾವಣಾ ಆಯೋಗದ ಸುಪರ್ದಿಯಲ್ಲಿ ಇರುತ್ತದೆ. ಆಧಾರ್‌ ಸಂಖ್ಯೆಗೆ ಸಂಬಂಧಿಸಿದ ದತ್ತಾಂಶ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದ ವಶದಲ್ಲಿರುತ್ತದೆ. ಈ ಎರಡೂ ಸಂಸ್ಥೆಗಳ ನಡುವೆ ದತ್ತಾಂಶ ವಿನಿಮಯಕ್ಕೆ ಅವಕಾಶ ಕಲ್ಪಿಸುವ ಕಾಯ್ದೆಗಳು ಇಲ್ಲ. ಹೀಗೆ ಹಂಚಿಕೆ ಆಗುವ ದತ್ತಾಂಶದ ರಕ್ಷಣೆಗೆ ಯಾವ ವ್ಯವಸ್ಥೆ ಇದೆ ಎಂಬುದೂ ಸ್ಪಷ್ಟವಿಲ್ಲ ಎಂಬುದು ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆಯ ವಿರೋಧಿಗಳ ವಾದವಾಗಿದೆ.

ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 2019ರಲ್ಲಿ 7.8 ಕೋಟಿ ಜನರ ಆಧಾರ್‌ ದತ್ತಾಂಶಗಳು ಸೋರಿಕೆ ಆಗಿದ್ದನ್ನು ಈಗ ನೆನಪಿಸಿಕೊಳ್ಳಬಹುದು. ತೆಲುಗು ದೇಶಂ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದ ಸಂಸ್ಥೆಯೊಂದರ ಬಳಿಯಲ್ಲಿ ಈ ದತ್ತಾಂಶ ಇತ್ತು ಎಂದು ವರದಿಯಾಗಿತ್ತು. ಈ ಎಲ್ಲ ಆಧಾರ್‌ ಸಂಖ್ಯೆಗಳನ್ನು ಮತದಾರರ ಗುರುತಿನ ಚೀಟಿಗೆ ಜೋಡಣೆ (ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮ) ಮಾಡಲಾಗಿತ್ತು. ಮತದಾರರ ಗುರುತಿನ ಚೀಟಿಗೆ ಆಧಾರ್‌ ಜೋಡಣೆಯಾದರೆ, ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಅದನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ಆಗುತ್ತದೆ ಎಂಬುದರ ಸ್ಪಷ್ಟ ಸೂಚನೆಯನ್ನು ಆಂಧ್ರ ಪ್ರದೇಶದ ಪ್ರಕರಣವು ಕೊಟ್ಟಿದೆ. ಮತದಾರರ ಹಿನ್ನೆಲೆಯನ್ನು ಗುರುತಿಸಿ, ಅವರನ್ನೇ ಗುರಿಯಾಗಿಸಿ ವಿಶಿಷ್ಟವಾದ ರೀತಿಯಲ್ಲಿ ಚುನಾವಣಾ ಪ್ರಚಾರ ನಡೆಸಲು ಇದರಿಂದ ಸಾಧ್ಯವಾಗುತ್ತದೆ. 

ಮತದಾರರ ಚೀಟಿಗೆ ಆಧಾರ್‌ ಸಂಖ್ಯೆ ಜೋಡಣೆಯು ಐಚ್ಛಿಕ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಮಸೂದೆಯಲ್ಲಿ ಈ ಉಲ್ಲೇಖ ಇಲ್ಲ. ಅಲ್ಲದೆ, ಐಚ್ಛಿಕ ಎಂದರೂ ಅದಕ್ಕೆ ಅಂತಹ ಮಹತ್ವವೇನೂ ಇಲ್ಲ. ಏಕೆಂದರೆ, ಆಧಾರ್‌ ಯೋಜನೆಯು ಜಾರಿಗೆ ಬಂದ ಆರಂಭದಲ್ಲಿ ಆಧಾರ್‌ ನೋಂದಣಿ ಮಾಡಿಸುವುದೇ ಐಚ್ಛಿಕವಾಗಿತ್ತು. ಆಧಾರ್‌ ಸಂಖ್ಯೆ ನೋಂದಣಿ ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿತ್ತು. ಆದರೆ, ಈಗ ಹಲವು ಸೇವೆಗಳನ್ನು ಪಡೆದುಕೊಳ್ಳಲು ಆಧಾರ್‌ ಸಂಖ್ಯೆ ಜೋಡಣೆಯನ್ನು ಕೇಂದ್ರ ಸರ್ಕಾರವು ಕಡ್ಡಾಯ ಮಾಡಿದೆ. 

‘ಮತದಾರರ ಚೀಟಿಗೆ ಆಧಾರ್‌ ಜೋಡಣೆ ಮಾಡುವುದರಿಂದ ವ್ಯಕ್ತಿಯ ಖಾಸಗಿತನದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗುತ್ತದೆ. ರಹಸ್ಯ ಮತದಾನದ ಪಾವಿತ್ರ್ಯವೇ ಕೆಡುತ್ತದೆ. ಸಹಾಯಧನ ನೀಡುವುದಕ್ಕಾಗಿ ಮಾತ್ರ ಆಧಾರ್‌ ಬಳಕೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ 2015ರಲ್ಲಿ ನೀಡಿದ ತೀರ್ಪಿನ ಉಲ್ಲಂಘನೆಯಾಗುತ್ತದೆ’ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ ಟ್ವೀಟ್‌ ಮಾಡಿದ್ದಾರೆ. 

‘ಸರ್ಕಾರದ ನ್ಯಾಯಬದ್ಧ ಗುರಿ ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ನೆಪವಾಗಿಸಿಕೊಂಡು ಜನರ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನವನ್ನು ನಾಶ ಮಾಡಲು ನರೇಂದ್ರ ಮೋದಿ ನೇತೃತ್ವದ ಸರ್ಕಾರವು ತೋರುತ್ತಿರುವ ಆತುರವು ನಾಚಿಕೆಗೇಡಿನದ್ದು. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಮತದಾರರ ಚೀಟಿಗೆ ಆಧಾರ್‌ ಜೋಡಣೆಯಿಂದ ಆಗಿದ್ದ ಎಡವಟ್ಟಿನಿಂದ ಸರ್ಕಾರ ಯಾವ ಪಾಠವನ್ನೂ ಕಲಿತಿಲ್ಲ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ನ ಉಪನಾಯಕ ಗೌರವ್‌ ಗೊಗೊಯಿ ಟ್ವೀಟ್‌ ಮಾಡಿದ್ದಾರೆ. 

ಮಸೂದೆಯಲ್ಲಿ ಏನಿದೆ?
ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಅನುವು ಮಾಡಿಕೊಡುವ ಮಸೂದೆಯನ್ನು ಸರ್ಕಾರವು ಲೋಕಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಂಡಿದೆ. 

‘ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸುವುದು ಕಡ್ಡಾಯವಲ್ಲ. ಅದು ಸ್ವಯಂಪ್ರೇರಿತವಾದುದು’ ಎಂದು ಸರ್ಕಾರವು ಹೇಳಿದೆ. ಆದರೆ ಸರ್ಕಾರವು ಈಗ ಲೋಕಸಭೆಯಲ್ಲಿ ಮಂಡಿಸಿ, ಅನುಮೋದನೆ ಪಡೆದುಕೊಂಡಿರುವ ‘ಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ–2021’ರಲ್ಲಿರುವ ತಿದ್ದುಪಡಿಗಳು ಇದನ್ನು ಸ್ಪಷ್ಟಪಡಿಸುವುದಿಲ್ಲ.

‘ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಿಸಬೇಕು’ ಎಂದು ಈ ಮಸೂದೆಯ ಯಾವ ಭಾಗದಲ್ಲಿಯೂ ಹೇಳಿಲ್ಲ. ಮಸೂದೆಯ ಯಾವ ಭಾಗದಲ್ಲಿಯೂ ‘ಕಡ್ಡಾಯ’ ಮತ್ತು ‘ಸ್ವಯಂಪ್ರೇರಿತ’ ಎಂಬ ಪದಗಳನ್ನು ಉಲ್ಲೇಖಿಸಿಲ್ಲ. ಆದರೆ, ಸಂಬಂಧಿತ ಅಧಿಕಾರಿಗಳು ಕೇಳಿದಾಗ ವ್ಯಕ್ತಿಯು ತನ್ನ ಆಧಾರ್ ಚೀಟಿಯನ್ನು ತೋರಿಸಬೇಕು ಎಂದು ಹೇಳಲಾಗಿದೆ. ಸರ್ಕಾರವು ತನ್ನ ಗೆಜೆಟ್‌ನಲ್ಲಿ ಸೂಚಿಸಿದ ಸ್ವರೂಪದಲ್ಲಿ ಮತದಾರನು ತನ್ನ ಆಧಾರ್ ಸಂಖ್ಯೆಯ ವಿವರವನ್ನು ಸಂಬಂಧಿತ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.

ಆಧಾರ್ ಸಂಖ್ಯೆ ಸಲ್ಲಿಸದ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ನಿರಾಕರಿಸುವಂತಿಲ್ಲ ಮತ್ತು ಮತದಾರರ ಪಟ್ಟಿಯಿಂದ ಅಂತಹ ವ್ಯಕ್ತಿಗಳ ಹೆಸರನ್ನು ತೆಗೆದುಹಾಕುವಂತಿಲ್ಲ ಎಂದು ಮಸೂದೆ ಹೇಳುತ್ತದೆ. ಆದರೆ ಸರ್ಕಾರವು ಸೂಚಿಸಿದ ಇತರ ಗುರುತಿನ ಚೀಟಿಗಳನ್ನು ಸಲ್ಲಿಸಿದಾಗ ಮಾತ್ರ ಈ ವಿನಾಯಿತಿ ಅನ್ವಯವಾಗುತ್ತದೆ.

ಅಧಿಕಾರಿಗಳು ಕೇಳಿದಾಗ ಆಧಾರ್ ತೋರಿಸಬೇಕು
ಮತದಾರರ ಗುರುತಿನ ಚೀಟಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲು ಅವಕಾಶ ಮಾಡಿಕೊಡುವ ಉದ್ದೇಶದಿಂದ ಪ್ರಜಾಪ್ರಾತಿನಿಧ್ಯ ಕಾಯ್ದೆ–1950 ಮತ್ತು ಪ್ರಜಾಪ್ರಾತಿನಿಧ್ಯ ಕಾಯ್ದೆ–1951ಕ್ಕೆ ತಿದ್ದುಪಡಿ ತರಲು ಮಸೂದೆ ಮಂಡಿಸಲಾಗಿದೆ. ಇದಕ್ಕಾಗಿ ಈ ಕಾಯ್ದೆಗಳ 23ನೇ ಸೆಕ್ಷನ್‌ಗೆ ತಿದ್ದುಪಡಿಗಳನ್ನು ಈ ಮಸೂದೆಯಲ್ಲಿ ಸೂಚಿಸಲಾಗಿದೆ. 23ನೇ ಸೆಕ್ಷನ್‌ಗೆ 4, 5 ಮತ್ತು 6ನೇ ಉಪ ಸೆಕ್ಷನ್‌ಗಳು ಸೇರಿಸಲಾಗಿದೆ.

‘ಯಾವುದೇ ವ್ಯಕ್ತಿಯ ಗುರುತನ್ನು ದೃಢಪಡಿಸಿಕೊಳ್ಳಲು ಮತದಾರರ ಪಟ್ಟಿ ನೋಂದಣಿ ಅಧಿಕಾರಿಯು ಆಧಾರ್ ಮಾಹಿತಿಯನ್ನು ಕೇಳಬಹುದು. ಈಗಾಗಲೇ ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿಯ ಆಧಾರ್ ಸಂಖ್ಯೆಯ ವಿವರವನ್ನೂ ಅಧಿಕಾರಿಯು ಕೇಳಬಹುದು. ಒಂದೇ ಕ್ಷೇತ್ರದಲ್ಲಿ ಎರಡು ಬಾರಿ ಮತ್ತು ಎರಡು ಬೇರೆ–ಬೇರೆ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ವ್ಯಕ್ತಿಯ ಗುರುತನ್ನು ದೃಢಪಡಿಸಿಕೊಳ್ಳಲು ಅಧಿಕಾರಿಯು, ಆ ವ್ಯಕ್ತಿಯ ಆಧಾರ್ ಸಂಖ್ಯೆಯ ವಿವರವನ್ನು ಕೇಳಬಹುದು. ಆ ವ್ಯಕ್ತಿಯು ಆಧಾರ್ ವಿವರವನ್ನು ಸಲ್ಲಿಸಲೇಬೇಕಾಗುತ್ತದೆ’ ಎಂದು ಹೊಸದಾಗಿ ಸೇರಿಸಲಾಗಿರುವ 4ನೇ ಉಪ ಸೆಕ್ಷನ್ ಹೇಳುತ್ತದೆ.

‘ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯೂ ಸಂಬಂಧಿತ ಪ್ರಾಧಿಕಾರಕ್ಕೆ ತನ್ನ ಆಧಾರ್ ವಿವರವನ್ನು, ಕೇಂದ್ರ ಸರ್ಕಾರವು ತನ್ನ ಗೆಜೆಟ್‌ನಲ್ಲಿ ಸೂಚಿಸಿದ ಸ್ವರೂಪದಲ್ಲಿ ಸಲ್ಲಿಸಬೇಕಾಗಬಹುದು’ ಎಂದು ಹೊಸದಾಗಿ ಸೇರಿಸಲಾಗಿರುವ 5ನೇ ಉಪ ಸೆಕ್ಷನ್‌ ಹೇಳುತ್ತದೆ.

‘ಆಧಾರ್ ಸಂಖ್ಯೆಯನ್ನು ಸಲ್ಲಿಸದೇ ಇರುವ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸಲು ನಿರಾಕರಿಸುವಂತಿಲ್ಲ. ಆಧಾರ್ ಸಂಖ್ಯೆಯನ್ನು ಸಲ್ಲಿಸದೇ ಇರುವ ವ್ಯಕ್ತಿಯ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವಂತಿಲ್ಲ. ಈ ಕಾಯ್ದೆಯಲ್ಲಿ ಸೂಚಿಸಿರುವಂತೆ ಪರ್ಯಾಯ ಗುರುತಿನ ದಾಖಲೆಯನ್ನು ಸಲ್ಲಿಸಿದಾಗ ಮಾತ್ರ ಇದು ಅನ್ವಯವಾಗುತ್ತದೆ’ ಎಂದು ಹೊಸದಾಗಿ ಸೇರಿಸಲಾದ 6ನೇ ಉಪ ಸೆಕ್ಷನ್ ಹೇಳುತ್ತದೆ.

ಮತದಾರರ ಪಟ್ಟಿ ಶುದ್ಧೀಕರಣ
ಮತದಾರರ ಪಟ್ಟಿಯಲ್ಲಿ ಒಬ್ಬನೇ ವ್ಯಕ್ತಿಯ ಹೆಸರು ಒಂದಕ್ಕಿಂತ ಹೆಚ್ಚುಬಾರಿ ನೋಂದಣಿಯಾಗುವುದನ್ನು ತಪ್ಪಿಸಲು ಮತ್ತು ಈಗಾಗಲೇ ಒಂದಕ್ಕಿಂತ ಹೆಚ್ಚುಬಾರಿ ನೋಂದಣಿಯಾಗಿರುವ ವ್ಯಕ್ತಿಯ ಹೆಚ್ಚುವರಿ ನೋಂದಣಿಯನ್ನು ತೆಗೆದುಹಾಕಲು ಚುನಾವಣಾ ಆಯೋಗವು 2015ರಲ್ಲಿ ವಿಶೇಷ ಅಭಿಯಾನವನ್ನು ಆರಂಭಿಸಿತ್ತು. ಈ ಅಭಿಯಾನಕ್ಕೆ, ‘ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮ’ ಎಂದು ನಾಮಕರಣ ಮಾಡಲಾಗಿತ್ತು.

ಈ ಕಾರ್ಯವನ್ನು ಅನುಷ್ಠಾನಕ್ಕೆ ತರಲು ಆಧಾರ್ ದತ್ತಾಂಶವನ್ನು ಬಳಸಿಕೊಳ್ಳಲು ಆಯೋಗವು ಸೂಚಿಸಿತ್ತು. ‘ಆಧಾರ್ ಸಂಖ್ಯೆ ಹೊಂದಿರುವ ಮತದಾರರನ್ನು ಗುರುತಿಸುವುದು ಈ ಅಭಿಯಾನದ ಪ್ರಧಾನ ಗುರಿ’ ಎಂದು ಚುನಾವಣಾ ಆಯೋಗ ಹೊರಡಿಸಿದ್ದ ಸುತ್ತೋಲೆಯಲ್ಲಿ ವಿವರಿಸಲಾಗಿತ್ತು. 

‘ಮತದಾರರ ಗುರುತಿನ ಚೀಟಿ ಸಂಖ್ಯೆಗೆ (ಎಪಿಕ್‌ ಸಂಖ್ಯೆ) ಆಧಾರ್‌ ಸಂಖ್ಯೆಯನ್ನು ಜೋಡಿಸಬೇಕು. ಆಧಾರ್ ಸಂಖ್ಯೆ ಜೋಡಿಸಿದ ಮತ್ತು ಆಧಾರ್ ಸಂಖ್ಯೆ ಜೋಡಿಸದೇ ಇರುವ ಮತದಾರರ ಗುರುತಿನ ಚೀಟಿಗಳನ್ನು ಪ್ರತ್ಯೇಕಿಸಬೇಕು’ ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು.

ಆದರೆ ಚುನಾವಣಾ ಆಯೋಗದ ಈ ಅಭಿಯಾನಕ್ಕೆ 2016ಲ್ಲಿ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು. ಆನಂತರ 2017ರಲ್ಲಿ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

ಹೀಗಾಗಿ ಚುನಾವಣಾ ಆಯೋಗವು ತನ್ನ ಈ ಕಾರ್ಯಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿತು. ಈ ಕಾರ್ಯಕ್ರಮದ ಅಡಿ ಈಗ ಮತದಾರರ ಗುರುತಿನ ಚೀಟಿಯನ್ನು ಪರಿಶೀಲಿಸಿ, ಬಾರ್‌ಕೋಡ್‌ ಹೊಂದಿರುವ ಹೊಸ ಚೀಟಿಯನ್ನು ನೀಡಲಾಗುತ್ತಿದೆ. ಆದರೆ ಈ ಪರಿಶೀಲನೆ ವೇಳೆ ಆಧಾರ್ ಸಂಖ್ಯೆಯನ್ನೇ ಪ್ರಮುಖ ದಾಖಲೆಯಾಗಿ ಬಳಸಲಾಗುತ್ತಿದೆ.

ಸಂಯೋಜನೆಗೆ ತಡೆ ನೀಡಿದ್ದ ‘ಸುಪ್ರೀಂ’
ಆಧಾರ್ ಅನ್ನು ಯಾವುದೇ ಕಾರಣಕ್ಕೂ ಕಡ್ಡಾಯ ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ 2013ರಲ್ಲಿ ಹೇಳಿತ್ತು. ಮುಂದಿನ ಹಲವು ಆದೇಶಗಳಲ್ಲಿ ಇದನ್ನು ಸ್ಪಷ್ಟಪಡಿಸುತ್ತಾ ಬಂದಿದೆ. ಆದರೆ 2015ರ ಫೆಬ್ರುವರಿಯಲ್ಲಿ ಎಚ್‌.ಎಸ್. ಬ್ರಹ್ಮ ಅವರು ಚುನಾವಣಾ ಆಯೋಗದ ಆಯುಕ್ತರಾಗಿದ್ದಾಗ, ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಪತ್ರಗಳನ್ನು ಜೋಡಿಸುವ ಯೋಜನೆಗೆ ಚಾಲನೆ ನೀಡಿದ್ದರು. ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮದ (ಎನ್‌ಇಆರ್‌ಪಿಎಪಿ) ಅಡಿಯಲ್ಲಿ ಇದನ್ನು ಕಡ್ಡಾಯ ಮಾಡಿ ಚುನಾವಣಾ ಆಯೋಗ ನಿಯಮಗಳನ್ನು ರೂಪಿಸಿತ್ತು.

ಆದರೆ ಈ ಕಾರ್ಯಕ್ರಮಕ್ಕೆ 2015ರ ಆಗಸ್ಟ್‌ನಲ್ಲಿ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಎಲ್‌ಪಿಜಿ, ಸೀಮೆಎಣ್ಣೆ ಪೂರೈಕೆ ಮೊದಲಾದ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಸೌಲಭ್ಯಗಳನ್ನು ಪಡೆಯುವುದನ್ನು ಬಿಟ್ಟು, ಅನ್ಯ ಉದ್ದೇಶಕ್ಕೆ ಆಧಾರ್ ಅನ್ನು ಜೋಡೆಣೆ ಮಾಡುವುದನ್ನು ನಿರ್ಬಂಧಿಸಿತ್ತು. ಸರ್ಕಾರದ ಬೇರೆ ಬೇರೆ ಯೋಜನೆಗಳಿಗೆ ಇದನ್ನು ವಿಸ್ತರಣೆ ಮಾಡಬಾರದು ಎಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಮಿತಿ ಹೇರಿತ್ತು. ಆದರೆ ಈ ಹೊತ್ತಿಗಾಗಲೇ ದೇಶದ 38 ಕೋಟಿ ಜನರ ಆಧಾರ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಸಂಯೋಜಿಸಲಾಗಿತ್ತು. 

2017ರ ಜುಲೈನಲ್ಲಿ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋದ ಆಯೋಗ, ಆಧಾರ್ ಜೊತೆ ಮತದಾರರ ಗುರುತಿನ ಚೀಟಿಗಳನ್ನು ಸಂಯೋಜನೆ ಮಾಡಲು ಅನುಮತಿ ಕೇಳಿತು. ಆದರೆ ಈ ಬಾರಿ ಈ ಪ್ರಕ್ರಿಯೆಯನ್ನು ಕಡ್ಡಾಯ ಮಾಡುವುದಿಲ್ಲ, ಬದಲಾಗಿ ಐಚ್ಛಿಕವಾಗಿರಲಿದೆ ಎಂದು ತಿಳಿಸಿತ್ತು. ಆಧಾರ್ ಸಂಖ್ಯೆ ಜೊತೆ ಮತದಾರರ ಗುರುತಿನ ಚೀಟಿಯನ್ನು ಸಂಯೋಜಿಸಿಲ್ಲ ಎಂಬ ಕಾರಣಕ್ಕೆ, ಮತದಾರರಿಗೆ ಅವರ ಮತದಾನದ ಹಕ್ಕು ಚಲಾಯಿಸಲು ಅಡ್ಡಿಪಡಿಸುವುದಿಲ್ಲ ಎಂದೂ ಭರವಸೆ ನೀಡಿತ್ತು. 2019ರಲ್ಲಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದ್ದ ಆಯೋಗವು, ಚುನಾವಣಾ ಕಾಯ್ದೆಗೆ ತಿದ್ದುಪಡಿ ತರುವಂತೆ ಕೇಳಿಕೊಂಡಿತ್ತು.

ಮತದಾರರ ಪಟ್ಟಿಯಲ್ಲಿ ಹೆಸರು ಕಣ್ಮರೆ
ಆಧಾರ್ ಜೊತೆ ಮತದಾರರ ಗುರುತಿನ ಚೀಟಿಗಳನ್ನು ಸಂಯೋಜಿಸುವ ಪ್ರಸ್ತಾವದ ಬಗ್ಗೆ ಆತಂಕಪಡುವ ಅಂಶಗಳೂ ಇವೆ. 2015ರಲ್ಲಿ ಸುಮಾರು 38 ಕೋಟಿ ಮತದಾರರ ಗುರುತಿನ ಚೀಟಿಗಳನ್ನು ಆಧಾರ್ ಜೊತೆ ಸಂಯೋಜಿಸಲಾಗಿತ್ತು. ಇದರ ಪರಿಣಾಮವು 2018ರಲ್ಲಿ ನಡೆದ ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಂಡುಬಂದಿತ್ತು.

ಈ ಎರಡೂ ರಾಜ್ಯಗಳ ಸುಮಾರು 55 ಲಕ್ಷ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದವು ಎಂದು ಆರೋಪಿಸಲಾಗಿದೆ. ತೆಲಂಗಾಣದಲ್ಲಿ 27 ಲಕ್ಷ ಮತದಾರರು, ಆಂಧ್ರ ಪ್ರದೇಶದಲ್ಲಿ 20 ಲಕ್ಷ ಮತದಾರರ ಹೆಸರು ನಾಪತ್ತೆಯಾಗಿವೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು. ಈ ಆರೋಪಗಳಿಗೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಿತ್ತು. ‘2014ರಲ್ಲಿ ಆಂಧ್ರ ಪ್ರದೇಶ ವಿಭಜನೆಯಾಯಿತು. ಆಗ ಆಂಧ್ರದ ಮತದಾರರು ತೆಲಂಗಾಣಕ್ಕೂ, ತೆಲಂಗಾಣದ ಮತದಾರರು ಆಂಧ್ರಕ್ಕೂ ವಲಸೆ ಹೋದರು. ಎರಡೆರಡು ಕಡೆ ಹೆಸರಿದ್ದ ಮತದಾರರ ಹೆಸರುಗಳನ್ನು ತೆಗೆಯಲಾಗಿದೆ’ ಎಂಬ ಕಾರಣಗಳನ್ನು ನೀಡಿತ್ತು. 

ಆಧಾರ: ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆ–2021, ಲೋಕಸಭೆ, ಮತದಾರರ ಪಟ್ಟಿ ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮದ ಅಧಿಸೂಚನೆ, ಪಿಟಿಐ

-ಹಮೀದ್ ಕೆ., ಜಯಸಿಂಹ ಆರ್., ಅಮೃತ್ ಕಿರಣ್ ಬಿ.ಎಂ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು