ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಕೇ ಬೇಕು ಹೈಡ್ರಾಕ್ಸಿಕ್ಲೋರೋಕ್ವಿನ್‌: ಇದೆಂಥ ಮದ್ದು? ಏಕಿಷ್ಟು ಬೇಡಿಕೆ?

ದಾಸ್ತಾನು ಇದೆಯೇ? ಬೇಡಿಕೆಯಷ್ಟು ಉತ್ಪಾದನೆ ಸಾಧ್ಯವೇ?
Last Updated 9 ಏಪ್ರಿಲ್ 2020, 1:43 IST
ಅಕ್ಷರ ಗಾತ್ರ
ADVERTISEMENT
""
""
""
""

ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೊರೊಕ್ವಿನ್ ಮಾತ್ರೆಗಳನ್ನು ರಫ್ತು ಮಾಡದಿದ್ದರೆ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆದರಿಕೆ ಹಾಕಿದ ನಂತರ, ಈ ಮಾತ್ರೆ ಹೆಚ್ಚು ಸುದ್ದಿಯಾಗುತ್ತಿದೆ. ಅಮೆರಿಕದ ಬೆದರಿಕೆಯ ಬೆನ್ನಲ್ಲೇ ಈ ಮಾತ್ರೆಗಳ ಮೇಲಿದ್ದ ರಫ್ತು ನಿಷೇಧವನ್ನು ಭಾರತ ತೆರವು ಮಾಡಿದೆ. ಭಾರತಕ್ಕೆ ಅಗತ್ಯವಿರುವಷ್ಟು ಮಾತ್ರೆಗಳು ಲಭ್ಯವಿವೆ ಎಂದು ತಯಾರಕ ಕಂಪನಿಗಳು ಹೇಳಿವೆ. ಆದರೆ, ಈ ಮಾತ್ರೆಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ಪದಾರ್ಥಗಳು ಭಾರತಕ್ಕೆ ಚೀನಾದಿಂದ ಆಮದು ಆಗಬೇಕಿದೆ. ಕೋವಿಡ್–19 ಪಿಡುಗಿಗೆ ಈ ಮಾತ್ರೆ ಬಳಸಬಹುದು ಎಂದು ಜನರು ಅವುಗಳ ಸಂಗ್ರಹಕ್ಕೆ ಮುಂದಾದರೆ ತೊಡಕು ಎದುರಾಗಲಿದೆ

ಮಲೇರಿಯಾಗೆ ಔಷಧವಾಗಿ ನೀಡುವಹೈಡ್ರಾಕ್ಸಿಕ್ಲೋರೋಕ್ವಿನ್‌(ಎಚ್‌ಸಿಕ್ಯೂ), ಕೋವಿಡ್‌–19 ಸೋಂಕಿಗೆ ಪರಿಣಾಮಕಾರಿ ಮದ್ದು ಎಂದು ಫ್ರಾನ್ಸ್‌ನ ಅಧ್ಯಯನ ವರದಿಯೊಂದು ತಿಳಿಸಿತ್ತು.ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸಹ ಇದನ್ನು ಉಲ್ಲೇಖಿಸಿಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದರ ಬೆನ್ನಲ್ಲೇ ಎಚ್‌ಸಿಕ್ಯೂ ಔಷಧಕ್ಕೆ ವಿಶ್ವದಾದ್ಯಂತ ಅಪಾರ ಬೇಡಿಕೆ ಸೃಷ್ಟಿಯಾಯಿತು.

ಜಗತ್ತಿನಾದ್ಯಂತ ಬೇಡಿಕೆ ಇರುವ ಶೇ 70 ರಷ್ಟು ಎಚ್‌ಸಿಕ್ಯೂ ಉತ್ಪಾದನೆ ಭಾರತದಲ್ಲಿ ಆಗುತ್ತಿದೆ. ಹೀಗಾಗಿ ನೆರೆಯ ಶ್ರೀಲಂಕಾ, ನೇಪಾಳ ಸೇರಿದಂತೆ 20 ರಾಷ್ಟ್ರಗಳು ಇದಕ್ಕಾಗಿ ಬೇಡಿಕೆ ಸಲ್ಲಿಸಿವೆ.ಮಲೇರಿಯಾ ಸಂಪೂರ್ಣ ನಿರ್ಮೂಲನೆ ಆಗಿರುವ ಕಾರಣ ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕಹೈಡ್ರಾಕ್ಸಿಕ್ಲೋರೋಕ್ವಿನ್‌ಮಾತ್ರೆಗಳನ್ನು ಉತ್ಪಾದಿಸುವುದಿಲ್ಲ. ಹೀಗಾಗಿ ಭಾರತದ ಔಷಧ ಕಂಪನಿಗಳಿಗೆ ವ್ಯಾಪಕ ಬೇಡಿಕೆ ಕಂಡುಬಂದಿದೆ.

ಈ ಬರಹದ ಮುಂದಿನ ಸಾಲುಗಳನ್ನು ಓದುವ ಮೊದಲು ಒಂದು ವಿಚಾರ ಗಮನಿಸಿ.ಎಚ್‌ಸಿಕ್ಯೂ ಔಷಧವನ್ನು ವೈದ್ಯರ ಶಿಫಾರಸು ಇಲ್ಲದೆ ಯಾವುದೇ ಕಾರಣಕ್ಕೂ ಸೇವಿಸಬೇಡಿ.ಈ ಔಷಧದ ಅಡ್ಡಪರಿಣಾಮಗಳಿಂದಹೃದ್ರೋಗಿಗಳಿಗೆಅಪಾಯವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಕೋವಿಡ್‌–19ಗೆ ಮಲೇರಿಯಾ ಔಷಧ

ಮಲೇರಿಯಾಗೆ ನಿವಾರಣೆಗೆ ಈ ಹಿಂದೆ ಬಳಸುತ್ತಿದ್ದ ಕ್ಲೊರೊಕ್ವಿನ್ ಮಾದರಿಯಲ್ಲಿಯೇ ಎಚ್‌ಸಿಕ್ಯೂ ಸಹ ಕಾರ್ಯನಿರ್ವಹಿಸುತ್ತದೆ. ಆದರೆ ಅದರಷ್ಟು ಅಡ್ಡಪರಿಣಾಮಗಳು ಇರುವುದಿಲ್ಲ.ಸದ್ಯ ಕೋವಿಡ್‌–19ಗೆ ಇದುಪರಿಣಾಮಕಾರಿ ಎನ್ನಲಾಗುತ್ತಿರುವುದರಿಂದ ಮಾರಾಟದ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ.

ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿಯು, ಅಂತಿಮ ಹಂತದಲ್ಲಿರುವ ಕೋವಿಡ್‌–19 ಸೋಂಕಿತರಿಗೆಈ ಔಷಧವನ್ನು ನೀಡಬಹುದೆಂದು ಶಿಫಾರಸು ಮಾಡಿದೆ. ಅದರಂತೆ ಪ್ರತಿಯೊಬ್ಬ ಸೋಂಕಿತನಿಗೂ 14 ಮಾತ್ರೆಗಳನ್ನುನೀಡಬೇಕಾಗುತ್ತದೆ.ಇದಕ್ಕೂ ಮೊದಲು ಕೋವಿಡ್–19 ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗೆ ಮುನ್ನೆಚ್ಚರಿಕೆಯಾಗಿ ಈ ಮಾತ್ರೆಗಳನ್ನು ನೀಡಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನೆಗಳ ಮಂಡಳಿ (ಐಸಿಎಂಆರ್) ಶಿಫಾರಸು ಮಾಡಿತ್ತು. ಶಿಫಾರಸಿನ ಬೆನ್ನಿಗೇ, ಭಾರತ ಸರ್ಕಾರವು ಇಂತಹ 10 ಕೋಟಿ ಮಾತ್ರೆಗಳನ್ನು ಖರೀದಿಸಲು ಮುಂದಾಯಿತು. ಇದಕ್ಕಾಗಿ ಎರಡು ಕಂಪನಿಗಳಿಗೆ ಗುತ್ತಿಗೆಯನ್ನೂ ನೀಡಿತು. ಮಾತ್ರವಲ್ಲ, ಈ ಮಾತ್ರೆಗಳ ರಫ್ತನ್ನೂ ನಿಷೇಧಿಸಿತು.

2019ರ ಏಪ್ರಿಲ್ ಹಾಗೂ 2020ರ ಜನವರಿ ನಡುವೆ, ಸುಮಾರು 9 ಸಾವಿರ ಕೋಟಿ ರೂಪಾಯಿಯಷ್ಟುಮೌಲ್ಯದ ಮಾತ್ರೆಗಳನ್ನು ರಫ್ತುಮಾಡಲಾಗಿದೆ.

ಭಾರತದ ಉತ್ಪಾದನಾ ಸಾಮರ್ಥ್ಯ ಎಷ್ಟು?

ಐಪಿಸಿಎ ಲ್ಯಾಬೊರೇಟರಿ ಲಿಮಿಟೆಡ್‌, ಜೈಡಸ್‌ ಕ್ಯಾಡಿಲಾ ಮತ್ತು ವ್ಯಾಲೆಸ್‌ ಫಾರ್ಮಾಸ್ಯುಟಿಕಲ್ಸ್‌ ಲಿಮಿಟೆಡ್ ಕಂಪೆನಿಗಳು ಭಾರತದಲ್ಲಿ ಈ ಮಾತ್ರೆಗಳನ್ನು ಉತ್ಪಾದಿಸುವ ಪ್ರಮುಖ ಕಂಪನಿಗಳಾಗಿವೆ. ತಿಂಗಳಿಗೆ 40 ಟನ್ಹೈಡ್ರಾಕ್ಸಿಕ್ಲೋರೋಕ್ವಿನ್‌, ಅಂದರೆ ಸುಮಾರು 20 ಕೋಟಿ ಮಾತ್ರೆಗಳನ್ನು ಉತ್ಪಾದಿಸುವಸಾಮರ್ಥ್ಯ ಈ ಕಂಪನಿಗಳಿಗೆ ಇವೆ. ಈಗಾಗಲೇ10 ಕೋಟಿ ಎಚ್‌ಸಿಕ್ಯೂ ಮಾತ್ರೆಗಳ ಉತ್ಪಾದನೆಗೆ ಕೇಂದ್ರ ಕುಟುಂಬ ಕಲ್ಯಾಣ ಮತ್ತು ಆರೋಗ್ಯ ಇಲಾಖೆಯು ಆದೇಶ ನೀಡಿದೆ ಎನ್ನಲಾಗಿದೆ.

‘ಭಾರತವು ಜಗತ್ತಿನ ಶೇ. 70 ರಷ್ಟು ಎಚ್‌ಸಿಕ್ಯೂ ಉತ್ಪಾದನೆಯ ಪಾಲು ಹೊಂದಿದೆ. ಕೇಂದ್ರ ಸರ್ಕಾರವು 12 ಔಷಧಗಳಮೇಲಿನ ನಿರ್ಬಂಧವನ್ನು ಇದೀಗ ತೆರವುಗೊಳಿಸಿದೆ. ಇದು ದೇಶದಲ್ಲಿನ ಮತ್ತು ವಿದೇಶಗಳ ಬೇಡಿಕೆ ಎರಡನ್ನೂ ಪೂರೈಸುವ ಪ್ರಯತ್ನವಾಗಿದೆ’ ಎಂದು ಭಾರತೀಯ ಔಷಧ ಒಕ್ಕೂಟದ ಕಾರ್ಯದರ್ಶಿ ಸುದರ್ಶನ್‌ ಜೈನ್ ಹೇಳಿದ್ದಾರೆ.

ಭಾರತೀಯ ಔಷಧ ಉತ್ಪಾದಕರ ಒಕ್ಕೂಟದ ನಿರ್ದೇಶಕ ಅಶೋಕ್‌ ಕುಮಾರ್‌ ಮದನ್‌, ‘ಮಲೇರಿಯಾ, ಕ್ಷಯ ಹಾಗೂ ಸಂಧಿವಾತ ಸಲುವಾಗಿ ಭಾರತಕ್ಕೆ ಪ್ರತಿವರ್ಷ ಸಮಾರು 2.4 ಕೋಟಿ ಮಾತ್ರೆಗಳು ಬೇಕಾಗುತ್ತವೆ.ಸದ್ಯ ಕೋವಿಡ್‌–19 ಚಿಕಿತ್ಸೆಗೆ ಎಷ್ಟು ಅವಶ್ಯಕತೆ ಮೂಡುತ್ತದೆ ಎಂಬುದನ್ನು ಕಾದುನೋಡಬೇಕಿದೆ. ಕಂಪೆನಿಗಳು ಈಗಾಗಲೇ ಉತ್ಪಾದನೆಯನ್ನು ಆರಂಭಿಸಿವೆ’ ಎಂದೂ ಹೇಳಿದ್ದಾರೆ.

ಆದರೆ ಭಾರತದಲ್ಲಿ ಈ ಮಾತ್ರೆಗಳ ತಯಾರಿಕೆಗೆಅಗತ್ಯವಿರುವಷ್ಟು ‘ಔಷಧೀಯ ಪದಾರ್ಥಗಳು’ (ಎಪಿಐ) ಸಂಗ್ರಹವಿದೆಯೇ ಎಂಬುದು ಬಹಿರಂಗವಾಗಿಲ್ಲ. ಎಪಿಐಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳಬೇಕಿದೆ. ಭಾರತದ ಕಂಪನಿಗಳು ಈ ಮಾತ್ರೆಗೆ ಅವಶ್ಯವಿರುವ ಎಪಿಐಗಳಲ್ಲಿ ಶೇ 71ರಷ್ಟು ಪದಾರ್ಥಗಳಿಗಾಗಿ ಚೀನಾವನ್ನೇ ಅವಲಂಭಿಸಿವೆ. ಈಗ ಲಾಕ್‌ಡೌನ್ ಜಾರಿಯಲ್ಲಿರುವ ಕಾರಣ ಈ ವಸ್ತುಗಳನ್ನು ಆಮದು ವಿಚಾರಅನಿಶ್ಚಿತವಾಗಿದೆ.

ಎಲ್ಲೆಲ್ಲಿ ಉತ್ಪಾದನೆ?

ಭಾರತ ಹೊರತುಪಡಿಸಿ ಚೀನಾ, ಜರ್ಮನಿ ಮತ್ತು ಇಸ್ರೇಲ್ ದೇಶಗಳು ಎಚ್‌ಸಿಕ್ಯೂ ಉತ್ಪಾದಿಸುವ ಪ್ರಮುಖ ದೇಶಗಳಾಗಿವೆ. ಇತ್ತೀಚೆಗೆ ಭಾರತವು ಈ ಮಾತ್ರೆಗಳ ರಫ್ತು ನಿರ್ಬಂಧಿಸಿದ್ದಂತೆ ಜರ್ಮನಿಯೂ ಕ್ರಮ ಕೈಗೊಂಡಿದೆ. ಆಂತರಿಕ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ಈ ವಿಚಾರದಲ್ಲಿ ಚೀನಾ ನಡೆ ಸ್ಪಷ್ಟವಾಗಿಲ್ಲ.

ಭಾರತಕ್ಕೆ ಬೆದರಿಕೆ ಹಾಕಿದ ಟ್ರಂಪ್: ಏನಿದು ವಿವಾದ?

ವಿಶ್ವದಾದ್ಯಂತ ಇದುವರೆಗೆ ಸುಮಾರು 80 ಸಾವಿರಕ್ಕೂ ಹೆಚ್ಚುಜನರನ್ನು ಬಲಿ ಪಡೆದಿರುವ ಕೋವಿಡ್-19, ಪ್ರಸ್ತುತ 14 ಲಕ್ಷಕ್ಕೂ ಹೆಚ್ಚು ಜನರಲ್ಲಿ ಇರುವುದು ದೃಢಪಟ್ಟಿದೆ. ಭಾರತದಲ್ಲಿಯೂ ಸೋಂಕಿತರ ಸಂಖ್ಯೆ 5 ಸಾವಿರ ದಾಟಿದ್ದು, ಆತಂಕ ಹೆಚ್ಚಿಸಿದೆ. ಹೀಗಾಗಿ ದೇಶದಲ್ಲಿ ಔಷಧ ಕೊರತೆ ಉಂಟಾಗದಂತೆ ನೋಡಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರವು ಎಚ್‌ಸಿಕ್ಯೂರಫ್ತನ್ನು ಕಳೆದ ತಿಂಗಳು (ಮಾರ್ಚ್‌ 25)ನಿಷೇಧಿಸಿತ್ತು.

ಟ್ರಂಪ್ ಅವರು ಹೇಳಿಕೆ ನೀಡುವುದಕ್ಕೂ ಮೊದಲೇಅಮೆರಿಕದ ‘ಫುಡ್‌ ಅಂಡ್‌ ಡ್ರಗ್ ಅಡ್ಮಿನಿಸ್ಟ್ರೇಷನ್–ಎಫ್‌ಡಿಎ’ ಈ ಮಾತ್ರೆಗಳಿಗಾಗಿ, ಭಾರತದ ಕಂಪನಿಗಳನ್ನು ಸಂಪರ್ಕಿಸಿ, ಮುಂಗಡವನ್ನೂ ಪಾವತಿಸಿತ್ತು. ಅಮೆರಿಕವು ಈ ಮೊದಲೇ ಖರೀದಿಸಿದ್ದ ಮಾತ್ರೆಗಳ ರಫ್ತೂ ಸ್ಥಗಿತವಾಯಿತು. ಇದು ಅಮೆರಿಕದ ಸಿಟ್ಟಿಗೆ ಕಾರಣವಾಯಿತು

ಅದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ­ಮೂಲಕ ಮಾತುಕತೆ ನಡೆಸಿದ್ದ ಟ್ರಂಪ್‌, ಕೊರೊನಾ ಸೋಂಕಿನಿಂದ ಉದ್ಭವಿಸಿರುವ ಪರಿಸ್ಥಿತಿ ಮತ್ತು ಅದರ ಪರಿಹಾರ ಕ್ರಮಗಳನ್ನು ಕುರಿತು ಚರ್ಚಿಸಿದ್ದರು. ಅದೇ ವೇಳೆ ದೇಶದ ಕೋವಿಡ್‌–19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಈಗಾಗಲೇ ಸಲ್ಲಿಸಿರುವ ಬೇಡಿಕೆಯಂತೆ ಎಚ್‌ಸಿಕ್ಯೂಮಾತ್ರೆಗಳ ರಫ್ತಿಗೆ ಸಹಕರಿಸುವಂತೆ ಮೋದಿ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದರು.

ಫ್ರಾನ್ಸ್‌ನ ಅಧ್ಯಯನ ವರದಿಯೊಂದನ್ನು ಉಲ್ಲೇಖಸಿ ಮಾತನಾಡಿದ್ದ ಟ್ರಂಪ್‌,ಎಚ್‌ಸಿಕ್ಯೂ ಗೇಮ್‌ಚೇಂಜರ್‌ ಆಗಬಲ್ಲದು ಎಂದೂ ಕರೆದಿದ್ದರು. ಆದರೆ ಇದುಕೊರೊನಾಗೆ ಪರಿಣಾಮಕಾರಿಯೇ?ಎಂಬುದು ವೈಜ್ಞಾನಿಕವಾಗಿ ದೃಢವಾಗದಿರುವುದರಿಂದ ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಕೆಲವರು ತಕರಾರು ತೆಗೆದಿದ್ದಾರೆ. ಮಾತ್ರವಲ್ಲದೆ, ಅನೇಕ ಔಷಧ ತಯಾರಿಕಾ ಕಂಪೆನಿಗಳಲ್ಲಿ ಟ್ರಂಪ್ ಅವರ ಜತೆ ಸಹಭಾಗಿತ್ವ ಹೊಂದಿದ್ದಾರೆ. ಲಾಭದ ಅಸೆಯಿಂದಲೇ ಅವರು ಹೀಗೆ ಆಡುತ್ತಿದ್ದಾರೆಎಂದು ನ್ಯೂಯಾರ್ಕ್ ಟೈಮ್ಸ್ ಹೇಳಿತ್ತು.

ನಂತರ ಸೋಮವಾರ (ಏಪ್ರಿಲ್‌ 6) ವೈಟ್‌ಹೌಸ್‌ನಲ್ಲಿ ಮಾತನಾಡಿದ್ದ ಟ್ರಂಪ್‌, ‘ಅಮೆರಿಕದೊಂದಿಗೆ ಭಾರತದ ಸಂಬಂಧ ಉತ್ತಮವಾಗಿದೆ. ಮಲೇರಿಯಾ ನಿರೋಧಕ ಔಷಧ ಬೇಕೆಂಬ ಅಮೆರಿಕ ಕೋರಿಕೆಯ ಹೊರತಾಗಿಯೂ ಭಾರತದ ಔಷಧ ರಫ್ತು ಮೇಲಿನ ನಿರ್ಬಂಧವನ್ನು ತೆರವು ಮಾಡದೇ ಇರುವುದಕ್ಕೆ ನನಗೆ ಕಾರಣ ತಿಳಿಯುತ್ತಿಲ್ಲ. ಭಾರತದ ನಡೆ ನನಗೆ ಆಶ್ಚರ್ಯ ತರಿಸಿದೆ. ಹಾಗೇನಾದರೂ ಭಾರತ ಮಲೇರಿಯಾ ನಿರೋಧಕ ಔಷಧ ಪೂರೈಸದೇ ಹೋದರೆ ಅದಕ್ಕೆ ಪ್ರತಿಯಾಗಿ ಪ್ರತೀಕಾರವಂತೂ ಇದ್ದೇ ಇರುತ್ತದೆ. ಅಂಥದ್ದೊಂದು ನಿರ್ಧಾರವನ್ನು ಅಮೆರಿಕ ಕೈಗೊಳ್ಳಬಾರದೇಕೆ?’ ಎಂದು ಪ್ರಶ್ನಿಸುವ ಮೂಲಕ ಪರೊಕ್ಷ ಎಚ್ಚರಿಕೆ ನೀಡಿದ್ದರು.ಅಮೆರಿಕದಲ್ಲಿ ಇದುವರೆಗೆ ಸುಮಾರು ಸುಮಾರು 13 ಸಾವಿರ ಜನರು ಕೋವಿಡ್‌–19ಗೆ ಬಲಿಯಾಗಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಜನರಿಗೆ ಸೋಂಕು ಇರುವುದು ಖಾತ್ರಿಯಾಗಿದೆ.

ಅಮೆರಿಕ ಒಡ್ಡಿದ ಪ್ರತೀಕಾರ ಬೆದರಿಕೆ ಬೆನ್ನಲ್ಲೇ ಮಲೇರಿಯಾ ನಿರೋಧಕ ಮಾತ್ರೆ ಎಚ್‌ಸಿಕ್ಯೂಹಾಗೂ ಪ್ಯಾರಾಸಿಟಾಮೋಲ್ ಮಾತ್ರೆ ಸೇರಿ 12 ಔಷಧ ಉತ್ಪನ್ನಗಳ ಮೇಲಿದ್ದ ನಿರ್ಬಂಧವನ್ನು ತಾತ್ಕಾಲಿಕವಾಗಿ ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT