ಗುರುವಾರ , ಜುಲೈ 7, 2022
23 °C

690ರ ಪೈಕಿ 598 ಶಾಸಕರು ಕೋಟ್ಯಧೀಶರು: ಎಡಿಆರ್ ವರದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸನಸಭೆಗಳು ಇತ್ತೀಚಿನ ವರ್ಷಗಳಲ್ಲಿ ಸಿರಿವಂತರ ಕೇಂದ್ರಗಳಾಗುತ್ತಿವೆ. ಬಹುತೇಕ ಪಕ್ಷಗಳು ಕೋಟ್ಯಧೀಶರಿಗೇ ಮಣೆ ಹಾಕುತ್ತಿದ್ದು, ಅವರು ವಿಧಾನಸಭೆಗಳನ್ನು ಪ್ರವೇಶಿಸು ತ್ತಿದ್ದಾರೆ. ತಮ್ಮ ಬಳಿ ಒಂದು ಕೋಟಿ ರೂಪಾಯಿ ಹಾಗೂ ಅದಕ್ಕೂ ಅಧಿಕ ಮೌಲ್ಯದ ಆಸ್ತಿಪಾಸ್ತಿಯಿದೆ ಎಂದು ಘೋಷಿಸಿಕೊಂಡ ಶಾಸಕರ ಸಂಖ್ಯೆ ಏರುತ್ತಲೇ ಇದೆ ಎಂಬುದು ‘ಅಸೋಸಿಯೇಷನ್‌ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ಎಡಿಆರ್) ವರದಿಯ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ವೇದ್ಯವಾಗುತ್ತದೆ. ಈಚೆಗೆ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ 690 ಶಾಸಕರ ಪೈಕಿ 598 ಶಾಸಕರು (ಶೇ 87ರಷ್ಟು) ಕೋಟ್ಯಧೀಶರು.

403 ಸದಸ್ಯಬಲದ ಉತ್ತರ ಪ್ರದೇಶ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿರುವವರ ಪೈಕಿ 366 ಜನಪ್ರತಿನಿಧಿಗಳು ಕೋಟ್ಯಧೀಶರು ಎಂಬ ಮಾಹಿತಿಯನ್ನು ಎಡಿಆರ್ ವರದಿ ಬಹಿರಂಗಪಡಿಸಿದೆ. ಚುನಾವಣೆ ವೇಳೆ ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಒದಗಿಸಿದ್ದ ಆಸ್ತಿ ವಿವರಗಳನ್ನು ವಿಶ್ಲೇಷಿಸಿದಾಗ ಈ ಅಂಶ ಕಂಡುಬಂದಿದೆ. ಐದು ವರ್ಷಗಳ ಹಿಂದೆ 322 ಕೋಟ್ಯಧೀಶ ಶಾಸಕರು ಚುನಾಯಿತರಾಗಿದ್ದರು. ಈ ಐದು ವರ್ಷಗಳ ಅವಧಿಯಲ್ಲಿ ಶಾಸನಸಭೆಗೆ 44 ಹೊಸ ಕೋಟ್ಯಧಿಪತಿಗಳು ಆರಿಸಿಬಂದಿದ್ದಾರೆ. ಬಿಜೆಪಿಯ 255 ಶಾಸಕರ ಪೈಕಿ 233, ಎಸ್ಪಿಯ 111 ಶಾಸಕರ ಪೈಕಿ 100 ಮಂದಿ ಕೋಟಿ ಒಡೆಯರು. ಕಾಂಗ್ರೆಸ್‌ ಗೆದ್ದಿರುವ ಎರಡೂ ಕ್ಷೇತ್ರಗಳ ಶಾಸಕರು, ಬಿಎಸ್‌ಪಿಯ ಒಬ್ಬ ಶಾಸಕ, ಸುಹಲ್‌ದೇವ ಭಾರತೀಯ ಪಕ್ಷ ಹಾಗೂ ನಿಷಾದ್ ಪಕ್ಷದಿಂದ ಆಯ್ಕೆಯಾಗಿರುವ ಎಲ್ಲ 6 ಶಾಸಕರು ಕೋಟ್ಯಧೀಶರು

40 ಸದಸ್ಯಬಲದ ಗೋವಾ ವಿಧಾನಸಭೆಯ ಒಬ್ಬ ಶಾಸಕನನ್ನು ಹೊರತುಪಡಿಸಿದರೆ ಉಳಿದ 39 ಶಾಸಕರು (ಶೇ 98) ಕೋಟ್ಯಧೀಶರಾಗಿದ್ದಾರೆ. ರೆವಲ್ಯೂಷನರಿ ಗೋವನ್ ಪಾರ್ಟಿಯ ಏಕೈಕ ಶಾಸಕ ಕೋಟ್ಯಧೀಶರ ಪಟ್ಟಿಯಲ್ಲಿಲ್ಲ. ಬಿಜೆಪಿಯ 20, ಕಾಂಗ್ರೆಸ್‌ನ 11, ಎಎಪಿಯ 2, ಎಂಜಿಪಿಯ 3, ಗೋವಾ ಫಾರ್ವರ್ಡ್ ಪಕ್ಷದ ಒಬ್ಬ ಶಾಸಕ ಹಾಗೂ ಮೂವರು ಪಕ್ಷೇತರ ಶಾಸಕರು ತಮ್ಮ ಬಳಿ ₹1 ಕೋಟಿಗಿಂತ ಹೆಚ್ಚು ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. 2017ರ ಚುನಾವಣೆಯಲ್ಲಿ ಗೆದ್ದಿದ್ದ ಎಲ್ಲ ಶಾಸಕರೂ ಕೋಟಿ ಒಡೆಯರಾಗಿದ್ದರು

70 ಸದಸ್ಯಬಲದ ವಿಧಾನಸಭೆಗೆ ಆಯ್ಕೆಯಾಗಿರುವ 58 ಶಾಸಕರು (ಶೇ 83) ಕೋಟಿ ಒಡೆಯರು. 2017ರಲ್ಲಿ 51 ಶಾಸಕರು ತಾವು ಕೋಟ್ಯಧೀಶರು ಎಂದು ಘೋಷಿಸಿಕೊಂಡಿದ್ದರು. ಈ ಬಾರಿ ಆಯ್ಕೆಯಾಗಿರುವವರ ಪೈಕಿ ಬಿಜೆಪಿಯ 40, ಕಾಂಗ್ರೆಸ್‌ನ 15, ಬಿಎಸ್‌ಪಿಯ ಇಬ್ಬರು ಹಾಗೂ ಒಬ್ಬ ಪಕ್ಷೇತರರು ಈ ಪಟ್ಟಿಯಲ್ಲಿದ್ದಾರೆ

60 ಸದಸ್ಯಬಲದ ವಿಧಾನಸಭೆ ಯಲ್ಲಿ 48 ಶಾಸಕರು (ಶೇ 80) ₹1 ಕೋಟಿಗಿಂತ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ. ಐದು ವರ್ಷಗಳ ಹಿಂದೆ ಆಯ್ಕೆಯಾಗಿದ್ದ ಶಾಸಕರ ಪೈಕಿ 32 ಜನರು ಮಾತ್ರ ಕೋಟ್ಯಧೀಶರಿದ್ದರು. ಈ ಬಾರಿ ಬಿಜೆಪಿಯ 25, ಎನ್‌ಪಿಪಿಯ 6, ಕಾಂಗ್ರೆಸ್, ಎನ್‌ಇಎಫ್‌ ಹಾಗೂ ಜೆಡಿಯುನ ತಲಾ ಐವರು, ಇಬ್ಬರು ಪಕ್ಷೇತರರು ಕೋಟ್ಯಧೀಶ ಶಾಸಕರ ಪಟ್ಟಿಯಲ್ಲಿದ್ದಾರೆ

117 ಸದಸ್ಯಬಲದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪೈಕಿ 87 ಜನರು ಕೋಟಿ ರೂಪಾಯಿಗಿಂತ ಅಧಿಕ ಆಸ್ತಿಪಾಸ್ತಿಯ ವಾರಸುದಾರರಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಆಯ್ಕೆಯಾಗಿದ್ದ 95 ಶಾಸಕರು ಕೋಟಿ ಒಡೆಯರಾಗಿದ್ದರು. ಎಎಪಿಯ 92 ಶಾಸಕರ ಪೈಕಿ 63 ಶಾಸಕರು, ಕಾಂಗ್ರೆಸ್‌ನ 17, ಅಕಾಲಿದಳದ ಮೂವರೂ, ಬಿಜೆಪಿಯ ಇಬ್ಬರೂ, ಬಿಎಸ್‌ಪಿಯ ಒಬ್ಬ ಶಾಸಕ ಕೋಟ್ಯಧೀಶರು

**

ಶಾಸಕರ ನಡುವೆ ಸಂಪತ್ತಿನ ಹಂಚಿಕೆ (%)

ಉತ್ತರ ಪ್ರದೇಶ: ದೇಶದ ಅತಿದೊಡ್ಡ ವಿಧಾನಸಭೆಯ ಶೇಕಡಾ ಅರ್ಧಕ್ಕಿಂತ ಕಡಿಮೆ ಪ್ರಮಾಣದ (ಶೇ 45.41) ಶಾಸಕರು ಅಥವಾ 183 ಶಾಸಕರು ತಲಾ ₹5 ಕೋಟಿಗಿಂತ ಅಧಿಕ ಸಂಪತ್ತಿನ ವಾರಸುದಾರರಾಗಿದ್ದಾರೆ. ₹2 ಕೋಟಿಗಿಂತ ₹5 ಕೋಟಿವರೆಗೆ ಸೊತ್ತು ಹೊಂದಿರುವ ಶಾಸಕರ ಸಂಖ್ಯೆ 122. 

ಗೋವಾ: ರಾಜ್ಯದ 30 ಶಾಸಕರು ಅಥವಾ ಶೇ 75ರಷ್ಟು ಶಾಸಕರು ತಲಾ ₹5 ಕೋಟಿಗಿಂತ ಹೆಚ್ಚು ಆಸ್ತಿಯ ಒಡೆಯರಾಗಿದ್ದಾರೆ. 8 ಶಾಸಕರ ಬಳಿಕ ₹2 ಕೋಟಿಗಿಂತ ಹೆಚ್ಚು ಆಸ್ತಿ ಇದೆ. ತನ್ನ ಬಳಿಕ 2 ಕೋಟಿ ರೂಪಾಯಿಗಿಂತ ಕಡಿಮೆ ಆಸ್ತಿಯಿದೆ ಎಂದು  ಒಬ್ಬ ಶಾಸಕ ಘೋಷಿಸಿಕೊಂಡಿದ್ದಾರೆ. 

ಉತ್ತರಾಖಂಡ: ರಾಜ್ಯ ವಿಧಾನಸಭೆಗೆ ₹5 ಕೋಟಿಗೂ ಅಧಿಕ ಸೊತ್ತು ಹೊಂದಿರುವ 23 ಶಾಸಕರನ್ನು (ಶೇ 33) ಜನರು ಆಯ್ಕೆ ಮಾಡಿದ್ದಾರೆ. ₹2 ಕೋಟಿಯಿಂದ ₹5 ಕೋಟಿಯಷ್ಟು ಆಸ್ತಿ ಹೊಂದಿದ 21 ಶಾಸಕರು ಆರಿಸಿ ಬಂದಿದ್ದಾರೆ. 19 ಶಾಸಕರು ತಮ್ಮ ಬಳಿ ₹50 ಲಕ್ಷದಿಂದ ₹2 ಕೋಟಿವರೆಗೂ ಸಂಪತ್ತು ಇದೆ ಎಂದು ಪ್ರಕಟಿಸಿದ್ದಾರೆ. 

ಮಣಿಪುರ: ಕೋಟ್ಯಧಿಪತಿಗಳ ಪೈಕಿ 12 ಶಾಸಕರ (ಶೇ 20ರಷ್ಟು) ಬಳಿಯಿರುವ ಆಸ್ತಿ ₹5 ಕೋಟಿಗಿಂತಲೂ ಅಧಿಕವಾಗಿದೆ. 25 ಶಾಸಕರು (ಶೇ 42ರಷ್ಟು) ₹2 ಕೋಟಿಯಿಂದ ₹5 ಕೋಟಿ ಸಂಪತ್ತಿನ ಒಡೆಯರಾಗಿದ್ದಾರೆ. 17 ಶಾಸಕರ ಬಳಿ ₹50 ಲಕ್ಷದಿಂದ ₹2 ಕೋಟಿಯಷ್ಟು ಮೌಲ್ಯದ ಆಸ್ತಿ ಇದೆ. 10 ಲಕ್ಷ ರೂಪಾಯಿಯಿಂದ 50 ಲಕ್ಷ ರೂಪಾಯಿವರೆಗೆ ಆಸ್ತಿ ಘೋಷಿಸಿಕೊಂಡವರು ನಾಲ್ವರು ಮಾತ್ರ. 

ಪಂಜಾಬ್: ಈ ಬಾರಿ ಪಂಜಾಬ್ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪೈಕಿ ಶೇ 33.33ರಷ್ಟು ಶಾಸಕರು (39 ಜನ) ₹5 ಕೋಟಿಗಿಂತ ಅಧಿಕ ಸೊತ್ತಿನ ವಾರಸುದಾರರಾಗಿದ್ದಾರೆ. ₹2 ಕೋಟಿಗಿಂತ ₹5 ಕೋಟಿವರೆಗೆ ಸೊತ್ತು ಹೊಂದಿರುವ ಶಾಸಕರ ಸಂಖ್ಯೆ 27. 32 ಜನರು ತಮ್ಮ ಬಳಿ ₹50 ಲಕ್ಷದಿಂದ ₹2 ಕೋಟಿವರೆಗೆ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.

ಮರು ಆಯ್ಕೆಯಾದ ಶಾಸಕರ ಆಸ್ತಿ 5 ವರ್ಷಗಳಲ್ಲಿ ಭಾರಿ ಏರಿಕೆ
ಉತ್ತರ ಪ್ರದೇಶದಲ್ಲಿ ಐದು ವರ್ಷಗಳ ಹಿಂದೆ ಗೆದ್ದಿದ್ದ 211 ಶಾಸಕರು ಈ ಬಾರಿಯೂ ಮರು ಆಯ್ಕೆಯಾಗಿದ್ದಾರೆ. ಇವರೆಲ್ಲರ ಸರಾಸರಿ ಆಸ್ತಿಯ ಮೊತ್ತ ₹8.28 ಕೋಟಿ. 2017ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದ ಈ ಶಾಸಕರ ಸರಾಸರಿ ಸೊತ್ತಿನ ಮೌಲ್ಯ ₹5.24 ಕೋಟಿ ಇತ್ತು. ಈ ಐದು ವರ್ಷಗಳಲ್ಲಿ ಮತ್ತೆ ಚುನಾಯಿತರಾದ ಈ ಶಾಸಕರ ಆಸ್ತಿಯ ಸರಾಸರಿ ಮೌಲ್ಯದಲ್ಲಿ ಸುಮಾರು ₹3.04 ಕೋಟಿಯಷ್ಟು ಹೆಚ್ಚಳವಾಗಿದೆ. ಗೋವಾದಲ್ಲಿ 17 ಶಾಸಕರು ಮತ್ತೆ ವಿಧಾನಸಭೆಗೆ ಮರು ಆಯ್ಕೆಯಾಗಿದ್ದಾರೆ. 2017ರಲ್ಲಿ ಆಯ್ಕೆಯಾಗಿದ್ದ ಶಾಸಕರ ಸರಾಸರಿ ಆಸ್ತಿ ಮೌಲ್ಯ ₹13.72 ಕೋಟಿ ಇತ್ತು. 2022ರಲ್ಲಿ ಮತ್ತೆ ವಿಧಾನಸಭೆಗೆ ಆಯ್ಕೆಯಾದ ಶಾಸಕರ ಆಸ್ತಿ ಮೌಲ್ಯ ₹23.93 ಕೋಟಿಗೆ (ಶೇ 74ರಷ್ಟು ಹೆಚ್ಚಳ) ತಲುಪಿದೆ. ಅಂದರೆ ಪ್ರತಿ ಶಾಸಕರ ಆಸ್ತಿಯು ಸರಾಸರಿ ₹10.21 ಕೋಟಿಯಷ್ಟು ಅಧಿಕವಾಗಿದೆ. 

ಉತ್ತರಾಖಂಡದಲ್ಲಿ 35 ಶಾಸಕರು ಮತ್ತೆ ವಿಧಾನಸಭೆ ಪ್ರವೇಶಿಸಿದ್ದಾರೆ. ಇವರ ಸರಾಸರಿ ಆಸ್ತಿ ಮೌಲ್ಯ 7.56 ಕೋಟಿ ರೂಪಾಯಿ. ಐದು ವರ್ಷಗಳ ಹಿಂದೆ ಆಯ್ಕೆಯಾಗಿದ್ದ ಶಾಸಕರ ಸರಾಸರಿ ಆಸ್ತಿ ಮೌಲ್ಯ ₹4.96 ಕೋಟಿ ರೂಪಾಯಿ ಇತ್ತು. ಅಂದರೆ ಐದು ವರ್ಷಗಳ ಅವಧಿಯಲ್ಲಿ ಮರು ಆಯ್ಕೆಯಾದ ಶಾಸನಸಭೆ ಪ್ರತಿನಿಧಿಗಳ ಆಸ್ತಿ ಮೌಲ್ಯದಲ್ಲಿ ಸರಾಸರಿ ₹2.59 ಕೋಟಿ (ಶೇ 52) ಹೆಚ್ಚಳವಾಗಿದೆ. ಮಣಿಪುರದಲ್ಲಿ ಈ ಬಾರಿ 35 ಶಾಸಕರು ಮರು ಆಯ್ಕೆಯಾಗಿದ್ದಾರೆ. 2017ರಲ್ಲಿ ಆಯ್ಕೆಯಾಗಿದ್ದ ಶಾಸಕರ ಸರಾಸರಿ ಆಸ್ತಿ ಮೌಲ್ಯ ₹1.61 ಕೋಟಿ ಇತ್ತು. ಈ ಬಾರಿ ₹3.31 ಕೋಟಿಗೆ (ಶೇ 105ರಷ್ಟು ಏರಿಕೆ) ಹೆಚ್ಚಳವಾಗಿದೆ. ಪಂಜಾಬ್‌ನಲ್ಲಿ ಈ ಬಾರಿ ಮರು ಆಯ್ಕೆಯಾಗಿರುವ 25 ಶಾಸಕರ ಆಸ್ತಿ ಮೌಲ್ಯದಲ್ಲಿ ಗಮನಾರ್ಹ ಬದಲಾವಣೆ ಆಗಿಲ್ಲ. ಆಸ್ತಿ ಮೌಲ್ಯ ಶೇ 2ರಷ್ಟು ಹೆಚ್ಚಿದೆ. ಮರು ಆಯ್ಕೆಯಾದ ಪ್ರತಿ ಶಾಸಕನ ಸರಾಸರಿ ಆಸ್ತಿಯು ₹17.07 ಕೋಟಿಯಿಂದ ₹17.41 ಕೋಟಿಗೆ ಹೆಚ್ಚಳವಾಗಿದೆ.  

ಆಧಾರ: ಎಡಿಆರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು